2037ರ ಬೆಂಗಳೂರು ಕನಸು: 35 ಲಕ್ಷ ರೂ. ಕೋಟಿ ಆರ್ಥಿಕತೆ, 30 ಲಕ್ಷ ಹೊಸ ಉದ್ಯೋಗಗಳ ಗುರಿ
ಬೆಂಗಳೂರು: ಐಟಿ ಕೇಂದ್ರ ಬೆಂಗಳೂರು ಎಲ್ಲ ಹಂತಗಳಲ್ಲೂ ಬೆಳವಣಿಗೆ ಹೊಂದಿರುವ ಮಹಾನಗರವಾಗಿದೆ. ಎಐ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ (ಎಐ) ಅಧಿಕ ಬಳಕೆ, ವಿವಿಧ ರಂಗಗಳಲ್ಲಿ ಅದರ ಅಳವಡಿಕೆಯಲ್ಲೂ ನಿರಂತರ ಪ್ರಯತ್ನದಲ್ಲಿದೆ. ಈ ಬೆಂಗಳೂರು ಮಹಾನಗರ ಪ್ರದೇಶವನ್ನು (BMR) ಜಾಗತಿಕ ಆರ್ಥಿಕ ಬೆಳವಣಿಗೆಯ ಪ್ರಮುಖ ಕೇಂದ್ರವನ್ನಾಗಿ ಪರಿವರ್ತಿಸಲು ಕರ್ನಾಟಕ ಸರ್ಕಾರವು ಮಹತ್ತರ ಹೆಜ್ಜೆ ಇಟ್ಟಿದೆ.
ಹೌದು, ಬೆಂಗಳೂರು 2037ರ ವೇಳೆಗೆ ನಾವೀನ್ಯತೆ, ಕೃತಕ ಬುದ್ಧಿಮತ್ತೆ (AI), ಸುಧಾರಿತ ಉತ್ಪಾದನೆ ಮತ್ತು ಸುಸ್ಥಿರ ನಗರಾಭಿವೃದ್ಧಿಯಲ್ಲಿ ವಿಶ್ವದ ಪ್ರಮುಖ ಹಬ್‌ಗಳಲ್ಲಿ ಒಂದಾಗಿ ರೂಪಿಸುವ ಯೋಜನೆಗೆ ಸರ್ಕಾರ ಕೈ ಹಾಕಿದೆ. ಈ ಯೋಜನೆ ಪರಿಶೀಲನೆಗಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಮಂಗಳವಾರ ಉನ್ನತ ಮಟ್ಟದ ಸಮಿತಿ ನಡೆಸಿತು. 'ಇನ್‌ಸ್ಟಿಟ್ಯೂಟ್ ಫಾರ್ ಸಸ್ಟೈನಬಿಲಿಟಿ, ಎಂಪ್ಲಾಯ್‌ಮೆಂಟ್ ಅಂಡ್ ಫೌಂಡೇಶನ್' ವಿವಿಧ ವಲಯಗಳನ್ನು ಒಳಗೊಂಡ ಸಮಗ್ರ ಮಾರ್ಗಸೂಚಿ ಪ್ರಸ್ತುತಪಡಿಸಿತು.

