Ugadi 2026: ಮಾರ್ಚ್ 19ಕ್ಕೆ ನವ ಸಂವತ್ಸರದ ಸಡಗರ; ಯುಗಾದಿ ಹಬ್ಬದ ಹಿನ್ನೆಲೆ, ಆಚರಣೆಯ ಮಹತ್ವ
ಚಾಂದ್ರಮಾನ 'ಯುಗಾದಿ' (Ugadi) ಹಬ್ಬವನ್ನು ಪ್ರತಿ ವರ್ಷದಂತೆ 2026ರಲ್ಲೂ ಹಿಂದೂ ಚಾಂದ್ರಮಾನ ಪಂಚಾಂಗದ ಪ್ರಕಾರ ಚೈತ್ರ ಮಾಸದ ಶುಕ್ಲ ಪಕ್ಷದ ಮೊದಲ ದಿನದಂದು ಆಚರಿಸಲಾಗುತ್ತದೆ. ಇದನ್ನು ಹಿಂದೂಗಳ ಪಾಲಿನ ಹೊಸ ವರ್ಷವಾಗಿ ಆಚರಿಸಲಾಗುತ್ತದೆ. ಅತ್ಯಂತ ಶ್ರದ್ಧಾ, ಭಕ್ತಿಯಿಂದ ಹೊಸ ಉಡುಗೆ ತೊಟ್ಟು ಸಾಂಪ್ರದಾಯಿಕವಾಗಿ ಆಚರಿಸುವ ಪ್ರಮುಖ ಹಬ್ಬವಾಗಿದೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ ನಡೆಯುವ ಪ್ರಮುಖ ಹಬ್ಬಗಳಲ್ಲಿ 'ಯುಗಾದಿ'ಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಬೇವು-ಬೆಲ್ಲ ತಿಂದು, ಮನುಷ್ಯನ ಬದುಕು ಸಿಹಿ-ಕಹಿಗಳ ಸಮ್ಮಿಶ್ರಣ ಎಂಬ ಸಂದೇಶ ಸಾರಲಾಗುತ್ತದೆ.
ಕರ್ನಾಟಕದಲ್ಲಿ ಮೂರು ದಿನಗಳ ಹಬ್ಬ ಇದಾಗಿದ್ದು, ಅತ್ಯಂತ ಸಡಗರದಿಂದ ಆಚರಿಸಲಾಗುತ್ತಿದೆ. ಕರ್ನಾಟಕ ಸೇರಿದಂತೆ ಭಾರತಾದ್ಯಂತ ಯುಗಾದಿ ಹಬ್ಬವನ್ನು (Ugadi 2026) 2026 ಮಾರ್ಚ್ 19ರಂದು ಗುರುವಾರ ಆಚರಿಸಲಾಗುತ್ತಿದೆ. ಈಗ ನಡೆಯುತ್ತಿರುವ ವಿಶ್ವಾವಸು ಸಂವತ್ಸರ ಮುಗಿದು, ಪರಾಭವ ಸಂವತ್ಸರ ಆರಂಭವಾಗುತ್ತದೆ. ಇದು ಹಿಂದೂ ಚಾಂದ್ರಮಾನ ಕ್ಯಾಲೆಂಡರ್‌ನ 60 ವರ್ಷಗಳ ಚಕ್ರದಲ್ಲಿ ಹೊಸ ವರ್ಷದ ಆರಂಭದ ಸೂಚಕವಾಗಿದೆ. ಕರ್ನಾಟಕದಲ್ಲಿ ಯುಗಾದಿ ಅಂತಲೂ, ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರುಗಳಿಂದಲೂ ಆಚರಿಸುವ ಪದ್ಧತಿ ಇದೆ. ಹಬ್ಬ ಒಂದೇ ಆದರೂ ಆಚರಣೆ, ಪದ್ಧತಿಗಳು ಭಿನ್ನವಾಗಿರುವುದು ಈ ಹಬ್ಬದ ವೈಶಿಷ್ಟ್ಯಗಳಲ್ಲಿ ಒಂದು.

