UPA ಭ್ರಷ್ಟಾಚಾರ: 50ಸಾವಿರ ಕೋ ರೂ ಅಕ್ರಮ ಪತ್ತೆ
ನವದೆಹಲಿ, ಸೆ.10: ಭ್ರಷ್ಟಾಚಾರದಲ್ಲಿ ಕೇಂದ್ರ ಯುಪಿಎ ಸರಕಾರವು ಹಿಮಾಲಯ ಶಿಖರವೇರಿದೆ. ಮತ್ತೂಂದು ಭಾರಿ ಮೊತ್ತದ ಹಗರಣದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಭಾಗಿಯಾಗಿದೆ ಎಂದು ಅಧಿಕೃತವಾಗಿ ತಿಳಿದುಬಂದಿದೆ.
ಜಗತ್ತಿನಲ್ಲಿ ಅತಿ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಅತಿ ಹೆಚ್ಚು ಪ್ರಯಾಣಿಕರನ್ನು ಸಾಗಿಸುವ ರೈಲ್ವೆ ಇಲಾಖೆ ಸದಾ ನಷ್ಟದತ್ತ ಮುಖ ಮಾಡಿರುವುದಕ್ಕೆ ಇದೂ ಕಾರಣವಾಗರಬಹುದಾ?
ಕಬ್ಬಿಣದ ಅದಿರು ಸಾಗಣೆ ರೈಲ್ವೆ ಇಲಾಖೆಯಲ್ಲಿ 17,000 ಕೋಟಿ ರೂ ಅಕ್ರಮ ನಡೆದಿರುವುದು ಈಗಾಗಲೇ ಪತ್ತೆಯಾಗಿದ್ದು, ಪೂರ್ಣಪ್ರಮಾಣದ ವರದಿ ಬಂದ ನಂತರ ನಷ್ಟದ ಪ್ರಮಾಣ 50,000 ಕೋಟಿ ರೂ. ಗೆ ಏರಿಕೆಯಾಗುವ ಸಾಧ್ಯತೆಯಿದೆ. ಆಗ್ನೇಯ, ನೈಋತ್ಯ ಹಾಗೂ ಪೂರ್ವ ಕರಾವಳಿ ವಿಭಾಗದಲ್ಲಿ ಈ ಆಡಿಟ್ ನಡೆದಿದೆ.

CAG ಈ ಸತ್ಯ ಶೋಧನೆ ನಡೆಸಿದೆ, ಇದು 2ಜಿ, ಕಲ್ಲಿದ್ದಲು, ಕಾಮನ್ ವೆಲ್ತ್ ಹಗರಣಕ್ಕಿಂತ ಬ್ರಹ್ಮಾಂಡ ಭ್ರಷ್ಟಾಚಾರವಾಗಿದೆ ಎಂದು ಮಹಾಲೆಕ್ಕ ಪರಿಶೋಧಕರು- ಸಿಎಜಿ ಅಭಿಪ್ರಾಯಪಟ್ಟಿದ್ದಾರೆ. ಸುಳ್ಳು ಮಾಹಿತಿಯನ್ನು ದಾಖಲಿಸಿ ಕಬ್ಬಿಣದ ಅದಿರು ಸಾಗಿಸಿರುವುದರಿಂದ ದೇಶದ ಬೊಕ್ಕಸಕ್ಕೆ ಈ ಪಾಟಿ ನಷ್ಟವಾಗಿದೆ.
ಗಮನಿಸಿ ಇದಿನ್ನೂ ಆರಂಭಿಕ ವರದಿ. ಅದೂ ಕೆಲವೇ ಕೆಲವು ಪ್ರಕರಣಗಳಲ್ಲಿ ಪರೀಕ್ಷಾರ್ಥ ತಪಾಸಣೆ ಮಾಡಿದಾಗ 17 ಸಾವಿರ ಕೋಟಿ ರೂ. ಹಗರಣ ಬಹಿರಂಗವಾಗಿದೆ ಎಂದು ಸಿಎಜಿ ರೈಲ್ವೆ ಇಲಾಖೆಗೆ ಸಲ್ಲಿಸಿರುವ ಕರಡು ವಿವರಣೆಯಲ್ಲಿ ತಿಳಿಸಿದೆ. ಒಂದು ವೇಳೆ, ಪರಿಪೂರ್ಣ ಲೆಕ್ಕಪರಿಶೋಧನೆ ನಡೆದರೆ ಹಗರಣದ ಮೊತ್ತ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂಬುದು ಸಿಎಜಿ ಅನುಮಾನ/ ಆತಂಕವಾಗಿದೆ.
