keyboard_backspace

ಉಡ್ತಾ 'ಪಂಜಾಬ್‌'ನಿಂದ ಉಡ್ತಾ 'ಬೆಂಗಳೂರ್' ತನಕ!

Google Oneindia Kannada News

ಬೆಂಗಳೂರು, ಸೆ. 02: ಡ್ರಗ್ಸ್ ಮಾಫಿಯಾ ಕುರಿತು ಕೆಲ ವರ್ಷಗಳ ಹಿಂದೆ 'ಉಡ್ತಾ ಪಂಜಾಬ್' ಎಂಬ ಸಿನಿಮಾ ಬಂದಿತ್ತು. ಪಂಜಾಬ್ ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ಯಾವ ಮಟ್ಟಕ್ಕೆ ಬೆಳೆದಿದೆ ಎಂಬುದನ್ನು ಎಳೆ-ಎಳೆಯಾಗಿ ಬಿಚ್ಚಿಟ್ಟಿದ್ದ ಸಿನಿಮಾ ಅದು. ಅದೇ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಡ್ರಗ್ಸ್ ಮಾಫಿಯಾದ ಕುರಿತು ರಾಜ್ಯ ಬಿಜೆಪಿ ನಾಯಕರು ವಿಧಾನಸಭೆಯಲ್ಲಿ ಹಂಗಾಮಾ ಮಾಡಿ ಹಾಕಿದ್ದರು. ಆಗ ಮಾಜಿ ಗೃಹ ಸಚಿವರಾಗಿದ್ದ ಆರ್. ಅಶೋಕ್ ಅವರಂತೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಬೆಂಗಳೂರು 'ಉಡ್ತಾ ಬೆಂಗಳೂರ್' ಆಗಿದೆ ಎಂದು ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರದ ಗೃಹ ಸಚಿವರ ನೀರಿಳಿಸಿದ್ದರು.

ಸದನದಲ್ಲಿ ಬಿಸಿಬಿಸಿ ಗಂಭೀರ ಚರ್ಚೆ ನಡೆದಿತ್ತು. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸುತ್ತಮುತ್ತ, ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಬೆಂಗಳೂರಿನ ಹಲವು ಏರಿಯಾಗಳಲ್ಲಿ 'ಪೆಡ್ಲರ್'ಗಳನ್ನು ಪತ್ತೆ ಹಚ್ಚುವ ಕೆಲಸ ಮಾಡುವುದಾಗಿ ಆಗ ಗೃಹಸಚಿವರಾಗಿದ್ದ ಡಾ. ಜಿ. ಪರಮೇಶ್ವರ್ ಅವರು ಸದನಕ್ಕೆ ಭರವಸೆ ಕೊಟ್ಟಿದ್ದರು. ಈಗ ಕಾಲ ಬದಲಾಗಿದೆ. ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದೆ. ಆದರೆ ಡ್ರಗ್ ಮಾಫಿಯಾ ಮಾತ್ರ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ತನ್ನ ಕರಾಳ ಹಸ್ತವನ್ನು ಚಾಚಿದೆ. ಈಗ ಆರೋಪ ಮಾಡುವ ಸರದಿ ಕಾಂಗ್ರೆಸ್ ಪಕ್ಷದ ನಾಯಕರದ್ದು.

ಇಂದ್ರಜಿತ್ ಲಂಕೇಶ್ ಕೊಟ್ಟಿದ್ದು ಮಾಹಿತಿಯಂತೆ, ಸಾಕ್ಷ್ಯ ಅಲ್ಲ!ಇಂದ್ರಜಿತ್ ಲಂಕೇಶ್ ಕೊಟ್ಟಿದ್ದು ಮಾಹಿತಿಯಂತೆ, ಸಾಕ್ಷ್ಯ ಅಲ್ಲ!

