ರಾಜ್ಯದ ಸರ್ಕಾರಿ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭ: ಸಿಎಂ ಸಿದ್ದರಾಮಯ್ಯ
Government College: ರಾಜ್ಯದ ಸರ್ಕಾರಿ ಕಾಲೇಜು, ಇಂಜಿನಿಯರಿಂಗ್ ಕಾಲೇಜು ಹಾಗೂ ಪಾಲಿಟೆಕ್ನಿಕ್‌ಗಳಲ್ಲಿ ಖಾಲಿ ಇರುವ 2,000 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನ ಭರ್ತಿ ಮಾಡುವ ಪ್ರಕ್ರಿಯೆಯನ್ನು ಈಗಾಗಲೇ ಪ್ರಾರಂಭಿಸಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಸರ್ಕಾರಿ ವಿಶ್ವವಿದ್ಯಾಲಯಗಳ ಕುಲಪತಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಳೆದ 2 ದಶಕಗಳಿಂದ ಕಾಲಕಾಲಕ್ಕೆ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರ ನೇಮಕಾತಿ ಸರಿಯಾಗಿ ಆಗಿಲ್ಲ. ಆದ್ದರಿಂದ ಶಿಕ್ಷಕರ ಕೊರತೆ ಎದ್ದು ಕಾಣುತ್ತಿದೆ. ರಾಜ್ಯದ ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ಶೇಕಡ 60 - 70ರಷ್ಟು ಶಿಕ್ಷಕರ ಹುದ್ದೆಗಳು ಖಾಲಿ ಇರುವುದು ಸರ್ಕಾರದ ಗಮನದಲ್ಲಿದೆ.

ಈ ಹಿನ್ನೆಲೆಯಲ್ಲಿ ನಾವು ಸರ್ಕಾರಿ ಕಾಲೇಜು, ಇಂಜಿನಿಯರಿಂಗ್ ಕಾಲೇಜು ಹಾಗೂ ಪಾಲಿಟೆಕ್ನಿಕ್‌ಗಳಲ್ಲಿ ಖಾಲಿ ಇರುವ 2,000 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆಯನ್ನ ಆರಂಭಿಸಿದ್ದೇವೆ ಎಂದು ತಿಳಿಸಿದರು. ಇನ್ನೂ 2024-25ನೇ ಸಾಲಿನಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ 1,016 ಸಹಾಯಕ ಪ್ರಾಧ್ಯಾಪಕರನ್ನು ವಿವಿಧ ವಿಷಯಗಳಲ್ಲಿ ನೇಮಕ ಮಾಡಲಾಗಿದೆ ಎಂದು ಹೇಳಿದರು.
ಉತ್ತಮ ಶಿಕ್ಷಣದ ಬಗ್ಗೆ ಪ್ರಸ್ತಾಪ
ರಾಜ್ಯದಲ್ಲಿ 94 ವಿಶ್ವವಿದ್ಯಾಲಯಗಳಿದ್ದು, ಇವುಗಳಲ್ಲಿ 32 ಪಬ್ಲಿಕ್ ವಿಶ್ವವಿದ್ಯಾಲಯಗಳಿವೆ. ಸುಮಾರು 27.40 ಲಕ್ಷ ಮಕ್ಕಳು ರಾಜ್ಯದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುತ್ತಿದ್ದಾರೆ. ಇದರಲ್ಲಿ 2024-25ನೇ ಸಾಲಿಗೆ ಉನ್ನತ ಶಿಕ್ಷಣ ಇಲಾಖೆಯ ಸರ್ಕಾರಿ ವಿಶ್ವ ವಿದ್ಯಾಲಯಗಳ ಅಡಿಯಲ್ಲಿ 14.60 ಲಕ್ಷ ಸಂಖ್ಯೆಯ ಮಕ್ಕಳು ಕಲಿಯುತ್ತಿದ್ದಾರೆ. ರಾಜ್ಯದ ಸಂಖ್ಯೆಯ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ರಾಜ್ಯದ ಗ್ರಾಸ್ ಎನ್‌ರೋಲ್‌ಮೆಂಟ್ ರೇಶಿಯೊ ದಕ್ಷಿಣದ ರಾಜ್ಯಗಳಿಗೆ ಹೋಲಿಸಿದರೆ ಕಡಿಮೆಯಿದೆ. 2023-24 ರ ಪ್ರಕಾರ ಕರ್ನಾಟಕದ ಜಿಇಆರ್ ಸುಮಾರು ಶೇಕಡ 39.6ರಷ್ಟಿದೆ. ಇದು ದಕ್ಷಿಣ ಭಾರತದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಕಡಿಮೆಯಿದೆ. ಎಸ್‌ಡಿಜಿ ಇದು 2030 ರ ಒಳಗೆ ಶೇ.50 ರಷ್ಟು ಆಗಬೇಕಾಗಿದೆ. ಸುಸ್ಥಿರ ಅಭಿವೃದ್ಧಿ ಗುರಿ 4 ರಲ್ಲಿ ಗುಣಾತ್ಮಕ ಶಿಕ್ಷಣದ ಬಗ್ಗೆ ಪ್ರಸ್ತಾಪಿಸಲಾಗಿದೆ ಎಂದು ವಿವರಿಸಿದರು.
