ಕೊರೊನಾವೈರಸ್ ಲಸಿಕೆಗಾಗಿ 15-18 ವರ್ಷದ ಮಕ್ಕಳು ಹೆಸರು ನೋಂದಾಯಿಸುವುದು ಹೇಗೆ?
ನವದೆಹಲಿ, ಡಿಸೆಂಬರ್ 27: ಭಾರತದಲ್ಲಿ 15 ವರ್ಷ ಮೇಲ್ಪಟ್ಟ 18 ವರ್ಷದೊಳಗಿನ ಮಕ್ಕಳು ಕೊರೊನಾವೈರಸ್ ಲಸಿಕೆಗಾಗಿ ಕೊವಿನ್ ಅಪ್ಲಿಕೇಷನ್ ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಜನವರಿ 1ರಿಂದ ವಿದ್ಯಾರ್ಥಿಗಳು ತಮ್ಮ ಶಾಲಾ ಗುರುತಿನ ಚೀಟಿಯನ್ನು ಬಳಸಿಕೊಂಡು ಲಸಿಕೆಗಾಗಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಹೇಳಿದೆ.
"ಕೊವಿನ್ ಅಪ್ಲಿಕೇಷನ್ ನಲ್ಲಿ ಮಕ್ಕಳಿಗೆ ಕೊವಿಡ್-19 ಲಸಿಕೆ ವಿತರಿಸುವ ಉದ್ದೇಶದಿಂದ ಪ್ರತ್ಯೇಕ ವಿಭಾಗವನ್ನು ರಚಿಸಲಾಗಿದೆ. ಈ ವಿಭಾಗದಲ್ಲಿ ವಿದ್ಯಾರ್ಥಿಗಳು ತಮ್ಮ ಶಾಲಾ ಗುರುತಿನ ಚೀಟಿಯನ್ನು ಬಳಸಿಕೊಂಡು ಲಸಿಕೆಗಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು," ಎಂದು ಕೊವಿನ್ ಅಪ್ಲಿಕೇಷನ್ ಮುಖ್ಯಸ್ಥ ಆರ್ ಎಸ್ ಶರ್ಮಾ ತಿಳಿಸಿದ್ದಾರೆ. ಕೆಲವು ವಿದ್ಯಾರ್ಥಿಗಳು ಆಧಾರ್ ಕಾರ್ಡ್ ಅನ್ನು ಹೊಂದಿರುವುದಿಲ್ಲ, ಇನ್ನು ಕೆಲವು ಐಡಿ ಕಾರ್ಡ್ ಅನ್ನು ಹೊಂದಿರುವುದಿಲ್ಲ ಎಂದು ತಿಳಿಸಿದ್ದಾರೆ.
ಓಮಿಕ್ರಾನ್ ಸೋಂಕು ಪುಟ್ಟ ಮಕ್ಕಳಲ್ಲಿ ಹೆಚ್ಚಿನ ಅಪಾಯವನ್ನು ಹುಟ್ಟು ಹಾಕುತ್ತದೆ ಎಂಬ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಜನವರಿ 3ರಿಂದ 15 ರಿಂದ 18 ವರ್ಷದ ಮಕ್ಕಳಿಗೆ ಶಾಲೆಗಳಲ್ಲೇ ಕೊವಿಡ್-19 ಲಸಿಕೆಯನ್ನು ನೀಡಲಾಗುವುದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಡಿಸೆಂಬರ್ 25ರಂದು ಘೋಷಿಸಿದ್ದಾರೆ.

ವಿದ್ಯಾರ್ಥಿಗಳ ಹೆಸರು ನೋಂದಣಿಗೂ ವಯಸ್ಕರ ಮಾದರಿ
ಕೊರೊನಾವೈರಸ್ ಲಸಿಕೆಗಾಗಿ COWIN ಅಪ್ಲಿಕೇಶನ್‌ನಲ್ಲಿ ಮಕ್ಕಳ ಹೆಸರು ನೋಂದಣಿ ವೇದಿಕೆಯು ವಯಸ್ಕರ ನೋಂದಣಿ ಮಾದರಿಯನ್ನೇ ಹೋಲುತ್ತದೆ. 15-18 ವರ್ಷದೊಳಗಿನ ಮಕ್ಕಳು CoWIN ಆ್ಯಪ್‌ನಲ್ಲಿ ಅಪಾಯಿಂಟ್‌ಮೆಂಟ್ ಕಾಯ್ದಿರಿಸಲು ಅಥವಾ ಯಾವುದೇ ಲಸಿಕೆ ಕೇಂದ್ರಕ್ಕೆ ತೆರಳುವ ಸಂದರ್ಭದಲ್ಲಿ ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಹೋಗಬೇಕು. ಪೂರಕ ದಾಖಲೆಗಳನ್ನು ಒದಗಿಸಿದ ನಂತರವಷ್ಟೇ ಲಸಿಕೆ ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಕೊವಿಡ್-19 ಲಸಿಕೆ ಪಡೆಯಲು ಯಾರು ಅರ್ಹರು?
ವಾರಾಂತ್ಯದಲ್ಲಿ, 15-18 ವರ್ಷದೊಳಗಿನ ಮಕ್ಕಳು ಸಹ ಲಸಿಕೆ ಹಾಕಿಸಿಕೊಳ್ಳಲು ಸಾಧ್ಯವಾಗುತ್ತದೆ. ಪ್ರಪಂಚದಾದ್ಯಂತ ಹೆಚ್ಚುತ್ತಿರುವ ಓಮಿಕ್ರಾನ್ ಸೋಂಕಿತ ಪ್ರಕರಣಗಳ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆ ಪ್ರಕಾರ, 2007ಕ್ಕಿಂತ ಮೊದಲು ಜನಿಸಿದ ಎಲ್ಲರಿಗೂ ಜನವರಿ 1 ರಿಂದ ಕೊರೊನಾವೈರಸ್ ಲಸಿಕೆಯನ್ನು ಪಡೆಯಲು ಸಾಧ್ಯವಾಗುತ್ತದೆ.