ಹಾಗೆ ನೋಡಿದರೆ ಈ ಡ್ರಗ್ಸ್ ಮಾಫಿಯಾ ಮಟ್ಟಹಾಕುವ ಮಾತು ಸರ್ಕಾರದಿಂದ ಕೇಳಿ ಬಂದಿರುವುದು ಇದೇ ಮೊದಲೂ ಅಲ್ಲ. ಹಿಂದೆಯೂ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕ್ರೈಮ್‌ರೇಟ್ ಹೆಚ್ಚಾದಾಗ ಈ ಬಗ್ಗೆ ಚರ್ಚೆ ನಡೆದಿದೆ. ವಿಪರ್ಯಾಸ ಅಂದರೆ ಡ್ರಗ್ಸ್ ಮಾಫಿಯಾ ಮಟ್ಟ ಹಾಕಲು ಸರ್ಕಾರವೇ ಸಮಿತಿ ರಚನೆ ಮಾಡಿತ್ತು. ಸಮಿತ ವರದಿ ಕೊಟ್ಟು ಸರಿ ಸುಮಾರು 8 ವರ್ಷಗಳಾಗುತ್ತ ಬಂದಿದೆ. ಆದರೆ ಸರ್ಕಾರಗಳಿಗೆ ಡ್ರಗ್ಸ್ ಮಾಫಿಯಾ ಮಟ್ಟ ಹಾಕುವುದು ಒತ್ತಟ್ಟಿಗಿರಲಿ ಅದನ್ನು ಕಂಟ್ರೋಲ್ ಮಾಡುವುದು ಕೂಡ ಕಷ್ಟವಾಗಿದೆ. ಹೀಗಾಗಿಯೇ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಕನ್ನಡ ಚಿತ್ರರಂಗದಲ್ಲಿ ಡ್ರಗ್ಸ್ ಮಾಫಿಯಾದ ಕರಾಳ ಮುಖವನ್ನು ಬಿಚ್ಚಿಡುವ ಮೂಲಕ ಮತ್ತೊಮ್ಮೆ ಚರ್ಚೆಗೆ ನಾಂದಿ ಹಾಡಿದ್ದಾರೆ.

ಕರ್ನಾಟಕದಲ್ಲಿ ಡ್ರಗ್ಸ್ ಮಾಫಿಯಾ

ಕರ್ನಾಟಕದಲ್ಲಿ ಡ್ರಗ್ಸ್ ಮಾಫಿಯಾ

ನಿರ್ದೇಶಕ ಇಂದ್ರಜಿತ್ ಲಂಕೇಶ್ ಮಾತಿನಿಂದ ಅರಂಭವಾದ ಚರ್ಚೆ ಇದೀಗ ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆ. ಡ್ರಗ್ ಮಾಫಿಯಾ ಮಟ್ಟ ಹಾಕಲು ರಾಜ್ಯದಲ್ಲಿ ಇದೇ ಮೊದಲ ಸಲ ಚರ್ಚೆ ನಡೆದಿದೆ ಎಂದು ಕೊಂಡರೆ ಅದು ತಪ್ಪು. ಇದಕ್ಕೂ ಮೊದಲು ಹಲವು ಬಾರಿ ಡ್ರಗ್ಸ್ ಮಾಫಿಯಾ ಮಟ್ಟ ಹಾಕಲು ಚರ್ಚೆ ನಡೆದಿದೆ.

ಡ್ರಗ್ಸ್ ಚಟಕ್ಕೆ ಪ್ರಭಾವಿಗಳ ಮಕ್ಕಳೂ ಬಲಿಯಾಗಿದ್ದಾರೆ. ಹೀಗಾಗಿ ಡ್ರಗ್ಸ್ ಮಾಫಿಯಾ ಮಟ್ಟಹಾಕುವ ಕುರಿತು ಆಗಾಗ ವಿಧಾನ ಮಂಡಳ ಅಧಿವೇಶನದಲ್ಲೂ ಗಂಭೀರ ಚರ್ಚೆಗಳು ನಡೆದಿವೆ. ಮಾಫಿಯಾ ಮಟ್ಟ ಹಾಕಲು ಏನು ಮಾಡಬೇಕು ಎಂದು ಸರ್ಕಾರಕ್ಕೆ ವರದಿಯೂ ಸಲ್ಲಿಕೆಯಾಗಿತ್ತು. ಇದೀಗ ಆ ವರದಿಗೆ ಮತ್ತೆ ಮನ್ನಣೆ ಸಿಗುವ ಸಾಧ್ಯತೆಗಳಿವೆ. ಆದರೆ ಈಗಾಗಲೇ ಎರದು ಬಾರಿ ಆ ವರದಿಯ ಮೇಲೆ ಗಂಭೀರ ಚರ್ಚೆ ನಡೆದಿದ್ದರೂ ಅಂತಿಮವಾಗಿ ಕಟ್ಟುನಿಟ್ಟಿನ ಕ್ರಮ ಮಾತ್ರ ಆಗಿಲ್ಲ. ಹೀಗಾಗಿ ಡ್ರಗ್ಸ್ ಮಾಫಿಯಾ ಯಾರ ಅಂಕೆಗೂ ಸಿಗದೇ ಬೆಳೆಯುತ್ತಿದೆ. ಅಷ್ಟಕ್ಕೂ ಆ ಬಗ್ಗೆ ಸರ್ಕಾರಕ್ಕೆ ವರದಿ ಕೊಟ್ಟಿದ್ದು ಯಾರು? ವರದಿಯಲ್ಲಿ ಏನಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ.