ಜೋತಿಷ್ಯ ಶಾಸ್ತ್ರದ ಪ್ರಕಾರ, ಯುಗಾದಿಯು ಒಂದು ವಿಶ್ವ ಚಕ್ರದ ಆರಂಭವನ್ನು ಸೂಚಿಸುತ್ತದೆ. ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ 'ಯುಗಾದಿ' ಹಬ್ಬ ಅಂತಲೇ ಆಚರಿಸುವ ರೂಢಿ ಗುರು ಹಿರಿಯರ ಕಾಲದಿಂದಲೂ ಇದೆ. ಆದರೆ ತಮಿಳುನಾಡಿನಲ್ಲಿ 'ಯುಗಾದಿ' ಅನ್ನದೇ 'ಪುತಂಡು', ಪಂಜಾಬ್‌ನಲ್ಲಿ 'ಬೈಸಾಕಿ', ಕೇರಳದಲ್ಲಿ 'ವಿಷು' ಎಂಬ ಹೆಸರಿನಲ್ಲಿ ಈ ಹಬ್ಬವನ್ನು ಸಂಭ್ರಮದಿಂದ ಹಾಗೂ ಹಲವು ವಿಶೇಷತೆಗಳೊಂದಿಗೆ ಆಚರಣೆ ಮಾಡಲಾಗುತ್ತದೆ. ಈ ಮೂಲಕ ಹೊಸ ವರ್ಷವನ್ನು ಸ್ವಾಗತ ಮಾಡಿಕೊಳ್ಳುವ ಸಾಂಪ್ರದಾಯ ದಕ್ಷಿಣ ಭಾರತದ ವಿವಿಧೆಡೆ ಚಾಲ್ತಿಯಲ್ಲಿದೆ.
ಯುಗಾದಿ ಹಿನ್ನೆಲೆ, ಆಚರಣೆ ವೈಶಿಷ್ಟ್ಯಗಳೇನು ?
ಚಾಂದ್ರಮಾನ ಪಂಚಾಂಗದ ಪ್ರಕಾರ, ಚೈತ್ರ ಮಾಸದ ಶುದ್ಧ ಪಾಡ್ಯಮಿಯಂದು ಬ್ರಹ್ಮನು ವಿಶ್ವವನ್ನು ಸೃಷ್ಟಿಸಿದನು ಎಂಬ ಪ್ರತೀತಿ ಇದೆ. ಇಲ್ಲಿಂದ ವಸಂತ ಋತುವಿನ ಆಗಮನವಾಗುತ್ತದೆ. ಇದೇ ಹೊತ್ತಿಗೆ ಪರಿಸರವು ಹೊಸ ಚಿಗುರಿನೊಂದಿಗೆ ಹೊಸ ವರ್ಷವನ್ನು ಸ್ವಾಗತಿಸುವ ಕಾಲ ಇದಾಗಿದೆ. ರೈತರ ಹೊಸ ಬೆಳೆಯನ್ನು ಇದು ಸಾಂಕೇತಿಸುತ್ತದೆ. ಮುಖ್ಯವಾಗಿ ಮನುಷ್ಯ ಬೇವು-ಬೆಲ್ಲ ಸವಿದು ಜೀವನದಲ್ಲಿ ಎದುರಾಗುವ ಕಷ್ಟ-ಸುಖ, ಸಿಹಿ- ಕಹಿಗಳನ್ನು ಸಮಾನವಾಗಿ ಸ್ವೀಕರಿಸಬೇಕು ಎಂಬುದು ಹಬ್ಬದ ಮತ್ತೊಂದು ಸಂದೇಶವಾಗಿದೆ.
