ಕೊಪ್ಪಳ; ಅಡುಗೆ ಸಹಾಯಕ, ಅತಿಥಿ ಉಪನ್ಯಾಸಕ ನೇಮಕಕ್ಕೆ ಅರ್ಜಿ ಆಹ್ವಾನ
ಕೊಪ್ಪಳ, ಜುಲೈ 19; ಕೊಪ್ಪಳ ಜಿಲ್ಲೆಯಲ್ಲಿ ಅಡುಗೆ ಸಹಾಯಕ ಸಿಬ್ಬಂದಿ ಮತ್ತು ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ವಿಜ್ಞಾನ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ, ಅರ್ಹರು ಅರ್ಜಿಗಳನ್ನು ಸಲ್ಲಿಕೆ ಮಾಡಬಹುದಾಗಿದೆ.
ಅಕ್ಷರ ದಾಸೋಹ ಯೋಜನೆಯಡಿಯಲ್ಲಿ ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿನ ಗಾಂಧಿನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಖಾಲಿ ಇರುವ ಅಡುಗೆ ಸಹಾಯಕ ಸಿಬ್ಬಂದಿ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

ನಗರಸಭೆ ವ್ಯಾಪ್ತಿಯಲ್ಲಿ ಬರುವ ವಿವಿಧ ಶಾಲೆಗಳಲ್ಲಿ ಅಕ್ಷರ ದಾಸೋಹ ಯೋಜನೆ ಅಡಿಯಲ್ಲಿ ಮಧ್ಯಾಹ್ನದ ಬಿಸಿ ಊಟದ ಅಡುಗೆ ಸಹಾಯಕ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದು, ಆಯಾ ಶಾಲೆಗಳ ಮುಖ್ಯೋಪಾಧ್ಯಯರು ಸರ್ಕಾರದ ಆದೇಶದಂತೆ ವಯೋನಿವೃತ್ತಿ ಹೊಂದಿದ ಅಡುಗೆ ಸಹಾಯಕ ಸಿಬ್ಬಂದಿಗಳನ್ನು ಸೇವೆಯಿಂದ ಬಿಡುಗಡೆಗೊಳಿಸಿರುತ್ತಾರೆ.
ಕೊಪ್ಪಳದ ಗಾಂಧಿನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಡುಗೆ ಸಹಾಯಕ ಸಿಬ್ಬಂದಿ ಪ್ರವರ್ಗ-1ರ ಒಂದು ಹುದ್ದೆ ಖಾಲಿ ಇರುತ್ತದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೊಪ್ಪಳ ನಗರದ ಖಾಯಂ ನಿವಾಸಿಯಾಗಿದ್ದು, ಅರ್ಜಿ ಸಲ್ಲಿಸಬಯಸುವ ಆಯಾ ವಾರ್ಡಿನಲ್ಲಿ ವಾಸವಾಗಿರಬೇಕು. ಆ ವಾರ್ಡಿನ ಮತದಾರರ ಯಾದಿಯಲ್ಲಿ ಅರ್ಜಿದಾರರ ಹೆಸರು ಸೆರ್ಪಡೆಯಾಗಿರಬೇಕು.
ಅರ್ಜಿ ಸಲ್ಲಿಸಲು ಜುಲೈ 25 ಕೊನೆಯ ದಿನವಾಗಿದ್ದು, ಅರ್ಜಿದಾರರು ಚಾಲ್ತಿ ಸಾಲಿನ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಿದ್ಯಾರ್ಹತೆಯ ಪ್ರಮಾಣ ಪತ್ರ, ಇತ್ತೀಚಿನ 2 ಭಾವಚಿತ್ರಗಳು, ಕುಟುಂಬದ ಪಡಿತರ ಚೀಟಿ, ಆಧಾರ ಕಾರ್ಡ್ ಹಾಗೂ ಚುನಾವಣೆ ಗುರುತಿನ ಚೀಟಿಯೊಂದಿಗೆ ನಗರಸಭೆ ಕಾರ್ಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅತಿಥಿ ಉಪನ್ಯಾಸಕರ ಹುದ್ದೆ; ಕೊಪ್ಪಳ ಜಿಲ್ಲೆಯ ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ವಿಜ್ಞಾನ ಕಾಲೇಜುಗಳಿಗೆ 2023-24 ನೇ ಶೈಕ್ಷಣಿಕ ಸಾಲಿಗೆ ಅತಿಥಿ ಅಂಗ್ಲಭಾಷ ಉಪನ್ಯಾಕಸರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಸಲ್ಲಿಕೆ ಮಾಡಲು ಜುಲೈ 18 ಕೊನೆಯ ದಿನವಾಗಿದೆ.
ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ವಿಜ್ಞಾನ ಕಾಲೇಜು ಹಿರೇಸಿಂದೋಗಿ ತಾ, ಕೊಪ್ಪಳ, ಇಲ್ಲಿ ಖಾಲಿ ಇರುವ ಆಂಗ್ಲಭಾಷಾ ವಿಷಯದ ಬೋಧನೆಗೆ ಅರ್ಜಿಕರೆಯಲಾಗಿದೆ.
ಅರ್ಜಿ ಸಲ್ಲಿಕೆ ಮಾಡುವವರು MA, B.ed ವಿದ್ಯಾರ್ಹತೆ ಹೊಂದಿರಬೇಕು. ವಿದ್ಯಾರ್ಥಿಗಳು ಹಾಕುವ ಮತಗಳಿಂದ ಆಯ್ಕೆ ಮಾಡಲಾಗುತ್ತದೆ. (ಮಾದರಿ ಪಾಠ ಬೋಧನೆ ಆಧಾರದ ಮೇಲೆ) ಅರ್ಜಿ ಸಲ್ಲಿಸಲು ವಿದ್ಯಾರ್ಹತೆಗೆ ಸಂಬಂಧಿಸಿದ ಎಲ್ಲಾ ದಾಖಲಾತಿಗಳನ್ನು ನೀಡಬೇಕು.
ನೇರವಾಗಿ ವಸತಿ ಕಾಲೇಜಿನಲ್ಲಿ ಅರ್ಜಿ ಪಡೆದು ಸಂಬಂಧಿಸಿದ ದಾಖಲೆಗಳನ್ನು ಲಗತ್ತಿಸಿ ಸಲ್ಲಿಸಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ಕವಶಿಸ ಸಂಘ ಬೆಂಗಳೂರು ರವರು ನಿಗದಿಪಡಿಸಿರುವ ವೇತನ ನೀಡಲಾಗುತ್ತದೆ. ಅರ್ಜಿ ಸಲ್ಲಿಸಲು ಕೊನೆ ದಿನಾಂಕ 18/7/2023 ಮತ್ತು ಮಾದರಿ ಪಾಠ ಬೋಧನಾ ದಿನಾಂಕ 19/7/2023 ಆಗಿರುತ್ತದೆ.












Click it and Unblock the Notifications