ಎನ್. ಯೋಗೀಶ್ ಭಟ್ ವರದಿ

ಎನ್. ಯೋಗೀಶ್ ಭಟ್ ವರದಿ

ರಾಜ್ಯದಲ್ಲಿ ಮಿತಿಮೀರುತ್ತಿದ್ದ ಡ್ರಗ್ಸ್ ಮಾಫಿಯಾದ ಹಾವಳಿ ಮಟ್ಟ ಹಾಕಲು 2012ರಲ್ಲಿಯೇ ಸರ್ಕಾರ ಪ್ರಯತ್ನ ನಡೆಸಿತ್ತು. ಈ ಬಗ್ಗೆ ಆಗ ವಿಧಾನಸಭಾ ಉಪಾಧ್ಯಕ್ಷರಾಗಿದ್ದ ಎನ್. ಯೋಗೀಶ್ ಭಟ್ ಅವರು ಸಮಗ್ರ ವರದಿ ಕೊಟ್ಟಿದ್ದರು. ಜೊತೆಗೆ ಹಲವು ಶಿಫಾರಸ್ಸುಗಳನ್ನು ಮಾಡಿದ್ದರು. ಇದೀಗ ಸಮಿತಿ ವರದಿಯತ್ತ ಮತ್ತೆ ರಾಜ್ಯ ಬಿಜೆಪಿ ಸರ್ಕಾರ ಗಮನ ಹರಿಸಿದೆ ಎನ್ನಲಾಗಿದೆ.

ಭಾರತದಲ್ಲಿ ಗಾಂಜಾ ಗಮ್ಮತ್ತು: ಅಳತೆ ಮೀರುತ್ತಿದೆ ಯುವಸಮೂಹಭಾರತದಲ್ಲಿ ಗಾಂಜಾ ಗಮ್ಮತ್ತು: ಅಳತೆ ಮೀರುತ್ತಿದೆ ಯುವಸಮೂಹ

ಆಗ ವಿಧಾನಸಭೆ ಡೆಪ್ಯೂಟಿ ಸ್ಪೀಕರ್ ಆಗಿದ್ದ ಎನ್. ಯೋಗೀಶ್ ಭಟ್ ಅವರು 2012ರ ಡಿಸೆಂಬರ್ 10 ರಂದು ವರದಿ ಮಂಡಿಸಿದ್ದರು. ನಿರಂತರ 8 ತಿಂಗಳುಗಳ ಅಧ್ಯಯನದ ಬಳಿಕ, ಯೋಗೀಶ್ ಭಟ್ ಅವರ ನೇತೃತ್ವದ ಅರ್ಜಿಗಳ ಸಮಿತಿ ಸಮಗ್ರವಾದ ವರದಿ ಕೊಟ್ಟಿತ್ತು. ನಂತರ ಆ ವರದಿಯನ್ನು ಮೂಲೆಗೆ ಎಸೆಯಲಾಗಿತ್ತು. ಡ್ರಗ್ ಮಾಫಿಯಾ ವಿರುದ್ಧ ಕಠಿಣ ಕ್ರಮ ಜರುಗಿಸುವ ಬಗ್ಗೆ ಭಟ್ ವರದಿಯಲ್ಲಿ ಹಲವು ಪ್ರಮುಖ ಶಿಫಾರಸ್ಸುಗಳನ್ನು ಮಾಡಿದ್ದರು.

