• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಂಗಳೂರಿನಲ್ಲಿ ಶಿವದರ್ಶನಕ್ಕೆ ಮೈಲಿ ಉದ್ದದ ಸರತಿಯ ಸಾಲು

By Staff
|

ಬೆಂಗಳೂರು : ಇಂದು ಮಾಘ ಕೃಷ್ಣ ಚತುರ್ದಶಿ, ಮಹಾಶಿವರಾತ್ರಿ. ದೇಶಾದ್ಯಂತ ಶಿವಭಕ್ತರು ಸಂತಸ, ಸಂಭ್ರಮ ಹಾಗೂ ಶ್ರದ್ಧಾ ಭಕ್ತಿಗಳಿಂದ ಶಿವಪೂಜೆಯಲ್ಲಿ ನಿರತರಾಗಿದ್ದಾರೆ. ಇದಕ್ಕೆ ಬೆಂಗಳೂರೂ ಹೊರತಲ್ಲ. ಬುಧವಾರ ಬೆಳಗ್ಗೆ 8-50ರ ನಂತರ ಚತುರ್ದಶಿಯ ಉದಯ. ಆದರೂ, ಸೂರ್ಯೋದಯಕ್ಕೆ ಮೊದಲೇ ಬೆಂಗಳೂರಿನ ಎಲ್ಲ ಶಿವಾಲಯಗಳಲ್ಲಿ ಶಿವದರ್ಶನಕ್ಕೆ ಭಕ್ತರು ಸರತಿಯ ಸಾಲಿನಲ್ಲಿ ನಿಂತು ಕಾಯುತ್ತಿದ್ದಾರೆ.

ಬೆಂಗಳೂರಿನ ಎಲ್ಲ ಶಿವಾಲಯಗಳೂ ಪುಷ್ಪಾಲಂಕಾರದಿಂದ ಕಂಗೊಳಿಸುತ್ತಿವೆ. ಲಯಕರ್ತನಾದ ಶಿವನಿಗೆ ನಾನಾ ರೀತಿಯ ಅಲಂಕಾರಗಳನ್ನು ಮಾಡಲಾಗಿದೆ. ರಾತ್ರಿಯ ನಾಲ್ಕು ಯಾಮಗಳ ವಿಶೇಷ ಪೂಜೆ, ಅಭಿಷೇಕಕ್ಕೆ ಎಲ್ಲ ಶಿವಾಲಯಗಳಲ್ಲೂ ತಯಾರಿ ನಡೆದಿದೆ. ಸಾವಿರಾರು ಸಂಖ್ಯೆಯಲ್ಲಿ ಬರುವ ಭಕ್ತರನ್ನು ನಿಯಂತ್ರಿಸಲು ಮೈಲಿಗಟ್ಟಲೆ ಉದ್ದದ ಕಟಕಟೆಗಳನ್ನು ನಿರ್ಮಿಸಲಾಗಿದೆ.

ಬೆಂಗಳೂರಿನ ಪ್ರಾಚೀನ ದೇವಾಲಯಗಳಲ್ಲಿ ಒಂದಾದ ಗವಿಪುರದ ಗವಿ ಗಂಗಾಧರೇಶ್ವರ ಸ್ವಾಮಿಗೆ ಹಾಕಿರುವ ವಜ್ರದ ಅಲಂಕಾರ ನಯನ ಮನೋಹರವಾಗಿದೆ. ವಜ್ರಾಲಂಕಾರದ ಶಿವನ ದರ್ಶನ ಮಾಡಿ ತಮ್ಮ ಬಾಳನ್ನು ಪುನೀತ ಮಾಡಿಕೊಳ್ಳಲೆಂದು ಬೆಳಗ್ಗೆ 4 ಗಂಟೆಯಿಂದಲೇ ಇಲ್ಲಿ ಭಕ್ತರು ಸಾಲಿನಲ್ಲಿ ನಿಂತಿದ್ದಾರೆ.

