ಭಾರತದ 75 ನೇ ಸ್ವಾತಂತ್ರ್ಯ ದಿನಾಚರಣೆ: ಕೆನರಾ ಉಪ್ಪಿನ ಸತ್ಯಾಗ್ರಹ!
ಬೆಂಗಳೂರು, ಆ. 15: ಭಾರತ ಬ್ರಿಟೀಷರ ದಬ್ಬಾಳಿಕೆ- ಆಳ್ವಿಕೆಯಿಂದ ವಿಮುಕ್ತಿಗೊಂಡು 75 ವರ್ಷ. ಭಾರತೀಯರ ಸಹಿಸುವ ಮನೋಭಾವದಿಂದಲೇ ಬ್ರಿಟಿಷರು 300 ವರ್ಷ ಆಳ್ವಿಕೆ ಮಾಡಿದರು ಎಂದು ಮೂದಲಿಸುವವರು ಈಗಲೂ ಇದ್ದಾರೆ. ವಿಶ್ವ ಭೂ ಪಟದಲ್ಲಿ ಶಾಂತಿ ಮಂತ್ರ ಹೋರಾಟದ ಮೂಲಕವೇ ಬ್ರಿಟಿಷರ ಸಂಕೋಲೆಯಿಂದ ಮುಕ್ತಿ ಪಡೆದಿದ್ದು ನಮ್ಮ ಭಾರತೀಯರು ಎಂಬ ಹೆಮ್ಮೆ. ಇದರ ಧಾತು ಮಹಾತ್ಮ ಗಾಂಧೀಜಿ. ಸ್ವಾತಂತ್ರ್ಯ ಸಂಗ್ರಾಮಕ್ಕೆ ಬಹುದೊಡ್ಡ ಇಂಬು ಕೊಟ್ಟಿದ್ದು ದಂಡಿ ಉಪ್ಪಿನ ಸತ್ಯಾಗ್ರಹ. ಗುಜರಾತ್ ನ ಸಬರಮತಿಯಲ್ಲಿ ಮಹಾತ್ಮಾಗಾಂಧೀಜಿ ನೇತೃತ್ವದಲ್ಲಿ ಕೇವಲ 78 ಮಂದಿಯಿಂದ ಆರಂಭವಾದ ಹೋರಾಟ ಇಡೀ ರಾಷ್ಟ್ರದ ಉದ್ದಗಲಕ್ಕೂ ಹಬ್ಬಿತ್ತು. ಸ್ವಾತಂತ್ರ್ಯ ಸಂಗ್ರಾಮದ ದಿಕ್ಕನ್ನೇ ಬದಲಿಸಿತ್ತು. ಕರ್ನಾಟಕದ ಕರಾವಳಿಯಲ್ಲೂ ಚಳವಳಿ ನಡೆದಿತ್ತು. ಚಳವಳಿಗಾರರ ಹೋರಾಟ, ಸಾಹಸ ಸದಾ ಕಾಲಕ್ಕೂ ಚಿರಸ್ಮರಣೀಯ.