ಡಿಕೆಶಿ ನೇತೃತ್ವದಲ್ಲಿ ಮಹತ್ವದ ಒಪ್ಪಂದಕ್ಕೆ ಸಹಿ
ಬೆಂಗಳೂರಿನ ಸುಸ್ಥಿರ ಅಭಿವೃದ್ಧಿಗಾಗಿ ಅಂದಿನ ಉಪಮುಖ್ಯಮಂತ್ರಿ, ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಸರ್ಕಾರ ಮತ್ತು ISEG ಫೌಂಡೇಶನ್ ಜಂಟಿಯಾಗಿ ಒಡಂಬಡಿಕೆಗೆ ಸಹಿ ಹಾಕಿವೆ. ಈ ಯೋಜನೆಯ ಮೂಲಕ ಮುಂದಿನ ದಿನಗಳಲ್ಲಿ ಬೆಂಗಳೂರಿನ ಆರ್ಥಿಕತೆಯನ್ನು ಸುಮಾರು 390 ರಿಂದ 420 ಬಿಲಿಯನ್ ಅಮೆರಿಕನ್ ಡಾಲರ್ (ಸುಮಾರು 35 ಲಕ್ಷ ಕೋಟಿ ರೂ.ಗೂ ಅಧಿಕ) ಮಟ್ಟಕ್ಕೆ ವಿಸ್ತರಿಸುವ ಪ್ಲ್ಯಾನ್ ಹಾಕಿಕೊಳ್ಳಲಾಗಿದೆ. ಆಗ ಬೆಂಗಳೂರು ಒಂದರಲ್ಲೇ ಬರೋಬ್ಬರಿ 25 ರಿಂದ 30 ಲಕ್ಷ ಹೊಸ ಉದ್ಯೋಗ ಸೃಷ್ಟಿ ಗುರಿ ಸರ್ಕಾರ ಹೊಂದಿದೆ.
ದೇಶದಲ್ಲೇ ಬೆಂಗಳೂರಿಗಿದೆ ವೇಗದ ಆರ್ಥಿಕತೆ
ಪ್ರಸ್ತುತ ಬೆಂಗಳೂರು ಮಹಾನಗರ ಪ್ರದೇಶವು (BMR) ಸುಮಾರು 1.5 ಕೋಟಿ ಜನಸಂಖ್ಯೆ ಮತ್ತು 8,000 ಚದರ ಕಿಲೋಮೀಟರ್ ವಿಸ್ತೀರ್ಣ ಹೊಂದಿದೆ. USD 149 ಬಿಲಿಯನ್ ಮೌಲ್ಯದ ಆರ್ಥಿಕತೆಯೊಂದಿಗೆ ಕರ್ನಾಟಕದ ಒಟ್ಟು ರಾಜ್ಯ ದೇಶೀಯ ಉತ್ಪನ್ನಕ್ಕೆ (GSDP) ಶೇಕಡಾ ಶೇ.43 ಕ್ಕಿಂತ ಹೆಚ್ಚು ಕೊಡುಗೆ ನೀಡುತ್ತಿದೆ.
ಬೆಂಗಳೂರಿನ ತಲಾ ಜಿಡಿಪಿಯು ಸುಮಾರು 9,700 ಡಾಲರ್ ಆಗಿದೆ. ಇದು ಕರ್ನಾಟಕದ ಸರಾಸರಿಗಿಂತ (5,000 ಡಾಲರ್) 1.9 ಪಟ್ಟು ಮತ್ತು ಭಾರತದ ಸರಾಸರಿಗಿಂತ (2,500 ಡಾಲರ್) 4 ಪಟ್ಟು ಹೆಚ್ಚಾಗಿದೆ.
2015-25ರ ಅವಧಿಯಲ್ಲಿ ಬೆಂಗಳೂರು ಶೇಕಡಾ 9.7 ರಷ್ಟು ವಾರ್ಷಿಕ ಸಂಯೋಜಿತ ಬೆಳವಣಿಗೆ ದರ ದಾಖಲಿಸಿ ಹೈದರಾಬಾದ್ (ಶೇ. 7.5) ಮತ್ತು ಕರ್ನಾಟಕದ ಸರಾಸರಿಯನ್ನು (ಶೇ. 8.5) ಮೀರಿಸಿ ದೇಶದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮಹಾನಗರವಾಗಿ ಹೊರಹೊಮ್ಮಿತು.
