ಕೆಕೆಎನ್‌ಸಿಯಿಂದ ಹರುಷದ ವರುಷಾರಂಭ!

Aparna Shankar‘ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ’

ಎಂಬ ಬೇಂದ್ರೆಯವರ ಹಾಡನ್ನು ನೆನಪಿಸುವಂತೆ ಈ ವರ್ಷವೂ ಕೂಡ ಯುಗಾದಿಯು ಬೇ ಏರಿಯಾದ ಕನ್ನಡ ಕುಟುಂಬದವರಲ್ಲಿ ಹೊಸ ಹರುಷವನ್ನು ತಂದಿತ್ತು.

ಕೆ.ಕೆ.ಎನ್‌.ಸಿ. ಏಪ್ರಿಲ್‌ 22, 2006ರಂದು ಸನ್ನಿವೇಲ್‌ ದೇವಸ್ಥಾನದ ಸಭಾಂಗಣದಲ್ಲಿ ‘ವ್ಯಯ’ನಾಮ ಸಂವತ್ಸಕ್ಕೆ ಸ್ವಾಗತ ಕೋರಿ, ಸಿಹಿಯನ್ನು ಎಲ್ಲರೊಂದಿಗೆ ಹಂಚಿಕೊಳ್ಳಲು ಮನರಂಜನಾ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಬಹಳ ಮುಂಚಿನಿಂದಲೇ ಈ ಕಾರ್ಯಕ್ರಮಕ್ಕಾಗಿ ಸಂಭ್ರಮದಿಂದ ಕಾಯುತ್ತಿದ್ದ ಕನ್ನಡ ಸಮುದಾಯಕ್ಕೆ, ಯುಗಾದಿಯ ಬೇವಿನ ಕಹಿಯನ್ನೂ ನೆನಪಿಸುವಂತೆ, ಕನ್ನಡಿಗರ ಹೃದಯ ಸಾಮ್ರಾಜ್ಯಾಧೀಶ ಡಾ. ರಾಜ್‌ ಕುಮಾರ್‌ ಅವರು ದೈವಾಧೀನರಾದ ಸುದ್ದಿ ಆಘಾತವನ್ನುಂಟು ಮಾಡಿತ್ತು.

ಇದೀಗ ತಾನೆ ನಮ್ಮನ್ನಗಲಿದ ನಲ್ಮೆಯ ನಾಯಕನಾದ ಡಾ. ರಾಜ್‌ ಕುಮಾರವರಿಗೆ, ಅವರ ಅಭಿಮಾನಿ ದೇವರುಗಳು ಒಂದು ನಿಮಿಷಕಾಲ ಮೌನವಾಚರಿಸಿ ಶ್ರದ್ಧಾಂಜಲಿ ಅರ್ಪಿಸಿದರು. ಕೆ.ಕೆ.ಎನ್‌.ಸಿ.ಯ ಅಣ್ಣಾವ್ರು ಎಂದೇ ಪ್ರಖ್ಯಾತವಾಗಿರುವ ಅಶೋಕ್‌ ಕುಮಾರವರು ಡಾ. ರಾಜ್‌ ಬಗ್ಗೆ ಕೆಲವು ಮಾತುಗಳನ್ನಾಡಿ, ಅವರ ಗೋಕಾಕ್‌ ಚಳುವಳಿಯ ಜ್ಞಾಪಕಾರ್ಥವಾಗಿ, ಸುಪ್ರಸಿದ್ಧವಾದ ‘ನಾನಿರುವುದೆ ನಿಮಗಾಗಿ, ನಾಡಿರುವುದು ನಮಗಾಗಿ’ ಹಾಡನ್ನು ಹಾಡಿ ಸಭಿಕರನ್ನು ಮಂತ್ರಮುಗ್ಧಗೊಳಿಸಿದರು. ನಂತರ ಅವರ ಕೆಲವು ಚಿತ್ರದ ತುಣುಕುಗಳನ್ನು ವೇದಿಕೆಯ ಪಕ್ಕದಲ್ಲಿದ್ದ ಪರದೆಯ ಮೇಲೆ ಮೌನದಿಂದ ಪ್ರದರ್ಶಿಸಲಾಯಿತು. ಜನರೆಲ್ಲಾ ಇನ್ನೂ ಅವರ ನೆನಪಿನಲ್ಲೇ ಇರುವಾಗ, ಇದೇ ತಿಂಗಳ 30ನೇ ತಾರೀಖು ಡಾ. ರಾಜ್‌ ಕುಮಾರವರ ಆತ್ಮಕ್ಕೆ ಶಾಂತಿಕೋರಲು ಶ್ರದ್ಧಾಂಜಲಿಯನ್ನು ಏರ್ಪಡಿಸಿರುವುದಾಗಿ ಕೆ.ಕೆ.ಎನ್‌.ಸಿ. ಅಧ್ಯಕ್ಷರಾದ ರಮೇಶ್‌ ಜಾವಗಲ್‌ ಘೋಷಿಸಿದರು.