ವ್ಯಾಪಾರಕ್ಕಾಗಿ ಭಾರತಕ್ಕೆ ಕಾಲಿಟ್ಟಿದ್ದ ಪೋರ್ಚಗೀಸರು, ಡಚ್ಚರು ನಿರ್ಗಮಿಸಿದ್ದರು. ಅದೇ ವ್ಯಾಪಾರಕ್ಕಾಗಿ ಬಂದ ಬ್ರಿಟಿಷರು 300 ವರ್ಷ ಗಳ ಕಾಲ ಭಾರತದ ಸಂಪತ್ತನ್ನು ದೋಚಿದ ನಾಡನ್ನು ಆಳಿದರು. ಬ್ರಿಟೀಷರಿಂದ ವಿಮೋಚನೆಗಾಗಿ ಅನೇಕ ಸ್ವಾತಂತ್ರ್ಯ ಸೇನಾನಿಗಳು ತಮ್ಮ ಪ್ರಾಣಾರ್ಪಣೆ ಮಾಡಿದ್ದಾರೆ. ಆದರೆ ಶಾಂತಿಯುತ ಹೋರಾಟದ ಮೂಲಕ ಬ್ರಿಟೀಷರ ಆಳ್ವಿಕೆಯಿಂದ ಭಾರತಕ್ಕೆ ಮುಕ್ತಿ ಕೊಡಿಸಿದ್ದು ಮಹಾತ್ಮಾಗಾಂಧಿ ಮತ್ತು ಅವರು ಆಯ್ಕೆ ಮಾಡಿಕೊಂಡ ಶಾಂತಿಯುತ ಹೋರಾಟ. ಸ್ವಾತಂತ್ರ್ಯ ಸಂಗ್ರಾಮದ ಭಾಗವಾಗಿ ಅವರು ಮಾಡಿದ ಉಪ್ಪಿನ ಸತ್ಯಾಗ್ರಹ ಇಡೀ ದೇಶದ ಮೂಲೆ ಮೂಲೆಯಲ್ಲೂ ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚು ಹಚ್ಚಿತ್ತು. ಅದಕ್ಕೆ ಕರ್ನಾಟಕವೂ ಹೊರತಾಗಿರಲಿಲ್ಲ. ಕರಾವಳಿಯ ಸಾಹಸಮಯ ಉಪ್ಪಿನ ಸತ್ಯಾಗ್ರಹ ಕೂಡ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸ ಪುಟಗಳಲ್ಲಿ ಅಚ್ಚಳಿಯದೇ ಇದೆ.
ಬ್ರಿಟೀಷರ ಸಂಕೋಲೆಯಿಂದ ಭಾರತವನ್ನು ನಮ್ಮ ಹಿರಿಯರು ಆಯ್ದು ಕೊಂಡಿದ್ದು ಚಳವಳಿಯ ಮಾರ್ಗ. ಸ್ವಾತಂತ್ರ್ಯ ಹೋರಾಟ ಎಂಬ ಸಾಗರಕ್ಕೆ ಸೇರುವ ನದಿಗಳ ಪೈಕಿ ಕರಾವಳಿ ಜಿಲ್ಲೆಯ ಹೋರಾಟದ ನಾಲೆಯೂ ಒಂದಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಚಳವಳಿಗಾರರು ನಡೆಸಿದ ಸಾಹಸದ ಕತೆಗಳು ಎಂದಿಗೂ ಯಾರೂ ಮರೆಯಲು ಅಸಾಧ್ಯ. ಬ್ರಿಟಿಷ್ ಕಾಲದಲ್ಲಿ ಅವಿಭಜಿತ ದಕ ಜಿಲ್ಲೆ ಹಾಗೂ ಉತ್ತರ ಕನ್ನಡ ಜಿಲ್ಲೆ ಸೇರಿ ಕೆನರಾ ಎಂದು ಕರೆದಿದ್ದರು. ಉಭಯ ಜಿಲ್ಲ ಮಧ್ಯಭಾಗ ಹೊನ್ನಾವರವೇ ಆಡಳಿತಾತ್ಮಕ ಜಿಲ್ಲೆಯಾಗಿ ಕಾರ್ಯ ಮಾಡುತ್ತಿದ್ದ ಫಿರಂಗಿಗಳ ಕಾರ್ಯ ಭಾರದ ಕ್ಷೇತ್ರವಾಗಿತ್ತು.