ಹಬ್ಬದ ಹಿನ್ನೆಲೆಯಲ್ಲಿ ಮನೆಯನ್ನು ಶುಚಿಗೊಳಿಸಿ ತಳಿರು ತೋರಣ, ಹೂಗಳಿಂದ ಅಲಂಕರಿಸಲಾಗುತ್ತದೆ. ಮನೆ ಮುಂದೆ ಸಾರಿಸಿ, ರಂಗೋಲಿ ಇಟ್ಟು ವಿಶೇಷ ಪೂಜೆ ಮಾಡಲಾಗುತ್ತದೆ. ಈಗೀಗ ಆಧುನಿಕತೆ ಬೆಳೆದಂತೆ ಮನೆಗಳನ್ನು ವಿದ್ಯುತ್ ಅಲಂಕಾರಗಳಿಂದಲೂ ಸಿಂಗರಿಸಲಾಗುತ್ತದೆ. ಬೆಳಿಗ್ಗೆ ಬೇಗ ಎದ್ದು ಸ್ನಾನಕ್ಕೂ ಮುನ್ನ ದೇಹಕ್ಕೆ ಎಣ್ಣೆ ಹೆಚ್ಚಿಕೊಂಡು, ಬೇವಿನ ಎಲೆ ಹಾಕಿ ಬಿಸಿ ಮಾಡಿದ ನೀರಿನಿಂದ ತಲೆ ಸ್ನಾನ (ಅಭ್ಯಂಜನ) ಮಾಡಲಾಗುತ್ತದೆ. ಮನೆ ಮಂದಿಯೆಲ್ಲಾ ಹೊಸ ಉಡುಪು ಧರಿಸಿ ದೇವರ ಪೂಜಾ ಕಾರ್ಯಗಳಲ್ಲಿ ತೊಡಗುತ್ತಾರೆ.

ಕೆಲವು ಮನೆಗಳಲ್ಲಿ ಅಂದು ಸಂಜೆ ಪಂಚಾಂಗ ಶ್ರವಣ ಇರುತ್ತದೆ. ಮನೆ ದೇವರಿಗೆ ವಿಶೇಷ ಪೂಜೆ ನೆರವೇರಿಸಿ, ಒಳಿತಿಗೆ ಪ್ರಾರ್ಥಿಸುತ್ತಾರೆ. ಬೇವು-ಬೆಲ್ಲ ಸವಿಯುತ್ತಾರೆ. ದೇವರ ನೈವೇದ್ಯಕ್ಕಾಗಿ ಹೋಳಿಗೆ, ಪಾಯಸ ಇನ್ನಿತರ ಸಿಹಿ ಅಡುಗೆ ಸೇರಿ ವಿಶೇಷ ಬಗೆಯ ಆಹಾರಗಳನ್ನು ತಯಾರಿಸಲಾಗುತ್ತದೆ. ಅದರಲ್ಲಿ ಹಬ್ಬದ ಸಾಂಕೇತಿಕ 'ಯುಗಾದಿ ಪಚಡಿ'ಗೆ ವಿಶೇಷ ಸ್ಥಾನವಿದೆ. ಮನೆಯಲ್ಲಿನ ಪೂಜೆ ಬಳಿಕ ದೇವಸ್ಥಾನಗಳಿಗೆ ತೆರಳಿ ದರ್ಶನ ಪಡೆಯಲಾಗುತ್ತದೆ.
ಯುಗಾದಿಯ ಹೊಸ ವರ್ಷದ ಸಂದರ್ಭದಲ್ಲಿ ಕರ್ನಾಟಕದ ಕೆಲವು ಗ್ರಾಮೀಣ ಭಾಗದ ಅನೇಕ ಕುಟುಂಬಗಳಲ್ಲಿ ಪೂರ್ವಜರನ್ನು/ಹಿರಿಯರನ್ನು ಸ್ಮರಿಸಿ ಎಡೆ ಇಡುವ (ಪುಣ್ಯತಿಥಿ) ಸಾಂಪ್ರದಾಯವು ಇದೆ. ಈ ಮೂಲಕ ಕುಟುಂಬದ ಹಿರಿ ತಲೆಮಾರಿನವರನ್ನು ಸಾಮೂಹಿಕವಾಗಿ ಸ್ಮರಿಸಲಾಗುತ್ತದೆ. ಹೊಸದಿನ ಹಿನ್ನೆಲೆ ಹೊಲಗಳಿಗೆ ಹೋಗಿ ಭೂಮಿ ಪೂಜೆ ನೆರವೇರಿಸಿಕೊಂಡು ಬರುವ ಪದ್ಧತಿ ರೈತರ ಮನೆಗಳಲ್ಲಿ ಇಂದಿಗೂ ಮುಂದುವರಿಸಿಕೊಂಡು ಬರಲಾಗುತ್ತಿದೆ.
