ಶ್ರೀಖಂಡ -ಚಂದ್ರಕಳಾ-ರಸಗುಲ್ಲಾ ಸವಿದವಳೆ ಜಗಮಲ್ಲಿ!
ಲಡ್ಡು, ಬಾದಶಹ, ಹೋಳಿಗೆಗಳ ನಡುವೆ ಶ್ರೀಖಂಡ ಹೆಸರು ವಿಚಿತ್ರವಾಗಿ ಕಾಣಿಸುವುದಿಲ್ಲವೇ...? ಆದರೆ ಶ್ರೀಖಂಡ ತಯಾರಿಸುವುದು ಎಷ್ಟು ಸುಲಭ ಗೊತ್ತೇ?
ಇದು ಹಬ್ಬಗಳ ಕಾಲ. ಸರತಿ ಹಿಡಿದುಕೊಂಡು ಹಬ್ಬಗಳು ಬರ್ತಾ ಇವೆ. ಪ್ರತಿ ವರ್ಷವೂ ಬರುವ ಪ್ರತಿ ಹಬ್ಬಗಳಿಗೂ ಏನು ಸಿಹಿ ಮಾಡುತ್ತೀರಿ... ಎಷ್ಟು ಸಾರಿ ಅಂತ ಒಬ್ಬಟ್ಟು ಮಾಡುವುದು. ಹೆಚ್ಚೆಂದರೆ ಇದರ ಜೊತೆಗೆ ಪಾಯಸವನ್ನೂ ಸೇರಿಸಬಹುದು. ಆದರೆ ಪಾಯಸವೋ ಈಗ ಮಾಮೂಲಿ ತಿನಿಸಾಗಿ ಬಿಟ್ಟಿದೆ. ಜಿಲೇಬಿ, ರಸಗುಲ್ಲಾ, ಬಾದಾಮ್ ಹಲ್ವ ಸಿಹಿಗಳೋ.. ಮಾಡುವುದಕ್ಕೆ ಕಷ್ಟವಪ್ಪಾ ಎಂಬ ಪೂರ್ವಾಗ್ರಹ ಬೇರೆ.
ಸ್ವೀಟ್‌ಗಳ ಸಾಲಿನಲ್ಲಿ ಒಂದಷ್ಟು ತಿನಿಸುಗಳು ಮರೆತೇ ಹೋಗಿವೆ. ಉದಾಹರಣೆಗೆ ಶ್ರೀಖಂಡವನ್ನೇ ತೆಗೆದುಕೊಳ್ಳಿ. ಲಡ್ಡು, ಬಾದಶಹ, ಹೋಳಿಗೆಗಳ ನಡುವೆ ಇಂತಹ ಹೆಸರು ವಿಚಿತ್ರವಾಗಿ ಕಾಣಿಸುವುದಿಲ್ಲವೇ... ಆದರೆ ಶ್ರೀಖಂಡ ತಯಾರಿಸುವುದು ಎಷ್ಟು ಸುಲಭ ಗೊತ್ತೇ?
ಮೊಸರು, ಸಕ್ಕರೆ, ಕೇಸರಿ ಇದ್ದರಾಯ್ತು. ಜೊತೆಗೊಂದು ನಿಂಬೆಹಣ್ಣೂ ಇರಲಿ. ಪರಿಣತರಿಗೆ ಸ್ವೀಟ್‌ಗಳನ್ನು ತಯಾರಿಸುವ ಹಿಡಿ, ಮುಷ್ಟಿ, ಸೆರೆಗಳದೇ ಲೆಕ್ಕಾಚಾರ. ಆದರೆ ಆರಂಭದಲ್ಲಿ ಸ್ವಲ್ಪ ನಿಗಾ ಬೇಕಲ್ಲ. ಆದ್ದರಿಂದ ಲೆಕ್ಕಾಚಾರ ಸರಿಯಾಗಿರಲಿ.
ಶ್ರೀಖಂಡಕ್ಕಾದರೆ, 6 ಕಪ್ ಗಟ್ಟಿ ಮೊಸರು. ಮುಕ್ಕಾಲು ಕಪ್ ಸಕ್ಕರೆ, 1 ಗ್ರಾಂ ಕುಂಕುಮ ಕೇಸರಿ, 1 ನಿಂಬೆ ಹಣ್ಣು ರೆಡಿ ಮಾಡಿಟ್ಟುಕೊಳ್ಳಿ. ಮೊಸರನ್ನು ಬೆಳ್ಳನೆಯ ಬಟ್ಟೆ ಮೇಲೆ ಸುರಿದು ಗಂಟು ಕಟ್ಟಿ ಅದನ್ನು ತೂಗು ಹಾಕಬೇಕು. ಅದರಲ್ಲಿನ ನೀರು ಚೆನ್ನಾಗಿ ಬಸಿದು ಹೋಯಿತೇ...? ಗಟ್ಟಿ ಮೊಸರು ಬಟ್ಟೆಯ ಗಂಟಿನಲ್ಲೇ ಉಳಿದಿದೆ ತಾನೇ...? ಅದನ್ನು ಒಂದು ಸ್ಟೀಲ್ ಪಾತ್ರೆಯಲ್ಲಿ ಹಾಕಿ. ಅಲ್ಯೂಮಿನಿಯಂ ಪಾತ್ರೆಯಾದರೆ ಅದು ಹುಳಿಯಂಶ ಹೀರಿಕೊಂಡು ಸಣ್ಣಗೆ ಅಡ್ಡ ವಾಸನೆ ಹೊಡೆಯುತ್ತೆ. ಸ್ಟೀಲ್ ಆದರೆ ಸೇಫ್.
ಈಗ ಸಕ್ಕರೆ , ಕುಂಕುಮ ಕೇಸರಿ ಮತ್ತು ಅರ್ಧ ನಿಂಬೆ ಹಣ್ಣಿನ ರಸವನ್ನು ಹಾಕಿ. ಮೊಸರಿನ ಗಟ್ಟಿಯನ್ನು ಸಕ್ಕರೆ ಕರಗುವವರೆಗೆ ನಿಧಾನವಾಗಿ ಸೌಟಿನಲ್ಲಿ ತಿರುವುತ್ತಾ ಇರಬೇಕು. ನಂತರ ಅದನ್ನು ಮುಚ್ಚಿಟ್ಟು ಬಿಡಿ. ಇಪ್ಪತ್ತು ನಿಮಿಷದ ನಂತರ ಪಾತ್ರೆಯ ಮುಚ್ಚಳ ತೆಗೆದರೆ ಶ್ರೀಖಂಡ ರೆಡಿ.
ಅಂದ ಹಾಗೆ ಪೂರಿ ಜೊತೆಗೆ ಸಾಗು ಅಥವಾ ಬಾಜಿ ಮಾಡುವ ಬದಲಿಗೆ ಶ್ರೀಖಂಡ ತಯಾರಿಸಿ. ಪೂರಿಯ ಸವಿಯೇ ಬೇರೆ...!