ಮಂತ್ರಾಲಯ ಮಠದ ಉಚಿತ ಪಂಚಾಂಗ ಪಡೆಯಿರಿ

ಪ್ರತಿ ಹಿಂದೂವು ಒಂದಲ್ಲ ಒಂದು ಬಾರಿ ಪಂಚಾಂಗದ ಮೊರೆ ಹೋಗುವುದಂಟು. ಹಳ್ಳಿಗರು ರಾಹುಕಾಲ ಲೆಕ್ಕಾಚಾರ, ಯುಗಾದಿ ಸಮಯದಲ್ಲಿ ಮಳೆಬೆಳೆ, ಭವಿಷ್ಯ ತಿಳಿಯಲು ಪಂಚಾಂಗದ ಪುಟ ತಿರುವುದು ಸಾಮಾನ್ಯ. ಸೌರಮಾನ, ಚಂದ್ರಮಾನ ಪದ್ಧತಿಗನುಸಾರವಾಗಿ ಪಂಚಾಂಗಗಳಿವೆ. ಒಂಟಿಕೊಪ್ಪಲ್ ಪಂಚಾಂಗ, ಶೃಂಗೇರಿ ಮಠದ ಪಂಚಾಂಗ ಪ್ರಸಿದ್ಧವಾಗಿದೆ. ಇದರಂತೆ, ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ ಪಂಚಾಂಗದ ಲಭ್ಯತೆಯನ್ನು ಎಲ್ಲಾ ಸಾರ್ವಜನಿಕರಿಗೂ ತಲುಪಿಸುವ ನಿಟ್ಟಿನಲ್ಲಿ ಹಲವು ಯೋಜನೆ ಹಮ್ಮಿಕೊಂಡಿದೆ.
ಆಸ್ತಿಕರನ್ನು ಒಟ್ಟುಗೂಡಿಸಿ, ಸದ್ಭಾವನೆ ಬೆಳೆಸುವ ನಿಟ್ಟಿನಲ್ಲಿ ಸಾಗಿರುವ ರಾಯರ ಮಠದ ವೆಬ್ ತಾಣ ಈಗ ಚಾಂದ್ರಮಾನ ಪಂಚಾಂಗವನ್ನು ಐದು ಭಾಷೆಗಳಲ್ಲಿ ಹೊರತಂದಿದೆ. ಪ್ರತಿ ವರ್ಷ ಪಂಚಾಂಗಗಳನ್ನು ಮುದ್ರಿಸಿ,ಶ್ರೀಮಠದ ಕಚೇರಿಗಳಲ್ಲಿ , ಮಧ್ವ ಸಂಘಗಳಲ್ಲಿ ಸಾರ್ವಜನಿಕರಿಗೆ ಮುಕ್ತವಾಗಿ ನೀಡುತ್ತಾ ಬರಲಾಗಿದೆ. ಮಠಕ್ಕೆ ಬರಲಾಗದ ದೂರದೂರಿನ ವೆಬ್ ಲೋಕ ನೆಚ್ಚಿಕೊಂಡಿರುವವರ ಅನುಕೂಲಕ್ಕೆ ರಾಯರಮಠದ ವೆಬ್ ತಾಣ ದಲ್ಲಿ (ಸದ್ಯ ವಿಕೃತಿ ನಾಮ ಸಂವತ್ಸರದ) ಪಂಚಾಂಗವನ್ನು ಡೌನ್ ಲೋಡ್ ಗೆ ನೀಡಲಾಗಿದೆ. ನೊಂದಾಯಿತ ಆಸ್ತಿಕರು ಕನ್ನಡ, ಇಂಗ್ಲೀಷ್, ತಮಿಳು, ಸಂಸ್ಕೃತ, ತೆಲುಗು ಭಾಷೆಗಳಲ್ಲಿನ ಪಂಚಾಂಗವನ್ನು ಪಡೆಯಬಹುದು. ದೃಗ್ಗಣಿತ, ಸೂರ್ಯಸಿದ್ಧಾಂತ ಸಹಿತವಾದ ಈ ಪಂಚಾಂಗವು ತಿಥಿ,ವಾರ, ಕಾಲ, ನಕ್ಷತ್ರ, ಯೋಗ ಹಾಗೂ ಕರಣ ಲೆಕ್ಕಾಚಾರಕ್ಕೆ ಅನುಕೂಲವಾಗಿದೆ ಎಂದು ರಾಯರ ಮಠದ ವೆಬ್ ತಾಣದ ವ್ಯವಸ್ಥಾಪಕ ರಘುನಂದನಾಚಾರ್ಯ ತಿಳಿಸಿದರು.
ಮಂತ್ರಾಲಯ ರಾಯರ ಮಠದ ಈ ವೆಬ್ ತಾಣದಲ್ಲಿ ಮಂತ್ರಾಲಯ ಸೇರಿದಂತೆ ಹಲವು ಶಾಖಾ ಮಠಗಳಲ್ಲಿ ನಡೆಯುವ ಪೂಜೆ ಪುನಸ್ಕಾರ, ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರವಿದೆ. ಇದಕ್ಕಿಂತ ಹೆಚ್ಚಾಗಿ ಮಂತ್ರಾಲಯಕ್ಕೆ ಬರಲಿಚ್ಛಿಸುವ ಆಸ್ತಿಕರಿಗೆ ಮಾರ್ಗಸೂಚಿ, ವಸತಿ ವ್ಯವಸ್ಥೆ, ಸೇವಾ ವಿವರಗಳು ಬೆರಳು ತುದಿಯಲ್ಲಿ ಲಭ್ಯವಿದೆ. ರಾಯರ ಪೂಜಾ ಕೈಂಕರ್ಯಗಳ ಸಚಿತ್ರಗಳ ಜೊತೆ, ಮಠ ನಡೆಸುತ್ತಿರುವ ಶಾಲೆಗಳು, ತಿರುಪತಿಯ ವೈದಿಕ ಸಂಶೋಧನಾ ಕೇಂದ್ರ, ವಧು ವರರ ಅನ್ವೇಷಣಾ ಕೇಂದ್ರದ ಬಗ್ಗೆ ಕೂಡ ಮಾಹಿತಿ ಇದೆ.
ಐದು ಭಾಷೆಗಳಲ್ಲಿ ಲಭ್ಯವಿರುವ ಪಂಚಾಂಗವನ್ನು ಡೌನ್ ಲೋಡ್ ಮಾಡಿಕೊಳ್ಳಲು ಕ್ಲಿಕ್ಕಿಸಿ
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
The Principal,
Sri Gurusarvabhouma Sanskrit Vidyapeetha
Sri Raghavendra Swamy Matha,
Mantralayam - 518345
Ph: 08512-279496
Email: [email protected]












Click it and Unblock the Notifications