ಮಹಾರಾಷ್ಟ್ರ ಮತ್ತು ಗೋವಾದ ಆಚರಣೆ ಹೇಗಿರುತ್ತೆ?
ಹಿಂಗಾರು ಮಳೆ ವೇಳೆ ಬಿತ್ತನೆ ಮಾಡಿದ್ದ ಬೆಳೆಯ ಕೊಯ್ಲನ್ನು ಇದೇ ವಸಂತ ಋತುವಿನ ಆಗಮನದ ಹೊತ್ತಿಗೆ ಮಾಡಲಾಗುತ್ತದೆ. ಹೀಗಾಗಿ ಇದನ್ನು ಹೊಸ ಬೆಳೆಯ ಸೂಚಕ ಹಬ್ಬ ಅಂತಲೂ ಭಾವಿಸಲಾಗಿದೆ. ಮಹಾರಾಷ್ಟ್ರ ಹಾಗೂ ಗೋವಾದಲ್ಲಿ 'ಗುಡಿ ಪಾಡ್ವ' ಎಂಬ ಹೆಸರಿನಡಿ ಮನೆಗಳಲ್ಲಿ ಧ್ವಜ ಹಾರಿಸುವ ಮೂಲಕ ಹಬ್ಬವನ್ನು ಆಚರಿಸುತ್ತಾರೆ. ಉದ್ದವಾದ ಬಿದಿರಿನ ಗಳದ (ಕೋಲಿಗೆ) ಮೇಲೆ ಹಳದಿ, ಹಸಿರು ಅಥವಾ ಕೆಂಪು ಬಣ್ಣದ ರೇಷ್ಮೆ ಬಟ್ಟೆ ಕಟ್ಟಲಾಗುತ್ತದೆ. ಗುಡಿಯ ಮೇಲೆ ಬೇವಿನ ಎಲೆ, ಮಾವಿನ ಎಲೆ, ಹೂವು ಮತ್ತು ಸಕ್ಕರೆ ಹರಳುಗಳ ಹಾರವನ್ನು ಹಾಕಿ, ತಲೆಕೆಳಗಾದ ಕಂಚು, ಬೆಳ್ಳಿ ಅಥವಾ ತಾಮ್ರದ ಕಲಶದಿಂದ ಅಲಂಕರಿಸಿ ವಿಶಿಷ್ಟವಾಗಿ ಆಚರಿಸಲಾಗುತ್ತದೆ. ಇದರಿಂದ ದುಷ್ಟ ಶಕ್ತಿಗಳು ನಮ್ಮಿಂದ ದೂರು ಇರುತ್ತವೆ ಎಂಬ ನಂಬಿಕೆ ಅವರಲ್ಲಿದೆ.
ಕೇರಳದಲ್ಲಿ 'ವಿಷು' ಹೆಸರಿನಲ್ಲಿ ಆಚರಣೆ
ಕೇರಳದಲ್ಲಿ ಈ ಹಬ್ಬದಂದು ದೇವರ ಕೋಣೆಯಲ್ಲಿ 'ವಿಷು ಕಣಿ' ಇಡಲಾಗುತ್ತದೆ. ವಿಷುಕಣಿ ವಿಷು (ಯುಗಾಗಿ) ಹಬ್ಬದ ವೇಳೆ ಪ್ರಮುಖ ಸ್ಥಾನ ಪಡೆದಿದೆ. ಹಬ್ಬಕ್ಕು ಒಂದು ಮುನ್ನವೇ ಮನೆ ಸ್ವಚ್ಛಗೊಳಿಸಿ ಸಿಂಗಾರ ಮಾಡಲಾಗುತ್ತದೆ. ದೇವರ ಕೋಣೆಯಲ್ಲಿ ಕಣಿ ಕಾಣಲು ಬೇಕಾದ ವಸ್ತುಗಳನ್ನು ತಯಾರಿಸುತ್ತಾರೆ. ಅಂದರೆ ಹೊಸ ಮಡಿಕೆಯಲ್ಲಿ ದೇವರ ವಿಗ್ರಹವನ್ನಿಟ್ಟು ಅದರೊಂದಿಗೆ ಫಲಾಹಾರಗಳು, ಒಂಬತ್ತು (ನವ) ಧಾನ್ಯಗಳನ್ನು ಇಡಲಾಗುತ್ತದೆ. ಜೊತೆಗೆ ಹೊಸ ಬಟ್ಟೆ, ಒಂದಷ್ಟು ಹಣ ಸೇರಿ ಇತ್ಯಾದಿ ವಸ್ತುಗಳನ್ನಿಟ್ಟು ಪೂಜಿಸುವು ಪದ್ಧತಿ ಇದೆ.