ಏನಿದು ಹಗರಣ?:
ರೈಲ್ವೆ ಇಲಾಖೆಯು ಕಬ್ಬಿಣದ ಅದಿರು ಸಾಗಣೆಗೆ 2008ರ ಮೇ 22ರಿಂದ ದ್ವಿಬೆಲೆ ಪದ್ಧತಿಯನ್ನು ಅಳವಡಿಸಿಕೊಂಡಿದೆ. ಅಂದರೆ ಕಬ್ಬಿಣದ ಅದಿರನ್ನು ದೇಶೀಯ ಬಳಕೆ ನಿಮಿತ್ತ ಸಾಗಿಸಿದರೆ ದರದಲ್ಲಿ ವಿನಾಯಿತಿ ಸಿಗಲಿದೆ. ಆದರೆ ವಿದೇಶಕ್ಕೆ ರಫ್ತು ಮಾಡುವ ಅದಿರಿಗೆ ದೇಶೀಯ ಅದಿರು ಸಾಗಣೆಗಿಂತ ಮೂರು ಪಟ್ಟು ಹೆಚ್ಚು ದರ ವಿಧಿಸಲಾಗುತ್ತದೆ. ಇದು ದ್ವಿಬೆಲೆ ಪದ್ಧತಿಯ ಸರಳ ನೀತಿ.
ಈ ಪದ್ಧತಿಯಡಿ ದೇಶೀಯವಾಗಿ ಅದಿರು ಸಾಗಿಸುವವರು ದರ ವಿನಾಯಿತಿ ಪಡೆಯಲು ಪ್ರಮಾಣ ಪತ್ರ ಸೇರಿದಂತೆ ಹಲವು ದಾಖಲೆಗಳನ್ನು ಸಲ್ಲಿಸಬೇಕು. ಆದರೆ ಸಿಎಜಿ ನಡೆಸಿರುವ ಪರೀಕ್ಷಾರ್ಥ ತಪಾಸಣೆ ವೇಳೆ, 126 ಮಂದಿ ಯಾವುದೇ ದಾಖಲೆಯನ್ನೂ ಸಲ್ಲಿಸದೇ 386 ರೇಕ್ ನಷ್ಟು ಅದಿರನ್ನು 2008ರ ಮೇ ತಿಂಗಳಿಂದ 2012ರ ಮಾರ್ಚ್ ರವರೆಗೆ ಸಾಗಣೆ ಮಾಡಿದ್ದಾರೆ. ಇದರಿಂದಾಗಿ ರೈಲ್ವೆಗೆ 258.38 ಕೋಟಿ ರೂ. ನಷ್ಟವಾಗಿದೆ.
ಇದೇ ವೇಳೆ, 290 ಮಂದಿ ಅರ್ಧಂಬರ್ಧ ದಾಖಲೆ ಸಲ್ಲಿಸಿದ್ದರೂ ಅದಿರು ಸಾಗಣೆಗೆ ಅವಕಾಶ ಕಲ್ಪಿಸಲಾಗಿದೆ. ಈ ಬಾಬತ್ತಿನಲ್ಲಿ 2090.15 ಕೋಟಿ ರೂ. ನಷ್ಟವಾಗಿದೆ. ಒಟ್ಟಾರೆ ದಾಖಲೆಯನ್ನೇ ಕೊಡದೆ ಅಥವಾ ಕೆಲವೇ ದಾಖಲೆಗಳನ್ನು ನೀಡಿ ಅದಿರು ಸಾಗಿಸಿರುವುದರಿಂದ ಸುಮಾರು 2300 ಕೋಟಿ ರೂ. ನಷ್ಟವಾಗಿದೆ ಎನ್ನುತ್ತಿದೆ Comptroller and Auditor General (CAG) ವರದಿ.
ವಿವಿಧ ಅವಧಿಯಲ್ಲಿ ನಡೆಸಲಾದ ಪರೀಕ್ಷಾರ್ಥ ತಪಾಸಣೆ ವೇಳೆ 443 ಮಂದಿ ಯಾವುದೇ ದಾಖಲೆಯನ್ನೇ ಸಲ್ಲಿಸದೇ ಅಥವಾ ಅಪೂರ್ಣ ದಾಖಲೆಕೊಟ್ಟು ಅದಿರು ಸಾಗಿಸಿರುವುದರಿಂದ 17,558 ಕೋಟಿ ರೂ. ನಷ್ಟವಾಗಿದೆ. ಇದರಲ್ಲಿ ರೈಲ್ವೆ ಸಿಬ್ಬಗಂದಿ ಮತ್ತು ಕಬ್ಬಿಣ ಅದಿರು ಸಾಗಣೆದಾರರು ಭಾಗಿಯಾಗಿದ್ದಾರೆ ಎಂದೂ ಸಿಎಜಿ ಹೇಳಿದೆ.












Click it and Unblock the Notifications