ನಾಗರಪಂಚಮಿಗೆ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ ಎಳನೀರು, ಬಾಳೆಹಣ್ಣು ಬೆಲೆ
ಮಂಗಳೂರು, ಜುಲೈ 27: ನಾಗರಪಂಚಮಿ ಹಬ್ಬದ ಪ್ರಯಕ್ತ ಬಾಳೆಹಣ್ಣು, ಎಳನೀರು ದರದಲ್ಲಿ ಭಾರೀ ಏರಿಕೆಯಾಗಿದ್ದು, ಹಬ್ಬಕ್ಕೆ ಬೆಲೆಯೇರಿಕೆ ಬಿಸಿ ತಟ್ಟಿದೆ.
ನಾಗರಪಂಚಮಿ ಹಬ್ಬಕ್ಕೆ ಪ್ರಮುಖವಾಗಿ ತನು ಎರೆಯಲು ಎಳನೀರು ಹಾಗೂ ಬಾಳೆಹಣ್ಣನ್ನು ಬಳಸಲಾಗುತ್ತದೆ. ನಾಗ ದೇವರಿಗೆ ಪ್ರಿಯವಾದ ಪುಟ್ಟಬಾಳೆಹಣ್ಣಿಗೆ ಭಾರೀ ಬೇಡಿಕೆಯಿರುವ ಹಿನ್ನೆಲೆಯಲ್ಲಿ ಇದರ ಬೆಲೆ ದುಪ್ಪಟ್ಟಾಗಿದೆ.

ಪುಟ್ಟಬಾಳೆಹಣ್ಣಿನ ಬೆಲೆ ಎರಡು ದಿನಗಳ ಹಿಂದೆ ಕೇಜಿ 40 ರುಪಾಯಿ ಇದ್ದರೆ, ಪ್ರಸ್ತುತ 80 ರುಪಾಯಿಗೆ ಏರಿಕೆಯಾಗಿದೆ. 30 ರುಪಾಯಿ ಇದ್ದ ಎಳನೀರಿನ ಬೆಲೆ 40ರಿಂದ 50 ರುಪಾಯಿಗೆ ಏರಿಕೆಯಾಗಿದ್ದು, ಭಕ್ತರ ಪಾಲಿಗೆ ನಾಗರಪಂಚಮಿ ದುಬಾರಿಯಾಗಿ ಪರಿಣಮಿಸಿದೆ.
ಮಳೆಗಾಲವಾದ್ದರಿಂದ ಎಳನೀರು ತೆಗೆಯಲು ಕೂಲಿಯಾಳುಗಳ ಸಮಸ್ಯೆಯಿದೆ. ಮಾರುಕಟ್ಟೆಯಲ್ಲಿ ಎಳನೀರಿನ ಕೊರತೆಯೇ ದರ ಏರಿಕೆಗೆ ಕಾರಣವಾಗಿದೆ. ಆದರೆ ಬಾಳೆಹಣ್ಣಿನ ವ್ಯಾಪಾರಸ್ಥರು ನಾಗರಪಂಚಮಿ ಎರಡು ದಿನಗಳ ಮುಂಚಿತವಾಗಿಯೇ ಕೊರತೆ ಸೃಷ್ಟಿಸುವುದರಿಂದ ಸಹಜವಾಗಿಯೇ ಬೆಲೆಯೇರಿಕೆ ಬಿಸಿ ಗ್ರಾಹಕರಿಗೆ ತಟ್ಟುತ್ತದೆ.
ಅಲ್ಲದೇ ನಾಗನಿಗೆ ಪ್ರಿಯವಾದ ಕೇದಿಗೆ ಹೂವಿಗೂ ಭಾರೀ ಬೇಡಿಕೆಯಿದ್ದು, ಮಾರುಕಟ್ಟೆಯಲ್ಲಿ ಕೇದಿಗೆ ಹೂವಿನ ಲಭ್ಯತೆ ಹೆಚ್ಚಿನ ಪ್ರಮಾಣದಲ್ಲಿಲ್ಲದ ಕಾರಣ ಭಾರೀ ದರ ಏರಿಕೆಯಾಗಿದೆ. ಒಟ್ಟಿನಲ್ಲಿ ಬೆಲೆ ಏರಿಕೆಯಾದರೂ ಕರಾವಳಿಯ ದೊಡ್ಡ ಹಬ್ಬವಾಗಿರುವ ನಾಗರಪಂಚಮಿಯನ್ನು ಆಚರಿಸಿ ನಾಗದೇವನ ಅನುಗ್ರಹ ಪಡೆಯುವುದು ಇಲ್ಲಿನ ಸಂಪ್ರದಾಯವಾಗಿದೆ.












Click it and Unblock the Notifications