ನಗರದ ಒಳಗೆ ಮತ್ತು ಹೊರಗೆ ಸಮತೋಲಿತ ಅಭಿವೃದ್ಧಿಯನ್ನು ತರಲು ಹೊಸ 'ಬೆಳವಣಿಗೆ ಕೇಂದ್ರಗಳನ್ನು' ಸ್ಥಾಪಿಸಲು ಪ್ರಸ್ತಾಪಿಸಲಾಗಿದೆ. ಇವುಗಳನ್ನು ಕೈಗಾರಿಕೆ, ಐಟಿ/ಬಿಟಿ, ಸಂಶೋಧನೆ, ಉತ್ಪಾದನೆ ಮತ್ತು ಲಾಜಿಸ್ಟಿಕ್ಸ್ ಒಳಗೊಂಡ ಸಮಗ್ರ ಹಬ್‌ಗಳಾಗಿ ಅಭಿವೃದ್ಧಿಪಡಿಸಲಾಗುವುದು. ಇದರಿಂದ ಕೇಂದ್ರ ಬೆಂಗಳೂರಿನ ಮೇಲಿನ ಒತ್ತಡ ಕಡಿಮೆಯಾಗಲಿದ್ದು, ಸುತ್ತಮುತ್ತಲಿನ ಪ್ರದೇಶಗಳಿಗೂ ಆರ್ಥಿಕತೆ ವಿಸ್ತರಣೆಯಾಗಲಿದೆ.
ವೃತ್ತಾಕಾರ ರೈಲ್ವೆ ಜಾಲ ನಿರ್ಮಾಣ
ಬೆಂಗಳೂರಿನ ಸಂಚಾರ ದಟ್ಟಣೆಗೆ ಮುಕ್ತಿ ಹಾಡಲು ಸರ್ಕಾರ ಬೃಹತ್ ಮೂಲಸೌಕರ್ಯ ಯೋಜನೆಗಳನ್ನು ಸಿದ್ಧಪಡಿಸಿದೆ. ನಗರದ ಸುತ್ತ 287 ಕಿಲೋಮೀಟರ್ ಉದ್ದದ ವೃತ್ತಾಕಾರ ರೈಲು ಜಾಲ ನಿರ್ಮಾಣದ ಪ್ರಸ್ತಾವನೆ ಸಲ್ಲಿಸಿದೆ.
ಮೆಟ್ರೋ ರೈಲು ವಿಸ್ತರಣೆಗಾಗಿ 400-500 ಕಿಲೋಮೀಟರ್‌ಗಳ ಹೆಚ್ಚುವರಿ ಮೆಟ್ರೋ ಜಾಲ ಹಾಗೂ 100-200 ಕಿಲೋ ಮೀಟರ್‌ಗಳ ಗ್ರೀನ್‌ಫೀಲ್ಡ್ ಮೆಟ್ರೋ ಕಾರಿಡಾರ್‌ಗಳು, 4 ಹೊಸ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ (RRTS) ಕಾರಿಡಾರ್‌ಗಳು ಮತ್ತು ಉಪನಗರ ರೈಲು ಜಾಲದ ವಿಸ್ತರಣೆಗಳು ಯೋಜನೆಯಲ್ಲಿವೆ.
ಜಾಗತಿಕವಾಗಿ ಬೆಂಗಳೂರಿಗೆ ಮಹತ್ವದ ಸ್ಥಾನ
ಹೂಡಿಕೆದಾರರನ್ನು ಒಳಗೊಂಡ 'ಐಡಿಯಾಸ್ ಕಾರ್ಯಾಗಾರ-1' ಅನ್ನು ಜೂನ್ ಕೊನೆಯ ವಾರದಲ್ಲಿ ಆಯೋಜಿಸಲಾಗುತ್ತಿದೆ. ತದನಂತರ ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿ ಮುಂದಿನ ಹಂತದ ಸಭೆಗಳು ನಡೆಯಲಿದ್ದು, ಸೆಪ್ಟೆಂಬರ್ ಮೊದಲ ವಾರದಲ್ಲಿ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳಿಗೆ ಯೋಜನೆಯ ಅಂತಿಮ ಪ್ರಸ್ತುತಿ ಸಲ್ಲಿಸಲಾಗುತ್ತದೆ. ಒಟ್ಟಾರೆ ಬೆಂಗಳೂರು ಭವಿಷ್ಯದಲ್ಲಿ ಜಾಗತಿಕವಾಗಿ ಮಹತ್ವದ ಸ್ಥಾನ ಪಡೆಯಲಿದೆ.














Click it and Unblock the Notifications