ದಾವಣಗೆರೆಯಲ್ಲಿ ಕೆಲಸ ಖಾಲಿ ಇದೆ; ಏ. 7ರೊಳಗೆ ಅರ್ಜಿ ಹಾಕಿ
ದಾವಣಗೆರೆ, ಮಾರ್ಚ್ 24: ದಾವಣಗೆರೆ ಜಿಲ್ಲಾ ಪಂಚಾಯತಿ ಬಿ. ಎಫ್. ಟಿ ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಕರೆದಿದೆ. ಆಸಕ್ತ ಅಭ್ಯರ್ಥಿಗಳು ಏಪ್ರಿಲ್ 7ರೊಳಗೆ ಅರ್ಜಿಗಳನ್ನು ಮುಚ್ಚಿದ ಲಕೋಟೆಯಲ್ಲಿ ಖುದ್ದಾಗಿ ಸಲ್ಲಿಸಬೇಕು.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ದಾವಣಗೆರೆ ಜಿಲ್ಲೆಯ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ (ಚನ್ನಗಿರಿ ತಾಲೂಕು ಹೊರತುಪಡಿಸಿ) ಉಳಿದ ತಾಲೂಕುಗಳಿಗೆ ಮಾಸಿಕ ಗೌರವಧನದ ಆಧಾರದ ಮೇಲೆ ಬಿ. ಎಫ್. ಟಿ. (Bare Foot Technician) ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.
ನರೇಗಾ ಯೋಜನೆಯಡಿ ಕೈಗೊಳ್ಳಬಹುದಾದ ಕಾಮಗಾರಿ ಗುರುತಿಸಲು, ತಾಂತ್ರಿಕ ಸಹಾಯಕರಿಗೆ ಸಹಾಯ ಮಾಡುವುದು, ಗ್ರಾಮಸಭೆ ಮಂಡಿಸುವುದು ಹಾಗೂ ಒಟ್ಟಾರೆಯಾಗಿ ಯೋಜನೆಯಡಿ ನಿರ್ವಹಿಸುವ ಎಲ್ಲಾ ಕಾಮಗಾರಿಗಳ ಮೇಲು ಉಸ್ತುವಾರಿ ಮಾಡುವುದು ಅಭ್ಯರ್ಥಿಯ ಕೆಲಸವಾಗಿರುತ್ತದೆ.

ಅರ್ಜಿಗಳನ್ನು ಸಲ್ಲಿಸುವವರು ಕನಿಷ್ಠ 10ನೇ ತರಗತಿ ಉತ್ತೀರ್ಣರಾಗಿರಬೇಕು. ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯಿತಿಯಲ್ಲಿ ಕಡ್ಡಾಯವಾಗಿ ಉದ್ಯೋಗ ಚೀಟಿ ಹೊಂದಿರಬೇಕು. 45 ವರ್ಷದ ವಯೋಮಿತಿಯೊಳಗಿರಬೇಕು.
ಕಳೆದ ಮೂರು ಆರ್ಥಿಕ ವರ್ಷಗಳ ಅವಧಿಯಲ್ಲಿ ಕನಿಷ್ಠ 2 ವರ್ಷಗಳಿಂದ ಯೋಜನೆಯಡಿ 25 ದಿನಗಳಿಗೆ ಕಡಿಮೆ ಇಲ್ಲದಷ್ಟು ಉದ್ಯೋಗ ನಿರ್ವಹಿಸಿರಬೇಕು. ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
ಬಿ. ಎಫ್. ಟಿ. ಹುದ್ದೆಗಾಗಿ ಅರ್ಜಿ ಸಲ್ಲಿಸಲು ಇಚ್ಚಿಸುವವರು ಆಯಾ ತಾಲೂಕಿನ ತಾಲೂಕು ಪಂಚಾಯತಿಗಳಲ್ಲಿ ಕಚೇರಿ ಅವಧಿಯಲ್ಲಿ ಅರ್ಜಿ ಪಡೆದು ನಿಗದಿಪಡಿಸಿದ ದಾಖಲೆಗಳೊಂದಿಗೆ ಏಪ್ರಿಲ್ 7ರೊಳಗೆ ಸೀಲ್ ಮಾಡಿದ ಲಕೋಟೆಯಲ್ಲಿ ಖುದ್ದಾಗಿ ತಾಲೂಕು ಪಂಚಾಯಿತಿ ಕಚೇರಿಯ ನರೇಗಾ ಶಾಖೆಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಪಂಚಾಯತಿಯ ಉಚಿತ ಸಹಾಯವಾಣಿ 1800 425 2203 ಕರೆ ಮಾಡಬಹುದು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮನವರ್ ತಿಳಿಸಿದ್ದಾರೆ.












Click it and Unblock the Notifications