Police Recruitment: ಪೊಲೀಸ್ ಇಲಾಖೆ ನೇಮಕಾತಿ, ಸರ್ಕಾರದ ಮುಂದೆ ಹೊಸ ಬೇಡಿಕೆ
ಬೆಂಗಳೂರು, ಡಿಸೆಂಬರ್ 16: ಕರ್ನಾಟಕದ ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಣೆ ಮಾಡುವವರು ಸರ್ಕಾರದ ಮುಂದೆ ಹೊಸ ಬೇಡಿಕೆಯನ್ನು ಇಟ್ಟಿದ್ದಾರೆ. ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ (ಪಿಎಸ್‌ಐ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತಹ ಬೇಡಿಕೆ ಇದಾಗಿದೆ. ಸರ್ಕಾರ ಈ ಕುರಿತು ತೀರ್ಮಾನ ಕೈಗೊಂಡು ಸೇವಾ ನಿರತ ಅಭ್ಯರ್ಥಿಗಳಿಗೆ ಸಿಹಿಸುದ್ದಿಯನ್ನು ನೀಡಲಿದೆಯೇ? ಎಂದು ಕಾದು ನೋಡಬೇಕಿದೆ.
ಸದ್ಯ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ನೇಮಕಾತಿ ನಡೆಸುವಾಗ ಸೇವಾನಿರತ ಅಭ್ಯರ್ಥಿಗಳಿಗೆ ಶೇ 10ರಷ್ಟು ಮೀಸಲಾತಿಯನ್ನು ನಿಗದಿ ಮಾಡಲಾಗಿದೆ. ಆದರೆ ಈ ಮೀಸಲಾತಿ ಪ್ರಮಾಣವನ್ನು ಶೇ 30ಕ್ಕೆ ಏರಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಲಾಗಿದೆ.

ಮೀಸಲಾತಿ ಏಕೆ ಹೆಚ್ಚಿಸಬೇಕು?; ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ನೇಮಕಾತಿಯಲ್ಲಿ ಶೇ 10ರಷ್ಟು ಮೀಸಲಾತಿ ಇರುವ ಕಾರಣಕ್ಕೆ ಬೆರಳೆಣಿಕೆ ಅಭ್ಯರ್ಥಿಗಳಿಗೆ ಮಾತ್ರ ಅನುಕೂಲವಾಗುತ್ತಿದೆ. ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದೂ ಇಂತಹ ನೇಮಕಾತಿ ನಡೆದಾಗ ಹೆಚ್ಚಿನ ಅಭ್ಯರ್ಥಿಗಳಿಗೆ ಅನುಕೂಲ ಮಾಡಿಕೊಡಲು ಮೀಸಲಾತಿ ಪ್ರಮಾಣವನ್ನು ಶೇ 30ಕ್ಕೆ ಏರಿಕೆ ಮಾಡಬೇಕು ಎಂಬುದು ಬೇಡಿಕೆಯಾಗಿದೆ.
ಕಳೆದ ನಾಲ್ಕೈದು ವರ್ಷಗಳಲ್ಲಿ ಪೊಲೀಸ್ ಇಲಾಖೆಯಲ್ಲಿ ಸುಮಾರು 15 ಸಾವಿರ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿ ನಡೆದಿದೆ. ಇದರಿಂದಾಗಿ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಹುದ್ದೆಗಳಿಗೆ ಸೇವಾ ನಿರತ ಅಭ್ಯರ್ಥಿಗಳ ಸಂಖ್ಯೆಯೂ ಅಧಿಕವಾಗಿದೆ. ಆದ್ದರಿಂದ ಮೀಸಲಾತಿ ಪ್ರಮಾಣ ಹೆಚ್ಚಿಸಿದರೆ ಅನುಕೂಲವಾಗಲಿದೆ ಎಂದು ಅಭ್ಯರ್ಥಿಗಳು ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದಾರೆ.
ಇತ್ತೀಚಿನ ನೇಮಕಾತಿಗಳಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗೆ ಪದವಿ, ಅದಕ್ಕಿಂತ ಹೆಚ್ಚಿನ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳು ಅರ್ಜಿ ಹಾಕಿ ಕೆಲಸವನ್ನು ಪಡೆಯುತ್ತಿದ್ದಾರೆ. ಆದ್ದರಿಂದ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಹುದ್ದೆಗಳ ನೇಮಕಾತಿ ನಡೆಸುವಾಗ ಸೇವಾ ನಿರತ ಅಭ್ಯರ್ಥಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ ಎಂದು ಅಭ್ಯರ್ಥಿಗಳು ವಿವರಣೆ ನೀಡಿದ್ದಾರೆ.