ಪ್ರಮುಖ ಶಿಫಾರಸುಗಳು

ಪ್ರಮುಖ ಶಿಫಾರಸುಗಳು

ಡ್ರಗ್ಸ್ ಮಾಫಿಯಾ ನಿಯಂತ್ರಣದ ಬಗ್ಗೆ ಎನ್. ಯೋಗೀಶ್ ಭಟ್ ನೇತೃತ್ವದ ವಿಧಾನಸಭೆ ಅರ್ಜಿಗಳ ಸಮಿತಿ ಹಲವು ಶಿಫಾರಸುಗಳನ್ನು ಮಾಡಿತ್ತು. ಪ್ರಮುಖವಾಗಿ ಡ್ರಗ್ ಮಾಫಿಯಾ ಬಗ್ಗೆ ಪ್ರಕರಣದ ಸುತ್ತ ಮಾತ್ರ ತನಿಖೆಯನ್ನು ಮಾಡಬಾರದು. ಸಮಗ್ರ ತನಿಖೆಯನ್ನು ಮಾಡಬೇಕು ಎಂದು ಸೂಚಿಸಿದ್ದರು. ಮಾಫಿಯಾ ಕಂಟ್ರೋಲ್ ಮಾಡಲು ಕಠಿಣ ಕಾನೂನು ರೂಪಿಸಬೇಕು. ಈ ಹಿಂದೆ ತಪ್ಪಿತಸ್ಥರಿಗೆ ಶಿಕ್ಷೆ ಆಗಿರುವ ಪ್ರಕರಣಗಳು ಗಮನಾರ್ಹವಾಗಿಲ್ಲ. ಹೀಗಾಗಿ ತ್ವರಿತ ನ್ಯಾಯಾಲಯ ಸ್ಥಾಪನೆ ಮಾಡಿ, ತಪ್ಪಿತಸ್ಥರ ವಿರುದ್ಧದ ಪ್ರಕರಣಗಳು ತಕ್ಷಣ ವಿಚಾರಣೆಯಾಗುವಂತೆ ಮಾಡಬೇಕು.

ವ್ಯಕ್ತಿಗಳು ಮಾದಕ ವಸ್ತು ಹೊಂದುವ ಪ್ರಮಾಣವನ್ನು 250 ಗ್ರಾಂ ನಿಂದ 10 ಗ್ರಾಂಗಳಿಗೆ ಇಳಿಕೆ ಮಾಡಬೇಕು ಎಂಬ ಪ್ರಮುಖ ಶಿಫಾರಸ್ಸನ್ನು ಮಾಡಿದ್ದರು. ಜಪ್ತಿ ಮಾಡಲಾದ ಮಾದಕ ವಸ್ತು 250 ಗ್ರಾಂಗಿಂತ ಹೆಚ್ಚಿದ್ದರೆ ಮಾತ್ರ ಶಿಕ್ಷೆಗೆ ಪ್ರಕರಣ ಸೂಕ್ತ ಎನ್ನುವುದು ತಪ್ಪು ಎಂದು ಹೇಳಿದ್ದರು. ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಸಮರ್ಪಕ ವಿದ್ಯಾರ್ಹತೆ ಹೊಂದಿದವರನ್ನು ನೇಮಕ ಮಾಡಬೇಕು ಎಂದು ವರದಿಯಲ್ಲಿ ಹೇಳಿದ್ದರು.

ಡ್ರಗ್ ಮಾಫಿಯಾ ಮಟ್ಟ ಹಾಕಲು ದಕ್ಷ ಮತ್ತು ಸಮರ್ಥ ಅಧಿಕಾರಿಗಳನ್ನು ನೇಮಕ ಮಾಡಬೇಕು. ನ್ಯಾಯಾಲಯಗಳಲ್ಲಿ ಡ್ರಗ್ ಪ್ರಕರಣಗಳು ಸಮರ್ಪಕ ವಾದವಿಲ್ಲದೇ ಬಿದ್ದು ಹೋಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಜೊತೆಗೆ ಮಾದಕ ವ್ಯಸನಿಗಳ ಸಾಂದ್ರತೆ ಗಮನಿಸಿ ಪುನರ್ವಸತಿಗಾಗಿ ಸೂಕ್ತ ನೀತಿ ರೂಪಿಸಬೇಕು. ಅಷ್ಟೇ ಅಲ್ಲ

