ಮಲ್ಲಿಗೆ ಕನ್ನಡ ಬಳಗದಿಂದ ಯುಗಾದಿ ಆಚರಣೆ
- ರಾಜ್ ಶಶಿ
[email protected]
ಪಂಚಕೋಟಿ ಕನ್ನಡಿಗರ ಕಣ್ಮಣಿ, ನಟಸಾರ್ವಭೌಮ ಡಾ. ರಾಜ್ ಅವರ ಅತ್ಮಕ್ಕೆ ಚಿರಶಾಂತಿ ಕೋರಿ ಸಭಿಕರೆಲ್ಲರೂ ಕೆಲ ನಿಮಿಷದ ಮೌನದಾಚರಣೆಯ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು. ಡಾ.ರಾಜ್ ಅವರ ‘ಹೊಸಬೆಳಕು’ ಹಾಗು ‘ಗಂಧದಗುಡಿ’ ಚಿತ್ರದ ಗೀತೆಗಳನ್ನ ವಸಂತಾ ಶಶಿ ಹಾಗು ಶ್ರೀಧರ್ ಸುಬ್ಬರಾವ್ ಅವರು ಹಾಡಿ, ಗೀತನಮನ ಸಲ್ಲಿಸಿದರು.
ವ್ಯಯ ನಾಮ ಸಂವತ್ಸರದ ಪ್ರಯುಕ್ತ ನ್ಯೂಜೆರ್ಸಿಯಿಂದ ಆಗಮಿಸಿದ್ದ ಗಾನ ಕೋಗಿಲೆ ವಸಂತಾ ಶಶಿ, ತಮ್ಮ ವೇವ್‌ಜ್ ಮ್ಯೂಸಿಕ್ ತಂಡದಿಂದ ಭರ್ಜರಿ ಸಂಗೀತ ಕಾರ್ಯಕ್ರಮ ನೀಡಿದರು. ಕುಲವಧು ಚಿತ್ರದ ‘‘ಯುಗ ಯುಗಾದಿ ಕಳೆದರು’’, ಗೌರಿ ಚಿತ್ರದ ‘‘ಯಾವ ಜನ್ಮದ ಮೈತ್ರಿ’’, ಸೃಷ್ಠಿ ಹಾಗು ಚೈತ್ರದ ಚಿಗುರನ್ನ ಬಣ್ಣಿಸಿ ಹಾಡಿದ ‘‘ಹೂವು ಚೆಲುವೆಲ್ಲಾ’’, ‘‘ಮಾಮರವೆಲ್ಲೊ’’, ‘‘ಭಾವವೆಂಬ ಹೂವು ಅರಳಿ’’, ಅಮೃತವರ್ಷಿಣಿ ಚಿತ್ರದ ‘‘ತುಂತುರು ಅಲ್ಲಿ ನೀರ ಹಾಡು’’, ‘‘ಇಳಿದು ಬಾ ತಾಯಿ’’, ‘‘ಬಳ್ಳಿಗೆ ಹೂವು ಚೆಂದ’’, ‘‘ನಮ್ಮೂರ ಮಂದಾರ ಹೂವೆ’’, ‘‘ಮೆಲ್ಲುಸಿರೆ ಸವಿಗಾನ’’, ಕಸ್ತೂರಿನಿವಾಸ ಚಿತ್ರದ ‘‘ನೀ ಬಂದು ನಿಂತಾಗ’’ ಸೇರಿದಂತೆ ಅನೇಕ ಸುಮಧುರ ಹಾಡುಗಳು ಅಲ್ಲಿ ಗಾನಸುಧೆಯ ಅನುಭವ ನೀಡಿದವು.
ವಸಂತಾ ತಾವೆ ಸ್ವಂತ ಕನ್ನಡದಲ್ಲಿ ರಚಿಸಿದ್ದ ರಾಗಮಾಲಿಕೆಯಲ್ಲಿ ಹಾಡಿದ ‘‘ಕುಹು ಕುಹು ಎಂದು ಕೋಗಿಲೆ ಗಾನ’’ ಹಾಡು ಸೊಗಸಾಗಿತ್ತು. ಅಧ್ಯಾತ್ಮಿಕ ಸೆಲೆಯಲ್ಲಿ ಹಾಡಿದ ‘‘ದೀಪವು ನಿನ್ನದೆ’’, ಪ್ರೇಕ್ಷಕರ ಕೋರಿಕೆಯ ಮೇರೆಗೆ ಹಾಡಿದ ಎಲ್. ಅರ್. ಈಶ್ವರಿ ಅವರ ‘‘ದೂರದಿಂದ’’ ಹಾಡುಗಳು ಸೊಗಸಾಗಿ ಮೂಡಿ ಬಂದವು. ಸುಮಾರು ಮೂರುಗಂಟೆಗಳ ಕಾಲ ಅಲ್ಲಿ ಸಂಗೀತ ಸಮಾರಾಧನೆ.
ಇನ್ನಷ್ಟು ವಿಶೇಷ :
ಮೊಟ್ಟ ಮೊದಲ ಬಾರಿಗೆ ಮಲ್ಲಿಗೆ ಬಳಗಕ್ಕೆ ವಸಂತಾ ಶಶಿ ಅವರು, ‘ಆದರ್ಶ ದಂಪತಿಗಳ ಬಂಗಾರದ ಬೇಟೆ’ ಕಾರ್ಯಕ್ರಮವನ್ನು ಅಂದು ಪರಿಚಯಿಸಿದರು.
