ಮೈಸೂರಿನಲ್ಲಿ ಉದ್ಯೋಗ ಮೇಳ: ಐಟಿಐ ಅಭ್ಯರ್ಥಿಗಳಿಗೆ ಉದ್ಯೋಗವಕಾಶ, ಇಲ್ಲಿದೆ ಹೆಚ್ಚಿನ ಮಾಹಿತಿ
ಮೈಸೂರು, ಡಿಸೆಂಬರ್ 01: ಇತ್ತೀಚಿಗೆ ಉದ್ಯೋಗ ಹುಡುಕುವುದೇ ದೊಡ್ಡ ಟಾಸ್ಕ್ ಆಗಿದೆ. ಸಾಮಾನ್ಯ ಪದವಿಗಳನ್ನು ಬಿಟ್ಟು ವಿಶೇಷವಾದ ಕೋರ್ಸ್‌ಗಳನ್ನು ಮಾಡಿದರೂ ಸಹಿತ ಉದ್ಯೋಗ ಸಿಗುವುದು ಕಷ್ಟದ ಮಾತಾಗಿದೆ. ಒಂದು ಕಾಲದಲ್ಲಿ ಬಹುಬೇಡಿಗೆ ಇದ್ದ ಐಟಿಐ ಹಾಗೂ ಡಿಪ್ಲೋಮಾ ಓದಿದವರು ಕೂಡ ಈಗ ಉದ್ಯೋಗ ಪಡೆಯಲು ಹರಸಾಹಸ ಪಡುವಂತಾಗಿದೆ.
ಐಟಿಐ ಮಾಡಿ ಕೆಲಸ ಹುಡುಕುತ್ತಿರುವವರಿಗೆ ಉಪಯುಕ್ತವಾದ ಮಾಹಿತಿ ಇಲ್ಲಿದೆ. ಮೈಸೂರಿನಲ್ಲಿ ನಾಳೆ ಡಿಸೆಂಬರ್ 02ರಂದು ಉದ್ಯೋಗ ಮೇಳ ನಡೆಯಲಿದ್ದು, ಐಟಿಐಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಇದನ್ನು ಸದುಪಯೋಗಪಡಿಸಿಕೊಳ್ಳಬೇಕಿದೆ. ಐಟಿಐ ಅಭ್ಯರ್ಥಿಗಳಿಗಾಗಿ ಮೈಸೂರು ನಗರದ ಎನ್.ಆರ್ ಮೊಹಲ್ಲಾದಲ್ಲಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ವತಿಯಿಂದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಆವರಣದಲ್ಲಿ ಉದ್ಯೋಗಳ ಮೇಳವನ್ನು ಹಮ್ಮಿಕೊಳ್ಳಲಾಗಿದೆ.

ಐಟಿಐಯಲ್ಲಿ ಉತ್ತೀರ್ಣರಾದ ಆಸಕ್ತ ಅಭ್ಯರ್ಥಿಗಳು ಸೂಕ್ತ ದಾಖಲಾತಿಯೊಂದಿಗೆ ನಾಳೆ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆಯಲಿರುವ ಉದ್ಯೋಗ ಮೇಳದಲ್ಲಿ ನೇರ ಸಂದರ್ಶನದಲ್ಲಿ ಭಾಗಿಯಾಗಿ ಉದ್ಯೋಗ ಪಡೆಯಬಹುದಾಗಿದೆ.
ಉದ್ಯೋಗ ಮೇಳದಲ್ಲಿ ಭಾಗವಹಿಸಲು ಇರಬೇಕಾದ ಅರ್ಹತೆ..!
ಉದ್ಯೋಗ ಮೇಳದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಐಟಿಐಯಲ್ಲಿ ಉತ್ತೀರ್ಣರಾಗಿರಬೇಕು. 18 ವರ್ಷದಿಂದ 27 ವರ್ಷ ವಯೋಮಿತಿಯ ಒಳಗಿನವರಾಗಿರಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ಸಂಸ್ಥೆ ವತಿಯಿಂದ ಉಚಿತ ಊಟ ,ವಸತಿ, ಪ್ರಯಾಣ ಭತ್ಯೆ ಸೇರಿ 13,000 ದಿಂದ 16,000 ರೂಪಾಯಿವರೆಗೆ ವೇತನ ಸಿಗಲಿದೆ ಎನ್ನುವ ಮಾಹಿತಿ ಇದೆ.
ಈ ಉದ್ಯೋಗ ಮೇಳದಲ್ಲಿ ಐಟಿಐ ವಿಭಾಗದ ಫಿಟ್ಟರ್ ವಿಭಾಗದಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕಲರ್‌ಟೋನ್ ಪ್ರೈವೇಟ್ ಲಿಮಿಟೆಡ್ ಈ ನೇಮಕಾತಿಯನ್ನು ಮಾಡಿಕೊಳ್ಳಲಿದೆ. ಉದ್ಯೋಗ ಮೇಳ ಸ್ಥಳದಲ್ಲೇ ನೇಮಕಾತಿ ನಡೆಯಲಿದೆ. ಇದು ಖಾಯಂ ಹುದ್ದೆಗಳಿಗಾಗಿ ಆಯ್ಕೆಯಾಗಲಿದೆ. ಆಸಕ್ತ ಅಭ್ಯರ್ಥಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ.












Click it and Unblock the Notifications