ಮೈಸೂರು ಬ್ಯಾಂಕ್‌ ಕಾಲೋನಿ (ಸೀತಾ ಸರ್ಕಲ್‌) ಬಳಿ ಇರುವ ಮಂಜುನಾಥ ದೇವಾಲಯದಲ್ಲೂ ಮರದ ಬೊಂಬುಗಳಿಂದ ಉದ್ದದ ಕಟಕಟೆ ನಿರ್ಮಿಸಲಾಗಿದೆ. ಮಂಜುನಾಥನಿಗೆ ವಿಶೇಷ ಪುಷ್ಪಾಲಂಕಾರ ಮಾಡಲಾಗಿದೆ. ಮಲ್ಲೇಶ್ವರದ ಕಾಡು ಮಲ್ಲೇಶ್ವರ ಸ್ವಾಮಿ, ಮುನೇಶ್ವರ ಬಡಾವಣೆಯ ಕಾಶಿ ವಿಶ್ವನಾಥ, ದೊಡ್ಡ ಬಸವನ ಗುಡಿ ಹಿಂಭಾಗದ ಶಿವಾಲಯ, ಅಲಸೂರಿನ ಸೋಮೇಶ್ವರ ಸನ್ನಿಧಿ, ಡಿ.ವಿ.ಗುಂಡಪ್ಪ ರಸ್ತೆಯ ಶಿವಾಲಯ, ಯಶವಂತಪುರದ ಗಾಯತ್ರೀ ದೇವಸ್ಥಾನ, ಏರ್‌ಪೋರ್ಟ್‌ ಬಳಿಯ ದ್ವಾದಶ ಜ್ಯೋತಿರ್ಲಿಂಗ ದೇವಾಲಯ, ಬನ್ನೇರುಘಟ್ಟ ರಸ್ತೆಯ ಗುಹಾಂತರ ದೇವಾಲಯ, ಮೀನಾಕ್ಷಿ ಸುಂದರೇಶ್ವರ ದೇವಾಲಯವೇ ಮೊದಲಾದ ಎಲ್ಲ ಶಿವಾಲಯ ಹಾಗೂ ಶ್ರೀ ಶನೇಶ್ವರ ಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜೆ, ಉತ್ಸವ, ರಥೋತ್ಸವಗಳು ನಡೆಯುತ್ತಿವೆ.

ಶಿವರಾತ್ರಿಯ ಮುನ್ನಾದಿನವಾದ ಮಂಗಳವಾರ ಬೆಂಗಳೂರಿನ ಕಾಟನ್‌ ಪೇಟೆಯ ಅಂಗಾಳ ಪರಮೇಶ್ವರಿ ಮೂಲ ಪೀಠದಿಂದ ಮಾಗಡಿ ರಸ್ತೆಯ ಕಾಳಿಕಾದೇವಿ ದೇವಾಲಯದವರೆಗೆ ಸಾವಿರಾರು ಸುಮಂಗ-ಲಿಯರು ಪೂರ್ಣ ಕುಂಭ - ಕಳಶ ಹೊತ್ತ ಉತ್ಸವವೂ ನಡೆಯಿತು.

ಬೆಂಗಳೂರಿನ ಎಲ್ಲ ಶಿವಾಲಯಗಳಲ್ಲಿ ಇಂದು ಭಜನೆ, ಶಿವಕತೆ, ರುದ್ರಾಭಿಷೇಕಗಳು ನಡೆಯುತ್ತಿವೆ. ರಾತ್ರಿಯ ಜಾಗರಣೆಗೆ ಬೆಂಗಳೂರು ನಾನಾ ಪ್ರಕಾರವಾಗಿ ಸಜ್ಜಾಗಿದೆ. ಕೆಲವು ಬಡಾವಣೆಗಳಲ್ಲಿ ಸಂಪೂರ್ಣ ರಾಮಾಯಣ, ಭೂಕೈಲಾಸ, ಮಹಾಭಾರತ, ಶ್ರೀ ಶನೇಶ್ವರ ಮಹಾತ್ಮೆ, ವಿಕ್ರಮಾದಿತ್ಯ ವಿಜಯವೇ ಮೊದಲಾದ ನಾಟಕ ಪ್ರದರ್ಶನಗಳನ್ನೂ ಏರ್ಪಡಿಸಲಾಗಿದೆ. ಮಹಾ ಶಿವರಾತ್ರಿ ಪ್ರಯುಕ್ತ ಬೆಂಗಳೂರಿನ ಜಾಗರಣೆ ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ:

ಆದಿ ಚುಂಚನಗಿರಿ ಮಹಾಸಂಸ್ಥಾನ ಮಠ : ಭಕ್ತಿ ಗೀತೆ, ಜಾನಪದಗೀತೆ, ಶಿವಕತೆ, ಯಕ್ಷಗಾನ. ವಿಜಯನಗರ - ಸಂಜೆ 5ಕ್ಕೆ.

ಶನಿಮಹಾತ್ಮ ದೇವಸ್ಥಾನ : ಸೋಲೂರು ತಿಮ್ಮರಾಯಪ್ಪ ಧರ್ಮಛತ್ರ, ಮಾಗಡಿ ರಸ್ತೆ. ಶ್ರೀಶನಿಮಹಾತ್ಮೆ - ಹರಿಕತೆ. ರಾತ್ರಿ 9-30ಕ್ಕೆ.