ಗಾಂಧೀಜಿ ಉಪ್ಪಿನ ಸತ್ಯಾಗ್ರಹ
ಬ್ರಿಟಿಷರು ಉಪ್ಪಿನ ಮೇಲೂ ತೆರಿಗೆ ವಿಧಿಸಿದ್ದರು. ಬ್ರಿಟೀಷರ ದಾಸ್ಯ ನೀತಿಯ ವಿರುದ್ಧ ಮಹಾತ್ಮಾ ಗಾಂಧೀಜಿ ಗುಜರಾತ್ ನ ಸಬರಮತಿಯಿಂದ ದಂಡಿ ವರೆಗೆ ಸುಮಾರು 390 ಕಿ.ಮೀ. ಕಾಲ್ನಡಿಗೆ ಹೋರಾಟವಾಗಿತ್ತು. 1930ರ ಮಾ. 12ರಿಂದ ಎ. 5ರ ವರೆಗೆ ಗುಜರಾತಿನ ಸಬರಮತಿಯಿಂದ ದಂಡಿವರೆಗೆ ಉಪ್ಪಿನ ಕಾನೂನು ಮುರಿಯುವ ದಾಂಡೀ ಯಾತ್ರೆ ಆರಂಭ ವಾಗಿತ್ತು. ಏಪ್ರಿಲ್. 6 ರಂದು ಗಾಂಧೀಜಿ ಅವರು ಉಪ್ಪಿನ ಕಾನೂನು ಮುರಿದರು. ಭಾರತದಲ್ಲಿ ಸ್ವಾತಂತ್ರ್ಯಕ್ಕಾಗಿ ರೂಪಗೊಂಡಿದ್ದ ಹೋರಾಟ ಜಾಗತಿಕ ಗಮನ ಸೆಳೆದಿತ್ತು. ಅನಂತರ ಒಂದು ವಾರ ಕಾಲ ದೇಶಾದ್ಯಂತ ವಿವಿಧೆಡೆ ಸತ್ಯಾಗ್ರಹ ನಡೆಸಲು ಮಾರ್ಗದರ್ಶನ ಕೊಡುವ ಶಿಬಿರಗಳು ನಡೆಸಿದ್ದರು. ಪರಿಣಾಮ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ ನಡೆದ ದಿನವಾದ ಎ. 13ರಂದು ಕರ್ನಾಟಕದ ಕರಾವಳಿ ಸೇರಿದಂತೆ ರಾಜ್ಯದ 40 ಕಡೆ ಮತ್ತು ದೇಶಾದ್ಯಂತ ಉಪ್ಪಿನ ಸತ್ಯಾಗ್ರಹ ನಡೆಯಿತು. ಇದೇ ದಿನ ,'ಸವಿನಯ' ಕಾಯಿದೆ ಭಂಗ ಚಳವಳಿಯೂ ಆರಂಭಗೊಂಡಿತು.

ಹಳ್ಳಿ ಹಳ್ಳಿಗೂ ಕಾಲಿಟ್ಟಿದ್ದ ಹೋರಾಟ
ದೇಶದ ವಿಮೋಚನೆಯ ದೀಕ್ಷೆ ತೊಟ್ಟ ಹಿರಿಯ ಸ್ವಾತಂತ್ರ್ಯ ಹೊರಾಟಗಾರರ ಪೈಕಿ ಗಾಂಧಿಜೀ ಅವರ ಪಾತ್ರ ದೊಡ್ಡದ್ದು. ಅವರು ಹೋರಾಟದ ನಾಯಕತ್ವ ವಹಿಸುವ ಕಾಲಕ್ಕೆ ಹಿಂದಿನ ಪ್ರಮುಖ ರಾಷ್ಟ್ರೀಯ ನಾಯಕರು ನಿರ್ಗಮಿಸಿದ್ದರು. ಆಗಿನ ಚಳವಳಿ ನಗರಗಳಿಗೆ ಮೀಸಲಿರದೆ ಹಳ್ಳಿ ಹಳ್ಳಿಗೂ ಪರಸರಿಸಿತ್ತು. ಗಾಂಧೀಜಿ ಕೊಟ್ಟ ಉಪ್ಪಿನ ಸತ್ಯಾಗ್ರಹದ ಕರೆಗೆ ಅಂಕೋಲೆಯ ಜನ ಕೈ ಕಟ್ಟಿ ಹೊರಾಟಕ್ಕೆ ನಿಂತಿದ್ದರು. ಇವರಿಗೆ ಸಾಥ್ ಕೊಡುವಂತೆ ಉಡುಪಿ ಮಂಗಳೂರಿನಲ್ಲಿ ಹೋರಾಟದ ಕಿಚ್ಚು ಶುರುವಾಗಿತ್ತು. ಬ್ರಿಟಿಷರು ಹೇರಿದ್ದ ಉಪ್ಪಿನ ಮೇಲಿನ ಕರ ವಿರೋಧಿಸಿವ ಮೂಲಕ ಹೊರಾಟ ನಡೆಸುವ ಪ್ಲಾನ್ ಅದಾಗಿತ್ತು. ಬ್ರಿಟಿಷ್ ಸರ್ಕಾರದ ವಿರುದ್ಧ ಘೋಷಣೆ ಮಾಡಿ ಉಪ್ಪು ಸಿದ್ದಪಡಿಸಿ ಮಾರಾಟ ಮಾಡುವ ಕಾರ್ಯಕ್ಕೆ ಮುಂದಾಗಿದ್ದರು.

