• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಿಎಸ್‌ಎಸ್‌ - ಬದುಕಿಗೆ ಬದ್ಧವಾದ ಹಾಡುಹಕ್ಕಿ

By ಚ.ಹ. ರಘುನಾಥ
|

ಯಾರು ಕೇಳಲಿ ಎಂದು

ನಾನು ಹಾಡುವುದಿಲ್ಲ

ಹಾಡುವುದು ಅನಿವಾರ್ಯ

ಕರ್ಮ ನನಗೆ

ಈ ಸಾಲುಗಳು ಸುಮಾರು 5 ದಶಕಗಳಿಂದ ಪದ್ಯ ಬರೆಯುತ್ತಾ ಬಂದಿರುವ ನಮ್ಮ ನಡುವಿನ ಸಜ್ಜನ ಡಾ. ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ ಅವರ ಬದುಕನ್ನೂ ಸಂಕೇತಿಸುತ್ತವೆ. ಅದಕ್ಕೆ, ಬರಹವನ್ನು ಬದುಕಿನಷ್ಟೇ ಗಂಭೀರವಾಗಿ ಪರಿಗಣಿಸಿದ ಜಿಎಸ್‌ಎಸ್‌ ಧೋರಣೆಯೂ ಕಾರಣವಿರಬಹುದು. ಒಟ್ಟಿನಲ್ಲಿ ಶಿವರುದ್ರಪ್ಪನವರಿಗೆ, ಬರಹವೆಂದರೆ ಆ ಕ್ಷಣದ ತುರ್ತು ಮಾತ್ರವಲ್ಲ . ಅದೊಂದು ಅನ್ವೇಷಣೆ, ಆತ್ಮ ನಿರೀಕ್ಷಣೆ ಹಾಗೂ ಆತ್ಮ ಸಂತೋಷ ಸಾಧನೆ.

ಸುದೀರ್ಘಾವಧಿಯ ಕಾವ್ಯಕರ್ಮದಲ್ಲಿ , ಎಲ್ಲ ಕಾವ್ಯಪಂಥಗಳ ಹೊಸತನವನ್ನ ಹೀರಿಕೊಂಡು ನಡೆದ ಜಿಎಸ್‌ಎಸ್‌ ಸೃಷ್ಟಿಸಿರುವ ನೂರಾರು ಕವಿತೆಗಳನ್ನು ಕನ್ನಡ ಕಾವ್ಯದ ಯಾವ ವರ್ಗಕ್ಕೆ ಸೇರಿಸುವುದು. ನವೋದಯಕ್ಕೆ ಸೇರಿಸುವುದೆ ? ನವ್ಯಕ್ಕೆ ಸೇರಿಸುವುದೆ ? ಎರಡೂ ಕಡೆ ಸಂದ ಸಮನ್ವಯ ಅನ್ನೋಣವೇ ? ಅಥವಾ ದಲಿತ- ಬಂಡಾಯದ ಹಣೆಪಟ್ಟಿ ಹಚ್ಚಿ ಕೈ ತೊಳಕೊಳ್ಳುವುದೇ ?

