Infographics: ರಾಜ್ಯದಲ್ಲಿ ಜುಲೈ 24ರವರೆಗೂ ವರುಣನ ಆರ್ಭಟ
ಬೆಂಗಳೂರು, ಜುಲೈ 22: ಕರ್ನಾಟಕದಲ್ಲಿ ಬೆಂಗಳೂರು, ಮಲೆನಾಡು ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆಯಾಗಿದೆ. ಮುಂದಿನ ಜುಲೈ 24ರವರೆಗೂ ರಾಜ್ಯದಲ್ಲಿ ವರುಣವ ಅಬ್ಬರ ಹೆಚ್ಚಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ತಿಳಿಸಿದೆ.
ಉತ್ತರ ಒಳನಾಡಿನಲ್ಲಿ ನೈಋತ್ಯ ಮುಂಗಾರು ತೀವ್ರವಾಗಿದ್ದು, ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕುಗೊಂಡಿದೆ. ಈ ಹಿನ್ನೆಲೆ ರಾಜ್ಯಾದ್ಯಂತ ಭಾರೀ ಮಳೆಯಾಗುವ ನಿರೀಕ್ಷೆಯಿದ್ದು, ಇದರ ಹೊರತಾಗಿ ರಾಜ್ಯದ ಹವಾಮಾನದಲ್ಲಿ ಯಾವುದೇ ಗಮನಾರ್ಹ ಬದಲಾವಣೆಯಿಲ್ಲ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇನ್ನು ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿದ್ದು, ನಗರದಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಕರ್ನಾಟಕದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಜಲಾಶಯಗಳಲ್ಲಿ ನೀರಿನ ಪ್ರಮಾಣ ಏರಿಕೆಯಾಗುತ್ತಲೇ ಇದೆ.

ಸಿಲಿಕಾನ್ ಸಿಟಿಯಲ್ಲಿ ಸಾಧಾರಣ ಮಳೆ
ಮಳೆಯ ಕೋಪಕ್ಕೆ ಸಿಲಿಕಾನ್ ಸಿಟಿ ಜನರು ಕೂಡ ತತ್ತರಿಸಿ ಹೋಗಿದ್ದಾರೆ. ಹನಿ ಹನಿ ಮಳೆಯ ಹನಿಯ ಮಧ್ಯೆ ತಣ್ಣಗೆ ಬೀಸುವ ಗಾಳಿಯು ಜನರನ್ನು ಮನೆಗಳಿಂದ ಹೊರ ಬಾರದಂತೆ ಮಾಡಿ ಬಿಟ್ಟಿದೆ. ಶುಕ್ರವಾರ ಬೆಳಗ್ಗೆಯಿಂದಲೂ ನಗರದಲ್ಲಿ ಮೋಡ ಕವಿದ ವಾತಾವರಣವಿದೆ. ಗರಿಷ್ಠ ತಾಪಮಾನ ಪ್ರಮಾಣ 27 ಡಿಗ್ರಿ ಸೆಲ್ಸಿಯಸ್, ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಮುಂದಿನ 48 ಗಂಟೆಗಳವರೆಗೂ ಬೆಂಗಳೂರಿನಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರಾಜ್ಯದಲ್ಲಿ ಆರ್ಭಟಿಸಲಿರುವ ಮಳೆರಾಯ
ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ನೈಋತ್ಯ ಮುಂಗಾರು ಚುರುಕಾಗಿದೆ. ಈ ಹಿನ್ನೆಲೆ ಕರಾವಳಿ ಬಹುತೇಕ ಕಡೆ ಹಾಗೂ ಒಳನಾಡಿನ ಹಲವು ಕಡೆಗಳಲ್ಲಿ ಮಿಂಚು, ಗುಡುಗು ಸಹಿತ ಮಳೆಯಾಗಲಿದೆ. ರಾಜ್ಯದಲ್ಲಿ ಜುಲೈ 24ರವರೆಗೂ ವರುಣನ ಆರ್ಭಟ ಮುಂದುವರಿಯಲಿದೆ. ಇದರ ಹೊರತಾಗಿ ರಾಜ್ಯದ ಹವಾಮಾನದಲ್ಲಿ ಯಾವುದೇ ರೀತಿಯ ಗಮನಾರ್ಹ ಬದಲಾವಣೆಗಳಿಲ್ಲ ಎಂದು ಭಾರತೀಯ ಹವಾಮಾನ (IMD) ಇಲಾಖೆ ಮಾಹಿತಿ ನೀಡಿದೆ.