ಕರುನಾಡಿನ ಕಲಿಗಳು
ಸ್ವತಂತ್ರ ಹೋರಾಟಗಾರರಾದ ರಂಗನಾಥ ದಿವಾಕರ, ಡಿ.ಪಿ. ಕರ್ಮಕರ, ಜಯರಾಮಾಚಾರ್ಯ ಮುಂತಾದವರು ಅಂಕೋಲೆ ಭಾಗದಲ್ಲಿ ಸಂಚರಿಸಿ ಹೋರಾಟದ ರೂಪುರೇಷೆಗಳನ್ನು ಸಿದ್ದಪಡಿಸಿದ್ದರು. ಹೀಗಾಗಿಯೇ ಅಂಕೋಲಾ ಪ್ರದೇಶದಲ್ಲಿ ಅಸಹಕಾರ ಚಳವಳಿ, ಕರಬಂಧಿ ಚಳವಳಿ ಮತ್ತು ಉಪ್ಪಿನ ಸತ್ಯಾಗ್ರಹ ಮಹತ್ವದ ಪಾತ್ರ ವಹಿಸಿತು. ಕರನಿರಾಕರಣೆ ಮಾಡಿದ್ದರಿಂದ ಈ ಪ್ರದೇಶದ ರೈತರು ತಮ್ಮ ಭೂಮಿ ಕಳೆದು ಕೊಂಡಿದ್ದರು. ಹಾಗಾಗಿಯೇ ಕರಬಂಧಿ ಚಳವಳಿಯ ಸರ್ವಾಧಿಕಾರಿಯಾಗಿ ಹೋರಾಟಕ್ಕೆ ಇಳಿದವರು ಬಾಸಗೋಡದ ರಾಮ ನಾಯಕರು. ತಮ್ಮ ಸ್ವ ಗ್ರಾಮ ಬಾಸಗೋಡದಲ್ಲಿ ಸೇವಾದಳದ ತರಬೇತಿ ಶಿಬಿರವನ್ನು ಆರಂಭಿಸಿದ್ದರು. ಆ ಮೂಲಕ ಸ್ವಾತಂತ್ರ್ಯ ಚಳವಳಿ ಕೆನರಾದಲ್ಲಿ ಸ್ವಾತಂತ್ರ್ಯ ಗಳಿಸಿದ ಹದಿನೈದು ವರ್ಷಗಳ ಮೊದಲೇ ನಡೆದಿತ್ತು. ನಾ.ಸು. ಹರ್ಡೀಕರ, ಗಂಗಾಧರರಾವ್ ದೇಶಪಾಂಡೆ, ಮುದವೀಡು ಕೃಷ್ಣರಾವ್ ಮುಂತಾದ ಮಹನೀಯರು ಅಂಕೋಲೆ ಭಾಗದ ಹೋರಾಟಗಾರರಿಗೆ ಮಾರ್ಗದರ್ಶನ ಮಾಡಿದ್ದರು. ಪರಿಣಾಮ ತಾಲ್ಲೂಕಿನ ನಾಡವ ಬಾಂಧವರು ಸಾಮೂಹಿಕವಾಗಿ ಸ್ವಾತಂತ್ರ್ಯ ಚಳವಳಿಗೆ ಧುಮುಕಿದರು. ಈ ಭಾಗದಲ್ಲಿ ಸಂಚರಿಸಿ ಹೋರಾಟದ ಕಹಳೆಯನ್ನು ಮೊಳಗಿಸಿದ್ದರು.