ರಾಜ್ಯದಲ್ಲಿ ಎಸ್ಸಿ ಮತ್ತು ಎಸ್ಟಿ ವಿದ್ಯಾರ್ಥಿಗಳ ಒಟ್ಟು ದಾಖಲಾತಿ ಅನುಪಾತ ರಾಷ್ಟೀಯ ಸರಾಸರಿಗಿಂತ ಹೆಚ್ಚಾಗಿದೆ. ಇದು ಎಲ್ಲರನ್ನೂ ಒಳಗೊಂಡ ಸಾಮಾಜಿಕ ವ್ಯವಸ್ಥೆಯನ್ನು ಪಾಲಿಸುತ್ತಿರುವುದರ ನಿದರ್ಶನವಾಗಿದೆ. 2030 ರ ವೇಳೆಗೆ ಶೇಕಡ 50ರಷ್ಟು ಒಟ್ಟು ದಾಖಲಾತಿ ಅನುಪಾತ ಸಾಧಿಸಬೇಕಾಗಿದೆ. ಅಲ್ಲದೇ ನಮ್ಮ ರಾಜ್ಯದಲ್ಲಿ ಉನ್ನತ ಶಿಕ್ಷಣದಲ್ಲಿ ಬಾಲಕಿಯರ ದಾಖಲಾತಿ ಬಾಲಕರಿಗಿಂತ ಹೆಚ್ಚಾಗಿದೆ. ರಾಜ್ಯದಲ್ಲಿ ಒಟ್ಟು ಉನ್ನತ ಶಿಕ್ಷಣ ದಾಖಲಾತಿಯಲ್ಲಿ ಹುಡುಗಿಯರು ಶೇಕಡ 51ರಷ್ಟಿದ್ದಾರೆ ಹಾಗೂ ಸುಮಾರು ಶೇಕಡ 81ರಷ್ಟು ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶಗಳಿಂದ ಬಂದವರಾಗಿದ್ದಾರೆ ಎಂದು ತಿಳಿಸಿದರು.
ಉನ್ನತ ಶಿಕ್ಷಣ ರಂಗವು, ಸಾಮಾಜಿಕ ನ್ಯಾಯ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಸಾಧಿಸಲು ಪ್ರಮುಖ ಹಾದಿಯಾಗಿದೆ ಎಂದು ನಾವು ನಂಬಿದ್ದೇವೆ. ಕರ್ನಾಟಕದ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸುವ ಮತ್ತು ನಾವೀನ್ಯತೆ-ಆಧಾರಿತ ಬೆಳವಣಿಗೆಯನ್ನು ಸಾಧಿಸುವ ನಿಟ್ಟಿನಲ್ಲಿ, ನಮ್ಮ ಸರ್ಕಾರ ಕಳೆದ ಎರಡುವರೆ ವರ್ಷಗಳಲ್ಲಿ ಹಲವು ಕ್ರಮಗಳನ್ನು ಕೈಗೊಂಡಿದೆ. ಎಲ್ಲರನ್ನೂ ಒಳಗೊಳ್ಳುವಂತಹ ಕರ್ನಾಟಕ ರಾಜ್ಯ ಶಿಕ್ಷಣ ನೀತಿ (2025)ಯನ್ನು ನಾವು ರೂಪಿಸಿದ್ದೇವೆ. ಯುಜಿಸಿಯ ಚೇರ್‌ಮೆನ್ ಆಗಿದ್ದ ಪ್ರೊ. ಸುಖದೇವ ಥೋರಟ್ ಅವರ ಅಧ್ಯಕ್ಷತೆಯಲ್ಲಿ ಇದಕ್ಕಾಗಿ 2023 ರ ಅಕ್ಟೋಬರ್‌ನಲ್ಲಿ ನಾವು ಸಮಿತಿಯನ್ನು ರಚಿಸಿದ್ದೆವು. ಸಮಿತಿಯು ಸಮಗ್ರವಾದ ಶಿಕ್ಷಣ ನೀತಿಯನ್ನು ರೂಪಿಸಿದೆ ಎಂದು ಮಾಹಿತಿ ನೀಡಿದರು.
ನಮ್ಮ ಸರ್ಕಾರವು ಭವಿಷ್ಯಕ್ಕೆ ಹೊಂದುವಂತಹ, ಜಾಗತಿಕ ಮಟ್ಟದ ಸ್ಪರ್ಧಾತ್ಮಕ ಶಿಕ್ಷಣ ವ್ಯವಸ್ಥೆಯನ್ನ ನಿರ್ಮಿಸಲು ನಾವು ಸಿದ್ಧರಾಗಬೇಕಾಗಿದೆ. ಈ ದೃಷ್ಟಿಕೋನಕ್ಕೆ ಸ್ಪಷ್ಟ ನಿರ್ದೇಶನ ನೀಡುವ ಸಲುವಾಗಿ, ಆಯೋಗದ ಮಧ್ಯಂತರ ಶಿಫಾರಸುಗಳನ್ನ 2024-25 ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ತಂದಿದ್ದೇವೆ. ಉಳಿದ ಶಿಫಾರಸ್ಸುಗಳನ್ನ ಕೂಡಲೇ ಅನುಷ್ಠಾನ ಮಾಡುವಂತೆ ಸೂಚನೆ ನೀಡಿದ್ದೇನೆ ಎಂದರು.












Click it and Unblock the Notifications