Jobs: ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ₹41,863 ಕೋಟಿ ಹೂಡಿಕೆಗೆ ಅನುಮೋದನೆ, 34000 ಉದ್ಯೋಗ ಸೃಷ್ಟಿ
ನವದೆಹಲಿ: ದೇಶದ ಎಲೆಕ್ಟ್ರಾನಿಕ್ಸ್ ಕ್ಷೇತ್ರವನ್ನು ಬಲಪಡಿಸುವ ಕಾರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಸಭೆಯು 41,863 ಕೋಟಿ ರೂಪಾಯಿ ಹೂಡಿಕೆಗೆ ಅನುಮೋದನೆ ನೀಡಿದೆ. ಇದರಿಂದ ಕರ್ನಾಟಕ ಸೇರಿ ಒಟ್ಟು ಎಂಟು ರಾಜ್ಯಗಳಲ್ಲಿ 22 ಉತ್ಪಾದನಾ ಯೋಜನೆಗಳು ಅನುಷ್ಠಾನಗೊಳ್ಳುವ ನಿರೀಕ್ಷೆಗಳು ಇವೆ. ಇದರಿಂದ ಅಪಾರ ಪ್ರಮಾಣದಲ್ಲಿ ಉತ್ಪಾದನೆ ಹೆಚ್ಚಾಗುವ ಜೊತೆಗೆ ನೇರ ಉದ್ಯೋಗಿಗಳು ದೊರೆಯಲಿವೆ.
ಕೇಂದ್ರ ಸಚಿವ ಸಂಪುಟ ಶುಕ್ರವಾರ ಅನುಮೋದನೆ ನೀಡಿದ್ದು, ಇಂದು ಕರ್ನಾಟಕ ಬಿಜೆಪಿಯು ಈ ವಿಚಾರವನ್ನು ಪೋಸ್ಟ್ ಮಾಡಿದೆ. ಕೇಂದ್ರದ ಈ ನಿರ್ಧಾರದಿಂದ ಎಂಟು ರಾಜ್ಯಗಳಲ್ಲಿ 22 ಉತ್ಪಾದನಾ ಯೋಜನೆಗಳ ಮೂಲಕ 2.58 ಲಕ್ಷ ಕೋಟಿ ರೂಪಾಯಿಯ ಉತ್ಪಾದನಾ ಸಾಮರ್ಥ್ಯ ಹೆಚ್ಚಾಗಲಿದೆ. ಜೊತೆಗೆ ಈ ಹೂಡಿಕೆಗಳಿಂದ ಕರ್ನಾಟಕ ಸೇರಿ ಆಯಾ ರಾಜ್ಯಗಳಲ್ಲಿ 34,000ಕ್ಕೂ ಹೆಚ್ಚು ನೇರ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಬಿಜೆಪಿ ತಿಳಿಸಿದೆ.

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಪ್ರಕಾರ, ಚೀನಾ ಮತ್ತು ತೈವಾನ್‌ನಿಂದ ಆಮದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಜೊತೆಗೆ ದೇಶವು ಎಲೆಕ್ಟ್ರಾನಿಕ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವಂತೆ ಮಾಡುವುದು ಈ ಹೂಡಿಕೆ ಅನುಮೋದನೆಯ ಉದ್ದೇಶವಾಗಿದೆ. ಅರೆವಾಹಕಗಳು ಮತ್ತು ಮೊಬೈಲ್ ಘಟಕಗಳಲ್ಲಿ ದೇಶೀಯ ಸಾಮರ್ಥ್ಯಗಳನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ.
ಕರ್ನಾಟಕದ ಮಟ್ಟಿಗೆ ಈ ಹೂಡಿಕೆಯಿಂದ ಉದ್ಯೋಗ, ತಂತ್ರಜ್ಞಾನ ಹಾಗೂ ಕೈಗಾರಿಕೆ ವಲಯದಲ್ಲಿ ಅಧಿಕ ಬೆಳವಣಿಗೆ ನಿರೀಕ್ಷೆ ಮಾಡಲಾಗುತ್ತದೆ. ಏಕೆಂದರೆ ಹೂಡಿಕೆ ಮಾಡುತ್ತಿದ್ದಂತೆ ತಯಾರಿಕೆ ಘಟಕ ನಿರ್ಮಿಸುವುದರಿಂದ ಕೈಗಾರಿಕೆಗಳು ಅಭಿವೃದ್ಧಿ ಆಗುತ್ತವೆ. ಸಹಜವಾಗಿಯೇ ಉದ್ಯೋಗಗಳು ಸೃಷ್ಟಿಯಾಗುತ್ತವೆ. ಇನ್ನೂ ಇದೇ ವಿಚಾರವಾಗಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಪ್ರತಿಕ್ರಿಯಿಸಿದ್ದಾರೆ.
ಸಚಿವಾಲಯವು, ಈ ಹಿಂದೆ ಘೋಷಿಸಿದ್ದ 12,704 ಕೋಟಿ ರೂ. ಮೌಲ್ಯದ 24 ಅರ್ಜಿಗಳ ಅನುಮೋದನೆಯ ಭಾಗವಾಗಿ ಎಲೆಕ್ಟ್ರಾನಿಕ್ಸ್ ಬಿಡಿಭಾಗಗಳ ತಯಾರಿಕಾ ಯೋಜನೆ (ಇಸಿಎಂಎಸ್) ಅಡಿಯಲ್ಲಿ ಇನ್ನೂ 22 ಪ್ರಸ್ತಾವನೆಗಳನ್ನು ಅನುಮೋದಿಸಿದೆ. ಇವುಗಳು 41,863 ಕೋಟಿ ರೂಪಾಯಿಗಳ ಅಂದಾಜು ಹೂಡಿಕೆ ಅಧಿಕ ಉತ್ಪಾದನೆಯ ಗುರಿ ಹೊಂದಿವೆ. 33,791 ನೇರ ಉದ್ಯೋಗ ಸೃಷ್ಟಿಯಾಗಲಿವೆ ಎಂದು ಪುನರುಚ್ಚರಿಸಿದರು.