ಮಾದಕವಸ್ತು ವ್ಯಸನಿಗಳಿಗೆ ಸೂಕ್ತ ಚಿಕಿತ್ಸೆ ಸಿಗುವಂತೆ ಸರ್ಕಾರ ಕ್ರಮವಹಿಸಬೇಕು ಎಂದು ಸೂಚಿಸಿದ್ದರು. ಆದರೆ ವಿಧಾನಸಭೆಯಲ್ಲಿ ಮಂಡನೆಯಾಗಿದ್ದ ವರದಿಯ ಅನುಷ್ಠಾಕ್ಕೆ ಸರ್ಕಾರ ಮುಂದಾಗಿರಲಿಲ್ಲ.

ಅಧಿವೇಶನದಲ್ಲಿ ಚರ್ಚೆ

ಅಧಿವೇಶನದಲ್ಲಿ ಚರ್ಚೆ

ಬಿಜೆಪಿ ಸರ್ಕಾರದ ಬಳಿಕ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೂ ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ಕರಾಳ ದಂಧೆಯ ಚರ್ಚೆ ಆಗಿತ್ತು. ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದಾಗ ಉಭಯ ಸದನಗಳಲ್ಲಿ ಎರಡು ದಿನಗಳ ಕಾಲ ಡ್ರಗ್ಸ್ ದಂಧೆ ಬಗ್ಗೆ ಗಂಭೀರ ಚರ್ಚೆ ಆಗಿತ್ತು. ವಿಧಾನ ಪರಿಷತ್ ಮತ್ತು ವಿಧಾನಸಭೆ‌ ಎರಡರಲ್ಲೂ ಸದಸ್ಯರು ಚರ್ಚೆ ನಡೆಸಿದ್ದರು.

ಚರ್ಚೆಯ ಬಳಿಕ ಆಗ ಗೃಹಸಚಿವರಾಗಿದ್ದ ಡಾ. ಜಿ‌. ಪರಮೇಶ್ವರ್ ಅವರು ಡ್ರಗ್ಸ್ ಮಾಫಿಯಾ ಮಟ್ಟ ಹಾಕಲಾಗುವುದು ಎಂದು ಭರವಸೆ ಕೊಟ್ಟಿದ್ದರು. ಡ್ರಗ್ಸ್ ದಂಧೆ ಹೆಚ್ಚಾಗಿ ನಡೆಯುವ ಆರೋಪಗಳಿರುವ ಪ್ರದೇಶಗಳಿಗೆ ಖುದ್ದಾಗಿ ಹೋಗಿ ಪರಿಶೀಲಿಸುವುದಾಗಿ ವಿಧಾನ ಪರಿಷತ್‌ನಲ್ಲಿ ಡಾ. ಜಿ. ಪರಮೇಶ್ವರ್ ಅವರು ಭರವಸೆ ಕೊಟ್ಟಿದ್ದರು. ಜೊತೆಗೆ ವಿಧಾನಸಭೆಯಲ್ಲಿ ಉತ್ತರ ಕೊಟ್ಟಿದ್ದ ಅವರು ಕೇಂದ್ರ ಗೃಹಸಚಿವಾಲಯಕ್ಕೆ ಪತ್ರ ಬರೆದು ಮಾಫಿಯಾ ತಡೆಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು. ಅದೇ ಸಂದರ್ಭದಲ್ಲಿ ಡ್ರಗ್ಸ್ ದಂಧೆ ಕುರಿತು ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ಅಂದಿನ ವಿಧಾನ ಪರಿಷತ್ ಸಭಾಪತಿ ಡಿ.ಎಚ್‌. ಶಂಕರಮೂರ್ತಿ ಅವರು ಸೂಚಿಸಿದ್ದರು.

