ವಾಯುಪಡೆ ನೇಮಕಾತಿ: ನೋಂದಣಿಗೆ ಆ. 17 ಕೊನೆ ದಿನ
ಬೆಂಗಳೂರು, ಆಗಸ್ಟ್ 01; ಭಾರತೀಯ ವಾಯುಪಡೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಆಸಕ್ತ, ಅರ್ಹರ ಹೆಸರು ನೋಂದಣಿ ಮಾಡಲಾಗುತ್ತಿದೆ. ಅಭ್ಯರ್ಥಿಗಳು ತಮ್ಮ ಹೆಸರು ನೋಂದಣಿ ಮಾಡಲು ಆಗಸ್ಟ್ 17 ಕೊನೆಯ ದಿನವಾಗಿದೆ.
ಅಗ್ನಿಪಥ್ ಯೋಜನೆಯಡಿ ಭಾರತೀಯ ವಾಯುಪಡೆಯಲ್ಲಿ ತಾಂತ್ರಿಕ ಮತ್ತು ತಾಂತ್ರಿಕೇತರ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಆನ್‌ಲೈನ್ ಪರೀಕ್ಷೆಗೆ ಪೂರ್ವ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದೆ. ಆಸಕ್ತ ಅವಿವಾಹಿತ ಯುವಕ ಹಾಗೂ ಯುವತಿಯರು ಹೆಸರು ನೋಂದಣಿ ಮಾಡಿಕೊಳ್ಳಬಹುದಾಗಿದೆ.

ಅಭ್ಯರ್ಥಿಗಳು 2003ರ ಜೂನ್ 27ರಿಂದ 2006ರ ಡಿಸೆಂಬರ್ 27ರ ನಡುವೆ ಜನಿಸಿರಬೇಕು. ಪಿಯುಸಿಯಲ್ಲಿ (ಕಲಾ, ಕಲೆ, ವಾಣಿಜ್ಯ, ವಿಜ್ಞಾನ, ಮತ್ತು ಡಿಪ್ಲೋಮಾ ಯಾವುದೇ ವಿಷಯಗಳಲ್ಲಿ) ಕನಿಷ್ಠ ಶೇ.50 ಮತ್ತು ಇಂಗ್ಲೀಷ್ ವಿಷಯದಲ್ಲಿ ಶೇ.50 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
ಆಸಕ್ತರು ಅಭ್ಯರ್ಥಿಗಳು ಆಗಸ್ಟ್ 17ರೊಳಗೆ ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಜಿಲ್ಲಾಧಿಕಾರಿ ಸಂಕೀರ್ಣ, ರಜತಾದ್ರಿ, ಮಣಿಪಾಲ, ಉಡುಪಿ ಇವರನ್ನು ಸಂಪರ್ಕಿಸಬಹುದು.
ಆನ್‍ಲೈನ್ ನೋಂದಣಿಗಾಗಿ https://agnipathvayu.cdac.in ಲಿಂಕ್ ಬಳಸಬಹುದಾಗಿದೆ. ನೋಂದಣಿ ಮಾಡಿಕೊಂಡ ಅಭ್ಯರ್ಥಿಗಳಿಗೆ ಆನ್‍ಲೈನ್ ಪರೀಕ್ಷೆಯು ಅಕ್ಟೋಬರ್‌ನಲ್ಲಿ ನಡೆಯುವ ಸಾಧ್ಯತೆ ಇದೆ. ಅಭ್ಯರ್ಥಿಗಳು https://careerindianairforce.cdac.in ವೆಬ್‍ಸೈಟ್‍ಗೆ ಭೇಟಿ ನೀಡಬಹುದು.
