ಯುಪಿಎ ಭ್ರಷ್ಟತನ ಎಬಿಸಿಡಿ ಬಗ್ಗೆ ಮೋದಿ
ಜೈಪುರ, ಸೆ.10: ಮುಂಬರುವ ಲೋಕಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ಬಿಜೆಪಿ ಮತ್ತೊಮ್ಮೆ ನರೇಂದ್ರ ಮೋದಿ ಅವರಿಂದ ರಣಕಹಳೆ ಊದಿಸಿದೆ. ಬಿಜೆಪಿ ಪ್ರಚಾರ ಸಮಿತಿಯ ಅಧ್ಯಕ್ಷ ನರೇಂದ್ರ ಮೋದಿ ಅವರು ಇಂಗ್ಲೀಷ್ ವರ್ಣಮಾಲೆಗೆ ಹೊಸ ಅರ್ಥ ನೀಡಿ, ಯುಪಿಎ ಭ್ರಷ್ಟಾಚಾರದ ಚಿತ್ರಣ ನೀಡಿದ್ದಾರೆ.
2014ರ ಲೋಕಸಭಾ ಚುನಾವಣೆಗೆ ಸಕಲ ಸಿದ್ಧತೆಯಲ್ಲಿ ತೊಡಗಿರುವ ಬಿಜೆಪಿ ಜೈಪುರದಲ್ಲಿ ಮಹಾಕದನಕ್ಕೆ ಮಂಗಳವಾರ ಅಧಿಕೃತವಾಗಿ ಚಾಲನೆ ಸಿಕ್ಕಿದೆ. ಬಿಜೆಪಿ ಪ್ರಚಾರ ಸಮಿತಿಯ ಅಧ್ಯಕ್ಷ ಮತ್ತು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು
ಜೈಪುರದ ಅಮೃದನ್-ಕ-ಬಾಗ್ ಮೈದಾನದಲ್ಲಿ ನಡೆಯುತ್ತಿರುವ ಬೃಹತ್ ಮೆರವಣಿಗೆ ಹಾಗೂ ಸಮಾವೇಶದಲ್ಲಿ ನರೇಂದ್ರ ಮೋದಿ, ರಾಜನಾಥ್ ಸಿಂಗ್ ಸೇರಿದಂತೆ ರಾಜಸ್ತಾನ ಬಿಜೆಪಿ ಅಧ್ಯಕ್ಷೆ ವಸುಂಧರಾ ರಾಜೆ ಮತ್ತು ಇತರೆ ಪ್ರಮುಖ ಮುಖಂಡರು ಪಾಲ್ಗೊಂಡಿದ್ದರು.
ದೇಶವನ್ನು ರಕ್ಷಿಸಿ: ದೇಶವನ್ನು ಭ್ರಷ್ಟಾಚಾರದಿಂದ ರಕ್ಷಿಸಲು ಕಾಂಗ್ರೆಸ್ ಅನ್ನು ದೇಶದಿಂದ ತೊಲಗಿಸಬೇಕು. ಜಿ-20 ಶೃಂಗಸಭೆಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಯಾವ ವಿಚಾರಗಳನ್ನು ಪ್ರಸ್ತಾಪ ಮಾಡಿದರು ಎಂದು ನಮಗೆ ತಿಳಿದಿದೆ.

ದೇಶದಲ್ಲಿ ಭ್ರಷ್ಟಾಚಾರ ಕೊನೆಯಾಗಬೇಕು ಎಂದರೆ ದೇಶದಿಂದ ಕಾಂಗ್ರೆಸ್ ಪಕ್ಷವನ್ನು ಕಿತ್ತೊಗೆಯಬೇಕು. ಯಾರು ಅತಿಭ್ರಷ್ಟನಾಗುತ್ತಾನೆಯೋ ಅವನು ಕಾಂಗ್ರೆಸ್ ನಲ್ಲಿ ಅತ್ಯಂತ ಯಶಸ್ವಿ ನಾಯಕನಾಗುತ್ತಾನೆ. 1947ರ ಮೊದಲಿನ ಕಾಂಗ್ರೆಸ್ ಗೂ 1947ರ ನಂತರದ ಕಾಂಗ್ರೆಸ್ ಗೂ ಅಜಗಜಾಂತರ ವ್ಯತ್ಯಾಸವಿದೆ ಎಂದರು.