ತಮಿಳುನಾಡಿನಲ್ಲಿ ಪುತಂಡು ಆಚರಣೆ
ತಮಿಳುನಾಡಿನಲ್ಲಿ ಹೊಸ ವರ್ಷವನ್ನು 'ಪುತಂಡು' (Puthandu) ಅಥವಾ 'ವರುಷ ಪಿರಪ್ಪು' ಎಂಬ ಹೆಸರಿನಲ್ಲಿ ಆಚರಣೆ ಮಾಡುತ್ತಾರೆ. ಇದು ತಮಿಳು ಕ್ಯಾಲೆಂಡರ್‌ನ ಮೊದಲ ತಿಂಗಳಾದ 'ಚಿತಿರೈ'ನ ಮೊದಲ ದಿನದಂದು ಬರುತ್ತದೆ. ಇದು ಚಾಂದ್ರಮಾನ ಯುಗಾದಿಯ ಒಂದು ರೂಪವಾಗಿದೆ. ಅವರು ಸಹ ಸ್ವಚ್ಛಗೊಳಿಸಿದ ಮನೆ ಸಿಂಗರಿಸಿ ಹಳೆಯ ವಸ್ತುಗಳನ್ನು ಎಸೆದು, ಮನೆಯ ಮುಂದೆ ರಂಗೋಲಿ ಹಾಕುತ್ತಾರೆ. ಅಲ್ಲಿ ಊಟದ ಜೊತೆಗೆ 'ಮಾಂಗ ಪಚಡಿ' ಎಂಬ ವಿಶೇಷ ಪದಾರ್ಥ ತಯಾರಿಸಿ ಮನೆ ಮಂದಿಗೆ ಉಣಬಡಿಸುತ್ತಾರೆ. ಹೀಗೆ ದಕ್ಷಿಣ ಭಾರತದ ಬೇರೆ ಬೇರೆ ರಾಜ್ಯಗಳಲ್ಲಿ ಆಯಾ ರಾಜ್ಯಗಳು ತಮ್ಮದೇ ಆದ ರೀತಿಯಲ್ಲಿ ಸಾಂಪ್ರದಾಯಿಕವಾಗಿ ಆಚರಿಸುತ್ತವೆ. ಹಬ್ಬಕ್ಕಾಗಿ ಬೇರೆ ಬೇರೆ ಊರುಗಳಲ್ಲಿ ದುಡಿಯುವವರು ತಮ್ಮೂರಿಗೆ ಹೋಗಿ ಮನೆ ಮಂದಿ ಜೊತೆಗೆ ಹಬ್ಬದ ಸಡಗರದಲ್ಲಿ ಭಾಗಿಯಾಗುತ್ತಾರೆ.
ಯುಗಾದಿ ಹಬ್ಬದ ಕುರಿತು ನೀವು ತಿಳಿಯಬೇಕಾದ ಮಹತ್ವದ ಸಂಗತಿಗಳು
1. 2026ರಲ್ಲಿ ಯುಗಾದಿ ಹಬ್ಬ ಯಾವಾಗ ಬರುತ್ತದೆ?
ಯುಗಾದಿ ಹಬ್ಬವನ್ನು 2026 ಮಾರ್ಚ್ 19, ಗುರುವಾರ ಆಚರಿಸಲಾಗುತ್ತದೆ. ಚೈತ್ರ ಮಾಸದ ಶುಕ್ಲ ಪಕ್ಷದ ಪಾಡ್ಯಮಿಯ ದಿನದಂದು ಈ ಹಬ್ಬ ಆಚರಿಸಲಾಗುತ್ತದೆ. ಕರ್ನಾಟಕ ಸೇರಿದಂತೆ ಭಾರತದ ಬಹುತೇಕ ರಾಜ್ಯಗಳಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ.
