Amazon layoff: ಮುಂದಿನ ಕೆಲ ವಾರಗಳಲ್ಲಿ ಮತ್ತೆ 9,000 ಉದ್ಯೋಗ ಕಡಿತಗೊಳಿಸಲಿದೆ ಅಮೆಜಾನ್
ಫೇಸ್‌ಬುಕ್ ಪೋಷಕ ಮೆಟಾ ಪ್ಲಾಟ್‌ಫಾರ್ಮ್‌ಗಳು ಈ ವರ್ಷ ಮತ್ತೆ 10,000 ಉದ್ಯೋಗಗಳನ್ನು ಕಡಿತಗೊಳಿಸುವುದಾಗಿ ಹೇಳಿದೆ.
ಇ ಕಾಮರ್ಸ್ ಕ್ಷೇತ್ರದ ದೊಡ್ಡ ಕಂಪನಿ ಅಮೆಜಾನ್ ಆರ್ಥಿಕ ಅನಿಶ್ಚಿತತೆಯನ್ನು ನಿರ್ವಹಿಸಲು ಮತ್ತೆ 9,000 ಉದ್ಯೋಗ ಕಡಿತಗೊಳಿಸುವುದಾಗಿ ಸೋಮವಾರ ಘೋಷಿಸಿದೆ. ಇದರೊಂದಿಗೆ ಸಂಭವನೀಯ ಆರ್ಥಿಕ ಹಿಂಜರಿತದ ಆತಂಕ, ತಂತ್ರಜ್ಞಾನ ಕ್ಷೇತ್ರದ ಸಮಸ್ಯೆಗಳ ನಡುವೆ ಉದ್ಯೋಗ ಕಡಿತದ ಎರಡನೆ ಹಂತದ ಪ್ರಕ್ರಿಯೆ ಕೈಗೊಳ್ಳುತ್ತಿರುವ ಪ್ರಮುಖ ಕಂಪನಿಗಳ ಸಾಲಿಗೆ ಸೇರಿದೆ.
ಅಮೆಜಾನ್ ಇತ್ತೀಚಿನ ತಿಂಗಳುಗಳಲ್ಲಿ 27,000 ಉದ್ಯೋಗಿಗಳನ್ನು ಅಥವಾ ಅದರ ಸರಿಸುಮಾರು 3,00,000 ಕಾರ್ಪೊರೇಟ್ ಉದ್ಯೋಗಿಗಳ 9% ಜನರನ್ನು ಕೆಸಲದಿಂದ ತೆಗೆದುಹಾಕಿದೆ. ಮತ್ತೆ 9,000 ಉದ್ಯೋಗ ಕಡಿತಗೊಳಿಸುವುದಾಗಿ ಅಮೆಜಾನ್ ಸಿಇಒ ಆಂಡಿ ಜಾಸ್ಸಿ ಘೋಷಿಸಿದ್ದಾರೆ.

ಮೈಕ್ರೋಸಾಫ್ಟ್ ಕಾರ್ಪ್, ಸೇಲ್ಸ್‌ಫೋರ್ಸ್ ಇಂಕ್, ಆಲ್ಫಾಬೆಟ್ ಮತ್ತು ಮೆಟಾ ಪ್ಲಾಟ್‌ಫಾರ್ಮ್‌ಗಳು ಸೇರಿದಂತೆ ಹಲವಾರು ಪ್ರಮುಖ ಟೆಕ್ ಕಂಪನಿಗಳು ಇತ್ತೀಚಿನ ತಿಂಗಳುಗಳಲ್ಲಿ ಸಾಂಕ್ರಾಮಿಕ ರೋಗ ತಮದ ನಷ್ಟದ ಕಾರಣ ಹೇಳಿ ಹೆಚ್ಚಿನ ಸಿಬ್ಬಂದಿಯನ್ನು ಬಿಟ್ಟು, ಸಾವಿರಾರು ಉದ್ಯೋಗಗಳನ್ನು ಕಡಿತಗೊಳಿಸಿದ್ದಾರೆ. ಅಮೆಜಾನ್ ಫೇಸ್‌ಬುಕ್ ಪೋಷಕ ಮೆಟಾವನ್ನು ಅನುಸರಿಸಿ ಎರಡನೇ ಸುತ್ತಿನ ಕಡಿತವನ್ನು ಘೋಷಿಸಿದ ಎರಡನೇ ಕಂಪನಿಯಾಗುತ್ತಿದೆ.
