• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಯುಗಾದಿಗೊಂದಿಷ್ಟು ಬೇವು-ಬೆಲ್ಲ’

By Staff
|
  • ಮಮತಾ ಮೆಹಂದಳೆ ಆರ್‌.

rm_mamatha@hotmail.com

‘ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ....’ ಶಾಲಾದಿನಗಳಲ್ಲಿ ಬಾಯಿಪಾಠ ಮಾಡಿದ, ಇಂದಿಗೂ ಎಸ್‌.ಜಾನಕಿಯವರ ಸುಶ್ರಾವ್ಯಕಂಠದಲ್ಲಿ ಕೇಳುತ್ತಿರುವ ಅಂಬಿಕಾತನಯದತ್ತರ ಸುಂದರ, ಅರ್ಥಪೂರ್ಣ ಕವಿತೆ. ಯುಗಾದಿ ಎಲ್ಲಾ ಜೀವಿಗಳಿಗೂ ಹೇಗೆ ಹೊಸ ಜನ್ಮ ನೀಡುತ್ತದೆ? ಏಕೆ ನಮ್ಮನ್ನು ಮಾತ್ರ ಮರೆತಿದೆ? ಎಂಬುದು ಕವಿಯ ಪ್ರಶ್ನೆ.

ಸದಾ ಸುಖವನ್ನೇ ಬಯಸುವುದು ನಮ್ಮೆಲ್ಲರ ಗುಣ. ಇದು ಎಷ್ಟರಮಟ್ಟಿಗೆಂದರೆ, ಯುಗಾದಿಯಂದು ತಿನ್ನುವ ಬೇವು, ಬೆಲ್ಲದಲ್ಲಿರುವ ಗಜ್ಜುಗದಷ್ಟು ಕಹಿ ತಿನ್ನಲೂ ನಮಗೆ ಹಿಂಜರಿಕೆ. ಚಿಂತೆ, ದುಃಖ, ನೋವು, ನಿರಾಸೆಗಳು ಯಾರಿಗೆ ಬೇಕಿದೆ? ಮನುಷ್ಯ ಸದಾಕಾಲ ಒದ್ದಾಡುವುದು ಇವೆಲ್ಲವುಗಳ ಶಮನಕ್ಕೇ ತಾನೇ!

ಯುಗಯುಗಾದಿಯಲ್ಲಿ, ‘ನಿದ್ದೆಗೊಮ್ಮೆ ನಿತ್ಯ ಮರಣ, ಎದ್ದ ಸಲ ನವೀನ ಜನನ..’ ಇರಬೇಕಿತ್ತೆಂಬ ಆಶಯ ಬೇಂದ್ರೆಯವರು ವ್ಯಕ್ತ ಪಡಿಸಿದ್ದಾರೆ. ಇದು ಇಡೀ ಮನುಕುಲದ ಆಶಯವೇ ಆಗಿದೆ. ಆದರೆ ಇಂತಹ ಆಶಯ ಈಡೇರುವುದು ಕನಸು ಎಂಬುದೂ ಎಲ್ಲರೂ ಅರಿತಿರುವ ವಿಷಯ. ಈ ಆಶಯವನ್ನು ಬೇರೆಯದೇ ರೀತಿಯಲ್ಲಿ ನನಸಾಗಿಸುವ ಪ್ರಯತ್ನ ನಾವೇಕೆ ಮಾಡಬಾರದು? ಹೊಸ ಜನ್ಮ ಬಂದಾಗ ಹಳೆಯ ದುಃಖಗಳಿರುವುದಿಲ್ಲ. ಸೋಲಿನ ನಿರಾಶೆಯಿರುವುದಿಲ್ಲ. ಬಿರುಕು ಬಿಟ್ಟ, ಮುರಿದ ಸಂಬಂಧಗಳ ನೋವಿರುವುದಿಲ್ಲ. ನಾಳಿನ ಚಿಂತೆಯಿರುವುದಿಲ್ಲ. ಇದಕ್ಕಾಗಿಯೇ ಅಲ್ಲವೆ ನಾವು ಪ್ರತಿನಿತ್ಯ ನವೀನ ಜನನ ಬಯಸುವುದು! ಸದಾ ಸಂತೋಷ ಕ್ಕಾಗಿ ಹಂಬಲಿಸುವುದು. ಒಂದು ಹೇಳಿಕೆಯಿದೆ... ಸ್ವರ್ಗದಲ್ಲಿ ದೇವತೆಗಳು ಸದಾ ಸುಖದಲ್ಲೇ ಇರುತ್ತಾರಂತೆ. ಈ ಸಂತೋಷದಿಂದ ಬೇಸತ್ತಾಗ ಬದಲಾವಣೆಗಾಗಿ ಸಂತರು, ಮಹಾಪುರುಷರ ರೂಪದಲ್ಲಿ ಭೂಮಿಗೆ ಬರುತ್ತಾರಂತೆ...! ಇಲ್ಲಿನ ಕಷ್ಟ , ನೋವು ಅನುಭವಿಸಿ ಸ್ವರ್ಗಕ್ಕೆ ವಾಪಸ್ಸಾಗುತ್ತಾರಂತೆ! ಹೀಗೆ ನಿತ್ಯ ನವೀನ ಜನನವೇ ನಮ್ಮ ಸಂತೋಷಕ್ಕೆ ಮುಳುವಾದರೆ...?

