• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿಲಿಕಾನ್‌ ಕಣಿವೆಯಲ್ಲಿ ಹೊಸ ವರುಷಕ್ಕೆ ಹುರುಪಿನ ಸ್ವಾಗತ

By Staff
|
  • ಪ್ರಭು ಮೂರ್ತಿ

sakhat96@yahoo.com

‘ಮನೆ’ ಮತ್ತು ಅದಕ್ಕೆ ಸಂಬಂಧಪಟ್ಟ ಪದಗಳಿರುವ ಎಷ್ಟು ಕನ್ನಡ ಗಾದೆಗಳನ್ನು ಅರ್ಧ ನಿಮಿಷದಲ್ಲಿ ಒದರಬಲ್ಲಿರಿ? ಅಥವಾ ಒಂದು ನಿಮಿಷದಲ್ಲಿ ‘ಅ’ ಅಕ್ಷರದಿಂದ ಶುರುವಾಗುವ ಎಷ್ಟು ಗಾದೆಗಳು ನಿಮ್ಮ ಬಾಯಿಂದ ಹೊರಡಬಹುದು? ಇಂತಹ ಗಹನವಾದ ಪ್ರಯೋಗಗಳು ನೂರಾರು ಜನರ ಕಣ್ಣೆದುರಿಗೆ ಆಗಿದ್ದರ ಬಗ್ಗೆ ಗೊತ್ತೇ?

ಏಪ್ರಿಲ್‌ 17ರ ಭಾನುವಾರದಂದು ಸ್ಯಾನ್‌ ಫ್ರಾನ್‌ಸಿಸ್ಕೋ ಕೊಲ್ಲಿಯ ಸನ್ನಿವೇಲಿನಲ್ಲಿರುವ ಹಿಂದೂ ದೇವಾಲಯದ ಸಭಾಂಗಣದ್ವಾರ, ವೇದಿಕೆ, ಭೋಜನಶಾಲೆ ಹೀಗೆ ಒಳಹೊರಗೆಲ್ಲ ಯಾವುದಕ್ಕೋ ಸಿದ್ಧತೆ ಬೆಳಗ್ಗಿನಿಂದಲೇ ಬಿರುಸಾಗಿ ಸಾಗಿತ್ತು. ಮಧ್ಯಾಹ್ನ ಮೂರರ ಹೊತ್ತಿಗೆ ಸಭಾಂಗಣ ಕನ್ನಡಕಲರವದ ತಾಣವಾಗಿತ್ತು. ಹಬ್ಬದ ಸಡಗರ ಮತ್ತು ಅದಕ್ಕೆ ಮೆರುಗು ಕೊಟ್ಟಿದ್ದ ಹಿತವಾದ ಸಿಲಿಕಾನ್‌ ವ್ಯಾಲಿ ವಸಂತದ ಬಿಸಿಲು ಒಂದಕ್ಕೊಂದು ಹೇಳಿಮಾಡಿಸಿದಂತಿದ್ದವು. ಸಭಿಕರು ನೋಂದಾಯಿಸಿಕೊಂಡು ಒಳಹೊಕ್ಕಂತೆ ಮುಂಬಾಗಿಲಲ್ಲಿ ಲಾಲ್‌ಬಾಗನ್ನು ನೆನಪಿಸಲು ಮಾಡಿದ್ದ ಒಂದು ಪುಟ್ಟ ಹೂದೋಟ ಮತ್ತು ಹೂವಿನ ಗಡಿಯಾರ ಕಣ್ಸೆಳೆಯುತ್ತಿದ್ದವು.

ಅಂದು ರಾಮನವಮಿ ಬೇರೆ. ಕೋಸಂಬರಿ, ಪಾನಕ ಮತ್ತು ನೀರುಮಜ್ಜಿಗೆಗಳ ಏರ್ಪಾಟೂ ಆಗಿತ್ತು. ಆದರೆ ಅವತ್ತಿನ ವಿಶೇಷ; ಉತ್ತರ ಕ್ಯಾಲಿಫೋರ್ನಿಯಾದ ಕನ್ನಡಕೂಟವಾದ ಕೆ.ಕೆ.ಎನ್‌.ಸಿಯು ಯುಗಾದಿಯ ಸಲುವಾಗಿ ಇಟ್ಟುಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮ. ನೂರಾರು ಮಂದಿ ಸ್ಥಳೀಯ ಕನ್ನಡಿಗರು ಬಂಧುಮಿತ್ರರ ಜೊತೆ ಕಾರ್ಯಕ್ರಮ ನೋಡಲು ಬಂದಿದ್ದರು.

