ಕರ್ನಾಟಕದ ಮತದಾರರ ಪಟ್ಟಿ; ಅತಿ ಹೆಚ್ಚು ದಿವ್ಯಾಂಗ ಮತದಾರರು ಇರುವ ಜಿಲ್ಲೆಗಳು
ಬೆಂಗಳೂರು, ಜನವರಿ 11; ರಾಜ್ಯ ಚುನಾವಣಾ ಆಯೋಗ 2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಸಿದ್ಧವಾಗುತ್ತಿದೆ. ಕೇಂದ್ರ ಚುನಾವಣಾ ಆಯೋಗದ ಮಾರ್ಗಸೂಚಿ ಅನ್ವಯ ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡಿ, ಬಿಡುಗಡೆ ಮಾಡಿದೆ.
ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳ ಪೈಕಿ ಚುನಾವಣಾ ಆಯೋಗ 221 ಕ್ಷೇತ್ರಗಳ ಪರಿಷ್ಕೃತ ಮತದಾರರ ಪಟ್ಟಿ ಪ್ರಕಟಿಸಿದೆ. ಬೆಂಗಳೂರು ನಗರ ವ್ಯಾಪ್ತಿಯ ಚಿಕ್ಕಪೇಟೆ, ಶಿವಾಜಿನಗರ, ಮಹಾದೇವಪುರ ಕ್ಷೇತ್ರದ ಪಟ್ಟಿ ಜನವರಿ 15ರಂದು ಪ್ರಕಟವಾಗಲಿದೆ.
ಈಗ ಬಿಡುಗಡೆಯಾಗಿರುವ ಅಂತಿಮ ಮತದಾರರ ಪಟ್ಟಿಯ ಪ್ರಕಾರ ರಾಜ್ಯದಲ್ಲಿ ಒಟ್ಟು 5,05,48,553 ಮತದಾರರಿದ್ದಾರೆ. ಇವರಲ್ಲಿ ಪುರುಷರು 2,54,49,725, ಮಹಿಳೆಯರು 2,50,94,326 ಮತ್ತು ಇತರರು 4,502.

ರಾಜ್ಯದಲ್ಲಿ ಒಟ್ಟು 7 ಲಕ್ಷ ಯುವ ಮತದಾರರು ಹೊಸದಾಗಿ ಸೇರ್ಪಡೆಗೊಂಡಿದ್ದಾರೆ. ಯುವ ಮತದಾರರ ಸೇರ್ಪಡೆಯಲ್ಲಿ ಬೆಳಗಾವಿ ಜಿಲ್ಲೆಯು ಮೊದಲ ಸ್ಥಾನದಲ್ಲಿದ್ದರೆ, ಹಾವೇರಿ ಜಿಲ್ಲೆ 5ನೇ ಸ್ಥಾನದಲ್ಲಿದೆ.
ರಾಜ್ಯದಲ್ಲಿ ಮತದಾರರ ಲಿಂಗಾನುಪಾತದಲ್ಲಿ ಮಹಿಳಾ ಪ್ರಾತಿನಿಧ್ಯ ಏರಿಕೆ ಕಂಡಿದೆ ಎಂದು ಚುನಾವಣಾ ಆಯೋಗ ಹೇಳಿದೆ. 1000 ಪುರುಷರಿಗೆ 988 ಮಹಿಳೆಯರು ಇದ್ದಾರೆ. ಕಳೆದ ಬಾರಿ 983 ಮಹಿಳಾ ಅನುಪಾತವಿತ್ತು.
ದಿವ್ಯಾಂಗ ಮತದಾರರು; ಚುನಾವಣಾ ಆಯೋಗದ ಮಾಹಿತಿ ಪ್ರಕಾರ ರಾಜ್ಯದಲ್ಲಿ ಒಟ್ಟು 5,13,179 ದಿವ್ಯಾಂಗ ಮತದಾರರಿದ್ದಾರೆ. ಇವರಲ್ಲಿ ಪುರುಷರು 3,01,534 ಹಾಗೂ ಮಹಿಳೆಯರು 2,11,558.
ಬೆಳಗಾವಿ ಜಿಲ್ಲೆಯಲ್ಲಿ 20170 ಗಂಡು, 12,622 ಹೆಣ್ಣು, 6 ತೃತೀಯ ಲಿಂಗಿ ಸೇರಿದಂತೆ 32,789 ದಿವ್ಯಾಂಗ ಮತದಾರರು ನೋಂದಣಿ ಮಾಡಿಕೊಂಡಿದ್ದಾರೆ. ಮೈಸೂರು ಜಿಲ್ಲೆಯಲ್ಲಿ 17,672 ಗಂಡು, ಹೆಣ್ಣು 11893 ಮತ್ತು 23 ತೃತೀಯ ಲಿಂಗಿಗಳು ನೋಂದಣಿ ಮಾಡಿಕೊಂಡಿದ್ದಾರೆ.
ತುಮಕೂರು ಜಿಲ್ಲೆಯಲ್ಲಿ 17636 ಗಂಡು, 11,387 ಹೆಣ್ಣು ಸೇರಿ 29,023 ದಿವ್ಯಾಂಗ ಮತದಾರರು ನೋಂದಣಿ ಮಾಡಿಕೊಂಡಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ 13,988 ಗಂಡು, 9788 ಹೆಣ್ಣು, 3 ತೃತೀಯ ಲಿಂಗಿಗಳು ಸೇರಿ 23,779 ಮತದಾರರು ನೋಂದಣಿ ಮಾಡಿಕೊಂಡಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ 13,354 ಗಂಡು, 9639 ಹೆಣ್ಣು, 11 ತೃತೀಯ ಲಿಂಗಿಗಳು ಸೇರಿ 23,004 ದಿವ್ಯಾಂಗ ಮತದಾರರು ನೋಂದಣಿ ಮಾಡಿಸಿದ್ದಾರೆ.












Click it and Unblock the Notifications