ಮಲ್ಲಿಗೆ ಬಳಗದ ಈ ರಸಸಂಜೆ ಕಾರ್ಯಕ್ರಮವನ್ನು ನಡೆಸಲು ನೆರವು ನೀಡಿದ ದಂಪತಿಗಳ ಹೆಸರುಗಳನ್ನ ಚೀಟಿಯಲ್ಲಿ ಬರೆದು, ಲಾಟರಿ ಮುಖಾಂತರ ಮಕ್ಕಳಿಂದ ಚೀಟಿಯನ್ನ ಎತ್ತಿಸಲಾಯಿತು. ಗೆದ್ದ ಎರಡು ದಂಪತಿಗಳನ್ನ ವೇದಿಕೆಯಲ್ಲಿ ಕರೆಸಲಾಯಿತು. ‘ಪರಸ್ಪರ’ ಹಾಗು ‘ಗಂಡ-ಹೆಂಡಿರ ಮೂಕಸಂಭಾಷಣೆಯ ಮೂಕಾಭಿನಯ’ ಹೀಗೆ ಎರಡು ಸುತ್ತಿನ ವಿನೋದ ಪ್ರಶ್ನಾವಳಿಗಳಿಂದ ಆದರ್ಶ ದಂಪತಿಗಳ ಆಯ್ಕೆ ಮಾಡಲಾಯಿತು.
ಪ್ರೇಕ್ಷಕರ ನಿರ್ಣಯದಲ್ಲಿ ಗೆದ್ದ ದಂಪತಿಗಳಿಗೆ ಮಲ್ಲಿಗೆ ಬಳಗದ ಖಜಾಂಚಿ ಕಮಲಾ ನಂದಕುಮಾರ್ ಅವರು, ತಮ್ಮ ಲೋಟಸ್ ಎಂಟರ್ ಪ್ರೈಸಸ್‌ನಿಂದ ಬಂಪರ್ ಬಹುಮಾನ ಪ್ರಯೋಜಿಸಿದ್ದರು. ಚಿನ್ನದ ಸರ ಹಾಗು ವೇವ್‌ಜ್ ಮ್ಯೂಸಿಕ್ ವತಿಯಿಂದ ನೀಡಿದ ಸಿ.ಡಿ. ಸೆಟ್‌ಗಳನ್ನು ಆದರ್ಶ ದಂಪತಿಗಳಿಗೆ ಬಹುಮಾನ ರೂಪದಲ್ಲಿ ನೀಡಲಾಯಿತು. ಕೊನೆಯ ಮೂರನೆಯ ಬಹುಮಾನವನ್ನು ಮಲ್ಲಿಗೆ ಕನ್ನಡ ಬಳಗದ ಸಮಿತಿ ಪ್ರಯೋಜಿಸಿತ್ತು. ಕನ್ನಡ ಚಿತ್ರಕ್ಕೆ ಎರಡು ಟಿಕೆಟ್ಟನ್ನು ಪ್ರೇಕ್ಷಕರ ‘ಸುತ್ತಮುತ್ತ’ ಸುತ್ತಿನಲ್ಲಿ ಗೆದ್ದ ದಂಪತಿಗಳಿಗೆ ಬಹುಮಾನವಾಗಿ ನೀಡಲಾಯಿತು.
ವಸಂತಾ ಶಶಿ ಹಾಗು ಅವರೊಂದಿಗೆ ದನಿಗೂಡಿಸಿದ ಶ್ರೀಧರ್ ಅವರು ಕಡೆಯಲ್ಲಿ ಹಾಡಿದ ಜನಪದ ಮತ್ತು ಚಿತ್ರ ಗೀತೆಗಳಲ್ಲಿ- ಎಲ್ಲೋ ಜೋಗಪ್ಪ, ಮೂಡಲ್ ಕುಣಿಗಲ್ ಕೆರೆ, ಚೆಲುವಯ್ಯ ಚೆಲುವೋ, ಮೈಸೂರು ಮಲ್ಲಿಗೆ, ಹಾಗು ಎಲ್ಲೆಲ್ಲು ಹಬ್ಬ ಹಬ್ಬ ಬಂತು ಗೀತೆಗಳು ಸಭಿಕರಿಗೆ ಖುಷಿ ತಂದಿದ್ದವು. ಸಭಿಕರ ಕೋಲಾಟ ಕುಣಿತದ ಕಾರ್ಯಕ್ರಮ ಮಲ್ಲಿಗೆ ಬಳಗಕ್ಕೆ ನಿಜಕ್ಕೂ ಯುಗಾದಿ ಸಂಭ್ರಮದ ಕಳೆಯೇ ಕಟ್ಟಿತ್ತು.
ಇಷ್ಟು ಹೊತ್ತಿಗಾಗಲೆ ಸಜ್ಜಾಗಿದ್ದ ರುಚಿ ರುಚಿಯಾದ ಹೋಳಿಗೆ, ಪಾಯಸ, ಡೇಟ್ ಬರ್ಫಿ, ಪುಳಿಯೋಗರೆ, ಚಿತ್ರಾನ್ನ, ರಾಯಿತ, ಅನ್ನ ಸಾರು, ಸಂಡಿಗೆ, ಚಪಾತಿ, ಸಾಗು, ಪಲ್ಯ ... ಎಲ್ಲರನ್ನು ತೃಪ್ತಿಪಡಿಸಿತ್ತು. ಎಲ್ಲರೂ ಸಂತೃಪ್ತಿಯಿಂದ ಉಂಡು ಅವರವರ ಗೂಡುಗಳಿಗೆ ಹೊರಟಾಗ ರಾತ್ರಿ ಹನ್ನೆರಡರ ಗಡಿ ದಾಟಿತ್ತು....
ಮುಖಪುಟ / ವ್ಯಯನಾಮ ಸಂವತ್ಸರಕ್ಕೆ ಸ್ವಾಗತ












Click it and Unblock the Notifications