ಹೊಸದಾಗಿ 4244 ಅಂಗನವಾಡಿ ಕೇಂದ್ರಗಳ ಪ್ರಾರಂಭ- 8100 ಮಹಿಳೆಯರಿಗೆ ಉದ್ಯೋಗಾವಕಾಶ
ಬೆಂಗಳೂರು, ಸೆಪ್ಟೆಂಬರ್ 03: ರಾಜ್ಯದ ಸುಮಾರು 16 ಲಕ್ಷ ಕುಟುಂಬಗಳ ಮಕ್ಕಳ ಪೌಷ್ಟಿಕಾಂಶ ಮತ್ತು ಶಾಲಾ ಪೂರ್ವ ಶಿಕ್ಷಣದ ಪ್ರಯೋಜನ ಪಡೆಯುವ ಹಾಗೂ 8100 ಮಹಿಳೆಯರಿಗೆ ಉದ್ಯೋಗಾವಕಾಶ ನೀಡುವಂತಹ 4244 ಅಂಗನವಾಡಿ ಕೇಂದ್ರಗಳನ್ನು ಪ್ರಾರಂಭಿಸಲು ಅಧಿಕೃತ ಆದೇಶವನ್ನು ಹೊರಡಿಸಲಾಗಿದೆ.
ಅಂಗನವಾಡಿ ಕೇಂದ್ರಕ್ಕಾಗಿ 268.98 ಕೋಟಿ ರೂಪಾಯಿಗಳ ಅನುದಾನವನ್ನು ಮೀಸಲಿಡಲಾಗಿದ್ದು, ಶೀಘ್ರದಲ್ಲಿ ಅಂಗನವಾಡಿ ಕೇಂದ್ರಗಳನ್ನು ಪ್ರಾರಂಭಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವರಾದ ಹಾಲಪ್ಪ ಆಚಾರ್ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಪೋಷಣ್ ಮಾಸಾಚರಣೆಯ ಘೋಷಣೆಯ ಬೆನ್ನಲ್ಲೇ ಈ ಅಧಿಕೃತ ಆದೇಶ ಹೊರಟಿರುವುದು ಬಹಳ ಸಂತಸದ ವಿಷಯವಾಗಿದೆ. ಕರ್ನಾಟಕ ಅಂಗನವಾಡಿ ಮತ್ತು ಪೋಷಣ್ ಅಭಿಯಾನ 2.0 ಎಂದು ಮರುನಾಮಾಂಕಿತಗೊಂಡಿರುವ ಸಮಗ್ರ ಮಕ್ಕಳ ಅಭಿವೃದ್ದಿ ಯೋಜನೆಯನ್ನು 1975 ರಲ್ಲಿ ಪ್ರಾರಂಭಿಸಲಾಗಿತ್ತು.

ಮಕ್ಕಳಿಗೆ, ಕಿಶೋರಿಯರಿಗೆ , ಗರ್ಭಿಣಿ ಸ್ತ್ರೀ ಅನುಕೂಲ
ರಾಜ್ಯದಲ್ಲಿ ಈ ಯೋಜನೆಯ ಅಡಿಯಲ್ಲಿ ಒಟ್ಟು 66,361 ಅಂಗನವಾಡಿ ಕೇಂದ್ರಗಳು ಸ್ಥಾಪಿತವಾಗಿದ್ದು, ಅವುಗಳ ಮೂಲಕ ರಾಜ್ಯದ ಮಕ್ಕಳಿಗೆ, ಕಿಶೋರಿಯರಿಗೆ, ಗರ್ಭಿಣಿ ಸ್ತ್ರೀಯರಿಗೆ ಹಾಗೂ ಬಾಣಂತಿಯರಿಗೆ ಪೂರಕ ಪೌಷ್ಟಿಕ ಆಹಾರ, ಶಾಲಾ ಪೂರ್ವ ಶಿಕ್ಷಣ, ಪೌಷ್ಟಿಕತೆ ಮತ್ತು ಆರೋಗ್ಯ ಶಿಕ್ಷಣ ಮುಂತಾದ 6 ಸೇವೆಗಳನ್ನು ಒದಗಿಸಲಾಗುತ್ತಿದೆ. ಇದರಿಂದಾಗಿ ಮಕ್ಕಳಿಗೆ, ಕಿಶೋರಿಯರಿಗೆ , ಗರ್ಭಿಣಿ ಸ್ತ್ರೀಯರಿಗೆ ಹಾಗೂ ಬಾಣಂತಿಯರಿಗೆ ಹತ್ತು ಹಲವಾರು ಅನುಕೂಲಗಳು ಲಭ್ಯವಾಗುತ್ತಿವೆ.

