1,15,000 ರೂ. ವೇತನ & 35,000 ರೂ. ಭತ್ಯೆ ಸಹಿತ ಭರ್ಜರಿ ಉದ್ಯೋಗ: BWSSB ನೇಮಕಾತಿ: Job Alert
ಬೆಂಗಳೂರು, ಜುಲೈ 17: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ (BWSSB) ಕಾನೂನು ಅಧಿಕಾರಿ ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ. ಈ ಹುದ್ದೆಯಲ್ಲಿ ಸೇವೆ ಸಲ್ಲಿಸಲು ಇಚ್ಚಿಸುವ ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಬಹುದು. ಸೇವಾ ವಿಷಯಗಳಲ್ಲಿ ನುರಿತ ಹಾಗೂ ಹೆಚ್ಚಿನ ಅನುಭವವುಳ್ಳ ನಿವೃತ್ತ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಮಂಡಳಿಯ ಮುಖ್ಯ ಆಡಳಿತಾಧಿಕಾರಿಗಳು/ಕಾರ್ಯದರ್ಶಿಗಳು ತಿಳಿಸಿದ್ದಾರೆ.
ಸದರಿ ಸೇವೆಯಲ್ಲಿ ಸೇವೆ ಸಲ್ಲಿಸಲು ಇಚ್ಚಿಸುವವರು ನ್ಯಾಯಾಂಗ ಇಲಾಖೆಯಲ್ಲಿ ಜಿಲ್ಲಾ ನ್ಯಾಯಾಧೀಶರಾಗಿ ಕನಿಷ್ಠ 05 ವರ್ಷಗಳ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿರಬೇಕು. ಹಿಂದಿನ ಸೇವೆಯಿಂದ ವಜಾಗೊಂಡಿರಬಾರದು ಹಾಗೂ ಯಾವುದೇ ಇಲಾಖೆ ವಿಚಾರಣೆ/ಶಿಸ್ತು ಕ್ರಮಗಳಿಂದ ಹೊರತಾಗಿರಬೇಕು ಎಂದರು.

ಮಾಸಿಕ ವೇತನ ವಿವರ
ಕಾನೂನು ಅಧಿಕಾರಿ ಹುದ್ದೆಗೆ ಸಂಭಾವನೆಯನ್ನು ಮಾಹೆಯಾನ 1.15ಲಕ್ಷ ರೂಪಾಯಿ ಹಾಗೂ ವಾಹನ ಭತ್ಯೆ 35 ಸಾವಿರ ರೂಪಾಯಿ ನಿಗದಿಪಡಿಸಲಾಗಿದೆ. ಸದರಿಯವರ ಸೇವೆಯನ್ನು 02 ವರ್ಷಗಳ ಅವಧಿಗೆ ನೇಮಕ ಮಾಡಲಾಗುತ್ತಿದೆ. 01 ವರ್ಷದ ನಂತರ ಅವರ ಕಾರ್ಯನಿರ್ವಹಣೆಯ ಆಧಾರದ ಮೇಲೆ ನಂತರದ ಮುಂದಿನ 01 ವರ್ಷದವರೆಗೆ ಮುಂದುವರಿಸಲಾಗುವುದು ಎಂದು ಅವರು ಹೇಳಿದರು.
ಅನುಭವಿ ಅಭ್ಯರ್ಥಿಗಳಿಗೆ ಆದ್ಯತೆ
ಸೇವಾ ವಿಷಯಗಳಲ್ಲಿ ನುರಿತ ಹಾಗೂ ಹೆಚ್ಚಿನ ಅನುಭವ ಹಾಗೂ ಮಾಹಿತಿವುಳ್ಳ ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಿಂದ ಅರ್ಜಿಯನ್ನು ಆಹ್ವಾನಿಸುತ್ತಿದ್ದು, ಆಸಕ್ತರು ಅರ್ಜಿಯೊಂದಿಗೆ ತಮ್ಮ ಹೆಸರು,ವಿಳಾಸ, ಜನ್ಮದಿನಾಂಕ, ವಿದ್ಯಾರ್ಹತೆ, ಸೇವಾ ವಿವರಗಳನ್ನೊಳಗೊಂಡ (ವೈಯಕ್ತಿಕ ವಿವರ, ಸರಕಾರಿ ಸೇವೆ ಸಲ್ಲಿಸಿರುವ ವಿವರ ಹಾಗೂ ಪಿಂಚಣಿ ಪುಸ್ತಕದ ನಕಲು ಪ್ರತಿ) ಸಂಪೂರ್ಣ ಮಾಹಿತಿ ಹಾಗೂ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಅಧಿಸೂಚನೆ ಹೊರಡಿಸಿದ 15ದಿನದೊಳಗೆ ಮುಚ್ಚಿದ ಲಕೋಟೆಯಲ್ಲಿ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಕೆ ವಿಳಾಸ
'ಮುಖ್ಯ ಆಡಳಿತಾಧಿಕಾರಿ ಹಾಗೂ ಕಾರ್ಯದರ್ಶಿ' ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, 1ನೇ ಮಹಡಿ, ಕಾವೇರಿ ಭವನ, ಕೆ.ಜಿ.ರಸ್ತೆ,ಬೆಂಗಳೂರು-560009 ವಿಳಾಸಕ್ಕೆ ಖುದ್ದಾಗಿ ಅಥವಾ ಅಂಚೆ ಮುಖಾಂತರ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ
ಕಾನೂನು ಸಲಹೆಗಾರರ ಕರ್ತವ್ಯಗಳು ಹಾಗೂ ನಿಬಂಧನೆಗಳು/ಷರತ್ತುಗಳನ್ನು ಹಾಗೂ ಇನ್ನೀತರ ಮಾಹಿತಿಗಳನ್ನು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮಂಡಳಿಯ ವೆಬ್‌ಸೈಟ್ https://bwssb.karnataka.gov.in/ ಅಥವಾ ದೂ:080-22945107 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.












Click it and Unblock the Notifications