ಬಳ್ಳಾರಿಯಲ್ಲಿ ನಡೆದಿದ್ದ ಕಾಂಗ್ರೆಸ್ ಸಭೆ
1930, ಫೆಬ್ರುವರಿ 20 ರಂದು ಬಳ್ಳಾರಿಯಲ್ಲಿ ಅಂದಿನ ಪ್ರದೇಶ ಕಾಂಗ್ರೆಸ್ ಸಮಿತಿ ಸಭೆ ಸೇರಿತ್ತು. ಆ ಸಭೆಯಲ್ಲಿ ಕರ್ನಾಟಕದಲ್ಲಿ ಉಪ್ಪಿನ ಸತ್ಯಾಗ್ರಹ ನಡೆಸಲು ತೀರ್ಮಾನ ಮಾಡಲಾಗಿತ್ತು. ಆ ಕಾರ್ಯಕ್ಕೆಅಂಕೋಲೆಯೇ ಸೂಕ್ತ ಎಂಬ ಸರ್ವಾನು ಮತದ ನಿರ್ಣಯವಾಗಿತ್ತು. ಈ ಮಹಾ ಕಾರ್ಯಕ್ಕೆ ಎಂ.ಪಿ. ನಾಡಕರ್ಣಿ, ಶಾಮರಾವ್ ಶೇಣ್ವಿ, ಸ್ವಾಮಿ ವಿದ್ಯಾನಂದ, ಬಾಸಗೋಡ ಮಾಣಿ ಹಮ್ಮಣ್ಣ ನಾಯಕ, ವಂದಿಗೆ ಹಮ್ಮಣ್ಣ ನಾಯಕ, ಶೆಟಗೇರಿ ಜೋಗಿ ನಾಯಕ, ಬಾಸ್ಗೋಡ ಬೊಮ್ಮಯ್ಯ ನಾಯಕ ಮುಂತಾದವರ ನೇತೃತ್ವ ವಹಿಸಿ ಕೊಂಡಿದ್ದರು. ಅಂದು ಯಶಸ್ವಿಯಾಗಿ ನಡೆದ ಉಪ್ಪಿನ ಸತ್ಯಾಗ್ರಹವು ಸಂಪೂರ್ಣ ದೇಶದ ಗಮನವನ್ನು ಸೆಳೆದಿತ್ತು ಎನ್ನುತ್ತದೆ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಪುಟಗಳು.

ಮಂಗಳೂರಿನಲ್ಲಿ ಸತ್ಯಾಗ್ರಹ ಶಿಬಿರ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದಲ್ಲಿ ಉಪ್ಪಿನ ಸತ್ಯಾಗ್ರಹದ ಪ್ರಧಾನ ಶಿಬಿರ ಮಂಗಳೂರಿನಲ್ಲಿ ನಡೆಯಿತು. ಅಂದು ಜಿಲ್ಲೆಯ ಎಲ್ಲ ತಾಲೂಕುಗಳನ್ನು ಪ್ರತಿನಿಧಿಸುವ ಸತ್ಯಾಗ್ರಹಿಗಳು ಸಮುದ್ರದ ನೀರಿನಿಂದ ಉಪ್ಪು ತಯಾರಿಸಿ ಮಾರಾಟ ಮಾಡಿದರು. ಅಲ್ಲಲ್ಲಿ ಪೊಲೀಸರಿಂದ ಲಾಠೀ ಏಟುಗಳು ಬೀಳುತ್ತಿದ್ದರೂ ಲೆಕ್ಕಿಸಲೇ ಇಲ್ಲ. ಇನ್ನೂ ಹಲವಾರು ಸತ್ಯಾಗ್ರಹಿಗಳು ಜೈಲು ಪಾಲಾಗಿದ್ದರೂ ಉತ್ಯಾಸ ತಗ್ಗಲಿಲ್ಲ. ಉಡುಪಿಯ ಸೇವಾದಳದಿಂದ ಒಂದು ವಾರದ ಸತ್ಯಾಗ್ರಹ ಶಿಬಿರ ನಡೆದಿತ್ತು. ಎಸ್. ಯು. ಪಣಿಯಾಡಿ ನೇತೃತ್ವದಲ್ಲಿ ಕೃಷ್ಣ ಮಠದ ದಿಂದ ಆರಂಭಿಸಿ ಪಾದಯಾತ್ರೆ ಮಂಗಳೂರಿನ ಸತ್ಯಾಗ್ರಹ ಶಿಬಿರಕ್ಕೆ ತಲುಪಿತ್ತು. ಉಪ್ಪಿನ ಸತ್ಯಾಗ್ರಹ ನಡೆಸಿದ ಭಾರತದ 60 ಸಾವಿರ ಮಂದಿಯನ್ನು ಬ್ರಿಟಿಷರು ಜೈಲಿಗೆ ಹಾಕಿದ್ದರು. ಇಷ್ಟಾಗಿಯೂ ಭಾರತದಲ್ಲಿ ಮೊಳಗಿದ್ದ ಸ್ವಾತಂತ್ರ್ಯದ ಕಿಚ್ಚನ್ನು ಬ್ರಿಟಿಷರು ಆರಿಸಲು ಸಾಧ್ಯವಾಗಲಿಲ್ಲ. ಜಾಗತಿಕ ಮಟ್ಟದಲ್ಲಿ ಭಾರತದ ಸ್ವಾತಂತ್ರ್ಯ ಸಂಗ್ರಾಮ ಸದ್ದು ಮಾಡಿತ್ತು.

ಕಡಲ ಕಿನಾರೆಯಲ್ಲಿ ತಯಾರಿಸಿ ಉಪ್ಪು ಮಾರಾಟ
ಮಲ್ಪೆ ವಡಭಾಂಡೇಶ್ವರ ಕಡಲ ಕಿನಾರೆಯ ತನಕ ಮೆರವಣಿಗೆ ಮುಯಲಕ ಹೊರಟಿದ್ದರು. ಅವರಿಗೆ ದಾರಿಯುದ್ದಕ್ಕೂ ಜನ ಸೇರಿ ಅಭೂತಪೂರ್ವ ಬೆಂಬಲ ಸಿಕ್ಕಿತ್ತು. ವಡಭಾಂಡೇಶ್ವರದ ಬಲರಾಮ ದೇವಾಲಯದ ಮುಂದೆ ಸಾಂಕೇತಿಕ ಸಭೆ ನಡೆಸಿ ನಡೆಸಿ ಕಾಂತ್ರಿಕಾರಿ ಜನರೆಲ್ಲರೂ ಪ್ರತ್ಯೇಕ ಗುಂಪು ಗುಂಪಾಗಿ ಸಮುದ್ರದ ನೀರನ್ನು ಪಾತ್ರೆ, ಮಡಿಕೆಗಳಲ್ಲಿ ತಂದರು. ಕಡಲ ಕಿನಾರೆಯ ಹತ್ತಿರ ಇದ್ದ ತೋಟಗಳಲ್ಲಿ ಒಲೆ ಹೂಡಿ ಉಪ್ಪನ್ನು ತಯಾರಿಸಿದ್ದರು. ತಾವು ಸಿದ್ದ ಪಡಿಸಿದ ಉಪ್ಪನ್ನು ಮೆರವಣಿಗೆಯ ಮೂಲಕ ಉಡುಪಿಯ ತನಕವೂ ಮಾರುತ್ತಲೇ ಬಂದರು. ಎರಡು ಗ್ರಾಮ್ ಉಪ್ಪನ್ನು ಎರಡು ಆಣೆಗೆ ಮಾರಾಟ ಮಾರಿದ್ದರು ಎಂಬುದು ಇತಿಹಾಸದ ಪುಟಗಳು ಸಾರುತ್ತವೆ. ಆಡಳಿತ ವಿರೋಧಿ ಮನೋಭಾವನೆಯಿಂದಾಗಿ ದುಬಾರಿ ಬೆಲೆ ಕೊಟ್ಟು ಜನರು ಉಪ್ಪನ್ನು ಖರೀದಿಸಿದ್ದು ಮತ್ತು ಆಗ ಆಂದೋಲನದ ಭಾವನಾತ್ಮಕ ಬೆಲೆ ಉಪ್ಪಿಗೆ ಬಂದಿತ್ತು !