ಎಲೆಕ್ಟ್ರಾನಿಕ್ಸ್ ವಸ್ತುಗಳ ಉತ್ಪಾದನೆ ಹೆಚ್ಚಿಸುವ ಗುರಿ
ಕೇಂದ್ರ ಸರ್ಕಾರ ನೀಡಿದ ಈ ಅನುಮೋದನೆ 11 ವಿಭಾಗದಲ್ಲಿ ಉತ್ಪನ್ನಗಳ ತಯಾರಿಕೆ ಹೆಚ್ಚಿಸುವ ಗುರಿ ಹೊಂದಿದ್ದೇವೆ. ಮೊಬೈಲ್ ತಯಾರಿಕೆ, ಟೆಲಿಕಾಂ, ಗ್ರಾಹಕ ಎಲೆಕ್ಟ್ರಾನಿಕ್ಸ್, ಕಾರ್ಯತಂತ್ರದ ಎಲೆಕ್ಟ್ರಾನಿಕ್ಸ್, ಆಟೋಮೋಟಿವ್ ಮತ್ತು ಐಟಿ ಹಾರ್ಡ್‌ವೇರ್ ಉತ್ಪನ್ನಗಳಂತಹ ವಿವಿಧ ಕ್ಷೇತ್ರಗಳಲ್ಲಿ ಈ ಹೂಡಿಕೆ ವಿನಿಯೋಗವಾಗಿ ಉತ್ಪಾದನೆ ಹೆಚ್ಚಾಗಲಿದೆ. ಎಲೆಕ್ಟ್ರಾನಿಕ್ ಸರ್ಕ್ಯೂಟ್ ಗಳಲ್ಲಿ ಇಂಧನ ಸಂಗ್ರಹಣೆ ಮತ್ತು ಪವರ್ ಕಂಡೀಷನಿಂಗ್ ಗೆ ಅತ್ಯಗತ್ಯವಾದ ಕೆಪಾಸಿಟರ್ ಗಳ ತಯಾರಿಕೆಗಾಗಿ, ಡೆಕಿ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಮತ್ತು ಎಲೆಕ್ಟ್ರಾನಿಕ್ ಘಟಕಗಳು ಹಾಗೂ ವ್ಯವಸ್ಥೆಗಳ ಪ್ರಮುಖ ಜಾಗತಿಕ ತಯಾರಿಕಾ ಸಂಸ್ಥೆಯಾದ ಟಿಡಿಕೆ ಇಂಡಿಯಾ ಕಂಪನಿಗಳಿಗೆ ಅನುಮೋದನೆ ನೀಡಲಾಗಿದೆ. ಅತಿ ವೇಗದ ಕನೆಕ್ಟರ್ ಗಳ ತಯಾರಿಕೆಯ ಆಂಪೆನಾಲ್ ಹೈ ಸ್ಪೀಡ್ ಟೆಕ್ನಾಲಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ಗೂ ಒಪ್ಪಿಗೆ ನೀಡಲಾಗಿದೆ ಎಂದು ವಿವರಿಸಿದರು.
ಎಂಟು ರಾಜ್ಯಗಳು ಯಾವುವು
ಆಂಧ್ರಪ್ರದೇಶ, ಹರಿಯಾಣ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಉತ್ತರ ಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಈ ಎಲೆಕ್ಟ್ರಾನಿಕ್ಸ್ ಸಂಬಂಧಿ ಹೂಡಿಕೆ ಹಂಚಿಕೆ ಆಗಲಿದೆ. ಅಲ್ಲಿ ತಯಾರಿಕೆ ಸಾಮರ್ಥ್ಯ ಹೆಚ್ಚಾಗಲಿದೆ. ಕೈಗಾರಿಕಾ ಬೆಳವಣಿಗೆ ಮತ್ತು ದೇಶಾದ್ಯಂತ ಎಲೆಕ್ಟ್ರಾನಿಕ್ಸ್ ಉತ್ಪಾದನೆಯ ವಿಸ್ತರಣೆಯ ಮೇಲೆ ಸರ್ಕಾರ ಆದ್ಯತೆ ನೀಡುತ್ತಿದೆ. ಈವರೆಗೆ ಇಸಿಎಂಎಸ್ ಅಡಿಯಲ್ಲಿ 11 ರಾಜ್ಯಗಳಲ್ಲಿ ಒಟ್ಟು 46 ಅರ್ಜಿಗಳನ್ನು ಅನುಮೋದಿಸಲಾಗಿದೆ. ಅವುಗಳ ಒಟ್ಟು ಹೂಡಿಕೆಯು 54,567 ಕೋಟಿ ರೂಪಾಯಿಗಳಾಗಿದ್ದು, ಅದರಿಂದ 51,000 ಉದ್ಯೋಗ ಸೃಷ್ಟಿಯಾಗಲಿವೆ ಎಂದು ಸಚಿವರು ಮಾಹಿತಿ ನೀಡಿದರು.












Click it and Unblock the Notifications