ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಚಾಂಗ ಎಂದರೇನು?

By Staff
|
Google Oneindia Kannada News

*ಟಿ.ಎಂ. ಸತೀಶ್‌

ಪಂಚಾಂಗ ಎಂದರೆ ಎನು ? ಎಂದು ನೀವು ಯಾರನ್ನಾದರೂ ಪ್ರಶ್ನಿಸಿದರೆ, ನಿಮಗೆ ಸಾಮಾನ್ಯವಾಗಿ ದೊರಕುವ ಉತ್ತರ : ಅದೊಂದು ದೇವರುಗಳ ಮುಖಪುಟವಿರುವ ಪುಸ್ತಕ, ಪಂಡಿತರಿಗಷ್ಟೇ ಅರ್ಥವಾಗುವ ಕಗ್ಗಂಟಾದ , ಕೆಲವು ಶ್ಲೋಕಗಳಿಂದ ಕೂಡಿದ ಶಾಸ್ತ್ರ.

ಪಂಚಾಗ ಎಂದರೆ, ಅದು ತಿಥಿ, ವಾರ, ನಕ್ಷತ್ರ, ಗ್ರಹಣ, ಹಲ್ಲಿ ಶಕುನ, ಪ್ರಯಾಣ, ಏಕಾದಶಿ, ಸಂಕಷ್ಟ ಚತುರ್ಥಿ ಯಾವ ದಿನ ಎಂದು ತಿಳಿಸುವ ವಾರ್ಷಿಕ ಕೈಪಿಡಿ ಎಂದು ಇನ್ನು ಕೆಲವರು ಹೇಳಿಯಾರು.

ನಿಜಕ್ಕೂ ಈ ಪಂಚಾಂಗ ಏನು? ಇದಕ್ಕೆ ಪಂಚಾಂಗ ಎಂಬ ಹೆಸರೇಕೆ ಬಂತು?

ಐದು ಅಂಗಗಳಲ್ಲಿ ಕೂಡಿದ್ದೇ ಪಂಚಾಂಗ. ತಿಥಿ, ವಾರ, ನಕ್ಷತ್ರ, ಯೋಗ ಹಾಗೂ ಕರ್ಣ ಎಂಬ ಐದು ಅಂಗಗಳ ವೈಜ್ಞಾನಿಕ ಮಾಹಿತಿ ಸಕ್ಷಿಂಚಯ. ಜಲ, ನೆಲ, ಗಾಳಿ, ಬೆಂಕಿ, ಆಕಾಶ ಎಂಬ ಪಂಚಭೂತಗಳಿಂದ ಆದ ಮಾನವ ತನ್ನ ಜನಜೀವನದ ನಿತ್ಯ ನಡೆವಳಿಕೆಗಳನ್ನು ಕೆಲವು ವೈಜ್ಞಾನಿಕ ಆಧಾರಗಳ ಮೇಲೆ ದಾಖಲಿಸಲು ಹಾಗೂ ವಿಶ್ಲೇಷಿಸಲು ಸೃಷ್ಟಿಸಿದ ಶಾಸ್ತ್ರ.

ನಮ್ಮ ಪೂರ್ವಿಕರು ಶ್ರೇಷ್ಠಾತಿ ಶ್ರೇಷ್ಠ ಖಭೌತಜ್ಞರು. ಮಂಗಳನ ಅಂಗಳ ಕೆಂಪು ಬಣ್ಣದಿಂದ ಕೂಡಿದೆ ಹೀಗಾಗೇ ಆತ ಅಂಗಾರಕ ಎಂಬ ವಿಶ್ಲೇಷಣೆಗಳನ್ನು ನೀಡಿದ್ದರು. ಸೂರ್ಯ, ಚಂದ್ರರ ಚಲನೆಯನ್ನೂ ಗುರುತಿಸಿದ್ದರು. ವೈಜ್ಞಾನಿಕ ತಳಹದಿಯ ಅಧ್ಯಯನದಿಂದ ತಿಥಿ, ವಾರ, ನಕ್ಷತ್ರ, ಯೋಗ ಹಾಗೂ ಕರ್ಣಗಳನ್ನು ವಿಶ್ಲೇಷಿಸಿದರು.

