ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಸಂಪನ್ಮೂಲ ವ್ಯಕ್ತಿ ಹುದ್ದೆಗೆ ಅರ್ಜಿ ಸಲ್ಲಿಸಿ
ಬಳ್ಳಾರಿ,ಜು.12: ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ ದೀನ್‍ದಯಾಳ್ ಅಂತ್ಯೋದಯ ಯೋಜನೆ ರಾಷ್ಟ್ರೀಯ ಜೀವನೋಪಾಯ ಅಭಿಯಾನ (ಡೇ-ನಲ್ಮ್) ಯೋಜನೆಯಡಿ ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಗೌರವಧನ ಆಧಾರದ ಮೇಲೆ ಡೇ-ನಲ್ಮ್ ಅಭಿಯಾನದ ಯಶಸ್ವಿ ಅನುಷ್ಠಾನಕ್ಕೆ ಸಂಬಂಧಿಸಿದ ಕಾರ್ಯಗಳನ್ನು ನಿರ್ವಹಿಸಲು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಮಹಾನಗರ ಪಾಲಿಕೆ ವ್ಯಾಪ್ತಿಯ ಅರ್ಹ ಸ್ವ-ಸಹಾಯ ಸಂಘದ ಸದಸ್ಯರುಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಮಹಾನಗರ ಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಸಮಿತಿಯ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತಿದ್ದು, ಸಮಿತಿಯ ನಿರ್ಣಯವೇ ಅಂತಿಮವಾಗಿರುತ್ತದೆ.

ಹುದ್ದೆಯ ಹೆಸರು: ಸಮುದಾಯ ಸಂಪನ್ಮೂಲ ವ್ಯಕ್ತಿ,
ಹುದ್ದೆಯ ಸಂಖ್ಯೆ: 02,
ಗೌರವಧನ ಮಾಸಿಕ ರೂ.8 ಸಾವಿರ, ಟಿ.ಎ ಗರಿಷ್ಠ ರೂ.2ಸಾವಿರ ಆಗಿರುತ್ತದೆ.
ಅರ್ಹತೆ: ಕನಿಷ್ಠ ದ್ವಿತೀಯ ಪಿಯುಸಿ ತೇರ್ಗಡೆಯಾಗಿರಬೇಕು. ಹೆಚ್ಚಿನ ವಿದ್ಯಾರ್ಹತೆ ಹೊಂದಿದಂತಹ ಸ್ವ-ಸಹಾಯ ಸಂಘದ ಸದಸ್ಯರು ಸಹ ಅರ್ಜಿ ಸಲ್ಲಿಸಬಹುದು.
ಕಂಪ್ಯೂಟರ್ ನಿರ್ವಹಣೆ ಜ್ಞಾನ ಹೊಂದಿರಬೇಕು ಹಾಗೂ ಪ್ರಮಾಣ ಪತ್ರ ಹೊಂದಿರತಕ್ಕದ್ದು. ಸ್ವಸಹಾಯ ಸಂಘವು ಪ್ರದೇಶ ಮಟ್ಟದ ಒಕ್ಕೂಟದ ಸದಸ್ಯತ್ವವನ್ನು ಹೊಂದಿರಬೇಕು. ಮಹಾನಗರಪಾಲಿಕೆ ವ್ಯಾಪ್ತಿಯ ಸ್ವಸಹಾಯ ಸಂಘದಲ್ಲಿ ಕನಿಷ್ಠ 3 ವರ್ಷದಿಂದ ಸದಸ್ಯರಾಗಿರಬೇಕು /ಪ್ರದೇಶ ಮಟ್ಟದ ಒಕ್ಕೂಟದ ಸದಸ್ಯರಾಗಿರಬೇಕು.

ಅಭ್ಯರ್ಥಿಯು ಸ್ವಸಹಾಯ ಸಂಘದಿಂದ ಸಾಲ ಪಡೆದು ಸಕಾಲದಲ್ಲಿ ಮರು ಪಾವತಿಸಿರಬೇಕು/ಚಾಲ್ತಿಯಲ್ಲಿರಬೇಕು. ಅಭ್ಯರ್ಥಿಯು ಸ್ವಸಹಾಯ ಸಂಘದಿಂದ ಪಡೆದ ಸಾಲ ಮರುಪಾವತಿಸದೇ ಸುಸ್ತಿದಾರರಾಗಿರಬಾರದು.
ವಯೋಮಿತಿ: ವಯಸ್ಸು 18 ರಿಂದ 45 ವರ್ಷದ ವಯೋಮಾನದವರಾಗಿರಬೇಕು. ಸ್ವ-ಸಹಾಯ ಸಂಘ ನಿರ್ವಹಿಸಬೇಕಿರುವ ಪುಸ್ತಕಗಳು ಹಾಗೂ ವಹಿಗಳ ಬಗ್ಗೆ ಜ್ಞಾನ ಹೊಂದಿರಬೇಕು. ಉತ್ತಮ ಸಂವಹನ ಕೌಶಲ್ಯ ಹೊಂದಿರಬೇಕು. ಯಾವುದೇ ಸರ್ಕಾರಿ/ಸರ್ಕಾರೇತರ ಸಂಸ್ಥೆಗಳಲ್ಲಿ ಪೂರ್ಣಾವಧಿ ಅಥವಾ ತಾತ್ಕಾಲಿಕ ಉದ್ಯೋಗಸ್ಥರಾಗಿರಬಾರದು. ಬೇರೆ ಬೇರೆ ಸ್ಥಳಗಳಲ್ಲಿ/ಜಿಲ್ಲೆಗಳಲ್ಲಿ/ ಹೊರ ರಾಜ್ಯಗಳಲ್ಲಿ ನೀಡುವ ತರಬೇತಿ ಅಥವಾ ಇತರೆ ಚಟುವಟಿಕೆಗಳಲ್ಲಿ ಭಾಗವಹಿಸಲು ಸಿದ್ದರಿರಬೇಕು.
ಅರ್ಜಿ ಸಲ್ಲಿಸುವ ವಿಧಾನ:
ಆಸಕ್ತ ಅಭ್ಯರ್ಥಿಗಳು ಮಹಾನಗರಪಾಲಿಕೆಯ(ವಲಯ ಕಚೇರಿ-2) ಡೇ-ನಲ್ಮ್ ಶಾಖೆ, ಇಲ್ಲಿ ಸಂಪರ್ಕಿಸಿ ನಿಗದಿತ ನಮೂನೆ ಅರ್ಜಿಯನ್ನು ಪಡೆದುಕೊಂಡು ಅರ್ಜಿ ಹಾಗೂ ದೃಢೀಕೃತ ದಾಖಲೆಗಳನ್ನು ಜು.22ರೊಳಗಾಗಿ ಮಹಾನಗರಪಾಲಿಕೆ ಕಚೇರಿಗೆ ಸಲ್ಲಿಸಬೇಕು. ತದನಂತರ ಸಲ್ಲಿಸಲಾಗುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ದೂ.08392-273479/278168ಗೆ ಸಂಪರ್ಕಿಸಬಹುದು












Click it and Unblock the Notifications