ಇದರ ಬದಲಾಗಿ ಪ್ರತಿದಿನ ಎದ್ದಾಗ ನಾವು ಹೊಸ ಜನ್ಮ ಪಡೆದಂತೆ ನಮ್ಮನ್ನು ನಾವು ನಿತ್ಯ ಕರ್ಮಗಳಲ್ಲಿ ತೊಡಗಿಸಿಕೊಲ್ಲಬಹುದಲ್ಲವೆ? ಜೀವನದ ಹಿಂದಿನ ಸೋಲು, ದುಃಖ ಮರೆಯಲು, ಸಂಬಂಧ ಬೆಳೆಸಲು, ನಾಳಿನ ಚಿಂತೆ ಬಿಟ್ಟು ವರ್ತಮಾನದಲ್ಲಿ ಬದುಕಲು ಕಲಿತರೆ...ಅದೇ ಹೊಸ ಜನ್ಮ. ಮಕ್ಕಳಂತೆ ಪ್ರತಿ ಕ್ಷಣದ ಸುಖ ಆಗಾಗಲೇ ಅನುಭವಿಸಿ, ದುಃಖ ಆಗಾಗಲೇ ಮರೆತುಬಿಟ್ಟರೆ, ಅವರಂತೆ ಪ್ರೀತಿಸಲು, ಅಳಲು, ನಗಲು, ಕಲಿಯಲು, ನಲಿಯಲು ತೊಡಗಿದರೆ, ಪ್ರತಿ ಕೆಲಸದಲ್ಲೂ ತನ್ಮಯರಾಗಲು, ಸೋಲು-ಹತಾಶೆಗಳ ಬಿಟ್ಟು ಶತಪ್ರಯತ್ನದಿಂದ ಗೆಲ್ಲಲು ಕಲಿತರೆ...ಅದೇ ಅಲ್ಲವೆ ಹೊಸ ಜನ್ಮ?ನಾವೂ ಮಕ್ಕಳಂತೆ ಮುಗ್ಧತೆ, ಸೂಕ್ಷ್ಮತೆ ಬೆಳೆಸಿಕೊಂಡು ಸಂತೋಷ ವಾಗಿರಲು ಅಡ್ಡಿಯಾದರೂ ಏನು?