ಕೂಡಲೇ ಶುರುವಾಗಿತ್ತು ಎಲ್ಲಾರೂ ಕಾತುರದಿಂದ ಕಾಯುತ್ತಿದ್ದ ‘ಹಾಡೊಂದ ನಾ ಹಾಡುವೆನು’-ವಿಶೇಷ ಅಂತ್ಯಾಕ್ಷರಿ ಕಾರ್ಯಕ್ರಮ. 1963ರ ಕುಲವಧು ಚಿತ್ರದ ‘ಯುಗ ಯುಗಾದಿ ಕಳೆದರೂ’ ಹಾಡನ್ನು ಲಯಬದ್ಧವಾಗಿ ಹಾಡಿಕೊಂಡು ಬಂದ ಅಂತ್ಯಾಕ್ಷರಿ ಕಾರ್ಯಕ್ರಮದ ನಿರೂಪಕಿಯರಾದ ಪೂರ್ಣಿಮಾ ರಾಮಪ್ರಸಾದ್‌ ಹಾಗೂ ಜ್ಯೋತಿ ಶೇಖರ್‌ ಅವರು ಆ ಪ್ರದರ್ಶನವನ್ನು ಕನ್ನಡಿಗರ ಕಣ್ಮಣಿ ಡಾ. ರಾಜ್‌ ಕುಮಾರ್‌ ಅವರಿಗೆ ಅರ್ಪಿಸಿದ್ದೇವೆಂದು ಹೇಳಿದಾಗ ಜನರೆಲ್ಲರೂ ಹರ್ಷೋದ್ಗಾರ ಮಾಡಿದರು. ಈ ಕಾರ್ಯಕ್ರಮದ ವಿಶೇಷತೆಯೆಂದರೆ, ಒಂದೇ ಒಂದು ಹಾಡನ್ನು ಹೊರತುಪಡಿಸಿ ಎಲ್ಲಾ ಹಾಡುಗಳು ರಾಜ್‌ ಅವರು ಅಭಿನಯಿಸಿದ ಚಿತ್ರಗಳವೇ ಆಗಿದ್ದವು.

ಶರಾವತಿ, ಗೀತಾಂಜಲಿ ಮತ್ತು ಮಾಧುರ್ಯ ತಂಡಗಳು ಸ್ಪರ್ಧೆಗೆ ಸಿದ್ಧವಾಗಿ ಕುಳಿತಿದ್ದರು. ತೀರ್ಪುಗಾರರಾದ ಅಶೋಕ್‌ ಕುಮಾರ್‌ ಹಾಗೂ ನಿರ್ದೇಶಕರಾದ ರಾಮಪ್ರಸಾದ್‌ ಮತ್ತು ಶುಭಾ ಶ್ರೀನಾಥ್‌ ವೇದಿಕೆಯ ಮೇಲಿದ್ದರು. ಈ ಕಾರ್ಯಕ್ರಮದಲ್ಲಿ ಬರೀ ಆ ಮೂರು ತಂಡದವರಿಗೆ ಮಾತ್ರವಲ್ಲದೆ, ಬಿಡುವಿನ ಸಮಯದಲ್ಲಿ ಪ್ರೇಕ್ಷಕರಿಗೂ ಕೂಡ ಭಾಗವಹಿಸಲು ಅವಕಾಶಮಾಡಿಕೊಡಲಾಗಿತ್ತು.