ಕಾರ್ಯಕ್ರಮದ ನಿರ್ವಾಹಕಿ ವೀಣಾ ಗೌಡ ಅವರು ಎಲ್ಲರನ್ನೂ ಆಹ್ವಾನಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಕುಂತಲ ಮೂರ್ತಿಯವರು ರಚಿಸಿ ರಾಗ ಸಂಯೋಜಿಸಿದ್ದ ಗೀತೆಯೊಂದಿಗೆ ವಿಘ್ನನಿವಾರಕನನ್ನು ಶಾಸ್ತ್ರೀಯವಾಗಿ ವಂದಿಸಿದ ಮೇಲೆ ಮರಳಿ ಬಂದ ವಸಂತವನ್ನು ‘ಬನ ಬನದಲಿ ಅಚ್ಚಾಗಿದೆ ಹೊಸ ವರುಷದ ಹೆಸರು’ ಎಂದು ಸುಮಧುರವಾಗಿ ಹಾಡಿ ಸ್ವಾಗತಿಸಿದವರು ಸಂಧ್ಯಾ ಗಾಯತ್ರಿ ಮತ್ತು ತ್ರಿಶಲಾ ರಾವ್‌ ಅವರುಗಳ ತಂಡ. ಕಿರಿಯ ಪ್ರತಿಭೆಗಳಾದ ಭಾರ್ಗವ ಸೆಟ್ಲೂರ್‌ ತಬಲವನ್ನೂ ಹಾಗೂ ಅಪೂರ್ವ ಗುರುರಾಜ ಗೆಜ್ಜೆ ಮತ್ತು ಕಂಜಿರಗಳನ್ನೂ ನುಡಿಸಿದರು. ನಂತರ ಶಿಕ್ಷಣತಜ್ಞ ಡಾ.ಎಚ್‌. ನರಸಿಂಹಯ್ಯ, ನೃತ್ಯವಿಶಾರದ ಡಾ. ಕೃಷ್ಣರಾವ್‌, ಪತ್ರಕರ್ತ ಸಿ. ವಿ. ರಾಜಗೋಪಾಲ್‌, ಲೇಖಕ ಪ್ರೊ. ಸಿ.ಡಿ.ನರಸಿಂಹಯ್ಯ ಸೇರಿದಂತೆ ಇತ್ತೀಚೆಗೆ ನಮ್ಮನ್ನಗಲಿದ ಎಲ್ಲಾ ಮಹಾನ್‌ ಚೇತನಗಳಿಗೆ ಒಂದು ನಿಮಿಷ ಮೌನವಾಗಿ ನಿಂತು ಎಲ್ಲರೂ ಶ್ರದ್ಧಾಂಜಲಿಯನ್ನು ಅರ್ಪಿಸಿದರು.

ಬಳಿಕ ಕೇಳಿದ ‘ಚೆಲುವಯ್ಯ ಚೆಲುವೋ ತಾನಿ ತಂದಾನಾ’ ಜಾನಪದಗೀತಕ್ಕೆ ಬಣ್ಣಬಣ್ಣದ ಜರತಾರಿ ಲಂಗ ತೊಟ್ಟು ಕೋಲು ಹಿಡಿದು ಬಂದರು ಪುಟ್ಟ ಹುಡುಗಿಯರು. ಒಬ್ಬರು ಇನ್ನೊಬ್ಬರ ಹೆಜ್ಜೆಯನ್ನು ಕಣ್ಣಂಚಿನಲ್ಲೇ ಗಮನಿಸುತ್ತಾ ಸಂತಸದಿಂದ ಕೋಲಾಟವಾಡಿದರು. ಅವರನ್ನು ಹಿಂಬಾಲಿಸಿ ಬಂದ ರಂಗುರಂಗಿನ ಲಂಗ ದಾವಣಿ ತೊಟ್ಟ ಬಾಲೆಯರು ಕಬ್ಬಿನ ಜಲ್ಲೆಗಳ ನಡುವೆ ಕೋಲಾಟವಾಡಿದರು. ಪುಟ್ಟ ಪುಟ್ಟ ಹಸಿರು ಗಿಡಗಳು, ಗುಡಿಸಿಲುಗಳು ಮತ್ತು ತೋರಣ ಹಳ್ಳಿಯ ಸಂಭ್ರಮವನ್ನು ನಿರ್ಮಿಸಿತ್ತು. ಶ್ರೀಮತಿಯರಾದ ವೀಣಾ ಶಾಸ್ತ್ರಿ ಮತ್ತು ರೀಮಾ ಕಶ್ಯಪ್‌ ಅವರುಗಳು ಸಿದ್ಧಮಾಡಿದ್ದ ‘ಚಿನ್ನದ ಕೋಲು’ ಮಣ್ಣಿನ ಸೊಗಡನ್ನು ಸೂಸುತ್ತಾ ಸೊಗಸಾಗಿತ್ತು.