ರಾಜ್ಯದ ಪ್ರಮುಖ ನಗರಗಳಲ್ಲಿ ವರುಣನ ಆರ್ಭಟ
ಕರ್ನಾಟಕದ ಕರಾವಳಿಯ ಎಲ್ಲಾ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಭಾರಿಯಿಂದ ಅತಿಭಾರಿ ಮಳೆಯಾಗುವ ನಿರೀಕ್ಷೆಯಿದೆ. ಒಂದೆರೆಡು ಕಡೆಗಳಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದರ ಹೊರತಾಗಿಯೂ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದ ಒಂದೆರೆಡು ಕಡೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.
ಕರ್ನಾಟಕದ ಕರಾವಳಿ ತೀರದ ಮಂಗಳೂರಿನಿಂದ ಕಾರವಾರದವರೆಗೂ ಜುಲೈ 24ರ ರಾತ್ರಿ 11.30ರ ತನಕ 3.0 ರಿಂದ 3.4 ಮೀಟರ್ ವ್ಯಾಪ್ತಿಯಲ್ಲಿ ಎತ್ತರದ ಅಲೆಗಳು ಏಳುವ ನಿರೀಕ್ಷೆಯಿದೆ. ಈ ಅಲೆಗಳ ಪ್ರಸ್ತುತ ವೇಗ 37 ರಿಂದ 62 ಕಿಲೋ ಮೀಟರ್ ಆಗಿದೆ. ಇದರ ಜೊತೆಗೆ ಕರಾವಳಿಯಲ್ಲಿ ಬಿರುಗಾಳಿಯ ವೇಗ ಪ್ರತಿ ಗಂಟೆಗೆ 20 ರಿಂದ 30 ಕಿಲೋ ಮೀಟರ್ ಆಗಿದ್ದು, ಅದು 50 ಕಿ.ಮೀ ತಲುಪುವ ಸಾಧ್ಯತೆ ಇದೆ. ಹೀಗಾಗಿ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಕರ್ನಾಟಕದಲ್ಲಿನ ನಗರಗಳ ತಾಪಮಾನ?
ಬೆಂಗಳೂರಿನಲ್ಲಿ 28 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ, 70ರಷ್ಟು ತೇವಾಂಶ ದಾಖಲಾಗಿದೆ. ಗಾಳಿಯ ವೇಗ ಗಂಟೆಗೆ 38 ಕಿ.ಮೀ ಆಗಿದೆ. ಬಾಗಲಕೋಟೆ 29 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 65ರಷ್ಟು ತೇವಾಂಶ, ಮಂಗಳೂರಿನಲ್ಲಿ 29 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 75ರಷ್ಟು ತೇವಾಂಶ, ಶಿವಮೊಗ್ಗದಲ್ಲಿ 28 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 74ರಷ್ಟು ತೇವಾಂಶ ಇದೆ. ಮೈಸೂರು 29 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 70ರಷ್ಟು ತೇವಾಂಶ, ಬಳ್ಳಾರಿಯಲ್ಲಿ 32 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 45ರಷ್ಟು ತೇವಾಂಶ ದಾಖಲಾಗಿದೆ. ರಾಯಚೂರು 33 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 40ರಷ್ಟು ತೇವಾಂಶ, ಚಿತ್ರದುರ್ಗ 29 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 70ರಷ್ಟು ತೇವಾಂಶ, ಕಲಬುರಗಿಯಲ್ಲಿ 32 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 60ರಷ್ಟು ತೇವಾಂಶ, ಚಿಕ್ಕಮಗಳೂರು 28 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, ಶೇ. 70ರಷ್ಟು ತೇವಾಂಶ ದಾಖಲಾಗಿದೆ.












Click it and Unblock the Notifications