ಕಾಂಗ್ರೆಸ್ ನಲ್ಲಿ ದೇಶಭಕ್ತಿ ಇತ್ತು. ಆದರೆ ಅಲ್ಲಿ ಈಗ ಕುಟುಂಬ ಭಕ್ತಿ ಇದೆ. ಕಾಂಗ್ರೆಸ್ಸಿಗರಿಗೆ ಕೇವಲ ಸೋನಿಯಾ ಗಾಂಧಿ ಕುಟುಂಬ ಪರವಾಗಿ ಭಕ್ತಿ ಇದೆ'.
'ಬಿಜೆಪಿಯಲ್ಲೂ ಭಕ್ತಿ ಇದೆ. ಆದರೆ ನಮಗೆ ದೇಶ ಭಕ್ತಿ ಇದೆ. ನಮ್ಮ ಕುಟುಂಬದಲ್ಲಿ 125 ಕೋಟಿ ಜನರು ಇದ್ದಾರೆ. ದೇಶ ಆಳುವ ಸಾಮರ್ಥ್ಯವಿಲ್ಲದ ಕಾಂಗ್ರೆಸ್ ದೇಶದ ಪರವಾಗಿ ಯಾವುದೇ ನಿರ್ಧಾರ ಕೈಗೊಳ್ಳಲು ಅಸಮರ್ಥವಾಗಿದೆ. ಕೇಂದ್ರದ ಯುಪಿಎ ಸರ್ಕಾರದಲ್ಲಿ ನೇತಾರರಿಲ್ಲ, ನೈತಿಕತೆ ಇಲ್ಲ, ನೀತಿ ಮತ್ತು ನಿಯತ್ತು ಇಲ್ಲವೇ ಇಲ್ಲ' ಎಂದು ಮೋದಿ ಗುಡುಗಿದರು.
ಕಾಂಗ್ರೆಸ್ ಭ್ರಷ್ಟಾಚಾರ ಪ್ರಕರಣಗಳನ್ನು ಪ್ರಸ್ತಾಪಿಸಿದ ಮೋದಿ 'ಇಂಗ್ಲಿಷ್ ವರ್ಣಮಾಲೆಗೆ ಕಾಂಗ್ರೆಸ್ ಹೊಸ ರೂಪವನ್ನು ನೀಡಿದ್ದು, ಎ-ಎಂದರೆ ಆದರ್ಶ ಹಗರಣ, ಬಿ-ಎಂದರೆ ಬೋಫೋರ್ಸ್ ಹಗರಣ, ಸಿ-ಎಂದರೆ ಕಾಮನ್ ವೆಲ್ತ್ ಹಗರಣ, ಡಿ-ಎಂದರೆ (Damad Ka Karobara) ಕಾನೂನು ವ್ಯವಹಾರ ಎಂದು ಮೋದಿ ಹೇಳಿದರು. ಕಾಂಗ್ರೆಸ್ ನಲ್ಲಿ ನೇತಾ, ನೈತಿಕತೆ, ನಿಯತ್ತು ಹಾಗೂ ನೀತಿ ಏನೂ ಇಲ್ಲ ಎಂದು ಮೋದಿ ಟೀಕಿಸಿದರು.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಎಲ್ ಕೆ ಅಡ್ವಾಣಿ ಅವರನ್ನು ಹೊಗಳಿದ ಮೋದಿ, ಎನ್ ಡಿಎ ಸರ್ಕಾರವಿದ್ದಾಗ ಆರಂಭವಾದ ಸುವರ್ಣಪಥವನ್ನು ಹಾಳು ಮಾಡಿರುವ ಯುಪಿಎಯನ್ನು ಜನತೆ ಎಂದಿಗೂ ಕ್ಷಮಿಸಬಾರದು ಎಂದರು. ಜೈಪುರ-ದೆಹಲಿ ಹೈವೇ ನೋಡಿದರೆ ಅಟಲ್ ಜೀ ಅವರ ನೆನಪಾಗುತ್ತದೆ. ರಾಜಸ್ಥಾನದ ರಾಜ್ಯಪಾಲೆ ಮಾರ್ಗರೇಟ್ ಆಳ್ವಾ ಜೀ ಅವರು ಕೂಡಾ ಈಗ ಹೈವೇಯಲ್ಲಿ ಓಡಾಡುವುದೇ ಕಷ್ಟ ಎಂದು ಒಪ್ಪಿಕೊಂಡಿದ್ದಾರೆ. ಎನ್ ಡಿಎ ಮಾಡಿದ ಒಳ್ಳೆ ಕೆಲಸವನ್ನು ಮುಂದುವರೆಸಿಕೊಂಡು ಹೋಗುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಮೋದಿ ವ್ಯಥೆ ಪಟ್ಟರು.












Click it and Unblock the Notifications