ಜಾನಪದ ಹಿನ್ನೆಲೆಯ ವಾದ್ಯ ಸಂಗೀತಕ್ಕೆ ರಂಗುರಂಗಿನ ಉಡುಗೆ ತೊಟ್ಟು, ಅದೇ ಶೈಲಿಯಲ್ಲಿ ಲವಲವಿಕೆಯಿಂದ ಕುಣಿಯುತ್ತಾ ಬಂದ ಬಾಲೆಯರ ಗುಂಪೊಂದು, ಹಿನ್ನೆಲೆಯು ಶಾಸ್ತ್ರೀಯಕ್ಕೆ ಬದಲಾದಂತೆ ನಾಟ್ಯಾಭಿನಯದ ಚಲನೆ-ಭಂಗಿಗಳನ್ನು ನಿರೂಪಿಸಿದರು. ಹಿನ್ನೆಲೆ ಬಾಲಿವುಡ್‌ಗೆ ತಿರುಗಿದಾಗ ಜೀನ್ಸ್‌ ಪ್ಯಾಂಟ್‌ ಮತ್ತು ಅದಕ್ಕೊಪ್ಪುವ ಟಾಪ್‌ಗೆ ವೇಷಾಂತರಿಸಿ ಬಂದು, ಖುಷಿಯಾಗಿ ಡಾನ್ಸ್‌ ಮಾಡಿದರು. ಬೆಳಕು, ಉಡುಗೆ, ನೃತ್ಯ ಜೊತೆಗೆ ಮಿಸ್ಟ್‌ ಎಲ್ಲದರಲ್ಲೂ ಬಾಲೀವುಡ್‌ನ ಪ್ರಭಾವ ಮತ್ತು ಪ್ರೇರಣೆ ಸಖತ್ತಾಗೇ ಇತ್ತು. ಹೀಗೆ ಮೂರು ನೃತ್ಯಶೈಲಿಗಳು ಮೇಳೈಸಿದ್ದ ‘ನೃತ್ಯಸಂಗಮ’ಕ್ಕೆ ಬಾಲೆಯರನ್ನು ತಯಾರಿ ಮಾಡಿ ಕರೆತಂದಿದ್ದವರು ಮಂಜುಳಾ ದಿವಾಕರ್‌.

ಈ ವೇಳೆಗಾಗಲೇ ಸಭೆ ತುಂಬಿತ್ತು. ಅರಳು ಹುರಿದ ಹಾಗೆ ಮಾತುಮಾತಿಗೆ ಕನ್ನಡ ಗಾದೆಗಳನ್ನು ಉದುರಿಸುವ ಮೂವರು ಮಾತಿನಮಲ್ಲಿಯರ ಪಾತ್ರಗಳಿಗೆ ಹರಟೆಯ ಪ್ರಹಸನದ ರೂಪ ನೀಡಿ ‘ಗಾದೆ ಗಮ್ಮತ್ತು’ ಎನ್ನುವ ವಿಶೇಷ ಕಾರ್ಯಕ್ರಮವೊಂದನ್ನು ನಡೆಸಿಕೊಟ್ಟವರು ಜಯಂತಿ ಉಮೇಶ್‌, ಡಾ.ಮೀನಾ ಸುಬ್ಬರಾವ್‌ ಮತ್ತು ಮಂಗಳಾ ಕುಮಾರ್‌.

ಹರಟೆಯಾಗುತ್ತಿದ್ದಾಗ ತೆರೆಮರೆಯಲ್ಲಿ ಏನೋ ಚಟುವಟಿಕೆ. ತೆರೆ ಸರಿದಾಗ ತಮ್ಮ ಗಾದೆ ಗಮ್ಮತ್ತನ್ನು ತೋರಿಸಲು ಸಿದ್ಧವಾಗಿದ್ದ ತಂಡಗಳು ಮೂರು. ‘ಮಾಡಿದ್ದುಣ್ಣೋ ಮಾರಾಯ’, ‘ಕಂತೇಗ್‌ ತಕ್ಕ ಬೊಂತೆ’ ಮತ್ತು ‘ನಾರಿ ಮುನಿದರೆ ಮಾರಿ’ ಊರುಕೇರಿಗಳಿಗೆ ಸಂಬಂಧಿಸಿದ ಗಾದೆಗಳು, ಪ್ರಾಣಿಗಳನ್ನು ಉಲ್ಲೇಖಿಸುವ ಗಾದೆಗಳು, ಸಿಡಿಗುಂಡಿನ ಸುತ್ತಿನಲ್ಲಿ ಪೂರ್ತಿಗೊಳಿಸಬೇಕಿದ್ದ ಗಾದೆಗಳು ಹೀಗೆಲ್ಲಾ ವಿವಿಧ ಸವಾಲೊಡ್ಡಿ ಹೊರಹೊಮ್ಮಿಸಿದ ಗಾದೆಗಳೆಷ್ಟೋ? ಸಮಸಮಕ್ಕೂ ಸ್ಪರ್ಧಿಸಿದ ತಂಡಗಳಲ್ಲಿ ಗೆದ್ದವರನ್ನು ನಿರ್ಧರಿಸಲು ಟೈ ಬ್ರೇಕರ್ರೇ ಬೇಕಾಯಿತು. ‘ನಾರಿ ಮುನಿದರೆ ಮಾರಿ’ ತಂಡಕ್ಕೆ ವಿಜಯಶ್ರೀ ಒಲಿದಳು. ಕಾರ್ಯಕ್ರಮದುದ್ದಕ್ಕೂ ಪ್ರೇಕ್ಷಕರು ತಮ್ಮತಮ್ಮಲ್ಲೇ ಗಾದೆಗಳನ್ನು ಹೇಳಿಕೊಳ್ಳುತ್ತಾ, ಆಗಾಗ ತಲೆ ಕೆರೆದುಕೊಳ್ಳುತ್ತಾ, ಒಟ್ಟಿನಲ್ಲಿ ನಗುನಗುತ್ತಾ ಆನಂದಿಸಿದರು.

