HESCOM Recruitment: ಹೆಸ್ಕಾಂ ನೇಮಕಾತಿ, ವಿದ್ಯಾರ್ಹತೆ ವೇತನ ವಿವರ
ಹುಬ್ಬಳ್ಳಿ, ಅಕ್ಟೋಬರ್ 26: ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ಸಿಹಿಸುದ್ದಿ. ಕರ್ನಾಟಕದ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಖಾಲಿ ಇರುವ ಕಿರಿಯ ಪವರ್‌ಮ್ಯಾನ್ ಹುದ್ದೆಗಳನ್ನು ಭರ್ತಿ ಮಾಡಲು ಆನ್‌ಲೈನ್ ಮೂಲಕ ಅರ್ಜಿಗಳನ್ನು ಕರೆಯಲಾಗಿದೆ. ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಕೆ ಮಾಡಲು 20/11/2024 ಕೊನೆಯ ದಿನವಾಗಿದೆ. ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಮೆಸ್ಕಾಂ)ನಲ್ಲಿಯೂ ನೇಮಕಾತಿ ನಡೆಯುತ್ತಿದೆ. ವಿವರ ಇಲ್ಲಿದೆ.
ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಹೆಸ್ಕಾಂ)ನಲ್ಲಿ 500 ಕಿರಿಯ ಪವರ್ ಮ್ಯಾನ್, 60 ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ನೇಮಕಾತಿ ಅಧಿಸೂಚನೆಯನ್ನು ಈಗಾಗಲೇ ಪ್ರಕಟಿಸಲಾಗಿದೆ. ಆಸಕ್ತರು ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬೇಕು.

ಹುದ್ದೆಗಳ ಸಂಖ್ಯೆ, ವೇತನ ವಿವರ: ಹೆಸ್ಕಾಂನಲ್ಲಿ 500 ಕಿರಿಯ ಪವರ್ ಮ್ಯಾನ್ ಹುದ್ದೆಗಳ ಪೈಕಿ ಪರಿಶಿಷ್ಟ ಜಾತಿ 85, ಪರಿಶಿಷ್ಟ ವರ್ಗ 35, ಸಾಮಾನ್ಯ 220, ಪ್ರವರ್ಗ-1 20, ಪ್ರವರ್ಗ-2ಎ 75, ಪ್ರವರ್ಗ 2-ಬಿ 20, ಪ್ರವರ್ಗ-3ಎ 20, ಪ್ರವರ್ಗ-3ಬಿ 25 ಹುದ್ದೆಗಳಿವೆ. ಅಂಗವಿಕಲತೆ ಹೊಂದಿರುವ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ, ಆ ಹುದ್ದೆಯನ್ನು ಆಯಾ ಪ್ರವರ್ಗದ ಸಾಮಾನ್ಯ ಅಭ್ಯರ್ಥಿಗಳಿಂದ ಭರ್ತಿ ಮಾಡಲಾಗುತ್ತದೆ.
60 ಬ್ಯಾಕ್‌ಲಾಗ್ ಹುದ್ದೆಗಳ ಪೈಕಿ ಪರಿಶಿಷ್ಟ ಜಾತಿ 16, ಪರಿಶಿಷ್ಟ ವರ್ಗ 2, ಸಾಮಾನ್ಯ 10, ಪ್ರವರ್ಗ-1 2, ಪ್ರವರ್ಗ-2ಎ 10, ಪ್ರವರ್ಗ 2-ಬಿ 6, ಪ್ರವರ್ಗ-3ಎ 7, ಪ್ರವರ್ಗ-3ಬಿ 7 ಹುದ್ದೆಗಳಿವೆ ಎಂದು ಅಧಿಸೂಚನೆ ಮಾಹಿತಿ ನೀಡಿದೆ.
ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ. ಅಥವಾ 10ನೇ ತರಗತಿಯ (ಸಿ.ಬಿ.ಎಸ್.ಇ/ ಐ.ಸಿ.ಎಸ್.ಇ) ಪರೀಕ್ಷೆಯಲ್ಲಿ ಕರ್ನಾಟಕ ರಾಜ್ಯದ ವಿದ್ಯಾಸಂಸ್ಥೆಗಳಿಂದ ತೇರ್ಗಡೆ ಹೊಂದಿರಬೇಕು. ಈ ವಿದ್ಯಾರ್ಹತೆ ಹೊರತುಪಡಿಸಿ ಇತರೆ ಯಾವುದೇ ಸಮನಾಂತರ ವಿದ್ಯಾರ್ಹತೆ ಪರಿಗಣಿಸುವುದಿಲ್ಲ.