ಈ ಬಗ್ಗೆ ಮಾಹಿತಿ ನೀಡಿದರುವ ಸಿಇಒ ಆಂಡಿ ಜಾಸ್ಸಿ, ಕಳೆದ ಕೆಲವು ವರ್ಷಗಳಲ್ಲಿ ಕಂಪನಿಯು ಗಣನೀಯ ಪ್ರಮಾಣದ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿದೆ. ಆದರೆ ಅನಿಶ್ಚಿತ ಆರ್ಥಿಕತೆಯು ವೆಚ್ಚದಿಂದಾಗಿ ಉದ್ಯೋಗಿಗಳನ್ನು ವಜಾ ಮಾಡುವ ಸಂಕಷ್ಟಕ್ಕೆ ಕಂಪನಿ ಕೈ ಹಾಕಿದೆ ಎಂದು ಹೇಳಿದ್ದಾರೆ. ಈ 9,000 ಮಂದಿ ಅಮೆಜಾನ್‌ನ ಕ್ಲೌಡ್ ಸೇವೆಗಳು, ಜಾಹೀರಾತು ಮತ್ತು ಟ್ವಿಚ್ ಘಟಕಗಳಲ್ಲಿ ಕೆಲಸ ಮಾಡುವವರಾಗಿರುತ್ತಾರೆ ಎಂದು ತಿಳಿಸಿದೆ.
"ನಮ್ಮ ಪ್ರಸ್ತುತ ಅನಿಶ್ಚಿತ ಆರ್ಥಿಕತೆ ಮತ್ತು ಮುಂದಿನ ದಿನಗಳಲ್ಲಿ ಇರುವ ಸಂಭವನೀಯ ಆರ್ಥಿಕತೆ ಕುಸಿತವನ್ನು ಗಮನದಲ್ಲಿಟ್ಟುಕೊಂಡು, ನಮ್ಮ ವೆಚ್ಚಗಳು ಮತ್ತು ಹೆಡ್‌ಕೌಂಟ್‌ನಲ್ಲಿ ಹೆಚ್ಚು ಸುವ್ಯವಸ್ಥಿತವಾಗಿರಲು ನಾವು ಆಯ್ಕೆ ಮಾಡಿಕೊಂಡಿದ್ದೇವೆ" ಎಂದು ಕಂಪನಿಯ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ ಸಿಇಒ ಆಂಡಿ ಜಾಸ್ಸಿ ಹೇಳಿದ್ದಾರೆ.

ಗ್ರಾಹಕರು ಮತ್ತು ಕ್ಲೌಡ್ ಗ್ರಾಹಕರ ಆರ್ಥಿಕ ಪ್ರಭಾವದಿಂದಾಗಿ ಪ್ರಸಕ್ತ ತ್ರೈಮಾಸಿಕದಲ್ಲಿ ಕಾರ್ಯಾಚರಣೆಯ ಲಾಭವು ಕುಸಿಯಬಹುದು ಎಂದು ಅಮೆಜಾನ್ ಕಳೆದ ತಿಂಗಳು ಹೇಳಿದೆ. ಅಮೆಜಾನ್ ಉದ್ಯೋಗದಾತರಿಗೆ ತನ್ನ ವರ್ಚುವಲ್ ಪ್ರೈಮರಿ ಕೇರ್ ಕೊಡುಗೆಯಂತಹ ಸಂಪೂರ್ಣ ಸೇವೆಗಳನ್ನು ಮುಚ್ಚಿದೆ. ಇನ್ನು ನಾಸ್ಡಾಕ್‌ನಲ್ಲಿ ಬೆಳಗಿನ ವಹಿವಾಟಿನಲ್ಲಿ ಅಮೆಜಾನ್ ಷೇರುಗಳು 1.1% ನಷ್ಟು ಕಡಿಮೆಯಾಗಿದೆ.