ಶೇ 56 ಫಲಾನುಭವಿಗಳು ಸೌಲಭ್ಯ ಬಳಕೆ
ಅಂಗನವಾಡಿಯ ಈ ಯೋಜನೆಯ ಅಡಿ ಶೇಕಡಾ 56 ರಷ್ಟು ಫಲಾನುಭವಿಗಳಿಗೆ ಮಾತ್ರ ಸೌಲಭ್ಯ ನೀಡಲು ಸಾಧ್ಯವಾಗಿದೆ. ಈ ಯೋಜನೆಯಿಂದ ಹೊರಗಿರುವ ಕಡಿಮೆ ಆದಾಯದ ಜನಸಂಖ್ಯೆಯು ವಾಸಿಸುವ ಪ್ರದೇಶಗಳು ಹೆಚ್ಚಾಗಿದ್ದು, ಅವರಿಗೆ 6 ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಮಹತ್ವದ ನಿರ್ಧಾರ ತಗೆದುಕೊಂಡಿದೆ ಎಂದು ಹೇಳಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವರಾದ ಹಾಲಪ್ಪ ಆಚಾರ್ ತಿಳಿಸಿದ್ದಾರೆ.

ಹೊಸ ಅಂಗನವಾಡಿ ಕೇಂದ್ರಕ್ಕೆ ಅಧಿಕಾರಿಗಳಿಗೆ ಸೂಚನೆ
ರಾಜ್ಯ ಸರಕಾರ ತನ್ನ ಅನುದಾನದಲ್ಲಿಯೇ ಈ ಹೊಸ ಅಂಗನವಾಡಿ ಕೇಂದ್ರಗಳನ್ನು ಪ್ರಾರಂಭಿಸುತ್ತಿದೆ. ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ತಮ್ಮ 75 ನೇ ವರ್ಷದ ಸ್ವಾತಂತ್ರೋತ್ಸವ ಭಾಷಣದಲ್ಲಿ ಘೋಷಿಸಿದ ಒಂದು ತಿಂಗಳ ಒಳಗಾಗಿಯೇ ಅನುಷ್ಠಾನದತ್ತ ಸ್ಪಷ್ಟ ಹೆಜ್ಜೆಯನ್ನು ಇಟ್ಟಿರುವುದು ಬಹಳ ಸಂತಸದ ವಿಷಯವಾಗಿದೆ. ಈ ಅಂಗನವಾಡಿ ಕೇಂದ್ರಗಳನ್ನು ಶೀಘ್ರದಲ್ಲೇ ಪ್ರಾರಂಭಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಸಚಿವ ಹಾಲಪ್ಪ ಆಚಾರ್ ತಿಳಿಸಿದ್ದಾರೆ.

ಮಕ್ಕಳಿಗೆ ಪೌಷ್ಠಿಕತೆಯ ಜೊತೆಗೆ ಶಿಕ್ಷಣ
ರಾಷ್ಟ್ರೀಯ ಶಿಕ್ಷಣ ನೀತಿಯಂತೆ ಮಕ್ಕಳಿಗೆ ಸಣ್ಣ ವಯಸ್ಸಿನಲ್ಲೇ ಶಿಕ್ಷಣವನ್ನು ನೀಡುವುದಾಗಿದೆ. ಎನ್‌ಇಪಿ ಅನುಸಾರ ಶಿಕ್ಷಣವನ್ನು ನೀಡಲು ಅಂಗನವಾಡಿ ಕೇಂದ್ರದಲ್ಲಿ ಶಿಕ್ಷಕಿರನ್ನು ನೇಮಿಸಲಾಗುತ್ತದೆ. ಮಕ್ಕಳಿಗೆ ಪೌಷ್ಠಿಕಾಂಶತೆಯ ಆಹಾರವನ್ನು ನೀಡುವುದು, ಗರ್ಭಿಣಿಯರಿಗೆ , ಬಾಣಂತಿಯರಿಗೂ ಅನುಕೂಲವನ್ನು ಮಾಡಿಕೊಡುವುದು ಯೋಜನೆಯ ಮೂಲ ಉದ್ದೇಶವಾಗಿದೆ. ಸದ್ಯ ಕಡಿಮೆ ಆದಾಯದ ಜನಸಂಖ್ಯೆ ಹೆಚ್ಚಾಗಿ ವಾಸಿಸುವ, ವಲಸೆ ಮತ್ತು ಭೂಮಿ ರಹಿತ ಕಾರ್ಮಿಕರನ್ನು ಒಳಗೊಂಡಿರುವ ಗ್ರಾಮಾಂತರದಲ್ಲಿ 1655 ಅಂಗನವಾಡಿ ಕೇಂದ್ರ, ನಗರ ಪ್ರದೇಶದಲ್ಲಿ 2589 ಅಂಗನವಾಡಿ ಕೇಂದ್ರಗಳ ಸ್ಥಾಪನೆಯಾಗಲಿದೆ. ಒಟ್ಟಾರೆ 268.98 ಕೋಟಿ ರೂಪಾಯಿಗಳ ಅನುದಾನದಲ್ಲಿ 4244 ಅಂಗನವಾಡಿ ಕೇಂದ್ರಗಳು ಸ್ಥಾಪನೆಯಾಗುತ್ತಿವೆ.












Click it and Unblock the Notifications