ಪ್ರಥಮ ಸುತ್ತು ಅಂತ್ಯಾಕ್ಷರಿ ಮುಗಿದ ಮೇಲೆ ‘ಅಣ್ಣಾವ್ರ ಭಕ್ತ ನಂ. 1’ ಬಿರುದನ್ನು ಕವಿರತ್ನ ಕಾಳಿದಾಸ ಚಿತ್ರದ ‘ಬೆಳ್ಳಿಮೂಡಿತೋ ಕೋಳಿಕೂಗಿತೋ’ ಹಾಡನ್ನು ಅಣ್ಣಾವ್ರಂತೆಯೇ ಹಾಡಿದ ಸುಧೀರ್‌ ನಗರ್‌ಕರ್‌ ಅವರಿಗೆ ನೀಡಲಾಯಿತು. ಎರಡನೇ ಸುತ್ತು ಹಾಡಿನ ರಾಗ ಕೇಳಿ, ಅದನ್ನು ಗುರುತಿಸುವುದಾಗಿತ್ತು. ವಿರಾಮದಲ್ಲಿ ಅಣ್ಣಾವ್ರ ಡೈಲಾಗ್ಸ್‌ಗಳನ್ನು ಚೆಂದದಿಂದ ಹೇಳಿದ ಸತೀಶ್‌ ಹೆಡ್ಡಸೆ ಅವರಿಗೆ ‘ಅಣ್ಣಾವ್ರ ಭಕ್ತ ನಂ 2’ ಬಿರುದನ್ನು ಕೊಡಲಾಯಿತು. ಹಾಡಿನ ಚರಣವನ್ನು ಕೇಳಿ ಪಲ್ಲವಿ ಹಾಡುವುದು ಮೂರನೆಯ ಸುತ್ತು. ದೇವತಾ ಮನುಷ್ಯ ಚಿತ್ರದ ‘ನಿನ್ನಂತ ಅಪ್ಪ ಇಲ್ಲ’ ಹಾಡಿಗೆ ತಮ್ಮ ಮಗಳೊಂದಿಗೆ ಸಂಭ್ರಮದಿಂದ ಕುಣಿದ ಗಿರೀಶ್‌ ಹೆಗ್ಡೆ ಅವರಿಗೆ ‘ಅಣ್ಣಾವ್ರ ಭಕ್ತ ನಂ 3’ ಬಿರುದು ಸಿಕ್ಕಿತು. ಇಷ್ಟೆಲ್ಲಾ ಸಂಭ್ರಮದ ನಂತರ ಗೀತಾಂಜಲಿ ತಂಡವು ಮೊದಲ ಸ್ಥಾನವನ್ನೂ, ಮಾಧುರ್ಯ ತಂಡವು ಎರಡನೇ ಸ್ಥಾನವನ್ನು ಪಡೆದಿದೆಯೆಂದು ಘೋಷಿಸಲಾಯಿತು.

ಮರುದಿನ ಸಾನ್‌ ಹೋಸೆಯ ಐ.ಸಿ.ಸಿ. ಯಲ್ಲಿ ಕನ್ನಡಿಗರ ಕಣ್ಮಣಿಯ ವಿಶೇಷ ಚಿತ್ರ ಪ್ರದರ್ಶನದ ಬಗ್ಗೆ ನಿವೇದಿಸಿದ ಕೂಡಲೇ, ಎಲ್ಲರ ಮನಸಲ್ಲೂ ಸಂತಸ ತುಂಬಿತ್ತು. ಇನ್ನು ‘ಒಬ್ಬಟ್ಟಿನೂಟ’ದ ಬಗ್ಗೆ ಪ್ರಕಟಿಸಿದ ಮೇಲಂತೂ ಎಲ್ಲರೂ ಊಟದ ಸಮಯಕ್ಕೆ ಕಾಯುವಂತಿತ್ತು. ಅದಕ್ಕೆ ಮುಂಚೆ South Asian Heart Center at El Camino Hospital ಅವರು ತಮ್ಮ ಯೋಜನೆಗಳ ಬಗ್ಗೆ ತಿಳಿಸಿದರು. ನಂತರ ‘ಶ್ರೀ ಕೃಷ್ಣಲೀಲಾ’ ನೃತ್ಯ ನಾಟಕ ಶುರುವಾಯಿತು.