ಸಾಮಾನ್ಯವಾಗಿ ಇಲ್ಲಿನ ಮಿಡ್ಲ್‌ ಸ್ಕೂಲು ಹೈಸ್ಕೂಲುಗಳ ಹುಡುಗ ಹುಡುಗಿಯರಿಗೆ ಅವರಪ್ಪ ಅಮ್ಮಂದಿರ ಜೊತೆ ಕನ್ನಡ ಕೂಟದ ಕಾರ್ಯಕ್ರಮಗಳಿಗೆ ಹೋಗುವುದು ಅಷ್ಟು ಕೂಲ್‌ ಅನ್ನಿಸಲಾರದೇನೋ. ಹೋದರೂ ವೇದಿಕೆ ಹತ್ತಿ ತಮ್ಮ ಪ್ರತಿಭೆಯನ್ನು ತೋರಿಕೊಳ್ಳುವ ಸಂಭವ ಅಷ್ಟಕ್ಕಷ್ಟೇ. ಈ ಪೂರ್ವಗ್ರಹವನ್ನು ಸುಳ್ಳಾಗಿಸಿದವರು ‘ಇಂಡಿಯಾಸ್‌ ಫೋಕ್‌ ಡಾನ್ಸಸ್‌’ ಮಾಡಿದ ತಂಡ. ಎಲ್ಲೋ ಸ್ಕೇಟ್‌ಬೋರ್ಡ್‌ ಮೇಲೆ ಜಾರಿಕೊಂಡೋ, SAT ಪರೀಕ್ಷೆಗೆ ತಲೆಕೆಡಿಸಿಕೊಂಡೋ ಇದ್ದಿರಬಹುದಾಗಿದ್ದ ನಿರ್ಮಲ ಗೋಸಾವಿ ಮತ್ತು ಅನುರಾಧ ಜಗದೀಶರ ಪಡ್ಡೆ ಹುಡುಗರ ಗುಂಪು ಮೂರು ಜಾನಪದ ಕುಣಿತಗಳನ್ನು ಆರಿಸಿ, ತಯಾರಿ ಮಾಡಿಕೊಂಡು ಆಯಾ ಕುಣಿತಗಳಿಗೆ ಒಪ್ಪುವ ಉಡುಗೆಗಳನ್ನೂ, ಹಿನ್ನೆಲೆಯ ಸಂಗೀತವನ್ನೂ ಸಿದ್ಧಪಡಿಸಿಕೊಂಡು ಬಂದು, ಸೂಕ್ತ ರಂಗಸಜ್ಜಿಕೆಗಳನ್ನೂ ಅಳವಡಿಸಿಕೊಂಡು ಪ್ರದರ್ಶಿಸಿದ ಸಾಹಸವನ್ನು ಎಲ್ಲರೂ ತುಂಬಾ ಮೆಚ್ಚಿದರು. ವೀರಗಚ್ಚೆ ತೊಟ್ಟು ಕತ್ತಿ ಹಿಡಿದು ಕೈರಾಳಿ ಶೈಲಿಯಲ್ಲಿ ಕುಣಿದರು. ಪಂಚೆ, ಪೇಟ, ತೋಳಿಲ್ಲದ ಒಳಕೋಟು ಧರಿಸಿ ಒರಿಸ್ಸಾದ ರಾಣಪ ಶೈಲಿಯಲ್ಲಿ ಬೊಂಬು ಕೋಲುಗಳ ಮೇಲೆ ನಿಂತು ಹೆಜ್ಜೆಹಾಕಿದರು. ಕೊನೆಗೆ ಹಿಮಾಚಲದ ಟೊಪ್ಪಿ, ಹೊಳಪಿನ ನಿಲುವಂಗಿ ತೊಟ್ಟು ಸೊಂಟಕ್ಕೆ ಕಿತ್ತಳೆ ಬಣ್ಣದ ಪಟ್ಟಿ ಕಟ್ಟಿಕೊಂಡು ಕುಣಿದ ಬಾಲೀವುಡ್‌ ಪ್ರೇರಣೆಯ ಡಾನ್ಸಿಗೆ ಪ್ರೇಕ್ಷಕರಲ್ಲಿದ್ದ ಹುಡುಗಿಯರ ಕಾಟ್‌ಕಾಲ್‌ಗಳು ಸಾಕಷ್ಟು ಉತ್ತೇಜನಕೊಟ್ಟಿತ್ತು. ನೃತ್ಯಗಳ ಬಗ್ಗೆ ಕನ್ನಡದಲ್ಲೇ ಎಲ್ಲಾ ವಿವರಣೆ ನೀಡಿದ ಆ ಹುಡುಗರ ಪ್ರಯತ್ನ ತುಂಬಾ ಶ್ಲಾಘನೀಯ ಮತ್ತು ಅನುಕರಣೀಯ.

ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಸ್ವಕ್ಷೇತ್ರದಲ್ಲಿ ಹೆಸರು ಮಾಡಿರುವ ಕನ್ನಡಿಗರು ಅನೇಕ. ಸಂಪ್ರದಾಯದಂತೆ ಈ ವರುಷ ಕೆ.ಕೆ.ಎನ್‌.ಸಿಯಿಂದ ಗುರುತಿಸಲ್ಪಟ್ಟ ಬಿ. ಎಸ್‌. ಪ್ರಕಾಶ್‌ರವರು ಸ್ಯಾನ್‌ ಫ್ರಾನ್‌ಸಿಸ್ಕೋದ ಭಾರತ ದೂತಾಲಯದಲ್ಲಿ ಕೌನ್ಸಲ್‌ ಜನರಲ್‌ ಆಗಿ ಇತ್ತೀಚೆಗೆ ಆಗಮಿಸಿರುವ, ಮೂಲತಃ ಮೈಸೂರಿನ ಕನ್ನಡಿಗರು. ಅವರು ವೃತ್ತಿಪರವಾದ ತಮ್ಮ ಲೋಕಪರ್ಯಟನೆಯನ್ನು ನೆನೆಪಿಸಿಕೊಳ್ಳುತ್ತಾ ಇಲ್ಲಿನ ಕನ್ನಡಿಗರನ್ನು ಉದ್ದೇಶಿಸಿ, You represent the most influential, vibrant and affluent Kannadiga and Indian community anywhere in the world ಎಂದರಲ್ಲದೆ, ಹಿಂದಿನಿಂದಲೂ ‘ನಿಧಾನಸ್ತ’ರೆಂದು ಎನಿಸಿಕೊಳ್ಳುವ ಆರಾಮಜೀವನದ ಕನ್ನಡಿಗರಿಗೆ ವ್ಯತಿರಿಕ್ತವಾದ ಮನೋಭಾವವನ್ನು ಇಲ್ಲಿನವರಲ್ಲಿ ಕಾಣಬಹುದು ಎಂದರು.

ಈ ಸಲ ಗೌರವಿಸಲ್ಪಟ್ಟ ಇನ್ನೊಬ್ಬ ಕನ್ನಡಿಗ ಬೆಂಗಳೂರಿನ ಬಿ.ಜೆ.ಅರುಣ್‌. ಇವರು ಈ ಕಣಿವೆಯಲ್ಲಿ ತಾಂತ್ರಜ್ಞಾನಿಕ ಕೃಷಿಯಲ್ಲಿ ಪ್ರಖ್ಯಾತರಾಗಿರುವ ಉದ್ಯಮಿ. ಇವರ ಕಂಪನಿ ವಿಶ್ವದ ಎರಡನೆಯ ಅತಿವೇಗವಾದ ವಿರಾಟ್‌ಗಣಕವನ್ನು ನಿರ್ಮಿಸಿ ಹೆಸರುವಾಸಿಯಾಗಿದೆ. ಅರುಣ್‌ರವರು ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡು ತಮಗಿಂತ ಮುಂಚೆ ತಾಂತ್ರಜ್ಞಾನಿಕ ಉದ್ದಿಮೆಗಳಲ್ಲಿ ಸಾಹಸಮಯ ಸಾಧನೆಗಳನ್ನು ಮಾಡಿರುವ ಭಾರತೀಯರು ತಮಗೆ ಆದರ್ಶ ಎಂದು ಹೇಳಿ ತಮ್ಮ ಹೆತ್ತವರನ್ನು ಮತ್ತು ಒಡಹುಟ್ಟಿದವರನ್ನು ಸ್ಮರಿಸಿಕೊಂಡರು. ಪ್ರಕಾಶ್‌ ಮತ್ತು ಅರುಣ್‌ ಇಬ್ಬರಿಗೂ ಗಂಧದ ಹಾರ, ಶಾಲು ಮತ್ತು ಫಲಕಗಳಿಂದ ಮನ್ನಣೆ ಸಂದಿತು.

ಆರತಿ ಮುರಳಿ, ಸುಶ್ರಾವ್ಯ ಕಂಠದ ಅಚ್ಚಕನ್ನಡದಲ್ಲಿ ಹಾಡುವ ಸ್ಥಳೀಯ ಪ್ರತಿಭೆ. ಶಕುಂತಲ ಮೂರ್ತಿಯವರ ಪುತ್ರಿಯೂ ಮತ್ತು ಶಿಷ್ಯೆಯೂ ಆದ ಆರತಿ, ಇತ್ತೀಚೆಗೆ ಶ್ರೀ ಪುರಂದರದಾಸರ ನವರತ್ನಕೃತಿಗಳ ಸಿ.ಡಿ.ಯನ್ನು ಹೊರತಂದಿದ್ದಾರೆ. ಇವರ ಪರಿಚಯವನ್ನು ಸಭೆಗೆ ಕೆ.ಕೆ.ಎನ್‌.ಸಿಯ ಅಧ್ಯಕ್ಷರಾದ ರವಿರೆಡ್ಡಿಯವರು ಮಾಡಿಕೊಟ್ಟರು.

