ಕೊಡಗು: ಕೆಲಸ ಖಾಲಿ ಇದೆ, ವೇತನ 9,600 ರೂ.ಗಳು
ಮಡಿಕೇರಿ, ಫೆಬ್ರವರಿ 12: ಕೊಡಗು ಜಿಲ್ಲೆಯಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಪ್ರಮುಖವಾದ ಮಾಹಿತಿಯೊಂದಿದೆ. ಜಿಲ್ಲೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ ನಡೆಯುತ್ತಿದ್ದು, ಆಸಕ್ತರು, ಅರ್ಹರು ಅರ್ಜಿಗಳನ್ನು ಸಲ್ಲಿಕೆ ಮಾಡಬಹುದು. ಅರ್ಜಿ ಸಲ್ಲಿಕೆ ಮಾಡಲು ಅರ್ಹತೆ, ವೇತನದ ವಿವರ ಮುಂತಾದ ಮಾಹಿತಿಗಳು ಇಲ್ಲಿವೆ. ಆಸಕ್ತರು ಅಗತ್ಯ ದಾಖಲೆಗಳ ಜೊತೆ ಅರ್ಜಿ ಹಾಕಿ.
ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆಗೆ ಸೇರಿರುವ ಮಡಿಕೇರಿ ನಗರದ ಶ್ರೀ ಓಂಕಾರೇಶ್ವರ ದೇವಾಲಯಕ್ಕೆ ಒಳಪಡುವ ಶ್ರೀ ಆಂಜನೇಯ ಮತ್ತು ಕೋಟೆ ಗಣಪತಿ ದೇವಾಲಯದ ಕಾರ್ಯಗಳಿಗೆ ತಾತ್ಕಾಲಿಕವಾಗಿ ಹುದ್ದೆಗಳ ನೇಮಕಾತಿ ನಡೆಯುತ್ತಿದೆ.

ಒಟ್ಟು 3 ಡಿ-ಗ್ರೂಪ್ ಹುದ್ದೆಗಳು ಖಾಲಿ ಇದ್ದು ಆಸಕ್ತರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ವಯೋಮಿತಿ 18 ವರ್ಷಗಳು, ಗರಿಷ್ಠ ವಯೋಮಿತಿ 35 ವರ್ಷ ಮೀರಿರಬಾರದು (ವಯಸ್ಸಿನ ಬಗ್ಗೆ ಶಾಲಾ ದಾಖಲೆ ನೀಡಬೇಕು).
ದೇವಾಲಯದ ಹೊರಾಂಗಣದ ನೌಕರರು ಡಿ-ಗ್ರೂಪ್ ಹುದ್ದೆ 3 (ಸ್ವಚ್ಛತಗಾರ ಮತ್ತು ಕಾವಲುಗಾರರು). ವೇತನ ರೂ. 9,600 ಮತ್ತು ಇತರೆ. ದೇವಾಲಯದ ಕರ್ತವ್ಯದ ಅವಧಿ ಬೆಳಗ್ಗೆ 7.30 ರಿಂದ ಮಧ್ಯಾಹ್ನ 1 ಗಂಟೆ, ಸಂಜೆ 5 ಗಂಟೆಯಿಂದ ರಾತ್ರಿ 8 ಗಂಟೆವರೆಗೆ.
ದೇವಾಲಯದ ಕೆಲಸ ಕಾರ್ಯಗಳು ಮುಜರಾಯಿ ಇಲಾಖೆ ಸೂಚಿಸಿದ ನಿಯಮಗಳು ಹಾಗೂ ಶಿಸ್ತು ಪಾಲನೆಗೆ ಒಳಪಟ್ಟಿರುತ್ತದೆ. ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಯಿಂದ ಪಡೆದ ಆರೋಗ್ಯ ಪ್ರಮಾಣ ಪತ್ರವನ್ನು ಹಾಜರುಪಡಿಸಬೇಕು. ಅಭ್ಯರ್ಥಿ ಯಾವುದೇ ಕ್ರಿಮಿನಲ್ ಮೊಕದ್ದಮೆ ಹಾಗೂ ನ್ಯಾಯಾಲಯದ ಆದೇಶದಂತೆ ಕಾರಾಗೃಹದ ಶಿಕ್ಷೆಗೆ ಒಳಪಟ್ಟಿರಬಾರದು.
ಆಸಕ್ತರು ಅರ್ಜಿಗಳನ್ನು ಸಲ್ಲಿಸಲು ಫೆಬ್ರವರಿ 26 ಕೊನೆಯ ದಿನವಾಗಿದೆ. ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ದೇವಾಲಯದ ಕಛೇರಿಯ ಸಮಯ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12 ಗಂಟೆ ಒಳಗೆ ಭೇಟಿ ನೀಡಬಹುದು.