ತಿಥಿ ಎಂದರೇನು : ಚಂದ್ರನು ಭೂಮಿಯನ್ನು ಸುತ್ತಲು ಒಂದು ದಿನದಲ್ಲಿ ತೆಗೆದುಕೊಳ್ಳುವ ಅವಧಿ. ಚಂದ್ರನು ನಿತ್ಯ ಸುಮಾರು 12 ಡಿಗ್ರಿಗಳಷ್ಟು ಸಂಚರಿಸುತ್ತಾನೆ. ಈ ಚಲನೆಯನ್ನು ಆದರಿಸಿ ಶುಭ - ಅಶುಭ, ರಿಕ್ತ ತಿಥಿಗಳು ಎಂಬ ವಿಶ್ಲೇಷಣೆ ಮಾಡಲಾಗಿದೆ.

ದಿನ ಹಾಗೂ ವಾರ : ವಾರಗಳು ಎಂದರೆ ಭೂಮಿ ತನ್ನ ಅಕ್ಷದ ಸುತ್ತ ಒಂದು ಸುತ್ತು ಹಾಕುವ 24 ಗಂಟೆ ಒಂದು ದಿನ. ಹೀಗೆ ಇದು 7 ಬಾರಿ ಹಾಕುವ ಸುತ್ತು ಒಂದು ವಾರ. ಈ ಚಲನೆ 7 ದಿನಕ್ಕೊಮ್ಮೆ ಪುನರಾವರ್ತನೆ ಆಗುವುದರಿಂದ ಇದನ್ನು 7 ಗ್ರಹಗಳು ಎಂದು ಗುರುತಿಸಲಾಗಿದೆ. ಜ್ಯೋತಿಷಿಗಳು ಸೂರ್ಯನನ್ನೂ ಒಂದು ಗ್ರಹ ಎಂದು ಪರಿಗಣಿಸಿರುವುದರಿಂದ, ಭಾನು (ರವಿ) ವಾರ, ಸೋಮ (ಚಂದ್ರ) ವಾರ, ಮಂಗಳವಾರ, ಬುಧವಾರ, ಗುರುವಾರ, ಶುಕ್ರವಾರ ಹಾಗೂ ಶನಿವಾರ ಎಂದು ಹೇಳಿದ್ದಾರೆ. ಗ್ರಹಗಳ ಹೆಸರಿನ ಮೂಲಕ, ಶುಭ ಹಾಗೂ ಅಶುಭ ದಿನಗಳನ್ನು ನಿರ್ಧರಿಸಿದ್ದಾರೆ.

ನಕ್ಷತ್ರ : ಆಗಸದಲ್ಲಿ ನಮಗೆ ಕೋಟ್ಯನುಕೋಟಿ ನಕ್ಷತ್ರಗಳು ಗೋಚರಿಸಿದರೂ, ಸೂರ್ಯನ ಸುತ್ತ ಇರುವ ಅಶ್ವಿನಿ, ಭರಣಿ, ಕೃತ್ತಿಕೆ.. ಇತ್ಯಾದಿ 27 ನಕ್ಷತ್ರಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲಾಗಿದೆ. ಇನ್ನುಳಿದ ನಕ್ಷತ್ರಗಳು ಆಕಾಶಕಾಯಗಳು ಅಥವಾ ತ್ಯಾಜ್ಯ ನಕ್ಷತ್ರ ಎಂಬ ವಿಶ್ಲೇಷಣೆ ಇದೆ ಎನ್ನುತ್ತಾರೆ ನಮ್ಮ ಜ್ಯೋತಿಷಿಗಳು.