ಯಕ್ಷಗಾನದ ವೈಭವ : ರಾವಣನ ತಾಯಿ ಕೈಕಸೆ ಕಡಲತೀರದಲ್ಲಿ ಶಿವಾರಾಧನೆಗೆ ನಿಂತು ಖಿನ್ನಳಾಗಿರುವ ದೃಶ್ಯ. ಹಿನ್ನೆಲೆಯಲ್ಲಿ ತೆರೆಯ ಮೇಲೆ ಸಾಗರದ ಚಿತ್ರ. ಕೈಕಸೆಯ ಆಸೆ ಪೂರೈಸುವ ಸಲುವಾಗಿ ಶಿವನ ಪ್ರಾಣಲಿಂಗವನ್ನು ತರಲು ನಾರದ ಪುಸಲಾಯಿಸಿದರೆ ಹೊರಟೇಬಿಟ್ಟ ಕೈಲಾಸಕ್ಕೆ ರಾವಣ! ಭೂಕೈಲಾಸ ನಾಟಕವನ್ನು ನಿರ್ದೇಶಿಸಿ, ರಾವಣನಾಗಿ ಪಾತ್ರಮಾಡಿದ ವೆಂಕಟರಮಣಭಟ್ಟರ ನಟನೆಯಲ್ಲಿ ಯಕ್ಷಗಾನದ ಛಾಯೆ ವಿರಾಜಿಸುತ್ತಿತ್ತು.

ವೇಷಭೂಷಿತರಾದ ಶಿವ-ಪಾರ್ವತಿಯರು, ಗಣೇಶ, ಸುಬ್ರಹ್ಮಣ್ಯ, ರಾವಣ, ನಾರದ, ಕೈಕಸೆ, ಭೂತಗಣ, ಗೋವಳ ಇವರೆಲ್ಲರನ್ನೂ, ರಂಗಮಂಚದ ಅಂಚಿನವರೆಗೆ ಮಕ್ಕಳು ಹೋಗಿ ಎವೆಯಿಕ್ಕದೇ ಬಾಯಲ್ಲಿ ಬೆರಳಿಟ್ಟುಕೊಂಡು ನೋಡುತ್ತಿದ್ದವು. ಕೈಲಾಸದ ದೃಶ್ಯ, ರಾವಣನ ತಪಸ್ಸು ಹಾಗೂ ಶಿವನೊಲ್ಲದಿರಲು ಕೈಲಾಸವನ್ನೇ ಎತ್ತಿಕೊಳ್ಳುವ ಸಾಹಸ ಇವೆಲ್ಲಾ ಕಣ್ಣಿಗೆ ಕಟ್ಟುವಂತಿದ್ದ ಹಿನ್ನೆಲೆಗಳಿಂದ ಹಾಗೂ ಸಂಗೀತ ಮತ್ತು ಶಬ್ಧ ಸಂಯೋಜನೆಗಳಿಂದ ತುಂಬಾ ಪರಿಣಾಮಕಾರಿಯಾಗಿ ಮನಸೂರೆಗೊಂಡವು.

ಹಾಡು-ಡಾನ್ಸ್‌ಗಳ ಮೋಡಿ : ಊಟದ ಬಿಡುವಿನ ನಂತರ ಕಾರ್ಯಕ್ರಮವನ್ನು ನಡೆಸಿಕೊಟ್ಟವರು ಶ್ರೀಮತಿ ಮಾನಸ ವೆಂಕಟಸುಬ್ಬಯ್ಯನವರು. ‘ಅಂಕು ಡೊಂಕು ದಾರಿ ಬ್ಯಾಡ ಸುಂಕವಿಲ್ಲದ್‌ ಊರು ಬ್ಯಾಡ’ ಅಂತ ಆಪ್ತಮಿತ್ರ ಚಿತ್ರದ ಹಾಡಿಗೆ ರಂಗುರಂಗಿನ ಉಡುಗೆ ತೊಟ್ಟ ಹದಿಹರೆಯದ ನಾಲ್ಕು ಜೋಡಿಗಳು ಹೀರೋ ಹೀರೋಯಿನ್ನುಗಳಂತೆ ಬಿಂದಾಸಾಗಿ ಡಾನ್ಸ್‌ ಮಾಡಿ ಎಲ್ಲರ ಮನಸೆಳೆದರು. ವಿಶೇಷವೆಂದರೆ ಹದಿನಾಲ್ಕು ವರುಷದ ಪ್ರೀತಿ ಶೇಖರ್‌ ಈ Everybody be happy ನರ್ತನದ ರೂವಾರಿ ಆಗಿದ್ದಲ್ಲದೆ ಡಾನ್ಸ್‌ ಕೂಡ ಮಾಡಿದರು. ಪ್ರೇಕ್ಷಕರಲ್ಲಿದ್ದ ಯುವವೃಂದವು ಕ್ಯಾಟ್‌ಕಾಲ್‌ ಮತ್ತು ಉದ್ಗಾರಗಳಿಂದ ಹಾಡು ಡಾನ್ಸ್‌ಗಳಿಗೆ ಪ್ರತಿಕಂಪಿಸಿತು.