ಅಭ್ಯರ್ಥಿಗಳು ಬಾಹ್ಯ ಅಥವಾ ಮುಕ್ತ ವಿಶ್ವವಿದ್ಯಾಲಯ ಅಥವಾ ಮುಕ್ತ ಶಾಲೆಯಿಂದ ಪಡೆದ ಎಸ್.ಎಸ್.ಎಲ್.ಸಿ./ 10ನೇ ತರಗತಿ (ಬ್ರಿಡ್ಜ್ ಕೋರ್ಸ್) ಉತ್ತೀರ್ಣತೆ ಹೊಂದಿದ್ದರೆ ಅವುಗಳನ್ನು ಪರಿಗಣಿಸಲಾಗುವುದಿಲ್ಲ. ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು, ಅಭ್ಯರ್ಥಿಗಳು ಈ ಮೇಲೆ ನಿಗದಿಪಡಿಸಿರುವ ಶೈಕ್ಷಣಿಕ ವಿದ್ಯಾರ್ಹತೆಯಲ್ಲಿ ಉತ್ತೀರ್ಣಗೊಂಡಿರತಕ್ಕದ್ದು ಹಾಗೂ ಅಂಕಪಟ್ಟಿಯನ್ನು ಹೊಂದಿರಬೇಕು. ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಈ ಮೇಲಿನ ನಿಗದಿತ ಶೈಕ್ಷಣಿಕ ವಿದ್ಯಾರ್ಹತೆ ಪರೀಕ್ಷೆ ಬರೆದು, ಫಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು, ಅರ್ಜಿ ಸಲ್ಲಿಸಲು ಅರ್ಹರಲ್ಲ.
ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಗೆ ನಿಗದಿಪಡಿಸಿದ ಕೊನೆಯ ದಿನಾಂಕದಂದು ಕನಿಷ್ಠ ವಯೋಮಿತಿ 18 ವರ್ಷ ಹೊಂದಿರಬೇಕು. ಗರಿಷ್ಠ ವಯೋಮಿತಿ ಸಾಮಾನ್ಯ ವರ್ಗಕ್ಕೆ 35, ಪ್ರವರ್ಗ 2ಎ/ 2ಬಿ/ 3ಎ/ 3ಬಿ 38, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಹಾಗೂ ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷಗಳನ್ನು ನಿಗದಿ ಮಾಡಲಾಗಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿಸುವುದು ಕಡ್ಡಾಯ. ಒಂದು ವೇಳೆ ಅರ್ಜಿ ಸಲ್ಲಿಸಿ, ಶುಲ್ಕ ಪಾವತಿಸದಿದ್ದಲ್ಲಿ, ಅಂತಹ ಅರ್ಜಿಗಳನ್ನು ಪರಿಗಣಿಸುವುದಿಲ್ಲ. ಅರ್ಜಿ ಸಲ್ಲಿಸುವ ಸಾಮಾನ್ಯ ವರ್ಗದ ಅಭ್ಯರ್ಥಿ 590 ರೂ. (ಜಿಎಸ್‌ಟಿ ಸೇರಿ), ಪ್ರವರ್ಗ -1, 2ಎ/ 2ಬಿ/ 3ಎ/ 3ಬಿ ಅಭ್ಯರ್ಥಿ 614 ರೂ., ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಅಭ್ಯರ್ಥಿ 378 ರೂ. ಶುಲ್ಕ ಪಾವತಿಸಬೇಕು. ಅಂಗವಿಕಲ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ ಎಂದು ನೇಮಕಾತಿ ಆದೇಶ ಹೇಳಿದೆ.
ಆಯ್ಕೆಗೊಂಡ ಅಭ್ಯರ್ಥಿಗಳನ್ನು ವಿದ್ಯುತ್ ಸರಬರಾಜು ಕಂಪನಿಗಳ ನೌಕರಿ ಭರ್ತಿ ಮತ್ತು ಬಡ್ತಿ ನಿಯಮಾವಳಿಗಳ ಷರತ್ತುಗಳಿಗೊಳಪಟ್ಟು 3 ವರ್ಷಗಳ ಅವಧಿಗೆ ತರಬೇತಿಗೆ ಒಳಪಡಿಸಲಾಗುತ್ತದೆ. ತರಬೇತಿಯ ಅವಧಿಯಲ್ಲಿ, ಕ್ರೋಢೀಕೃತ ಸಂಭಾವನೆಯನ್ನು ಬಿಟ್ಟು, ಇನ್ನಿತರ ಯಾವುದೇ ಭತ್ಯೆ ಹಾಗೂ ಸೌಲಭ್ಯ ಇರುವುದಿಲ್ಲ ಎಂದು ತಿಳಿಸಿದೆ. ಕ್ರೋಢೀಕೃತ ಸಂಭಾವನೆ 1ನೇ ವರ್ಷ 17,000 ಮಾಸಿಕ, 2ನೇ ವರ್ಷ 19,000 ಮಾಸಿಕ ಮತ್ತು 3ನೇ ವರ್ಷ 21,000 ಮಾಸಿಕ ನಿಗದಿ ಮಾಡಲಾಗಿದೆ.












Click it and Unblock the Notifications