ವಿಧಾನಸಭೆಯಲ್ಲಿ ಚರ್ಚೆ ವೇಳೆ ಕಠಿಣ ಕ್ರಮಕ್ಕೆ ಆಗ ವಿರೋಧ ಪಕ್ಷದಲ್ಲಿದ್ದ ಆರ್. ಅಶೋಕ್ ಮತ್ತು ಸಿ.ಟಿ. ರವಿ ಆಗ್ರಹಿಸಿದ್ದರು. ಅಶೋಕ್ ಅವರಂತೂ ಬೆಂಗಳೂರು ಉಡ್ತಾ ಬೆಂಗಳೂರು ಆಗಿದೆ ಎಂದು ಗೃಹಸಚಿವ ಡಾ. ಜಿ. ಪರಮೇಶ್ವರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಈಗ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ವಿಶೇಷ ಕಾನೂನು ತರಲು ಒತ್ತಾಯಿಸಿದ್ದ ಸಿ.ಟಿ. ರವಿ ಹಾಗೂ ಆರ್. ಅಶೋಕ್ ಅವರು ಈಗ ಸಚಿವರಾಗಿದ್ದಾರೆ. ಆದರೆ ಹಿಂದೆ ಆಡಿದ ಮಾತನ್ನೇ ಮರೆತಂತಿದೆ.

ಹಿಂದೆಯೆ ಎಚ್ಚರಿಸಿದ್ದೆ

ಹಿಂದೆಯೆ ಎಚ್ಚರಿಸಿದ್ದೆ

ಕಳೆದ 8 ವರ್ಷಗಳ ಹಿಂದೆಯೆ ಡ್ರಗ್ಸ್ ಕರಾಳತೆಯ ಬಗ್ಗೆ ಸರ್ಕಾರಕ್ಕೆ ವರದಿಯ ಮೂಲಕ ಎಚ್ಚರಿಸಿದ್ದೆ ಎಂದು ವಿಧಾನಸಭೆ ಮಾಜಿ ಉಪ ಸಭಾಧ್ಯಕ್ಷ ಎನ್. ಯೋಗೀಶ್ ಭಟ್ ಅವರು ಮಂಗಳೂರಿನಲ್ಲಿ ಹೇಳಿಕೆ ಕೊಟ್ಟಿದ್ದಾರೆ. ಸಾಮಾಜಿಕ ಸ್ವಾಸ್ಥ್ಯಕ್ಕೆ ಮಾದಕವಸ್ತು ಮಾರಕವಾಗುತ್ತಿದೆ ಎಂದು ಮೊದಲೇ ಮನಗಂಡಿದ್ದೆ. ಹೀಗಾಗಿ ಡ್ರಗ್ಸ್ ವಿಚಾರವನ್ನು ಸ್ವಯಂ ಕೈಗೆತ್ತಿಕೊಂಡು, ಸಮಾಜದ ವಿವಿಧ ಸ್ತರಗಳ ತಜ್ಞರೊಂದಿಗೆ ಸಮಾಲೋಚಿಸಿದ ಬಳಿಕ ವಿವರವಾದ ವರದಿ ಸಿದ್ಧಪಡಿಸಿ ವಿಧಾನಸಭೆಗೆ ಮಂಡಿಸಿದೆ. ಸುಮಾರು 17 ಅಂಶಗಳನ್ನು ವರದಿಯಲ್ಲಿ ಉಲ್ಲೇಖಿಸಿದ್ದೆ. ವರದಿಯ ಆಧಾರದಲ್ಲಿ ಆರಂಭದಲ್ಲಿ ಸರಕಾರದ ಮಟ್ಟದಲ್ಲಿ ಕೆಲವು ಕ್ರಮಗಳನ್ನು ತೆಗೆದುಕೊಳ್ಳಲಾಯಿತು. ಅನಂತರದಲ್ಲಿ ಇದರ ಬಗ್ಗೆ ಗಮನ ಕಡಿಮೆಯಾಯಿತು ಎಂದರು.

ಕಾನೂನು ಇಲ್ಲವಾ?

ಕಾನೂನು ಇಲ್ಲವಾ?