ಕ್ಯಾರಓಕೆ ಬಳಸಿ ಕನ್ನಡದ ಚಿತ್ರಗೀತೆಗಳನ್ನು ಹಾಡುವುದು ಈಗ ಅಷ್ಟೇನೂ ಹೊಸದಲ್ಲ. ಆದರೆ ಕೆ.ಕೆ.ಎನ್‌.ಸಿಯ ಜ್ಯೋತಿ ಶೇಖರ್‌ ಮತ್ತು ಸೋಮಶೇಖರ್‌ ದಂಪತಿಗಳು ಇದನ್ನು ಹೊಸ ಎತ್ತರಕ್ಕೆ ಏರಿಸಿದ್ದು ಅಂದಿನ ಸಂಜೆಯ ಅಂತಿಮ ಕಾರ್ಯಕ್ರಮ ಚಿತ್ರಲಹರಿಯಲ್ಲಿ.

ಒಬ್ಬ ಹೀರೋ, ಹೇಳಿಕೇಳೀ ಕನ್ನಡಾಭಿಮಾನಿ. ಸ್ವಲ್ಪ ಓಲ್ಡ್‌ ಫ್ಯಾಶ್‌ನ್ಡ್‌ ಫೆಲೋನೇ ಅನ್ನಿ. ಸುಧೀರ್‌ ನಗರ್‌ಕರ್‌ ಅವರ ‘ನಾವಾಡುವ ನುಡಿಯೆ ಕನ್ನಡನುಡಿ’ ಹಾಡಿನಿಂದಾದ ಈ ಹೀರೋನ ಅನಾವರಣಕ್ಕೆ ಗಂಧದ ಗುಡಿಯ ಸಿರಿಯು ಛಾಯಾಚಿತ್ರಗಳಲ್ಲಿ ಪರದೆಯ ಮೇಲೆ ಮೂಡಿಬಂತು. ಹೀರೋಯಿನ್ನೋ ತುಂಬಾ ಅಪ್‌ಟುಡೇಟ್‌. ಆರತಿ ಮುರಳಿ ಹಾಡಿದ ‘ಜೋಕೆ, ನಾನು ಬಳ್ಳಿಯ ಮಿಂಚು’ ಹಿಟ್‌ಗೆ ನೆರಳು ಪರದೆಯ ಹಿಂದೆ ಜೇಮ್ಸ್‌ ಬಾಂಡ್‌ ಚಿತ್ರಗಳಲ್ಲಿರುವಂತೆ ಬಳುಕುತ್ತಾ ಡಾನ್ಸ್‌ ಮಾಡಿ ಕೊನೆಗೆ ಪರದೆ ಸೀಳಿ ಹೊರಬಂದಳು ಹೀರೋಯಿನ್‌ (ಐಶ್ವರ್ಯ ವರದರಾಜನ್‌). ಈ ಒಗ್ಗದ ಜೋಡಿಯನ್ನು ಒಗ್ಗೂಡಿಸುವ ಹಾವಳಿ ವಸಂತನದು. ಕಿರುಪ್ರತಿಭೆ ಸುಮುಖ್‌ ಶೇಖರ್‌ ಹಾಡಿದ ‘ಹೂವೊಂದು ಬಳಿಬಂದು’ವಿಗೆ ಪುಟಾಣಿ ಪಾತರಗಿತ್ತಿಯರು ಸೂರ್ಯಕಾಂತಿಯ ಸುತ್ತನಿಂತು ಮುದ್ದಾಗಿ ಕುಣಿದು ವಸಂತಮಾಸವನ್ನು ತೋರಿದವು.

ಮಾರನ ಕಾಟಕ್ಕೆ ಸಿಲುಕಿ ಹೀರೋ ಹಾಡುವ ‘ನೀರ ಬಿಟ್ಟು ನೆಲದ ಮೇಲೆ’ ಗೀತೆಯನ್ನು ಸೋಮಶೇಖರ್‌ ಹಾಡಿದ್ದಕ್ಕೆ ಪ್ರೇಕ್ಷಕರ ಕರತಾಡನ. ಈಗಾಗಲೇ ಸಭಾಂಗಣದಲ್ಲಿ ಕಾವೇರಿತ್ತು. ಒಲಿದ ನಾಯಕಿ ಜೇಮ್ಸ್‌ ಬಾಂಡ್‌ ವರಸೆಯಿಂದ ಏಕ್ದಂ ಇಳಿದು ಹಳ್ಳಿಚೆಲುವೆಯಾಗಿ ತನ್ನ ಗೆಣೆಯನ ಜೊತೆ ಊರು ಕೇರಿ ಜಾತ್ರೆಯಲ್ಲೆಲ್ಲಾ ‘ಕುಂತ್ರೆ ನಿಂತ್ರೆ ಅವಂದೆ ದ್ಯಾನ’ ಅಂತ ಹಾಡತೊಡಗಿದಳು. ಈ ಹಾಡಿಗೆ ನಳಿನಿ ಕೇಶವ್‌ಅವರು ಧ್ವನಿ ನೀಡಿ, ಕುರ್‌ಬೂರ್‌ ದಂಪತಿಗಳು ಅಭಿನಯಿಸಿದ್ದರು.