"ನಮಗೆ ಆಶ್ಚರ್ಯವೇನಿಲ್ಲ" ಎಂದು ಡಿ.ಎ. ಡೇವಿಡ್‌ಸನ್‌ನ ವಿಶ್ಲೇಷಕ ಟಾಮ್ ಫೋರ್ಟೆ ಅವರು ಅಮೆಜಾನ್‌ನ ಉದ್ಯೋಗ ಕಡಿತದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಅಂದರೆ ಇಂತಹ ಉದ್ಯೋಗ ಕಡಿತದ ಬಗ್ಗೆ ಇಲ್ಲಿ ಎಲ್ಲರೂ ಈಗಾಗಲೇ ಮಾಹಿತಿ ಹೊಂದಿದ್ದಾರೆ. ನಡೆಯುತ್ತಿರುವ ಆರ್ಥಿಕ ಹಿಂಜರಿತ ಎಲ್ಲರಿಗೂ ಅಲ್ಪ ಮಟ್ಟಿಗೆ ತಿಳಿದಿದೆ ಎಂದು ಹೇಳಿದ್ದಾರೆ.
ಈಗ ಮುಂಚೂಣಿಯಲ್ಲಿರುವ ಫೇಸ್‌ಬುಕ್ ಪೋಷಕ ಮೆಟಾ ಪ್ಲಾಟ್‌ಫಾರ್ಮ್‌ಗಳು ಈ ವರ್ಷ 10,000 ಉದ್ಯೋಗಗಳನ್ನು ಕಡಿತಗೊಳಿಸುವುದಾಗಿ ಹೇಳಿದ್ದು, 2022 ರಲ್ಲಿ ಮೊದಲ ಸಾಮೂಹಿಕ ಉದ್ಯೋಗ ಕಡಿತದಲ್ಲಿ 11,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ತೆಗೆದುಹಾಕಿತ್ತು. ಬಳಿಕ ಎರಡನೇ ಸುತ್ತಿನ ಸಿಬ್ಬಂದಿ ವಜಾಗೊಳಿಸುವಿಕೆಗೆ ಮೆಟಾ ಸಿದ್ಧವಾಗಿತ್ತಿದೆ. ಇದರ ಬೆನ್ನಲ್ಲೆ ಅಮೆಜಾನ್ ಕೂಡ ಉದ್ಯೋಗ ಕಡಿತದ ಮಾಹಿತಿ ನೀಡಿದೆ.
ಅಮೆಜಾನ್, ಮೈಕ್ರೋಸಾಫ್ಟ್, ಗೂಗಲ್, ಸೇಲ್ಸ್‌ಫೋರ್ಸ್ ಮತ್ತು ಇತರ ಕಂಪನಿಗಳು ಜನವರಿಯಲ್ಲಿ ಸುಮಾರು 1 ಲಕ್ಷ ಟೆಕ್ ಉದ್ಯೋಗಿಗಳನ್ನು ಕೆಲಸದಿಂದ ವಜಾಗಳಿಸಿವೆ. ಒಟ್ಟಾರೆಯಾಗಿ, 2022 ರಲ್ಲಿ ಮತ್ತು ಈ ವರ್ಷದ ಫೆಬ್ರವರಿವರೆಗೆ 3 ಲಕ್ಷಕ್ಕೂ ಹೆಚ್ಚು ಟೆಕ್ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ.












Click it and Unblock the Notifications