ಆಂಕೋಲಾದಲ್ಲಿ ಗಾಂಧಿ ಭಾಷಣ
ಅಂಕೋಲೆಯ ಆನಂದಿಬಾಯಿ ದತ್ತು ನಾರ್ವೇಕರ ಅವರ ಮನೆಯಿಂದ ಆರಂಭವಾದ ಮೆರವಣಿಗೆ ಕಡಲ ತೀರ ತಲುಪಿತ್ತು. ಈ ಹೋರಾಟದ ಕಿಚ್ಚಿಗೆ ಬ್ರಿಟಿಷ್ ಪೊಲೀಸ್ ರು ಕಕ್ಕಾ ಬಿಕ್ಕಿ ಆಗಿದ್ದರು. ಈ ಹೋರಾಟದ ನಾಯಕತ್ವ ವಹಿಸಬೇಕಾಗಿದ್ದ ನಾ.ಸು. ಹರ್ಡೀಕರ ಅವರಿಗೆ ಅಂಕೋಲೆ ತಲುಪಲು ಸಾಧ್ಯವಾಗಲಿಲ್ಲ. ಆಗ ಹೊನ್ನಾವರದ ಎಂ.ಪಿ. ನಾಡಕರ್ಣಿ ಅವರು ಮೆರವಣಿಗೆಯ ನೇತೃತ್ವ ವಹಿಸಿದ್ದರು. ನಂತರ ಗಾಂಧಿ ಮೈದಾನದಲ್ಲಿ ಸಾರ್ವಜನಿಕ ಸಭೆನಡೆಸಿದ್ದರು. ಸಭೆಯನ್ನು ಉದ್ದೇಶಿಸಿ ಸ್ವಾಮಿ ವಿದ್ಯಾನಂದರು ಮಾತನಾಡಿದ್ದರು. ತಮ್ಮ ಮೊನಚಾದ ಮಾತಿನ ಮೂಲಕ ಬ್ರಿಟಿಷರು ಭಾರತೀಯರ ಮೇಲೆ ಮಾಡುತ್ತಿರುವ ಅನ್ಯಾಯವನ್ನು ಪರಿ ಪರಿಯಾಗಿ ವಿವರಿಸಿದ್ದರು. ಬ್ರಿಟಿಷ್ ಕಾನೂನುಗಳನ್ನು ಶಾಂತಿಯಿಂದಲೇ ಉಲ್ಲಂಘಿಸಿ ಸ್ವರಾಜ್ಯವನ್ನು ಸ್ಥಾಪಿಸಬೇಕು ಎಂದು ಗುಡುಗಿದ್ದರು. ಈ ತರಹದ ಭಾಷಣದ ಪರಿಣಾಮ ಹಳ್ಳಿ ಹಳ್ಳಿಗಳಿಗೆ ಉಪ್ಪಿನ ಸತ್ಯಾಗ್ರಹ ಆವರಿಸಿಕೊಂಡಿತ್ತು. ಆಂಕೋಲದ ಹಳ್ಳಿಗಳಲ್ಲಿ ಉಪ್ಪು ತಯಾರಿಸಿ ಅಸಹಕಾರ ವ್ಯಕ್ತಪಡಿಸಿದ್ದರು. ಪೊಲೀಸರ ಲಾಟಿ ಏಟು ಬಂಧನವನ್ನು ಮೀರಿ ಉಪ್ಪಿನ ಸತ್ಯಾಗ್ರಹ ಯಶಸ್ವಿಯಾಯಿತು. ಆಂಕೋಲೆಯಲ್ಲಿ ನಡೆದ ಉಪ್ಪಿನ ಸತ್ಯಾಗ್ರಹ ಸ್ವಾತಂತ್ರ್ಯ ಸಂಗ್ರಾಮ ಹೋರಾಟದ ಪುಟಗಳಲ್ಲಿ ಅಚ್ಚಳಿಯದೇ ಉಳಿಯಿತು !












Click it and Unblock the Notifications