ಬದುಕನ್ನು ಹುಣ್ಣಿಮೆಯಾಗಿಸಿದ ಆ ಕೆಂಪು ಗುಲಾಬಿ ಮತ್ತು ಪ್ರೇಮಿಗಳ ದಿನ!

By: ಶಶಿರಾಗಾ
Subscribe to Oneindia Kannada

ಬೆಳ್ಗೆ ಏಳೋ ಹೊತ್ತಿಗೆ ಕೆಂಪು ಗುಲಾಬಿ ಚಿತ್ರದ ಜೊತೆ ಇನ್ಬಾಕ್ಸ್ ನಲ್ಲಿ ನಿನ್ನ 'ಗುಡ್ ಮಾರ್ನಿಂಗ್ ಡಿಯರ್...' ಮೆಸೇಜ್! ಏನಂತ ಅರ್ಥ ಮಾಡ್ಕೊಳ್ಳಿ ನಾನು? ಅದೃಷ್ಟಕ್ಕೆ ಆವತ್ತು ವ್ಯಾಲೆಂಟೈನ್ಸ್ ಡೇ ಬೇರೆ!

ಕೆಂಪು ಗುಲಾಬಿಯ ಅರ್ಥ ಹುಡುಕ್ಲಾ..? 'ಗುಡ್ ಮಾರ್ನಿಂಗ್' ಎಂದು ಬೆಳ್ಗೆ ಕಣ್ಣು ಬಿಡುತ್ತಿದ್ದ ಹಾಗೆ ನಿಂಗೆ ನಾನು ನೆನಪಾಗಿದ್ಯಾಕೆ ಅಂತ ತಲೆ ಕೆಡಿಸಿಕೊಳ್ಲಾ..? 'ಡಿಯರ್' ಅನ್ನೋ ಪದ ನನ್ ಮನ್ಸಲ್ಲೂ ಈ ಪರಿ ಕಚಗುಳಿ ಇಡ್ತಿರೋದ್ಯಾಕೆ ಅಂತ ಯೋಚಿಸ್ಲಾ? ಅಥವಾ ಆ ಮೆಸೇಜ್ ನ ಕೊನೆಯಲ್ಲಿರುವ ಮೂರು ಡಾಟ್ ಗಳು ಇನ್ನೇನನ್ನೋ ಹೇಳೋಕೆ ತುಡಿತಾ ಇವೆ ಅಂದ್ಕೊಳ್ಲಾ...?

ಪ್ರೇಮ ಗುರು ವ್ಯಾಲೆಂಟೈನ್ ನೆನಪಾಗುವುದೇಕೆ?

ಹೋಗಪ್ಪ ನೀನು, ಆ ಒಂದೇ ಸಾಲಿನ ನಿನ್ ಮೆಸೇಜ್ ನನ್ನ ಅದೆಷ್ಟೆಲ್ಲ ಗೋಳು ಹಾಕ್ಕೊಂಡ್ತು ಅಂತ ನಿಂಗೊತ್ತಾ..? ಆ ಗೋಳಲ್ಲೂ ಒಂಥರಾ ಆಹ್ಲಾದ ಇರ್ಲಿಲ್ಲ ಅಂತ ಸುಳ್ಳು ಹೇಳಲಾರೆ! ಒಂದು ಹಿತವಾದ ಬೆಳಗಿಗೆ ಅದೊಂದು ಮೆಸೇಜ್ ಸಾಕಾಯ್ತು ನೋಡು!

Valentines day special: A love letter to husband

ಅದೊಂದೇ ಸಾಲನ್ನ ಆವತ್ತು ಕನಿಷ್ಠ ಅಂದ್ರೂ ನೂರು ಬಾರಿ ಓದಿಲ್ವಾ ನಾನು..? 'ಡಿಯರ್' ಅನ್ನೋ ಪದದಲ್ಲಿ ನೀ ತುಂಬಿದ್ದ ಪ್ರೀತಿನೆಲ್ಲ ಮೊಗೆ ಮೊಗೆದು ಮನತುಂಬಿಕೊಂಡಿಲ್ವಾ ನಾನು..?! ಆ ಮೆಸೇಜ್ ಓದಿ ಮೂರು ಗಂಟೆಯಾದ್ರೂ ರಿಪ್ಲೈ ಮಾಡೋಕೆ ಸ್ಕೋಪ್ ತಗೊಂಡಿದ್ದು ಸುಳ್ಳಾ? 'ಯಾಕೆ ನನ್ ಮೆಸೇಜ್ ಓದಿದ್ರೂ ರಿಪ್ಲೈ ಮಾಡ್ತಿಲ್ಲ.. ಕೋಪಾನಾ?' ಅಂತ ನೀನು ಹತ್ತು ಬಾರಿ ಕಳಿಸಿದ ಮೆಸೇಜ್ ಓದಿ ಮುಗುಳ್ನಕ್ಕಿದ್ದು ಸುಳ್ಳಾ..?!