2. ಈ ಬಾರಿಯ ಸಂವತ್ಸರದ ಹೆಸರೇನು?
ಕರ್ನಾಟಕದಲ್ಲಿ ಪ್ರಚಲಿತದಲ್ಲಿರುವ ಚಾಂದ್ರಮಾನ ಪಂಚಾಂಗದ ಪ್ರಕಾರ, 2026ರ ಯುಗಾದಿಯೊಂದಿಗೆ ಪರಾಭವ ನಾಮ ಸಂವತ್ಸರ ಆರಂಭವಾಗುತ್ತದೆ (60 ಸಂವತ್ಸರಗಳ ಚಕ್ರದಲ್ಲಿ ಇದು 40 ನೇ ಯದು)
3. ಯುಗಾದಿ ಹಬ್ಬದಂದು 'ಬೇವು-ಬೆಲ್ಲ' ಸೇವನೆಯ ಮಹತ್ವವೇನು?
ಜೀವನವು ಸುಖ (ಬೆಲ್ಲ) ಮತ್ತು ಕಷ್ಟಗಳ (ಬೇವು) ಮಿಶ್ರಣವಾಗಿದೆ ಎಂಬುದನ್ನು ಇದು ಸೂಚಿಸುತ್ತದೆ. ಜೀವನದ ಎಲ್ಲಾ ಏರಿಳಿತಗಳನ್ನು ಸಮಚಿತ್ತದಿಂದ ಸ್ವೀಕರಿಸಬೇಕು ಎಂಬುದು ಇದರ ಹಿಂದಿನ ತತ್ವ.
4. 'ಪಂಚಾಂಗ ಶ್ರವಣ' ಎಂದರೇನು?
ಹೊಸ ವರ್ಷದಲ್ಲಿ ಮಳೆ, ಬೆಳೆ, ಆರ್ಥಿಕ ಸ್ಥಿತಿ ಮತ್ತು ರಾಶಿಫಲಗಳು ಹೇಗಿರಲಿವೆ ಎಂಬುದನ್ನು ಪುರೋಹಿತರಿಂದ ಅಥವಾ ಹಿರಿಯರಿಂದ ಕೇಳುವ ಸಂಪ್ರದಾಯವೇ ಪಂಚಾಂಗ ಶ್ರವಣ. ಪಂಚಾಂಗ ಪುಸ್ತಕದಲ್ಲಿರುವ ಪ್ರಮುಖ ಭಾಗಗಳನ್ನು ಅಂದು ಸಂಜೆ ಮನೆಗಳಲ್ಲಿ ಓದಲಾಗುತ್ತದೆ.
5. ಹಬ್ಬದ ದಿನದ ಪ್ರಮುಖ ಆಚರಣೆಗಳು ಯಾವುವು?
ಮುಂಜಾನೆ ಎಣ್ಣೆ ಸ್ನಾನ (ಅಭ್ಯಂಜನ), ಮನೆಗೆ ಮಾವಿನ ಎಲೆಗಳ ತೋರಣ ಕಟ್ಟುವುದು, ಹೊಸ ಬಟ್ಟೆ ಧರಿಸುವುದು, ದೇವಸ್ಥಾನಗಳಿಗೆ ಭೇಟಿ ನೀಡುವುದು ಮತ್ತು ಒಬ್ಬಟ್ಟು (ಹೋಳಿಗೆ) ಸವಿಯುವುದು ಈ ಹಬ್ಬದ ವಿಶೇಷ.
-
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
ಮಾರ್ಚ್ 26ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Jobs: ರಾಜ್ಯದ ಕಾರಾಗೃಹ ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯಕೀಯ ಸಿಬ್ಬಂದಿ ಹುದ್ದೆಗಳ ಭರ್ತಿಗೆ ಸರ್ಕಾರದ ಮಹತ್ವದ ಆದೇಶ -
ಮಾರ್ಚ್ 25ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್












Click it and Unblock the Notifications