‘ಕೃಷ್ಣಾ ನೀ ಬೇಗನೆ ಬಾರೋ’ ಎಂದು ಕಾದು ಕುಳಿತಿರುವ ಯಶೋದೆಯ ಬಳಿ ಬಂದ ಮುದ್ದು ಕೃಷ್ಣ, ಕಂಸವಧೆ, ಉಗ್ರಸೇನನ ಪಟ್ಟಾಭಿಷೇಕ, ‘ನೀನ್ಯಾಕೊ ನಿನ್ನ ಹಂಗ್ಯಾಕೊ’ ಎಂದು ಸಮ್ಮೋಹಕ ನೃತ್ಯಗಳನ್ನು ಪ್ರದರ್ಶಿಸಲಾಯಿತು. ಎಲ್ಲರ ಗಮನ ಮನರಂಜನೆಯಿಂದ ಹೊಟ್ಟೆಯ ಕಡೆಗೆ ಹೊರಡುವ ಸಮಯಕ್ಕೆ ಸರಿಯಾಗಿಯೇ ಇತ್ತು, ಭೋಜನದ ವಿರಾಮ. ಮಯೂರಿ ರೆಸ್ಟೊರಾಂಟಿನಿಂದ ತರಿಸಲಾದ ನಾನ್‌, ನವರತನ್‌ ಕುರ್ಮಾ, ಬಿಸಿಬೇಳೆಭಾತು, ಮೊಸರನ್ನ, ಪಕೋಡ ಮತ್ತು ಒಬ್ಬಟ್ಟು ಬಹಳ ರುಚಿಯಾಗಿದ್ದವು.

ಪುಷ್ಕಳವಾದ ಊಟ ಸವಿದು ಬಂದ ಸಭಿಕರಿಗೆ ‘ಕರ್ನಾಟಕ ವಸ್ತ್ರವಿಶೇಷ’ ಎಂಬ ವಿಶೇಷ ನೃತ್ಯ ಕಾರ್ಯಕ್ರಮದ ಮೂಲಕ ಕರ್ನಾಟಕದ ಸಾಂಪ್ರದಾಯಿಕ ಉಡುಗೆ ತೊಡುಗೆಗಳನ್ನು ಪರಿಚಯಿಸಲು ಭಾಗವಹಿಸಿರುವ ಮಕ್ಕಳು ಕಾತುರರಾಗಿ ಕಾದಿದ್ದರು. ಮೊದಲಿಗೆ ಬೆಂಗಳೂರಿನ ಉಡುಗೆ ನಂತರ ಹಳ್ಳಿಜನರ ಪದ್ಧತಿಯ ಉಡುಗೆ ಪ್ರದರ್ಶಿಸಿದರು. ‘ಮೇರಿ ಮೇರಿ ಮೇರಿ, ಐ ಲವ್‌ ಯು’ ಎಂದು ಕ್ರಿಶ್ಚಿಯನ್‌ ರೀತಿಯಂತೆ ಅಂಗಿ-ಶರಾಯಿ ತೊಟ್ಟು ಫ್ರೋಕ್‌ ಹಾಕಿದ ಹುಡುಗಿಯೊಂದಿಗೆ ನಟಿಸುತ್ತ ಬಂದ ಹುಡುಗನನ್ನು ಕಂಡ ಕೂಡಲೆ ಕೇಳಿಸಿತ್ತು ಪ್ರೇಕ್ಷಕರ ಮೆಚ್ಚಿನ ಕರತಾಡನ. ನಂತರ ನರ್ತಿಸುತ್ತಾ ಬಂದರು ಚೆಂದದ ಉಡುಪಿನ ಮುಸ್ಲಿಂ ಕನ್ಯೆಯರು, ‘ಅಡವಿದೇವಿಯ ಕಾಡು ಜನಗಳ’ ಎನ್ನುತ್ತಾ ಕಾಡಿನ ಜನಾಂಗದ ಬಟ್ಟೆ ತೊಟ್ಟ ಮಕ್ಕಳು. ‘‘ಅಬ್ಬಬ್ಬಾ ಉಡುಗೆ ತೊಡುಗೆಯಲ್ಲಿ ಎಷ್ಟೊಂದು ವೈವಿಧ್ಯತೆ’’ ಎಂದು ಕೊಳ್ಳುತ್ತಿರುವಾಗಲೇ, ‘ಹೇಗಿದೆ ನಮ್‌ ದೇಶ ಹೇಗಿದೆ ನಮ್‌ ಭಾಷೆ’ ಎಂದು ಕುಣಿಯುತ್ತ ಇಡೀ ನಾಟ್ಯವೃಂದವೇ ಮತ್ತೊಮ್ಮೆ ವೇದಿಕೆಯ ಮೇಲೆ ಬಂದಿತ್ತು.