ಹಾಗಾದರೆ ಡ್ರಗ್ಸ್ ನಿಯಂತ್ರಣಕ್ಕೆ ದೇಶದಲ್ಲಿ ಕಾನೂನು ಇಲ್ಲವಾ? ಖಂಡಿತವಾಗಿಯೂ ಕಾನೂನು ಇದೆ. ಮಾದಕವಸ್ತುಗಳ ನಿಯಂತ್ರಣಕ್ಕೆ ಕಾನೂನುಗಳನ್ನು ರೂಪಿಸಲಾಗಿದೆ. ಅವಯಗಳಲ್ಲಿ 1985ರ ನಾರ್ಕೋಟಿಕ್ ಡ್ರಗ್ಸ್ ಆ್ಯಂಡ್‌ ಸೈಕೋಟ್ರೋಫಿಕ್‌ ವಸ್ತು ಕಾಯ್ದೆ ಮತ್ತು ಮಾದಕ ದ್ರವ್ಯ ಅಕ್ರಮ ಸಾಗಣೆ ನಿಯಂತ್ರಣ ಕಾಯ್ದೆಗಳು ಪ್ರಮುಖವಾದವುಗಳು.

ಮುಂದೆ ಇವೆ ಕಾಯ್ದೆಗಳಿಗೆ 1986, 1988, 2001 ಮತ್ತು 2014ರಲ್ಲಿ ತಿದ್ದುಪಡಿ ತರಲಾಗಿದೆ. 2014ರ ತಿದ್ದುಪಡಿಯಲ್ಲಿ ಔಷಧ ಉಪಯೋಗಕ್ಕಾಗಿ ಬಳಕೆಯಾಗುವ ಮಾದಕ ವಸ್ತುಗಳಿಗೆ ರಿಯಾಯತಿಯನ್ನು ಕೊಡಲಾಗಿದೆ. ಅಗತ್ಯ ಮಾದಕ(ಇಎನ್‌ಡಿ)ವಸ್ತುಗಳನ್ನು ಗುರುತಿಸಲಾಗಿದೆ. ಇವುಗಳ ಹೊರತಾಗಿಯೂ ನಿಷೇಧಿತ ಮಾದಕವಸ್ತುಗಳನ್ನು ಸರಕಾರ ತಿಳಿಸಿದೆ. ಅಂತಹ ಮಾದಕ ವಸ್ತುಗಳನ್ನು ಹೊಂದುವುದು ಕಾನೂನು ಪ್ರಕಾರ ಅಪರಾಧ. ಕಾಯ್ದೆಯಡಿ ಆರೋಪಿಗೆ 6 ತಿಂಗಳಿಂದ ಹಿಡಿದು ಗರಿಷ್ಠ 20 ವರ್ಷದವರೆಗೆ ಜೈಲು ಶಿಕ್ಷೆ ಹಾಗೂ ಗರಿಷ್ಠ 2 ಲಕ್ಷ ರೂ. ವರೆಗೆ ದಂಡ ವಿಧಿಸಲು ಅವಕಾಶವಿದೆ.

20ಕ್ಕೂ ಅಧಿಕ ಬಗೆಯ ಡ್ರಗ್ಸ್

20ಕ್ಕೂ ಅಧಿಕ ಬಗೆಯ ಡ್ರಗ್ಸ್

ರಾಜ್ಯದಲ್ಲಿ 20ಕ್ಕೂ ಅಧಿಕ ಬಗೆಯ ಡ್ರಗ್ಸ್‌ಗಳು ಕಳ್ಳಸಾಗಣೆಯಾಲ್ಲಿ ಮಾರಾಟವಾಗುತ್ತಿವೆ. ಗಾಂಜಾ, ಹಶಿಶ್, ಕೊಕೇನ್, ಬ್ರೌನ್​ಶುಗರ್, ಅಪೀಮು, ಹೆರಾಯಿನ್, ಕೆಟಾಮಿನ್, ಚರಸ್, ಎಲ್​ಎಸ್​ಡಿ ಬ್ಲಾಟಿಂಗ್ ಪೇಪರ್, ಕೆಂಪು, ಹಳದಿ, ನೀಲಿ, ಹಸಿರು ಬಣ್ಣದ ಎಂಡಿಎಂಎ ಮಾತ್ರೆ ಸೇರಿದಂತೆ 20ಕ್ಕೂ ಹೆಚ್ಚಿನ ಬಗೆಯ ಮಾದಕ ವಸ್ತುಗಳು ರಾಜ್ಯದಲ್ಲಿ ಪತ್ತೆಯಾಗಿವೆ.

