infographics: ಕರ್ನಾಟಕದ ಒಳನಾಡು ಜಿಲ್ಲೆಗಳಿಗೆ 2 ದಿನ ಸಾಧಾರಣ ಮಳೆ ಮುನ್ಸೂಚನೆ
ಬೆಂಗಳೂರು ಸೆಪ್ಟಂಬರ್ 27: ಕರ್ನಾಟಕದಲ್ಲಿ ಎರಡು ವಾರದಿಂದ ಕಡಿಮೆಯಾಗಿದ್ದ ಮುಂಗಾರು ಮಳೆ ಮತ್ತೆ ರಾಜ್ಯದ ಒಳನಾಡು ಜಿಲ್ಲೆಗಳಲ್ಲಿ ದರ್ಶನ ನೀಡಿದೆ. ಹವಾಮಾನ ವೈಪರಿತ್ಯಗಳ ಪ್ರಭಾವದಿಂದ ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನಲ್ಲಿ ಎರಡು ದಿನ ಮಳೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರಾವಳಿ ಕರ್ನಾಟಕ ಜಿಲ್ಲೆಗಳಲ್ಲಿ ಮಳೆ ಪ್ರಭಾವ ಅಷ್ಟಾಗಿ ಕಂಡು ಬಂದಿಲ್ಲ. ಈಗಾಗಲೇ ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಕಳೆದ ಮೂರು ದಿನದಿಂದ ತುಂತುರು, ಕೆಲವೆಡೆ ಸಾಧಾರಣವಾಗಿ ಮಳೆ ಆಗಿದೆ. ಇದರ ಹೊರತು ಎಲ್ಲಿಯೂ ಗಮನಾರ್ಹ ಬದಲಾವಣೆಗಳು ಇಲ್ಲ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.
ಮುಂದಿನ ಎರಡು ದಿನ ಸೆಪ್ಟಂಬರ್ 29ರವರೆಗೆ ಒಳನಾಡು ಜಿಲ್ಲೆಗಳಲ್ಲಿ ಗುಡುಗು , ಮಿಂಚು ಸಹಿತ ಸಾಧಾರಣವಾಗಿ ಮಳೆ ಆಗಬಹುದು. ಬೆಳಗಾವಿ, ಬಾಗಲಕೋಟೆ, ಬೀದರ್, ಗದಗ, ಕೊಪ್ಪಳ, ರಾಯಚೂರು, ವಿಜಯಪುರ, ಹಾವೇರಿ, ಯಾದಗಿರಿ ಜಿಲ್ಲೆಯ ಹಲವು ಕಡೆಗಳಲ್ಲಿ ಚದುರಿದಂತೆ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.

ಕೆಲವು ರಾಜ್ಯಗಳಲ್ಲಿ ಭಾರಿ ಮಳೆ ಸಂಭವ
ನಾಲ್ಕಾರು ರಾಜ್ಯಗಳನ್ನು ಹೊರತು ಪಡಿಸಿದರೆ ದೇಶಾದ್ಯಂತ ಮಳೆ ದುರ್ಬಲಗೊಂಡಿದೆ. ಕರ್ನಾಟಕದಲ್ಲಿ ಸಾಧಾರಣ ಮಳೆ ಸುರಿಯಲಿದ್ದರೆ, ಅಂಡಮಾನ್ ನಿಕೋಬಾರ್, ಅರುಣಾಚಲ ಪ್ರದೇಶ, ಸಿಕ್ಕಿಂ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶದ ಕರಾವಳಿ ಭಾಗ ಮತ್ತು ತೆಲಂಗಾಣ ರಾಜ್ಯದಲ್ಲಿ ಸಾಧಾರಣದಿಂದ ಭಾರಿ ಕೆಲವೊಮ್ಮೆ ಅತೀ ಭಾರಿ ಮಳೆ ಆಗುವ ಸಂಭವವಿದೆ. ಇದರ ಹೊರತು ಹವಾಮಾನದಲ್ಲಿ ಯಾವುದೇ ಗಮನಾರ್ಹ ಬದಲಾವಣೆಗಳು ಇಲ್ಲ ಎನ್ನಲಾಗಿದೆ.