ಯುಗಾದಿ ಬಂತೆಂದರೆ ಹಸಿರು ತುಂಬಿದ ಮರಗಿಡಗಳು, ಅದರಲ್ಲಿ ತೊನೆಯುವ ಹೂಗೊಂಚಲುಗಳು, ಮಾವು, ಹಲಸುಗಳು, ಅವುಗಳ ಮೇಲೆ ಕುಳಿತ ಹಕ್ಕಿಗಳ ಕಲರವ, ಕೋಗಿಲೆಯ ಗಾನ, ಸಿಹಿ ಹೋಳಿಗೆಯ ಸವಿ, ಅಲಂಕೃತಗೊಂಡ ಮುಂಬಾಗಿಲುಗಳು... ಸಂಭ್ರಮಿಸುವ ಜನ... ಇವೆಲ್ಲ ಯಾರಿಗೆ ತಾನೆ ಬೇಡ? ಈಗ ಅಂಗಡಿಗಳ ರೆಡಿಮೇಡ್‌ ಹೋಳಿಗೆ, ಬಾಗಿಲಿಗೆ ಎಂದೂ ಬಾಡದ ಹಚ್ಚಹಸಿರು ತೋರಣ ಇವೆಲ್ಲಾ ಜೀವನದೊಳಕ್ಕೆ ನುಗ್ಗಿಬಿಟ್ಟಿವೆ. ‘ಹಿಂದಿನ ಸಂಭ್ರಮವೆಲ್ಲ ಕಳೆದುಹೋಗುತ್ತಿದೆ’ ಎಂದು ನಾವು ಕೊರಗುತ್ತೇವೆ. ಇದಕ್ಕೆ ಸಮಯಾಭಾವದ ನೆಪ ಹೇಳುತ್ತೇವೆಯೇ ಹೊರತು ಇದನ್ನು ಉಳಿಸಲು , ಯುಗಯುಗಾದಿಗಳಿಗೂ ಮುಂದುವರಿಯುವಂತಾಗಲು ಏನೂ ಮಾಡಲು ತಯಾರಿಲ್ಲ. ಹಸಿರು ತುಂಬಲು ಗಿಡ ಬೆಳೆಸುವುದು, ಹೂ-ಹಣ್ಣು, ಪಕ್ಷಿಗಳ ಕಲರವ ಅನುಭವಿಸಲು ನಮ್ಮ ‘ಬಿಜಿ’ ಜೀವನದಲ್ಲಿ ಸ್ವಲ್ಪವಾದರೂ ಸಮಯ ಮೀಸಲಿಡುವುದು ಇವೆಲ್ಲ ಬಹು ಅವಶ್ಯಕ.

ಏಕೆಂದರೆ ಇಂತಹ ‘ಬಿಜಿ’ನೆಸ್‌ ನಲ್ಲೇ ಜೀವನವೆಲ್ಲ ಕಳೆದು ಮುಂದೊಂದು ದಿನ, ‘ಛೆ! ನಾನು ಸುಲಭವಾಗಿ ಕೈಗೆಟುಕುವಂತಿದ್ದ ಎಷ್ಟೋ ಸುಖಗಳನ್ನ ಅನುಭವಿಸಲೇ ಇಲ್ಲವಲ್ಲ’ ಎಂದು ಕೊರಗುವಂತಾಗಬಾರದು. ಸಿಹಿ ಸಿಕ್ಕಾಗ ಅದನ್ನು ಅನುಭವಿಸದೆ, ‘ಎಲ್ಲ ಕಷ್ಟ ನನಗೇ ಏಕೆ ಬರುತ್ತದೆ?’ ಎಂದು ಕೊರಗುವುದರಲ್ಲಿ ಏನರ್ಥ?. ನಾವು ಬಹಳ ಸಲ ಮಾಡುವುದು ಹೀಗೆಯೇ. ‘ಇರುವುದೆಲ್ಲವ ಬಿಟ್ಟು ಇರದುದರೆಡೆಗೆ...’ ತುಡಿಯುತ್ತಾ, ಕೊರಗುತ್ತಾ ಬದುಕುವವರು ನಾವು. ಹೀಗಿರುವಾಗ ನಿತ್ಯ, ನವೀನ ಜನುಮ ಪಡೆದರೂ ನಾವದನ್ನು ಅನುಭವಿಸುವುದು ಸಂದೇಹವೇ !

