ಅಮೆಜಾನ್‌ನಲ್ಲಿ 3ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳ ನೇಮಕಾತಿಗೆ ಭರ್ಜರಿ ತಯಾರಿ

ವಾಷಿಂಗ್ಟನ್: ಜಾಗತಿಕ ಇ-ಕಾಮರ್ಸ್ ಕಂಪೆನಿ ಅಮೆಜಾನ್, 2026ರ ವರ್ಷಾಂತ್ಯದ ವೇಳೆಗೆ ರಜಾಕಾಲದ ಶಾಪಿಂಗ್ ಸೀಸನ್‌ಗಾಗಿ ಅಮೆರಿಕದಾದ್ಯಂತ ಬರೋಬ್ಬರಿ 3 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನ ನೇಮಿಸಿಕೊಳ್ಳಲು ಸಿದ್ಧತೆ ನಡೆಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ನೇಮಕಾತಿಯಲ್ಲಿ ಶೇ.20ರಷ್ಟು ಹೆಚ್ಚಳ ಮಾಡಲಾಗಿದೆ.

ಅಮೆರಿಕದ ಕಾರ್ಮಿಕ ಮಾರುಕಟ್ಟೆಯಲ್ಲಿ ಇತರ ರಿಟೇಲ್ ಕಂಪನಿಗಳು ನೇಮಕಾತಿಯಲ್ಲಿ ಎಚ್ಚರಿಕೆ ವಹಿಸುತ್ತಿರುವ ಈ ಸಂದರ್ಭದಲ್ಲಿ, ಅಮೆಜಾನ್‌ನ ಇಷ್ಟು ನೇಮಕಾತಿ ನಿರ್ಧಾರ ಮಾರುಕಟ್ಟೆಯಲ್ಲಿ ತೀವ್ರ ಕುತೂಹಲ ಮೂಡಿಸಿದೆ.

Amazon Plans to Hire 300 000 US Workers for 2026 Holiday Season With Enhanced Healthcare Benefits

ಅಮೆಜಾನ್ ಸೀಸನಲ್ ಉದ್ಯೋಗ: 3 ಲಕ್ಷ ಕಾರ್ಮಿಕರ ನೇಮಕ ಗುರಿ

2023ರಿಂದ 2025ರವರೆಗೆ ವಾರ್ಷಿಕವಾಗಿ 2.5 ಲಕ್ಷ ತಾತ್ಕಾಲಿಕ ಉದ್ಯೋಗಿಗಳನ್ನ ನೇಮಿಸಿಕೊಳ್ಳುತ್ತಿದ್ದ ಕಂಪನಿ, ಈ ವರ್ಷ ಆ ಗುರಿಯನ್ನ 3 ಲಕ್ಷಕ್ಕೆ ಏರಿಸಿದೆ. ಈ ಹೊಸ ನೇಮಕಾತಿ ಪ್ರಕ್ರಿಯೆಯಲ್ಲಿ ಪೂರ್ಣಾವಧಿ, ಅರೆಕಾಲಿಕ ಹಾಗೂ ಸೀಸನಲ್ ಉದ್ಯೋಗಗಳು ಸೇರಿವೆ.

ಫುಲ್‌ಫಿಲ್‌ಮೆಂಟ್ ಕೇಂದ್ರಗಳು, ಗೋದಾಮುಗಳು ಮತ್ತು ಡಿಲೆವರಿ ಆಪರೇಶನ್ಸ್‌ ಕೆಲಸ ಮಾಡಲು ಕಾರ್ಮಿಕರನ್ನ ನೇಮಿಸಿಕೊಳ್ಳಲಾಗುತ್ತಿದೆ. ಬ್ಲ್ಯಾಕ್ ಫ್ರೈಡೇ, ಸೈಬರ್ ಮಂಡೇ ಹಾಗೂ ಕ್ರಿಸ್‌ಮಸ್ ಹಬ್ಬದ ಸಂದರ್ಭದಲ್ಲಿ ಗ್ರಾಹಕರಿಂದ ಬರುವ ಲಕ್ಷಾಂತರ ಆರ್ಡರ್‌ಗಳನ್ನ ತ್ವರಿತವಾಗಿ ಪೂರೈಸಲು ಅಮೆಜಾನ್ ಈ ಬೃಹತ್ ಮಾನವ ಸಂಪನ್ಮೂಲವನ್ನು ಬಳಸಿಕೊಳ್ಳಲಿದೆ.

ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ಪ್ರತಿ ವಾರ ಹೊಸ ಉದ್ಯೋಗಾವಕಾಶಗಳನ್ನ ಪ್ರಕಟಿಸಲು ಕಂಪನಿ ನಿರ್ಧರಿಸಿದೆ.

ಆಕರ್ಷಕ ವೇತನ: ಗಂಟೆಗೆ 20 ಡಾಲರ್ ವೇತನ ಹಾಗೂ ಭತ್ಯೆಗಳು

ಹಬ್ಬದ ಸೀಸನ್‌ನ ಬಿಡುವಿಲ್ಲದ ಸಮಯದಲ್ಲಿ ಕಾರ್ಮಿಕರನ್ನ ಆಕರ್ಷಿಸಲು ಅಮೆಜಾನ್ ವೇತನದತ್ತ ಹೆಚ್ಚಿನ ಗಮನಹರಿಸಿದೆ. ಸೀಸನಲ್ ಆಗಿ ಕೆಲಸ ಮಾಡುವ ಉದ್ಯೋಗಿಗಳಿಗೆ ಸರಾಸರಿ 20 ಯುಎಸ್ ಡಾಲರ್ ಪ್ರತಿ ಗಂಟೆಗೆ ವೇತನ ನೀಡಲಾಗುವುದು. ಇನ್ನು ಪೂರ್ಣಾವಧಿಯಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಿಗೆ ಆರಂಭಿಕ ವೇತನವೇ ಕನಿಷ್ಠ 20 ಡಾಲರ್ ಇರಲಿದ್ದು, ಅವರ ಸರಾಸರಿ ವೇತನ ಗಂಟೆಗೆ 24 ಡಾಲರ್ ವರೆಗೆ ತಲುಪಲಿದೆ.

ತಾತ್ಕಾಲಿಕವಾಗಿ ಹೆಚ್ಚುವರಿ ಆದಾಯ ಹುಡುಕುತ್ತಿರುವವರಿಗೆ ಹಾಗೂ ಲಾಜಿಸ್ಟಿಕ್ಸ್ ಕ್ಷೇತ್ರದಲ್ಲಿ ಅನುಭವ ಪಡೆಯಲು ಬಯಸುವವರಿಗೆ ಇದು ಉತ್ತಮ ಅವಕಾಶ. ವ್ಯವಹಾರದ ಅಗತ್ಯತೆಗಳಿಗೆ ಅನುಗುಣವಾಗಿ ಕೆಲಸ ಮಾಡುವ ಕೆಲವು ತಾತ್ಕಾಲಿಕ ಉದ್ಯೋಗಿಗಳನ್ನ, ಕಂಪನಿಯು ಕಾಯಂ ಉದ್ಯೋಗಿಗಳನ್ನಾಗಿ ಬದಲಾಯಿಸಿಕೊಳ್ಳುವ ಸಾಧ್ಯತೆಯೂ ಇದೆ.

2027ರಿಂದ ವಿಸ್ತರಿತ ಆರೋಗ್ಯ ವಿಮೆ ಸೌಲಭ್ಯ

ಹಬ್ಬದ ಸೀಸನ್ ಮುಗಿದ ಬಳಿಕವೂ ಅನುಭವಿ ಕಾರ್ಮಿಕರು ಕಂಪನಿಯಲ್ಲೇ ಮುಂದುವರಿಯುವಂತೆ ಪ್ರೇರೇಪಿಸಲು, ಅಮೆಜಾನ್ ತನ್ನ ಆರೋಗ್ಯ ವಿಮೆ ನಿಯಮಗಳಲ್ಲಿ ಮಹತ್ವದ ಬದಲಾವಣೆ ತಂದಿದೆ. ಜನವರಿ 1, 2027ರಿಂದ, ವಾರದಲ್ಲಿ ಕನಿಷ್ಠ 30 ಗಂಟೆಗಳ ಕಾಲ ಕೆಲಸ ಮಾಡುವ ಅರ್ಹ ಸೀಸನಲ್ ಉದ್ಯೋಗಿಗಳಿಗೆ ಕೆಲಸಕ್ಕೆ ಸೇರಿದ ಮೊದಲ ದಿನದಿಂದಲೇ ಆರೋಗ್ಯ ವಿಮೆ ಸೌಲಭ್ಯ ದೊರೆಯಲಿದೆ.