2001-02 ಹಾಗೂ 2002-03ರಲ್ಲಿ ಸೇವಾ ನಿರತ ಅಭ್ಯರ್ಥಿಗಳನ್ನು ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಹುದ್ದೆಗೆ ನೇಮಕಾತಿ ಮಾಡಲು ಪ್ರತ್ಯೇಕ ನೇಮಕಾತಿಗಳನ್ನು ನಡೆಸಲಾಗಿತ್ತು. ಅದಾದ ಬಳಿಕ ಇಂತಹ ಯಾವುದೇ ನೇಮಕಾತಿ ನಡೆದಿಲ್ಲ. ಇದರಿಂದಾಗಿ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಸರ್ಕಾರಕ್ಕೆ ತಿಳಿಸಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ ಕಾನ್ಸ್‌ಟೇಬಲ್, ಹೆಡ್ ಕಾನ್ಸ್‌ಟೇಬಲ್ ಆಗಿ ಕಾರ್ಯ ನಿರ್ವಹಣೆ ಮಾಡುತ್ತಿರುವ ಹಲವರು ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಆಗಲು ಅರ್ಹರಾಗಿದ್ದಾರೆ. ಸೇವಾ ನಿರತರ ಅಭ್ಯರ್ಥಿಗಳ ಮೀಸಲಾತಿ ಪ್ರಮಾಣವನ್ನು ಶೇ 30ಕ್ಕೆ ಹೆಚ್ಚಳ ಮಾಡಿದರೆ ಇಲಾಖೆಯಲ್ಲಿರುವ ಅಭ್ಯರ್ಥಿಗಳು ಹೆಚ್ಚಾಗಿ ನೇಮಕಾತಿ ಹೊಂದಲು ಅನುಕೂಲವಾಗಲಿದೆ ಎಂದು ಸರ್ಕಾರಕ್ಕೆ ಮನವಿ ಮಾಡಲಾಗಿದೆ.
ಕರ್ನಾಟಕ ಸರ್ಕಾರ 2020ರಲ್ಲಿ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ನೇಮಕಾತಿಯಲ್ಲಿ ಹೆಚ್ಚಿನ ಅಭ್ಯರ್ಥಿಗಳಿಗೆ ಅವಕಾಶ ಮಾಡಿಕೊಡಲು 10 ಅಂಕದ ಸಂದರ್ಶನ ಪ್ರಕ್ರಿಯೆಯನ್ನು ರದ್ದುಗೊಳಿಸಿತ್ತು. ಲಿಖಿತ ಪರೀಕ್ಷೆ, ದೈಹಿಕ ಪರೀಕ್ಷೆ, ವೈದ್ಯಕೀಯ ಪ್ರಮಾಣ ಪತ್ರದ ಮೂಲಕ ಮಾತ್ರ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತಿದೆ.
ಈಗ ಮೀಸಲಾತಿಯನ್ನು ಶೇ 30ಕ್ಕೆ ಹೆಚ್ಚಳ ಮಾಡಲು ಸರ್ಕಾರಕ್ಕೆ ಸೇವಾ ನಿರತ ಅಭ್ಯರ್ಥಿಗಳು ಮನವಿ ಮಾಡಿದ್ದಾರೆ. ಸರ್ಕಾರ ಇದನ್ನು ಪರಿಗಣಿಸಿ ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿರುವ ಕಾನ್ಸ್‌ಟೇಬಲ್, ಹೆಡ್ ಕಾನ್ಸ್‌ಟೇಬಲ್‌ಗಳಿಗೆ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಆಗಲು ಅವಕಾಶವನ್ನು ಮಾಡಿಕೊಡುವ ತೀರ್ಮಾನ ಕೈಗೊಳ್ಳಲಿದೆಯೇ? ಎಂದು ಕಾದು ನೋಡಬೇಕಿದೆ.












Click it and Unblock the Notifications