ಪರಮೇಶ್ವರ ಸೇವಾ ಸಮಿತಿ : ಶತ ರುದ್ರಾಭಿಷೇಕ, 10ನೇ ಎ ಮುಖ್ಯರಸ್ತೆ, ಬನಶಂಕರಿ 1ನೇ ಹಂತ, 2ನೇ ಘಟ್ಟ, ಸಂಜೆ 4ಕ್ಕೆ.

ಗಜಾನನ ಸೇವಾ ಮಂಡಳಿ : ಅಖಂಡ ಭಜನೆ, ಎಚ್‌.ಎಂ.ಟಿ. ಲೇಔಟ್‌, ಗೋವಿಂದರಾಜ ನಗರ. ಬೆಳಗ್ಗೆ 9ರಿಂದ ಸಂಜೆ 6 ಗಂಟೆ ವರೆಗೆ.

ಗಾನ ವಿನೋದಿನಿ : ನಗೆ ಜಾಗರಣೆ, ನಗೆ ಭಾಷಣ, ಚಿಂತನೆ ಇತ್ಯಾದಿ. ಚೌಡಯ್ಯ ಸ್ಮಾರಕ ಭವನ. ಸಂಜೆ.7ಕ್ಕೆ.

ಅಖಿಲ ಭಾರತ ಶರಣ ಸಾಹಿತ್ಯಪರಿಷತ್ತು : ಸಂಗೀತ ಶಿವರಾತ್ರಿ. ರಾತ್ರಿಯಿಡೀ ಸಂಗೀತ ಕಾರ್ಯಕ್ರಮ. ಶಿವರಾತ್ರೀಶ್ವರ ಕೇಂದ್ರ, 8ನೇ ಬ್ಲಾಕ್‌, ಜಯನಗರ. ರಾತ್ರಿ 9ಕ್ಕೆ.

ಬಾಲ ಶಿವ : ಶಿವಗಾನ, ಶಿವಕತೆ, ಭಕ್ತಿ ಗೀತೆ. ಪದ್ಮನಾಭನಗರ, ಬೆಳಗ್ಗೆ 11ರಿಂದ.

ಬಸವ ಮಂಡಳಿ : ಬೇಲಿಮಠದ ಶ್ರೀ ಶಿವಾನುಭವ ಚರಮೂರ್ತಿ ಸ್ವಾಮಿಗಳ ಅಧ್ಯಕ್ಷತೆಯಲ್ಲಿ ವಿವಿಧ ಕಾರ್ಯಕ್ರಮ. ಕರ್ನಾಟಕ ನ್ಯೂ ಇಂಗ್ಲಿಷ್‌ ಶಾಲೆ, ಜೀವನಭೀಮಾ ನಗರ. ರಾತ್ರಿ 7ಕ್ಕೆ.

ವೀರಶೈವ ಸಮಾಜ : ಶಿವಗೀತೆ ಧ್ವನಿಸುರುಳಿ ಬಿಡುಗಡೆ, ಸದಾಶಿವನಗರ, ಸಂಜೆ 6-45ಕ್ಕೆ.

ಮಹದೇಶ್ವರ ಸ್ವಾಮಿ ಸೇವಾ ಮಂಡಳಿ : ಮಲೆ ಮಹದೇಶ್ವರ ಸ್ವಾಮಿ ಚರಿತ್ರೆ ಪಾರಾಯಣ. ಉಮಾ ಚಿತ್ರಮಂದಿರ ಬಳಿ. ಚಾಮರಾಜಪೇಟೆ. ರಾತ್ರಿ 7ಕ್ಕೆ.

ವಿರೂಪಾಕ್ಷ ದೇವಾಲಯ ಟ್ರಸ್ಟ್‌ : ಚಿನ್ನದ ಬೊಂಬೆ ನಾಟಕ ಪ್ರದರ್ಶನ, ಆರ್‌.ಪಿ.ಸಿ. ಲೇಔಟ್‌, ರಾತ್ರಿ 2ಕ್ಕೆ.

ಸೋಮೇಶ್ವರ ಸ್ವಾಮಿ ದೇವಾಲಯ : ಭಜನೆ, ಭರತನಾಟ್ಯ ಪ್ರದರ್ಶನ, ಅಲಸೂರು. ರಾತ್ರಿ 9ಕ್ಕೆ.

ಕಾಸ್ಮೋ ಪಾಲಿಟಿನ್‌ ಕ್ಲಬ್‌ : ಪಾಹಿ ಶಂಕರ ಪಾಹಿಮಾಮ್‌ ಸಾಂಸ್ಕೃತಿಕ ಕಾರ್ಯಕ್ರಮ. ಜಯನಗರ. ಸಂಜೆ 6-30ಕ್ಕೆ.

ಮುಖಪುಟ / ಮಹಾ ಶಿವರಾತ್ರಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more