ಕಾನೂನು ಪದವೀಧರರಿಂದ ಅರ್ಜಿ ಆಹ್ವಾನ: ನವ ಕಾನೂನು ಪದವೀಧರರಿಗೆ ಪ್ರೋತ್ಸಾಹಧನ ನೀಡುವ ಯೋಜನೆಯನ್ನು 2024-25ನೇ ಸಾಲಿನಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯಗಳನ್ನು ತ್ವರಿತವಾಗಿ ತಲುಪಿಸುವ ಉದ್ದೇಶದಿಂದ ನವ ಕಾನೂನು ಪದವೀಧರರಿಂದ ಅರ್ಜಿ ಕರೆಯಲಾಗಿದೆ.
ಅರ್ಹ ನವ ಕಾನೂನು ಪದವೀಧರರು ಷರತ್ತು ಮತ್ತು ಸೂಚನೆಗಳನ್ವಯ ನಿಗದಿತ ನಮೂನೆಯಲ್ಲಿ ಅರ್ಜಿ ಭರ್ತಿ ಮಾಡಿ ಸ್ವಯಂ ದೃಢೀಕರಿಸಿದ ದಾಖಲೆ ಪ್ರತಿಗಳೊಂದಿಗೆ ಸಂಬಂಧಪಟ್ಟ ಹಿರಿಯ ನ್ಯಾಯಾಧೀಶರುಗಳ ಮುಖಾಂತರ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಮಾರ್ಚ್ 9 ಕೊನೆಯ ದಿನವಾಗಿದೆ. ಅರ್ಜಿಯನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಕೊಡಗು-ಮಡಿಕೇರಿ, 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಕೊಡಗು-ಮಡಿಕೇರಿ (ಕಾರ್ಯ ನಿರ್ವಹಣೆ-ವಿರಾಜಪೇಟೆ), ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‍ಸಿ ನ್ಯಾಯಾಲಯ, ಸೋಮವಾರಪೇಟೆ, ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‍ಸಿ ನ್ಯಾಯಾಲಯ, ಪೊನ್ನಂಪೇಟೆ ಹಾಗೂ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‍ಸಿ ನ್ಯಾಯಾಲಯ, ಕುಶಾಲನಗರ ಇಲ್ಲಿಗೆ ಸಲ್ಲಿಸಬೇಕು.
ಈ ಯೋಜನೆಯು 2024-25ನೇ ಸಾಲಿನಲ್ಲಿ ಅನುಷ್ಠಾನಗೊಳ್ಳುತ್ತಿದ್ದು, ಈ ಯೋಜನೆಯಡಿ ಅರ್ಜಿ ಸಲ್ಲಿಸುವ ಅರ್ಹ ಅಭ್ಯರ್ಥಿಗಳು ಕರ್ನಾಟಕ ರಾಜ್ಯ ವಕೀಲರ ಷರತ್ತಿನಡಿಯಲ್ಲಿ 2023ರ ಜೂನ್ 1ರಿಂದ 2024ರ ಮೇ 31ರವರೆಗಿನ ಅವಧಿಯಲ್ಲಿ ವಕೀಲ ವೃತ್ತಿಗೆ ನೋಂದಾಯಿಸಿದವರಿಗೆ ಮಾತ್ರ ಅನ್ವಯ.
ಈ ಯೋಜನೆಯಡಿಯಲ್ಲಿ ಪ್ರೋತ್ಸಾಹಧನದ ಪ್ರತಿ ಮಾಸಿಕ 2 ಸಾವಿರ ಒಟ್ಟು 24 ತಿಂಗಳುಗಳ ಅವಧಿಗೆ ಸೀಮಿತವಾಗಿರುತ್ತದೆ. ಸರ್ಕಾರಿ, ಅರೆ ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿ ವಯೋನಿವೃತ್ತಿ ಕಡ್ಡಾಯ ನಿವೃತ್ತಿ ಮತ್ತು ಸ್ವ ಇಚ್ಚಾ ನಿವೃತ್ತಿ ಹೊಂದಿದ ನಂತರ ವಕೀಲ ವೃತ್ತಿ ನಡೆಸಲು ಇಚ್ಚಿಸುವ ಕಾನೂನು ಪದವೀಧರರು ಮತ್ತು ಅಂತಹ ಯಾವುದೇ ಸೇವೆಯಿಂದ ತೆಗೆದುಹಾಕಲ್ಪಟ್ಟ ಕಾನೂನು ಪದವೀಧರರಿಗೆ ಇದು ಅನ್ವಯವಾಗುವುದಿಲ್ಲ.












Click it and Unblock the Notifications