ಇದಕ್ಕಾಗಿ ವಾರಕ್ಕೆ ಕೇವಲ 5 ಡಾಲರ್ ಪಾವತಿಸಬೇಕಿದ್ದು, ಕೊ-ಪೇಮೆಂಟ್ ಕೂಡ 5 ಡಾಲರ್ ಇರಲಿದೆ. ಈ ವಿಸ್ತರಿತ ಸೌಲಭ್ಯವು ತಾತ್ಕಾಲಿಕ ಕಾರ್ಮಿಕರಿಗೆ ಹೆಚ್ಚಿನ ಭದ್ರತೆ ಒದಗಿಸಲಿದೆ ಮತ್ತು ಕಂಪನಿಗೆ ಪದೇ ಪದೇ ಹೊಸಬರನ್ನ ಹುಡುಕಿ ತರಬೇತಿ ನೀಡುವ ಆರ್ಥಿಕ ಹೊರೆ ಹಾಗೂ ಶ್ರಮವನ್ನ ತಪ್ಪಿಸಲಿದೆ.

ಇ-ಕಾಮರ್ಸ್ ಉದ್ಯೋಗಗಳು: ಹೆಚ್ಚುತ್ತಿರುವ ಆನ್‌ಲೈನ್ ಬೇಡಿಕೆ

ಅಮೆರಿಕದಾದ್ಯಂತ ಈ ಬಾರಿ ರಿಟೇಲ್ ನೇಮಕಾತಿ ಕುಸಿತ ಕಂಡಿದೆ. ಚಾಲೆಂಜರ್, ಗ್ರೇ ಅಂಡ್ ಕ್ರಿಸ್‌ಮಸ್ ವರದಿಯ ಪ್ರಕಾರ, ಈ ವರ್ಷ ಒಟ್ಟಾರೆ ಸೀಸನಲ್ ನೇಮಕಾತಿ 4.5 ಲಕ್ಷಕ್ಕಿಂತ ಕಡಿಮೆಯಾಗುವ ನಿರೀಕ್ಷೆಯಿದೆ. ಇದು 2008ರ ಬಳಿಕ ಅತಿ ಕಡಿಮೆ ನೇಮಕಾತಿಯಾಗಿದೆ.

ಆದರೆ, ಆನ್‌ಲೈನ್ ಶಾಪಿಂಗ್ ಬೇಡಿಕೆ ಮಾತ್ರ ನಿರಂತರವಾಗಿ ಹೆಚ್ಚುತ್ತಲೇ ಇದೆ. ಅಡೋಬ್ ಅನಾಲಿಟಿಕ್ಸ್ ವರದಿಯಂತೆ, ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಅಮೆರಿಕದ ಗ್ರಾಹಕರು ಆನ್‌ಲೈನ್ ಮೂಲಕ 275.1 ಬಿಲಿಯನ್ ಡಾಲರ್ ಖರ್ಚು ಮಾಡುವ ನಿರೀಕ್ಷೆಯಿದೆ.

ಇದು 2025ಕ್ಕೆ ಹೋಲಿಸಿದರೆ ಶೇ.6.7 ರಷ್ಟು ಹೆಚ್ಚಳವಾಗಿದೆ. ಇದೇ ವೇಳೆ, ಮತ್ತೊಂದು ಲಾಜಿಸ್ಟಿಕ್ಸ್ ದೈತ್ಯ ಕಂಪನಿಯಾದ ಯುಪಿಎಸ್ (UPS) ಕೂಡ ತನ್ನ ವಿತರಣಾ ಜಾಲವನ್ನು ಸರಿದೂಗಿಸಲು 1 ಲಕ್ಷಕ್ಕೂ ಅಧಿಕ ತಾತ್ಕಾಲಿಕ ಕಾರ್ಮಿಕರನ್ನ ನೇಮಿಸಿಕೊಳ್ಳುವುದಾಗಿ ಪ್ರಕಟಿಸಿದೆ.

ಒಟ್ಟಾರೆಯಾಗಿ, ಜಾಗತಿಕ ಹಣದುಬ್ಬರದ ಆತಂಕಗಳ ನಡುವೆಯೂ ಗ್ರಾಹಕರ ಹೆಚ್ಚುತ್ತಿರುವ ಬೇಡಿಕೆಗಳನ್ನು ಪೂರೈಸಲು ಮತ್ತು ನಿಗದಿತ ಸಮಯದಲ್ಲಿ ವಸ್ತುಗಳನ್ನು ವಿತರಿಸಲು ಅಮೆಜಾನ್ ಬೃಹತ್ ಉದ್ಯೋಗ ಮೇಳಕ್ಕೆ ಮುಂದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+