ಕೆ.ಕೆ.ಎನ್‌.ಸಿ.ಯ ವಾರ್ಷಿಕ ಸಂಚಿಕೆಯಾದ ‘ಸ್ವರ್ಣಸೇತು’ ಸಮಿತಿಯು ಏರ್ಪಡಿಸಿದ್ದ ಯುಗಾದಿ-2006 ಕಥಾಸ್ಪರ್ಧೆ ಯಲ್ಲಿ ಮೊದಲ ಮೂರು ಬಹುಮಾನಗಳನ್ನು ಪಡೆದ ಜ್ಯೋತಿ ಶೇಖರ್‌, ವಿಶ್ವನಾಥ್‌ ಹುಲಿಕಲ್‌ ಮತ್ತು ಮಂಗಳಾ ಕುಮಾರ್‌ ಅವರಿಗೆ ತೀರ್ಪುಗಾರರಲ್ಲೊಬ್ಬರಾದ ಸಂಧ್ಯಾ ರವೀಂದ್ರನಾಥ್‌ ಅವರು ಬಹುಮಾನ ವಿತರಿಸಿದರು. ಇನ್ನಿಬ್ಬರು ತೀರ್ಪುಗಾರರಾದ ಡಾ. ಗುರುಪ್ರಸಾದ ಕಾಗಿನೆಲೆ ಮತ್ತು ತ್ರಿವೇಣಿ ಶ್ರೀನಿವಾಸರಾವ್‌ ಅವರ ಪರವಾಗಿ ಕಥೆಗಳ ಬಗ್ಗೆ ಅನಿಸಿಕೆಗಳನ್ನು ಸಂಧ್ಯಾ ಅವರು ಸಭಿಕರೊಡನೆ ಹಂಚಿಕೊಂಡರು.

ಸ್ಪರ್ಧೆಗೆ ಕತೆಯನ್ನು ಕಳುಹಿಸಿದ್ದ ಕತೆಗಾರರೆಲ್ಲರಿಗೂ ಸಂತೋಷವಾಗುವಂತೆ, ಅವರ ಕತೆಗಳನ್ನು ಈ ವರ್ಷದ ಪತ್ರಿಕೆಯಲ್ಲಿ ಪ್ರಕಟಿಸುವ ವಿಷಯ ತಿಳಿಸಲಾಯಿತು. ಅಂದಿನ ಕೊನೆಯ ಕಾರ್ಯಕ್ರಮವಾದ ‘ದಾಸರು ಕಂಡಂತೆ ಶ್ರೀ ಕೃಷ್ಣನ ಚಿತ್ರಣ’ ನೃತ್ಯ ನಾಟಕವನ್ನು ಪಂಪ ಕಲಾವಿದರು ಬಹಳ ಮನೋಜ್ಞವಾಗಿ ಪ್ರಸ್ತುತಪಡಿಸಿದರು. ನಿರ್ಮಲಾ ಮಾಧವ ಅವರು ನಿರ್ದೇಶಿಸಿ ಭಾಗವಹಿಸಿದ ಈ ನಾಟ್ಯದ ವಿಶೇಷವೆಂದರೆ, ವಿದ್ವಾನ್‌ ಗೋಪಿನಾಥ ದಾಸರ ಮೂರು ತಲೆಮಾರುಗಳ ಅಪರೂಪದ ಪ್ರದರ್ಶನ. ಅವರ ಮಗ, ಮೊಮ್ಮಗಳು ಹಾಗೂ ಮರಿಮಗಳು ಬಹಳ ಹೆಮ್ಮೆಯಿಂದ ತಮ್ಮ ಪಾತ್ರವನ್ನು ನಿರ್ವಹಿಸಿದರು.

ಹೀಗೆಯೇ ತುಂಬಿದ ಮನದಿಂದ ಜನರು ರಾಷ್ಟ್ರಗೀತೆಯೊಂದಿಗೆ ಪರಸ್ಪರ ಬೀಳ್ಕೊಟ್ಟರು.

ಮುಖಪುಟ

/ ವ್ಯಯನಾಮ ಸಂವತ್ಸರಕ್ಕೆ ಸ್ವಾಗತ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+