ಕರ್ನಾಟಕದ ಮಳೆಗೆ ಕಾರಣವೇನು?
ಬಂಗಾಳಕೊಲ್ಲಿಯ ಪಶ್ಚಿಮ ಭಾಗದ ಸಮುದ್ರದಲ್ಲಿ ಎರಡು ಮೂರು ದಿನದ ಹಿಂದೆ ಮೇಲ್ಮೈ ಸುಳಿಗಾಳಿ ಸೃಷ್ಟಿಯಾಗಿತ್ತು. ಅದು ಓಡಿಶಾ, ಆಂಧ್ರ ಪ್ರದೇಶದ ಕರಾವಳಿ ಭಾಗದತ್ತ ಸಂಚರಿಸುತ್ತಿದೆ. ಇದರ ಪ್ರಭಾವದಿಂದ ಕಳೆದ ಮೂರು ದಿನದಿಂದ ಕರ್ನಾಟಕ ಒಳನಾಡು ಜಿಲ್ಲೆಗಳಲ್ಲಿ ಕೆಲವು ಕಡೆಗಳಲ್ಲಿ ಹಗುರದಿಂದ ಸಾಧಾರಣವಾಗಿ ಮಳೆ ಆಗುತ್ತಿದೆ. ಮುಂದಿನ ಎರಡು ದಿನ ಚಳಿ, ಮಳೆಯ ವಾತಾವರಣ ಮುಂದುವರಿಯಲಿದ್ದು, ಆಗಾಗ ಬಿಸಿಲಿನ ದರ್ಶನವೂ ಆಗಲಿದೆ ಎಂದು ಹವಾಮಾನ ಮುನ್ಸೂಚನೆ ವರದಿ ತಿಳಿಸಿದೆ.

ಬೆಂಗಳೂರಲ್ಲಿ 2ದಿನ ಚಳಿ, ಮಳೆ ಇರಲಿದೆ
ಸಿಲಿಕಾನ್ ಸಿಟಿ ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಮುಂದಿನ ಎರಡು ದಿನ ಮೋಡ ಕವಿದ ಚಳಿಯ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ. ಗುರುವಾರದ ನಂತರ ಬಿಸಿಲಿನ ದರ್ಶನ ಕಡಿಮೆಯಾಗಲಿದೆ. ಗುಡುಗು ಸಹಿತ ಹಗುರದಿಂದ ಸಾಧಾರಣವಾಗಿ ಸಂಜೆ ನಂತರ ಮಳೆ ಬೀಳಬಹುದು. ಎರಡು ದಿನದ ನಂತರ ವಾತಾವರಣ ಸಹಜ ಸ್ಥಿತಿಗೆ ಬರಬಹುದು ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.

ಕರ್ನಾಟಕದಲ್ಲಿನ ತಾಪಮಾನ, ತೇವಾಂಶದ ಮಾಹಿತಿ
ಬೆಂಗಳೂರು ನಗರದಲ್ಲಿ 28ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, ತೇವಾಂಶ 72, ಗಾಳಿಯ ವೇಗ ಗಂಟೆಗೆ 34ಕಿ.ಮೀ. ಕಂಡು ಬಂದಿದೆ. ಬಾಗಲಕೋಟೆಯಲ್ಲಿ 30ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 70 ತೇವಾಂಶ, ರಾಯಚೂರು 31ಡಿಗ್ರಿ ಸೆಲ್ಸಿಯಸ್ ಗರಿಷ್ಠ, 65ರಷ್ಟು ತೇವಾಂಶ ಇದೆ. ಚಿತ್ರದುರ್ಗದಲ್ಲಿ 29ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 52ರಷ್ಟು ತೇವಾಂಶ, ಕಲಬುರಗಿ 31ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಇದ್ದು, 62ರಷ್ಟು ತೇವಾಂಶ ದಾಖಲಾಗಿದೆ. ಚಿಕ್ಕಮಗಳೂರಲ್ಲಿ 31ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ಇದ್ದರೆ, 69ರಷ್ಟು ತೇವಾಂಶ ಇದೆ.
ಅದೇ ರೀತಿ ಮಂಗಳೂರಿನಲ್ಲಿ 30ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 71ತೇವಾಂಶ, ಶಿವಮೊಗ್ಗ 30ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 68 ತೇವಾಂಶ ದಾಖಲಾಗಿದೆ. ಮೈಸೂರು 31ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 65 ತೇವಾಂಶ ಹಾಗೂ ಬಳ್ಳಾರಿ 31ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 73 ತೇವಾಂಶ ಕಂಡು ಬಂದಿದೆ ಎಂದು ಹವಾಮಾನ ಇಲಾಖೆ ವರದಿ ಹೇಳಿದೆ.












Click it and Unblock the Notifications