ಶಿಷ್ಯ ವೇತನಕ್ಕೆ ಅರ್ಜಿ ಹಾಕಿ; ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ವತಿಯಿಂದ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಒಂದನೇ ತರಗತಿಯಿಂದ ದ್ವಿತೀಯ ಪಿಯುಸಿ ವರೆಗೆ ಹಾಗೂ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಶಾಲಾ ಮತ್ತು ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಿಲಿಟರಿ ಪಿಂಚಣಿ ಇಲ್ಲದ ರಾಜ್ಯದ ಮಾಜಿ ಸೈನಿಕರ ಹಾಗೂ ರಾಜ್ಯದಲ್ಲಿ ನೆಲೆಸಿರುವ ಹೊರರಾಜ್ಯದ ಪಿಂಚಣಿದಾರ ಮಾಜಿ ಸೈನಿಕರ ಮಕ್ಕಳಿಗೆ ಪುಸ್ತಕ ಅನುದಾನ ಮತ್ತು ವಿಶೇಷ ನಿಧಿಯಿಂದ ಡಿಗ್ರಿ, ಡಿಪ್ಲೋಮಾ, ಜೆ.ಓ.ಸಿ/ ಪ್ರೊಫೆಷನ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ಮಕ್ಕಳಿಗೆ ಶಿಷ್ಯವೇತನ ಮಂಜೂರು ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಗಳನ್ನು ಸಲ್ಲಿಸಲು ಅಕ್ಟೋಬರ್ 15 ಕೊನೆಯ ದಿನವಾಗಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರ ಕಾರ್ಯಾಲಯ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಮಂಗಳೂರು ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.
ಕೃಷಿ ಪ್ರಶಸ್ತಿ ಯೋಜನೆಯಡಿ ಬೆಳೆ ಸ್ಪರ್ಧೆ ನೋಂದಣಿ; ಪ್ರಸ್ತಕ ಸಾಲಿನ ಕೃಷಿ ಪ್ರಶಸ್ತಿ ಯೋಜನೆಯಡಿ ಬೆಳೆ ಸ್ಪರ್ಧೆಗೆ ನೋಂದಾಯಿಸಲು ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಬೆಳೆ ಸ್ಪರ್ಧೆಗೆ ನೀರಾವರಿ ಬೆಳೆ ಭತ್ತ ಹಾಗೂ ಮಳೆ ಆಧಾರಿತ ಬೆಳೆಗಳಾದ ರಾಗಿ, ಮುಂಗಾರು ಜೋಳ, ಶೇಂಗಾ, ತೊಗರಿ ಪೂರ್ಣ ಬೆಳೆ, ಹಿಂಗಾರಿ ಜೋಳ, ಸೂರ್ಯಕಾಂತಿ ಮತ್ತು ಕಡಲೆ ಬೆಳೆಗಳಿಗೆ ಮಾತ್ರ ರೈತರು ಅರ್ಜಿಯನ್ನು ನೋಂದಾಯಿಸಲು ಅವಕಾಶವಿರುತ್ತದೆ.
ಪ್ರವೇಶ ಶುಲ್ಕವು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ರೂ. 25 ಮತ್ತು ಸಾಮಾನ್ಯ ವರ್ಗದವರಿಗೆ ರೂ.100 ಇರುತ್ತದೆ. ಮುಂಗಾರು ಹಂಗಾಮಿನ ಬೆಳೆ ಸ್ಪರ್ಧೆಗೆ ನೋಂದಾಯಿಸಲು ಕೊನೆಯ ದಿನ ಆಗಸ್ಟ್ 31 ಮತ್ತು ಹಿಂಗಾರು ಹಂಗಾಮಿನ ಬೆಳೆ ಸ್ಪರ್ಧೆಗೆ ಕೊನೆಯ ದಿನ ನವೆಂಬರ್ 30 ಆಗಿರುತ್ತದೆ.
ರೈತರು ಬೆಳೆ ಸ್ಪರ್ಧೆಗೆ ನೋಂದಾಯಿಸಲು ತಾಲ್ಲೂಕು ಮಟ್ಟದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಹಾಗೂ ಹೋಬಳಿಯ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬಹುದು.












Click it and Unblock the Notifications