ಆದರೂ ಸ್ವಲ್ಪನಾದ್ರೂ ಟೆಂಶನ್‌ ಬೇಡ್ವೇ? ಬಿಂಕದ ನಾಯಕಿಯನ್ನು ಒಲಿಸಲು ಹೀರೋ ಮತ್ತು ಅವನ ಪೂರಾ ನಿಯತ್ತನ್ನು ನಿರೀಕ್ಷಿಸುತ್ತಾ ಅವಳೂ ಹಾಡಿದ ‘ಚಿನ್ನದ ಮಲ್ಲಿಗೆ ಹೂವೇ’ ಯುಗಳಕ್ಕೆ ಸುಧೀರ್‌ ಮತ್ತು ಆರತಿ ಧ್ವನಿಗೂಡಿಸಿ ‘ಆನಂದದಾ ಕಂಬನಿ’ ಅಂದಾಗ ಸಭೆಯಲ್ಲಿ ನೊಸ್ಟಾಲ್ಜಿಯಾ. ಹಾಡಿಗೆ ಅಭಿನಯ ಜಾವಗಲ್‌ ದಂಪತಿಗಳದ್ದು. ಯಾಕೋ ಮುನಿದ ಹೀರೋವನ್ನು, ನಾಯಕಿ ‘ಸಿಟ್ಯಾಕೋ ಸಿಡಕ್ಯಾಕೋ ನನಜಾಣ’(ನಳಿನಿ ಕೇಶವ್‌) ಅಂತ ಹಾಡಿ ಮತ್ತೆ ಒಲಿಸಿಕೊಳ್ಳುತ್ತಾಳೆ.

ಅಂತ್ಯದಲ್ಲಿ ‘ಕನಸಲೂ ನೀನೆ’ ಹಾಡಿಗೆ ರವಿಶೇಖರ್‌ ಕುಟುಂಬ ಹೆಜ್ಜೆ ಹಾಕಿತು. ಆರತಿ ಮತ್ತು ಸೋಮಶೇಖರ್‌ ಅವರ ಧ್ವನಿ. ಫಾರ್‌ಮ್ಯುಲಾ-ಸುಖಾಂತದ ಒಂದು ಪ್ರೇಮಕಥನದ ನೆಪದಲ್ಲಿ ಹೀಗೆ ಹಲವು ಹಚ್ಚಹಸಿರಾದ ಚಿತ್ರಗೀತೆಗಳು ಮತ್ತು ಅವಕ್ಕೆ ಒಪ್ಪುವ ಡಾನ್ಸ್‌ಗಳನ್ನು ಸಾದರಪಡಿಸಿದ ಚಿತ್ರಲಹರಿಯ ಯಶಸ್ಸಿಗೆ ಆಕಾಶವಾಣಿ ವಾಣಿಜ್ಯವಿಭಾಗದ ಚಿತ್ರಗೀತೆಗಳನ್ನು ಕೇಳುತ್ತಾ ಬೆಳೆದ ತಲೆಮಾರಿನ ತುಟಿಯಂಚಿನಲಿ ಮಿಂಚಿದ ಕಿರುನಗು ಸಾಕ್ಷಿಯಾಗಿತ್ತು.

ಬಿಸಿಬೇಳೆ ಬಾತ್‌, ಶಾವಿಗೆ ಬಾತ್‌, ಮೈಸೂರು ಪಾಕ್‌ಗಳಿದ್ದ ಡಬ್ಬದ ಊಟ ‘ಡಬ್ಬಾ’ ಅಂತೂ ಆಗಿರದೇ ಶುಚಿರುಚಿಯಾಗಿತ್ತು. ಮಕ್ಕಳಿಗೆ ಎಂದಿನಂತೆ ಪೀಡ್ಜಾ ಇತ್ತು. ಎಲ್ಲಾ ಸುಸೂತ್ರವಾಗಿ ನಡೆದ ಕಾರ್ಯಕ್ರಮವು, ವಿಘ್ನೕಶನ ಪ್ರಾರ್ಥನೆಯಿಂದ ಪ್ರಾರಂಭವಾಗಿದ್ದರೂ ಒಂದು ಹುಸಿ ಫೈರ್‌ ಅಲಾರಮ್ಮನ್ನು ಒಳಗೊಂಡಿತ್ತು. ಇದು ಕೇವಲ ಬೆಲ್ಲದ ಜೊತೆಗಿನ ಬೇವನ್ನೂ ನೆನಪು ಮಾಡಿಕೊಡಲು ಮಾತ್ರ ಎಂದುಕೊಳ್ಳಬಹುದಲ್ಲವೇ? ಭಾರತದ ಅಧಿನಾಯಕನಿಗೆ ಮತ್ತು ಲ್ಯಾಂಡ್‌ ಆಫ್‌ದ ಬೇವಿಗೆ ಸಾಂಪ್ರದಾಯಿಕವಾಗಿ ನಮಿಸಿದ ಮೇಲೆ ಕಾರ್ಯಕ್ರಮಕ್ಕೆ ತೆರೆಬಿತ್ತು.

ಮುಖಪುಟ / ಯುಗಾದಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more