ರಾಯಚೂರು ಕೆಲಸ ಖಾಲಿ ಇದೆ; ವೇತನ 1 ಲಕ್ಷ ರೂ.ಗಳು
ರಾಯಚೂರು, ಆಗಸ್ಟ್ 30; ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತ (ಹೆಚ್‌ಜಿಎಂಎಲ್) ಗುತ್ತಿಗೆ ಆಧಾರದ ಮೇಲೆ ಸಮಾಲೋಚಕರು (ಪರಿಸರ) ಹುದ್ದೆಯ ಭರ್ತಿಗೆ ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 1 ಲಕ್ಷ ರೂ. ವೇತನ ನೀಡಲಾಗುತ್ತದೆ.
ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತ ರೂ. 650 ಕೋಟಿಗಳಷ್ಟು ವಹಿವಾಟು ಹೊಂದಿರುವ ಭಾರತದ ಪ್ರಮುಖ ಚಿನ್ನದ ಗಣಿಗಾರಿಕೆ ಸಂಸ್ಥೆಯಾಗಿದೆ. ಇಲ್ಲಿ ಸಮಾಲೋಚಕರು (ಪರಿಸರ) ಹುದ್ದೆಗೆ ಅರ್ಜಿ ಕರೆಯಲಾಗಿದೆ. ಆಸಕ್ತ ಅಭ್ಯರ್ಥಿಗಳು 15 ದಿನಗಳ ಒಳಗಾಗಿ ಇತ್ತೀಚಿನ ಭಾವಚಿತ್ರ ಹಾಗೂ ಎಲ್ಲಾ ಪ್ರಮಾಣ ಪತ್ರಗಳ ಪ್ರತಿಗಳೊಂದಿಗೆ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಅರ್ಜಿಯನ್ನು ಸಲ್ಲಿಸಬೇಕು.

ಕಾನೂನುಬದ್ಧ ಅನುಮತಿಗಳನ್ನು ಪಡೆಯುವ ಪ್ರಕ್ರಿಯೆಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು 'ಎಂಓಇಎಫ್' ಇತ್ಯಾದಿಗಳು ಸೇರಿದಂತೆ ವಿವಿಧ ರಾಜ್ಯಗಳ ಮತ್ತು ಕೇಂದ್ರ ಸರ್ಕಾರದ ಏಜೆನ್ಸಿಗಳೊಂದಿಗೆ ಸೂಕ್ತ ಸಮನ್ವಯವನ್ನು ಸಾಧಿಸಲು ಹಾಗೂ ಕಂಪನಿಯ ಎಲ್ಲಾ ಪರಿಸರ ಸಂಬಂಧಿತ ಕಾರ್ಯಗಳನ್ನು ನಿರ್ವಹಿಸಲು ಮತ್ತು ಗಣಿಗಾರಿಕೆ ಚಟುವಟಿಕೆಗಳ ಮಹತ್ವಾಕಾಂಕ್ಷೆಯ ಯೋಜನೆಗಳ ವಿಸ್ತರಣೆಗಾಗಿ ಗುತ್ತಿಗೆ ಆಧಾರದ ಮೇಲೆ ಸಮಾಲೋಚಕರು (ಪರಿಸರ) ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.
ಆಯ್ಕೆಯಾದ ಅಭ್ಯರ್ಥಿಗೆ ಒಂದು ತಿಂಗಳಿಗೆ ರೂ. 1 ಲಕ್ಷ ಸಂಭಾವನೆಯನ್ನು ನೀಡಲಾಗುವುದು. ಸಂಭಾವನೆಯ ಮೊತ್ತದ ಬಗ್ಗೆ ಮಾತುಕತೆಗೆ ಅವಕಾಶವಿದ್ದು ಸಂದರ್ಶನದ ಸಮಯದಲ್ಲಿ ಅಭ್ಯರ್ಥಿಯ ಅನುಭವದ ಆಧಾರದ ಮೆಲೆ ನಿಗದಿ ಪಡಿಸಲಾಗುವುದು ಎಂದು ತಿಳಿಸಲಾಗಿದೆ.
ಹುದ್ದೆಯ ಅರ್ಹತೆ ಮತ್ತು ಅನುಭವ
ಅರ್ಜಿ ಸಲ್ಲಿಕೆ ಮಾಡುವವರು ಪರಿಸರ ಇಂಜಿನಿಯರಿಂಗ್‌ನಲ್ಲಿ ಎಂಟೆಕ್ ಅಥವಾ ಪರಿಸರ ವಿಜ್ಞಾನದಲ್ಲಿ ಎಂಎಸ್ ಆಗಿದ್ದು, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕನಿಷ್ಟ 25 ವರ್ಷಗಳ ಅನುಭವ ಹೊಂದಿರತಕ್ಕದ್ದು, ಉದ್ಯೋಗಕ್ಕೆ ಗರಿಷ್ಠ ವಯೋಮಿತಿ 65 ವರ್ಷ ಮೀರರಬಾರದು.
* ಅಭ್ಯರ್ಥಿಯು ಕರ್ನಾಟಕ ರಾಜ್ಯದ ರಾಯಚೂರು ಜಿಲ್ಲೆಯ ಹಟ್ಟಿಯಲ್ಲಿರುವ ಗಣಿ ಪ್ರದೇಶದಲ್ಲಿ ಅಥವಾ ಬೆಂಗಳೂರಿನ ನೊಂದಾಯಿತ ಕಛೇರಿಯಲ್ಲಿ ಆಡಳಿತ ಮಂಡಳಿಯು ಸೂಕ್ತವೆಂದು ಪರಿಗಣಿಸಿದ ಕೆಲಸದ ಅಗತ್ಯತೆಯನ್ನು ಆಧರಿಸಿ ಪೂರ್ಣಾವಧಿಯ ಆಧಾರದಲ್ಲಿ ಕೆಲಸ ಮಾಡಲು ಸಿದ್ಧರಾಗಿರಬೇಕು.
* ಅಭ್ಯರ್ಥಿಯ ಕಾರ್ಯಕ್ಷಮತೆ ಮತ್ತು ಒದಗಿಸಿದ ಸೇವೆಯ ಆಧಾರದ ಮೇಲೆ ಒಪ್ಪಂದದ ಅವಧಿಯು ಆರಂಭದಲ್ಲಿ ಒಂದು ವರ್ಷ ಇರಲಿದೆ. ಯಶಸ್ವಿ ಅಭ್ಯರ್ಥಿಯೊಂದಿಗೆ ಮಾಡಿಕೊಂಡ ಒಪ್ಪಪದ ಪ್ರಕಾರ ಅದೇ ನಿಯಮಗಳು ಮತ್ತು ನಿಬಂಧನೆಗಳೊಂದಿಗೆ ಸೇವೆಯನ್ನು ಮತ್ತೊಂದು ವರ್ಷಕ್ಕೆ ವಿಸ್ತರಿಸುವ ಹಕ್ಕನ್ನು ಹೆಚ್‌ಜಿಎಂಎಲ್ ಸಂಸ್ಥೆ ಕಾಯ್ದಿರಿಸಿವೆ.
ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ನಿರ್ದೇಶಕರು, ಹಟ್ಟಿ 584115, ಲಿಂಗಸಗೂರು-ತಾ, ರಾಯಚೂರು ಜಿಲ್ಲೆ ಈ ವಿಳಾಸಕ್ಕೆ ತಲುಪುವಂತೆ ಕಳಿಸಬೇಕು. ಕರೆ ಮಾಡಲು ದೂರವಾಣಿ ಸಂಖ್ಯೆ 08537-275022.












Click it and Unblock the Notifications