ಈ ಎಲ್ಲ ಮಾದಕವಸ್ತುಗಳನ್ನು ಈಗ ಆನ್‌ಲೈನ್‌ನಲ್ಲಿಯೇ ಮಾರಾಟ ಮಾಡಲಾಗುತ್ತಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಇವುಗಳನ್ನು ಮಾರಾಟ ಮಾಡಲಾಗುತ್ತಿದೆ. ರಾಜ್ಯದಲ್ಲಿ 12 ನೂರಕ್ಕೂ ಅಧಿಕ ಡ್ರಗ್ ಪೆಡ್ಲರ್​ಗಳಿದ್ದು, ಬೆಂಗಳೂರಿನ ಒಂದರಲ್ಲಿಯೇ 5 ನೂರಕ್ಕೂ ಅಧಿಕ ಪೆಡ್ಲರ್‌ಗಳು ಸಕ್ರಿಯರಾಗಿದ್ದಾರೆ ಎಂಬ ಮಾಹಿತಿಯಿದೆ. ಗೋವಾ-ಕೇರಳ-ಬೆಂಗಳೂರನ್ನು ಕೇಂದ್ರವಾಗಿಸಿಕೊಂಡು ಅವರು ಕಳ್ಳಸಾಗಣೆ ಮಾಡುತ್ತಾರೆ.

ವಾರ್ಷಿಕ ಆದಾಯ

ವಾರ್ಷಿಕ ಆದಾಯ

ಒಂದು ಅಂದಾಜಿನಂತೆ ಡ್ರಗ್ಸ್ ಮಾಫಿಯಾದ ಜಾಗತಿಕ ವಹಿವಾಟು ವಾರ್ಷಿಕ 50 ಲಕ್ಷ ಕೋಟಿ ರೂಪಾಯಿಗಳು ಹೆಚ್ಚಿದೆ. ಇದೇ ಸಾಕು ಡ್ರಗ್ಸ್ ಮಾಫಿಯಾ ಎಷ್ಟೊಂದು ಅಗಾಧವಾಗಿದೆ ಎಂಬುದನ್ನು ತಿಳಿಯಲು. ಕರ್ನಾಟಕ ರಾಜ್ಯದಲ್ಲಿಯೂ ಡ್ರಗ್ಸ್ ಮಾಫಿಯಾದ ವಾರ್ಷಿಕ ಆದಾಯ ಒಂದುವರೆ ಸಾವಿರದಿಂದ ಎರಡು ಸಾವಿರ ಕೋಟಿ ರೂಪಾಯಿಗಳಷ್ಟಿದೆ ಎಂಬುದು ದಾಖಲಾಗಿರುವ ಪ್ರಕರಣಗಳಿಂದ ತಿಳಿದು ಬಂದಿದೆ.

ಇನ್ನು ಪತ್ತೆಯಾಗದ ಪ್ರಕರಣಗಳಿಂದ ಅದೆಷ್ಟು ಮೌಲ್ಯದ ಮಾದಕವಸ್ತು ರಾಜ್ಯದಲ್ಲಿ ಮಾರಾಟವಾಗುತ್ತದೆಯೊ ಗೊತ್ತಿಲ್ಲ. ಇದೀಗ ಕನ್ನಡ ಚಿತ್ರರಂಗದಲ್ಲಿ ಡ್ರಗ್ಸ್ ಹಾವಳಿ ಮಿತಿ ಮೀರುತ್ತಿದೆ ಎಂಬ ಆರೋಪ ಮತ್ತೆ ಕೇಳಿ ಬಂದಿದೆ. ಮತ್ತೆ ಡ್ರಗ್ ಮಾಫಿಯಾಕ್ಕೆ ನಿಯಂತ್ರಣ ಹಾಕುವ ಒತ್ತಡ ಮತ್ತೆ ಹಚ್ಚಾಗಿದೆ. ಈ ಬಾರಿಯಾದರೂ ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕಿದೆ.

English summary
Former deputy speaker of the Karnataka assembly N Yogish Bhat submitted a report on Drug Mafia in Karnataka on December 10, 2012. After a continuous eight-month study, the petitions committee headed by N Yogish Bhat issued a comprehensive report. Know more about drugs mafia in Karnataka
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X