ಇತರ ಕವಿಗಳಿಗೆ ಹಣೆಪಟ್ಟಿ ಹಚ್ಚಿದಂತೆ ಜಿಎಸ್‌ಎಸ್‌ ಕಾವ್ಯವನ್ನು ವರ್ಗೀಕರಣದ ಚೌಕಟ್ಟಿನೊಳಗೆ ತರುವುದು ಕಷ್ಟ . ಅನೇಕ ವಿಮರ್ಶಕರು ಅವರನ್ನು ಕಣವಿಯಾಂದಿಗೆ ಸಮನ್ವಯ ಎಂದು ಗುರ್ತಿಸುತ್ತಾರೆ. ಆದರೆ, ಆ ವರ್ಗೀಕರಣದ ಬಗೆಗೆ ಸ್ವತಃ ಶಿವರುದ್ರಪ್ಪನವರೇ ತಕರಾರು ಎತ್ತುತ್ತಾರೆ. ಇದು, ಯಾವ ಪಂಥದಲ್ಲೂ ನನ್ನನ್ನು ಗುರ್ತಿಸಲಾಗದವರು ಕಂಡುಕೊಂಡ ಮಾರ್ಗ. ಇಷ್ಟಕ್ಕೂ ಒಳ್ಳೆಯ ಕವಿತೆ ಮುಖ್ಯವೇ ಹೊರತು, ಅದು ಯಾವ ಪಂಥದಲ್ಲಿ ಬಂದಿದೆ ಅನ್ನುವುದಲ್ಲ . ಎಲ್ಲ ಗ್ರಹಿಕೆಗಳನ್ನು ಮೀರಿ ಬರೆದಾಗಲೇ ಉತ್ತಮ ಕಾವ್ಯ ಸೃಷ್ಟಿಯಾಗಲು ಸಾಧ್ಯ. ಕವಿ ಬದ್ಧನಾಗಿರಬೇಕಾದದ್ದು ಕಾವ್ಯಕ್ಕೇ ಹೊರತು, ಪಂಥಕ್ಕಲ್ಲ ಅನ್ನುತ್ತಾರೆ ಜಿಎಸ್‌ಎಸ್‌.

ಫೆ 7, 1926 ರಲ್ಲಿ - ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಶಾಂತವೀರಪ್ಪ, ವೀರಮ್ಮ ದಂಪತಿಗಳ ಪುತ್ರನಾಗಿ ಜನಿಸಿದ ಜಿಎಸ್‌ಎಸ್‌ ಆನಂತರದ ದಿನಗಳಲ್ಲಿ ಗ್ರಹಿಕೆಗಳನ್ನು ಮೀರುತ್ತಲೆ ಬೆಳೆದವರು . ಮೈಸೂರು, ಉಸ್ಮಾನಿಯಾ, ಬೆಂಗಳೂರು ವಿವಿಗಳಲ್ಲಿ ಅಧ್ಯಾಪಕ, ಪ್ರಾಧ್ಯಾಪಕ ಹಾಗೂ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತ ಅನೇಕ ಹೊಸತುಗಳಿಗೆ ಕಾರಣರಾದವರು.

ಆರಂಭದ ದಿನಗಳಲ್ಲಿ ಕುವೆಂಪು ಅವರ ಕಾವ್ಯದಿಂದ ಪ್ರಭಾವಿತರಾಗಿದ್ದ ಜಿಎಸ್‌ಎಸ್‌ ಆನಂತರ ಸ್ವಂತಿಕೆ ಕಂಡುಕೊಂಡರು. ನವೋದಯ, ನವ್ಯ, ಬಂಡಾಯ ಎಲ್ಲ ಕಾವ್ಯಮಾರ್ಗಗಳನ್ನು ಹಾದು ಬಂದರೂ ಎಲ್ಲಿಯೂ ಜೋತುಬೀಳದ್ದು ಅವರ ಅಗ್ಗಳಿಕೆ. ಒಂದೆಡೆ ಕುವೆಂಪು, ಬೇಂದ್ರೆ, ನರಸಿಂಹಸ್ವಾಮಿ, ಮತ್ತೊಂದೆಡೆ - ಅಡಿಗ, ಗೋಕಾಕ್‌ ಪರಂಪರೆ. ಜಿಎಸ್‌ಎಸ್‌ ಅವರದೊ ನಿರುದ್ವಿಗ್ನ ಬಗೆ. ಮುಂಬಯಿ ಜಾತಕದಂತಹ ನವ್ಯ ಪ್ರಜ್ಞೆಯ ಕವಿತೆಯನ್ನು ಬರೆದ ಅವರೇ, ನೋಡು ಇದೋ ಇಲ್ಲರಳಿ ನಗುತಿದೆ ಏಳು ಸುತ್ತಿನ ಮಲ್ಲಿಗೆ ಅನ್ನುವ ಕವಿತೆಯನ್ನೂ ಬರೆಯುತ್ತಾರೆ. ವಿಮರ್ಶಕರು ಅವರಿಗೆ ಸಮನ್ವಯ ಅನ್ನುವ ಹೊಸ ಪಂಥದ ಚೌಕಟ್ಟು ತೊಡಿಸಲು ಯತ್ನಿಸಿರುವುದು ಇದರಿಂದಾಗಿಯೇ.

ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ

ಗೇಯತೆ ಹಾಗೂ ಗಟ್ಟಿತನ ಎರಡರ ಮಿಳಿತ ಅವರ ಕಾವ್ಯ. ಆ ಕಾರಣದಿಂದಾಗಿಯೇ ಶಿವರುದ್ರಪ್ಪ ಬರೆದ ಅನೇಕ ಕವಿತೆಗಳು ಜನಪದ ಗೀತೆಗಳಂತೆ ನಾಲಗೆಗಳಲ್ಲಿ ಬದುಕುತ್ತ ಬಂದಿವೆ. ಎದೆತುಂಬಿ ಹಾಡಿದೆನು, ಎಲ್ಲೋ ಹುಡುಕಿದೆ, ಹಾಡು ಹಳೆಯದಾದರೇನು, ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೆ ಮುಂತಾದ ಗೀತೆಗಳಿಗೆ ಭಾವಗೀತ ಕ್ಷೇತ್ರದಲ್ಲಿ ಚಿರಂಜೀವ ಸ್ಥಾನ.

ಶಿವರುದ್ರಪ್ಪ ವಿಚಾರವಾದಿ- ಸೌಂದಯೋಪಾಸಕ ಕವಿ, ಸಂಪ್ರದಾಯದ ತೊನ್ನು ಹತ್ತಿದವರಲ್ಲ . ಆ ಕಾರಣದಿಂದಾಗಿಯೇ ಎಲ್ಲೆಲ್ಲಿಯಾ ಅಲೆದ ಕವಿಮನ, ಕೊನೆಗೆ ಮನುಷ್ಯನೆದೆಯಲ್ಲಿಯೇ ದೈವತ್ವ ಕಾಣುತ್ತದೆ. ಪ್ರೀತಿಯನ್ನೆ ದೇವರೆನ್ನುತ್ತಾರೆ.

ಜಿಎಸ್‌ಎಸ್‌ ಪರಿಪೂರ್ಣ ಕವಿ ಎಂದೇನೂ ಅಲ್ಲ , ಟೀಕಾತೀತರೂ ಅಲ್ಲ . ವಿಶೇಷಾಂಕಗಳ ಕವಿಯೆಂದು ಅವರನ್ನು ಕೆಲವರು ಹಾಸ್ಯ ಮಾಡುವುದೂ ಉಂಟು. ಜಿಎಸ್‌ಎಸ್‌ ಬಹಳಷ್ಟನ್ನು ಬರೆದಿದ್ದಾರೆ, ಸಂಖ್ಯೆ ಹೆಚ್ಚಾಗಿ ಪದ್ಯ ಗದ್ಯವಾಯಿತೆಂದು ನಗೆಯಾಡುವವರೂ ಉಂಟು. ಆದರೆ, ಪ್ರಸ್ತುತ ರಾಶಿ ರಾಶಿ ಗುಡ್ಡೆಯಾಗುತ್ತಿರುವ ಕನ್ನಡ ಕಾವ್ಯವನ್ನು ಜಿಎಸ್‌ಎಸ್‌ ಕಾವ್ಯದೊಂದಿಗಿಟ್ಟಾಗ ಅವರ ಕಾವ್ಯದ ಗಟ್ಟಿತನ ಮನದಟ್ಟಾಗುತ್ತದೆ.