ಮೂರು ಗಂಟೆಯ ನಂತರ ನಂದು 'ಗುಡ್ ಮಾರ್ನಿಂಗ್... ' ಅನ್ನೋ ರಿಪ್ಲೈ! ಅದ್ಕೆ ನಿಂದು ಮಾರುದ್ದದ ಉತ್ತರ! 'ಅಬ್ಬಾ ಸಾರ್ಥಕ ಆಯ್ತು ಜೀವ್ನ, ಗುಡ್ ಆಫ್ಟರ್ ನೂನ್ ಆಗೋ ಮೊದಲು ರಿಪ್ಲೈ ಮಾಡಿದ್ರಲ್ಲ... ಅದ್ಸರಿ ಗುಡ್ ಮಾರ್ನಿಂಗ್ ಜೊತೆ ಒಂದು ಸ್ಮೈಲೋ, ಅಥವಾ ಯಾವ್ದಾದ್ರೂ ಒಂದು ಎಮ್ಮೊಜಿನಾ ಕಳ್ಸಿದ್ರೆ ನಿಮ್ ಡಾಟಾ ಪ್ಯಾಕ್ ಖಾಲಿ ಆಗ್ತಿತ್ತಾ..?' ಆ ಮೆಸೇಜ್ ನೋಡಿ ಬಿದ್ದು ಬಿದ್ದು ನಕ್ಕಿದ್ದು ಈಗ್ಲೂ ನೆನಪಿದೆ. ಆಗಿಂದ ಶುರುವಾಗಿದ್ದು ನಮ್ಮ ಚಾಟ್ ಸೆಶನ್...

ಇಷ್ಟಕ್ಕೂ ಪ್ರೇಮ ನಿವೇದನೆಗೆ ಚೆಂಗುಲಾಬಿಯೇ ಏಕೆ?

ಪರಸ್ಪರ ಪರಿಚಯ, ಕುಟುಂಬದ ಬಗ್ಗೆ ಒಂದಷ್ಟು ಮಾತು, ಇಷ್ಟ ಕಷ್ಟಗಳ ವಿನಿಮಯ... ಹೀಗೇ ಆರಂಭವಾದ ಆತ್ಮೀಯತೆ, ಕೊನೆಗೆ ಬಿಟ್ಟಿರಲಾರದಂತೆ ಬೆಸೆದ ಬಂಧ, ಕೈಹಿಡಿದು ತುಳಿದ ಸಪ್ತಪದಿ ಎಲ್ಲವೂ ಇಂದಿಗೂ ನವನವೀನ. ಜೊತೆಯಾಗಿದ್ದೇವೆ ನಾವೀಗ, ಅನುರೂಪ ಜೋಡಿಯಾಗಿ, ನನ್ನಿಷ್ಟವೇ ನಿನ್ನಿಷ್ಟವಾಗಿ, ನನ್ನ ಬದುಕೇ ನೀನಾಗಿ... ಒಮ್ಮೆ ಹಿಂತಿರುಗಿ ನೋಡಿದರೆ, 'ಇವೆಲ್ಲ ಕನಸಲ್ಲ ತಾನೇ' ಎಂದು ನನ್ನೇ ನಾನು ಪ್ರಶ್ನಿಸಿಕೊಳ್ಳುತ್ತೇನೆ!

ಕೆಂಪು ಗುಲಾಬಿಯನ್ನು ಕಂಡಾಗಲೆಲ್ಲ ಆ ಮಧುರ ಕ್ಷಣಗಳು ನೆನಪಾಗುತ್ತೆ. ಭಾನುವಾರಕ್ಕಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದ ಆ ದಿನಗಳು ಮನಸ್ಸಲ್ಲಿ ಮತ್ತೆ ಸಂಭ್ರಮದ ರಂಗೋಲಿ ಬಿಡಿಸುತ್ತೆ. ನಮ್ಮಿಬ್ಬರ ಪಿಸುಮಾತನ್ನು ಕದ್ದು ಕೇಳಿಸಿಕೊಂಡ ಬ್ಯೂಗಲ್ ರಾಕ್ಸ್ ಪಾರ್ಕಿನ ಬೆಂಚುಗಳು, ಒರಾಯನ್ ಮಾಲ್ ನಲ್ಲಿ ಕಣ್ಣು ಕಣ್ಣು ಬೆಸೆಯುತ್ತ ತಿಂದ ಬರ್ಗರ್, ಸ್ಯಾಂಕಿ ಟ್ಯಾಂಕಿಯ ಸುಂದರ ಸಂಜೆ... ಎಲ್ಲ ನೆನಪುಗಳೂ ಬೆಳಗುತ್ತವೆ ಬದುಕಿನ ಹುಣ್ಣಿಮೆಯಾಗಿ...

ಪ್ರತಿ ವ್ಯಾಲೆಂಟೈನ್ಸ್ ಡೇ ಬಂದಾಗಲೂ ಅದೇ ಕೆಂಪು ಗುಲಾಬಿಯ ಚಿತ್ರ ಮನಸ್ಸನ್ನು ಆವರಿಸುತ್ತೆ. ನಮ್ಮಿಬ್ಬರನ್ನು ಹೀಗೆ ಬೆಸೆದ ಪ್ರೇಮಿಗಳ ದಿನಕ್ಕೆ ಹೃದಯ ಧನ್ಯವಾದ ಅರ್ಪಿಸುತ್ತೆ... ನಿನ್ನ ಮುದ್ದುಮೊಗದ ನಗು ಬೊಗಸೆ ತುಂಬುತ್ತೆ. ನಿಜ, ಬದುಕು ಹೀಗೇ ಇದ್ದುಬಿಡಲಿ... ನಿನಗಾಗಿ ನಾನು, ನನಗಾಗಿ ನೀನು... ಹ್ಯಾಪಿ ವ್ಯಾಲೆಂಟೈನ್ಸ್ ಡೇ...!

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
"There is only one happiness in this life, to love and be loved" this quote explains the importance and intension of Valentine's day. Whole world is celebrating this day on Feb 14th every year, with love and hope.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