ಸಿಹಿ-ಕಹಿಗಳ ಇನ್ನೊಂದು ರೂಪ ಹೀಗಿರುತ್ತದೆ. ಹಿರಿಯರು ನಮ್ಮನ್ನು ಸದಾ ತಿದ್ದುವ, ಹೊಸ ವಿಷಯಗಳನ್ನು ಕಲಿಸುವ ಪ್ರಯತ್ನ ಮಾಡುತ್ತಿರುತ್ತಾರೆ. ಅವರ ಈ ಹಿತನುಡಿಗಳು ನಮಗೆ ಬಹಳಷ್ಟು ಬಾರಿ ಕಹಿಯಾಗಿ ಕಾಣುತ್ತವೆ. ಆದರೆ ಮುಂದೊಂದು ದಿನ ಅದರ ಅರ್ಥ ತಿಳಿದಾಗ, ಅದೇ ಹಿತನುಡಿಗಳನ್ನು ನಾವು ನಮ್ಮ ಕಿರಿಯರಿಗೆ ಆಡುವ ಪ್ರಸಂಗ ಬಂದಾಗ ನಮಗೆ ಅದರ ಪ್ರಾಮುಖ್ಯತೆ ತಿಳಿಯುತ್ತದೆ. ಕಹಿಯೆನಿಸಿದರೂ ಅದನ್ನುಂಡು ನಡೆದವರಿಗೆ ಮುಂದೆ ಸಿಹಿ ಕಾದೇ ಇರುತ್ತದೆ. ಯಾವಾಗಲೂ ಕಠಿಣ ಶ್ರಮಕ್ಕೆ ಯಶಸ್ಸು, ನೆರವಾಗುವ ಮನೋಭಾವಕ್ಕೆ ಪ್ರತಿಫಲ ಇದ್ದೇ ಇರುತ್ತದೆ. ಈ ಸಿಹಿ-ಕಹಿಗಳನ್ನು ಸಂದರ್ಭಕ್ಕೆ ಅನುಗುಣವಾಗಿ ಆರಿಸಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ.

ಜೀವಜಾಲಕ್ಕೆಲ್ಲ ವರ್ಷಕೊಮ್ಮೆ ಹೊಸಜನ್ಮ. ಅದೇ ನಾವು ಮನಸ್ಸು ಮಾಡಿದರೆ ನಮಗೆ ನಿತ್ಯವೂ ಹೊಸಜನ್ಮ. ಹೊಸಜನ, ಹೊಸ ವಿಷಯಗಳು, ಹೊಸ ಸಂಬಂಧಗಳು, ಹೊಸ ಸಾಧನೆಗಳು, ಜೊತೆಗೆ ಹೊಸ ದುಃಖಗಳು ನಮ್ಮ ಸುತ್ತ ಹರಡಿಕೊಂಡಿರುತ್ತವೆ. ಅದರಲ್ಲಿ ನಾವು ಯಾವುದನ್ನು ಆರಿಸಿಕೊಳ್ಳಬೇಕು, ಯಾವುದನ್ನು ಬಿಡಬೇಕು ಎಂಬುದು ನಮಗೆ ಬಿಟ್ಟಿದ್ದು. ಈ ನಿತ್ಯೋತ್ಸವದ ಜೊತೆಗೆ ವರ್ಷಕ್ಕೊಮ್ಮೆ ಬರುವ ಬರುವ ಯುಗಾದಿ ನಮಗೆಲ್ಲ ಸಂಬಳದ ಜೊತೆಗಿನ ‘ಬೋನಸ್‌’ ಇದ್ದಂತೆ. ಇಂಥ ಸುಂದರ ಪ್ರಪಂಚವನ್ನು ಉಳಿಸುವ, ಅನುಭವಿಸುವ, ಬೆಳೆಸುವ, ನಮ್ಮ ಪರಿಸರದಲ್ಲೆಲ್ಲ ಕುಶಲತೆ ಹರಡುವ ಪ್ರಯತ್ನಕ್ಕೆ ಈ ಯುಗಾದಿಯೇ ಆರಂಭವಾಗಬಾರದೇಕೆ?

ಮುಖಪುಟ / ಯುಗಾದಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more