ಮುನ್ನೆಚ್ಚರಿಕೆ ಡೋಸ್ ಪಡೆಯಲು ನೋಂದಣಿ ಹೇಗೆ?
CoWIN ಅಪ್ಲಿಕೇಷನ್ ಮೂಲಕ ಬೂಸ್ಟರ್ ಡೋಸ್‌ಗಾಗಿ 60 ವರ್ಷಕ್ಕಿಂತ ಮೇಲ್ಪಟ್ಟ ಜನರು ಹೇಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವುದು ಎಂಬ ಪ್ರಶ್ನೆಗೂ ಆರ್.ಎಸ್ ಶರ್ಮಾ ಉತ್ತರಿಸಿದ್ದಾರೆ. "COVID-19 ಬೂಸ್ಟರ್ ಡೋಸ್‌ಗೆ 60 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರನ್ನು ಹೆಸರು ನೋಂದಾಯಿಸುವ ಪ್ರಕ್ರಿಯೆಯು ಒಂದೇ ರೀತಿಯಾಗಿರುತ್ತದೆ. ನೀವು 60 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ ಮತ್ತು ಎರಡೂ ಡೋಸ್‌ಗಳನ್ನು ತೆಗೆದುಕೊಂಡಿದ್ದರೆ ಅಥವಾ ಎರಡನೇ ಡೋಸ್ ಪಡೆದು 9 ತಿಂಗಳು (39 ವಾರಗಳು) ಕಳೆದಿದ್ದರೆ ನೀವು ಮುನ್ನೆಚ್ಚರಿಕೆ ಡೋಸ್ ಪಡೆದುಕೊಳ್ಳಲಲು ಅರ್ಹರಾಗಿರುತ್ತೀರಿ," ಎಂದು ಶರ್ಮಾ ಹೇಳಿದ್ದಾರೆ.

ದೇಶದಲ್ಲಿ ಮಕ್ಕಳಿಗೆ ನೀಡುವ ಕೊವಿಡ್-19 ಲಸಿಕೆ ಯಾವುದು?
ಹೈದ್ರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆಯು ಉತ್ಪಾದಿಸುತ್ತಿರುವ ಕೊವ್ಯಾಕ್ಸಿನ್ ಲಸಿಕೆಯ ಎರಡು ಡೋಸ್ ಹಾಗೂ ಜೈಡಸ್ ಕ್ಯಾಡಿಲಾದ ZyCoV-D ಲಸಿಕೆಗಳನ್ನು 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ನೀಡಲು ಡಿಸಿಜಿಐ ಅನುಮೋದನೆ ನೀಡಿದೆ.
ಇದರ ಮಧ್ಯೆ ಪುಣೆಯ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದ ನೊವಾವ್ಯಾಕ್ಸ್ ಲಸಿಕೆಯನ್ನು 7 ಮತ್ತು 11 ವರ್ಷದೊಳಗಿನ ಮಕ್ಕಳ ಮೇಲೆ ವೈದ್ಯಕೀಯ ಪ್ರಯೋಗಕ್ಕೆ ಅನುಮತಿ ಸಿಕ್ಕಿದೆ. ಅದೇ ರೀತಿ 12 ವರ್ಷ ಮೇಲ್ಪಟ್ಟವರ ಮೇಲೆ ಬಯೋಲಾಜಿಕಲ್-ಇ ಸಂಸ್ಥೆಯ ಕೊರ್ಬಾವ್ಯಾಕ್ಸ್ ಲಸಿಕೆಯ ಪ್ರಯೋಗಕ್ಕೆ ಅನುಮತಿಸಲಾಗಿದೆ. ಆದರೆ ನೊವಾವ್ಯಾಕ್ಸ್ ಮತ್ತು ಕೊರ್ಬಾವ್ಯಾಕ್ಸ್ ಲಸಿಕೆಯನ್ನು ಮಕ್ಕಳಿಗೆ ನೀಡಲು ಅನುಮೋದನೆ ಸಿಕ್ಕಿಲ್ಲ.

141.70 ಕೋಟಿ ಡೋಸ್ ಲಸಿಕೆ ವಿತರಣೆ
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ನಿಯಂತ್ರಿಸುವ ಉದ್ದೇಶದಿಂದ ದೇಶದ 94 ಕೋಟಿ ಅರ್ಹ ಫಲಾನುಭವಿಗಳಿಗೆ ಡಿಸೆಂಬರ್ 31ರೊಳಗೆ ಲಸಿಕೆ ವಿತರಿಸುವ ಉದ್ದೇಶವನ್ನು ಹೊಂದಲಾಗಿತ್ತು. ಅದರ ಭಾಗವಾಗಿ ಒಟ್ಟು 1,48,37,98,635 ಡೋಸ್ ಲಸಿಕೆಯನ್ನು ಸರಬರಾಜು ಮಾಡಲಾಗಿತ್ತು. ಈ ಪೈಕಿ ಡಿಸೆಂಬರ್ 26ರ ಸಂಜೆ 7 ಗಂಟೆ ಹೊತ್ತಿಗೆ ಒಟ್ಟು 1,41,70,25,654 ಡೋಸ್ ಕೊವಿಡ್-19 ಲಸಿಕೆ ವಿತರಿಸಲಾಗಿದೆ. 17,90,54,941 ಡೋಸ್ ಲಸಿಕೆಯು ಬಾಕಿ ಉಳಿದಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.












Click it and Unblock the Notifications