ಯೋಗ, ಕರ್ಣ : ಯೋಗ ಎಂಬುದು ಸೂರ್ಯ ಚಂದ್ರರಿಬ್ಬರು ನಿರ್ದಿಷ್ಟ ಕೋನದ ಸಮೀಪಕ್ಕೆ ಬರುವುದನ್ನು ಯೋಗ ಎನ್ನುತ್ತಾರೆ. ಈ ಯೋಗದಲ್ಲಿ ಸೂರ್ಯ ಚಂದ್ರರ ಚಲನೆ ಆಧರಿಸಿ 27 ಯೋಗಗಳನ್ನು ಹಾಗೂ ಸೂರ್ಯಚಂದ್ರರ ಚಲನೆಯ ವ್ಯತ್ಯಾಸ ತಿಳಿಯಲಾಗಿದೆ. ಹೀಗಾಗಿಯೇ ಪಂಚಾಂಗ ಒಂದು ವೈಜ್ಞಾನಿಕ ಅಧ್ಯಯನದ ಸೃಷ್ಟಿ ಎನ್ನಲು ಅಡ್ಡಿಯಿಲ್ಲ.

ಈ ಲೆಕ್ಕಾಚಾರಗಳ ರೀತ್ಯವೇ ಗ್ರಹಣ ಯಾವತ್ತು ಘಟಿಸುತ್ತದೆ ಎಂಬುದನ್ನೂ ನಮ್ಮ ಪೂರ್ವಿಕರು ಲೆಕ್ಕಹಾಕುತ್ತಿದ್ದರು. ಇನ್ನು ಕರ್ಣ, ಸೂರ್ಯ ಚಂದ್ರರ ಚಲನೆಯನ್ನು ಅರ್ಥೈಸುವ ಮಾನದಂಡಗಳು. ಧರ್ಮ, ಪುರಾಣ, ಶಾಸ್ತ್ರಗಳಲ್ಲಿ ನಂಬಿಕೆ ಇಲ್ಲದಿದ್ದರೂ ಈ ವೈಜ್ಞಾನಿಕ ತಳಹದಿಯಲ್ಲಿ ಸೃಷ್ಟಿಸಲಾಗಿರುವ ಪಂಚಾಂಗವನ್ನು ನಂಬದಿರಲು ಕಾರಣಗಳಿಲ್ಲ?

ಕಾಲ ದೇಶಕ್ಕೆ ಅನುಗುಣವಾಗಿ ಪಂಚಾಂಗಗಳಿವೆ. ಉತ್ತರ ಭಾರತದಲ್ಲಿ ವಿಕ್ರಮಶಕೆಯ ರೀತ್ಯ ಕಾಲ ಗಣನೆ ಮಾಡುತ್ತಾರೆ. ವಿಕ್ರಮ ಶಕೆಯ ಆರಂಭದ ದಿನವಾದ ಕಾರ್ತೀಕ ಶುಕ್ಲ ಪಾಡ್ಯದಿಂದ (ದೀಪಾವಳಿ) ಉತ್ತರ ಭಾರತೀಯರಿಗೆ ಯುಗಾದಿಯ ದಿನ. ಆದರೆ, ದಕ್ಷಿಣ ಭಾರತೀಯರಾದ ನಾವು ಶಾಲಿವಾಹನನು ವಿಕ್ರಮನನ್ನು ಜಯಿಸಿದ ದಿನದಿಂದ ಕಾಲಗಣನೆ ಆರಂಭಿಸಿದ್ದೇವೆ. ಹೀಗಾಗಿ ಶಾಲಿವಾಹನ ಶಕೆಯಲ್ಲಿ ಚೈತ್ರ ಶುಕ್ಲ ಪಾಡ್ಯ ಪ್ರಥಮದಿನ.

ಮುಖಪುಟ / ಯುಗಾದಿ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X