ಕಾವ್ಯ ಮಾತ್ರವಲ್ಲದೆ ವಿಮರ್ಶೆ, ಪ್ರವಾಸ ಕಥನದಲ್ಲೂ ಗಮನಾರ್ಹ ಸಾಧನೆಯನ್ನು ಜಿಎಸ್‌ಎಸ್‌ ತೋರಿದ್ದಾರೆ. ಅವರ ಕಾವ್ಯಾರ್ಥ ಚಿಂತನ (ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ) ಹಾಗೂ ವಿಮರ್ಶೆಯ ಪೂರ್ವ ಪಶ್ಚಿಮ ಕೃತಿಗಳು ವಿಮರ್ಶಾ ಕ್ಷೇತ್ರಕ್ಕೆ ಹೊಸ ಚೈತನ್ಯ ನೀಡಿದ ಕೃತಿಗಳೆಂದೇ ಹೆಸರಾಗಿವೆ. ಮಾಸ್ಕೋದಲ್ಲಿ 22 ದಿನ (ಸೋವಿಯತ್‌ ಲ್ಯಾಂಡ್‌ ಪ್ರಶಸ್ತಿ ವಿಜೇತ) ಕೃತಿ ಪ್ರವಾಸ ಸಾಹಿತ್ಯ ಕೃತಿಗಳಿಗೆ ಮಾದರಿಯಾಗಿದೆ. ಕರ್ಮಯೋಗಿ ಅನ್ನುವ ಕಾದಂಬರಿಯನ್ನೂ ಬರೆದಿರುವ ಜಿಎಸ್‌ಎಸ್‌ ಅವರ ಪ್ರಮುಖ ಕವನ ಸಂಕಲನಗಳಲ್ಲಿ ಸಾಮಗಾನ, ಚೆಲುವು ಒಲವು, ಗೋಡೆ, ವ್ಯಕ್ತಮಧ್ಯ, ಸೇರಿವೆ. 5 ದಶಕಗಳ ಸಮಗ್ರಕಾವ್ಯವೂ ಪ್ರಕಟವಾಗಿದೆ.

ತಪ್ಪನ್ನು ತಪ್ಪು ಅಂದು ಕೆಂಡ ಕಟ್ಟಿಕೊಂಡರು

ಬದುಕಿನುದ್ದಕೂ ಅನಗತ್ಯ ವಿವಾದಗಳನ್ನು ದೂರವಿಟ್ಟ ಜಿಎಸ್‌ಎಸ್‌ ಇತ್ತೀಚೆಗಷ್ಟೇ ವಿವಾದವೊಂದರ ಸುಳಿಯಲ್ಲಿ ಸಿಲುಕಿದ್ದರು. ವೀರಶೈವರು ಹಿಂದೂಗಳಲ್ಲ ಎಂದು ಗುರುಗಳು ಕೊಡಿಸಿದ ಅಪ್ಪಣೆಯ ವಿರುದ್ಧ ಚಿದಾನಂದಮೂರ್ತಿ ಅವರೊಂದಿಗೆ ದನಿ ಎತ್ತಿದ ಜಿಎಸ್‌ಎಸ್‌ ಕೆಲವರಿಂದ ಧರ್ಮ ಬಹಿಷ್ಕಾರವನ್ನೂ ಎದುರಿಸಿದರು. ಬಹಿಷ್ಕಾರದಂತಹ ತುಘಲಕತನಗಳಲ್ಲಿ ತಮಗೆ ನಂಬಿಕೆ ಇಲ್ಲ ಎನ್ನುತ್ತಾರೆ ಜಿಎಸ್‌ಎಸ್‌. ಇಷ್ಟಕ್ಕೂ, ಬಹಿಷ್ಕಾರದಂತಹ ಬೆದರಿಕೆಗಳು ಜಿಎಸ್‌ಎಸ್‌ ಅವರನ್ನು ವಿಚಲಿತರಾಗಿಸುವುದು ಸಾಧ್ಯವೇ ಇಲ್ಲ . ವಿಶ್ವ ಮಾನವ ಸಂದೇಶ ಸಾರಿದ ಕುವೆಂಪು ಅವರ ಪ್ರಿಯಶಿಷ್ಯರಾದ ಅವರು ಚೌಕಟ್ಟುಗಳನ್ನು ಮೀರುತ್ತ ಬಂದವರಲ್ಲವೆ.

English summary
Shall we call G.S. Shivarudrappa as karnatakas wordsworth ?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X