• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನನ್ನ ಮಗುವಿನ ಅಮ್ಮನಾಗಿದ್ದಕ್ಕೆ ಥ್ಯಾಂಕ್ಸ್ , ಹನಿ

By Staff
|

ಸಂಬಂಧಗಳ ನವೀಕರಣಕ್ಕೆ ಅಥವಾ ದೃಢೀಕರಣಕ್ಕೆ ದಿನಾಚರಣೆಯಾಂದು ಬೇಕೆ ? ಇಂಥದೊಂದು ಪ್ರಶ್ನೆಯನ್ನು ಧ್ಯಾನಿಸುತ್ತ , ಅದೇಕಾಲಕ್ಕೆ- ಅಮೆರಿಕ/ಭಾರತ ಸಾಮಾಜಿಕ ಭಿನ್ನತೆಗಳ ಗುರ್ತಿಸುವ ಪ್ರಯತ್ನದ 'ಅಮ್ಮಂದಿರ ದಿನ"ದ ಈ ಬರಹದ ಗರ್ಭದಲ್ಲಿ ನಗೆಯ ಹೂರಣವೂ ಉಂಟು.

ಡಾ. ಗುರುಪ್ರಸಾದ್‌ ಕಾಗಿನೆಲೆ, ರಾಚೆಸ್ಟರ್‌, ಮಿನೆಸೊಟ.

Email : gkaginele@hotmail.com

ಅವಳು ನಾಲ್ಕು ವರ್ಷದ ಕೆಳಗೆ ಭಾರತ ಬಿಟ್ಟಿದ್ದಳು.

ಅವನು ಆಗಾಗ್ಗೆ ಭಾನುವಾರ ಕೆಲಸ ಮಾಡಬೇಕಾಗಿದ್ದ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ.

.... ಅವರಿಬ್ಬರ ಪ್ರೀತಿಗೆ ಪುಟ್ಟಿ ಸಾಕ್ಷಿಯಾಗಿದ್ದಳು.

ಇನ್ನೇನು ಅವಳ ಮೊದಲ 'ಅಮ್ಮನ ದಿನ".

ಅವ ಎಲ್ಲೋ ಅಲ್ಲೀ ಇಲ್ಲೀ ಓದಿ ಹೇಗೋ ಅಮೆರಿಕಾಕ್ಕೆ ಬಂದು ಸೇರಿಕೊಂಡವ. ಅವನಿಗೆ ಈ 'ಅಮ್ಮಂದಿರ ದಿನ" 'ಅಪ್ಪಂದಿರ ದಿನ" 'ಪ್ರೇಮಿಗಳ ದಿನ" ಗಳ ಬಗ್ಗೆ ಹೆಚ್ಚಿನ ಒಳಜ್ಞಾನವಿಲ್ಲ. ಮದುವೆಯಾದ ಮೂರುವರ್ಷವೂ 'ಪ್ರೇಮಿಗಳ ದಿನ"ದಂದು ತನಗೆ ಒಡವೆಯಿರಲಿ, ಹೂವಿರಲಿ, ಒಂದು ಪ್ರೀತಿಯಿಂದ ಮಾತೂ ಆಡಲಿಲ್ಲವೆಂದು ಅವಳು ತೀರ ಬೇಜಾರು ಮಾಡಿಕೊಂಡಿದ್ದಳು. ಮುಂದಿನ ವರ್ಷ ನೆನಪಿಸಿಕೊಳ್ಳಬೇಕೆಂದುಕೊಂಡಿದ್ದ . ಬರೇ ಯುಗಾದಿ, ದೀಪಾವಳಿಗಳಂಥ ವರ್ಷಾವಧಿ ಹಬ್ಬಗಳನ್ನು ಮಾತ್ರ ಹಬ್ಬಗಳೆಂದುಕೊಂಡಿದ್ದ ಆತನಿಗೆ ಈ ಹೊಸ ಹಬ್ಬಗಳನ್ನು ಜೀರ್ಣಿಸಿಕೊಳ್ಳಲು ಸ್ವಲ್ಪ ತೊಡರಿದಂತಾಗಿತ್ತು.

ಹೆಂಡತಿಯನ್ನೊಮ್ಮೆ ಕೇಳಿದ್ದ. 'ನಮಗ್ಯಾಕೆ ಇಲ್ಲ- ಈ ದಿನಗಳು?"

'ಅಲ್ಲಿ ಅಮ್ಮ, ಅಪ್ಪ, ಮಕ್ಕಳು ಎಲ್ಲರೂ ಮೊದಲಿನಿಂದ ಕೊನೆಯತನಕ ಜೊತೆಗೇ ಇರುತ್ತಾರೆ. ಹಾಗಾಗಿ ವರ್ಷಕ್ಕೊಮ್ಮೆ ಅಮ್ಮಂದಿರುಗಳನ್ನು, ಅಪ್ಪಂದಿರುಗಳನ್ನು ನೆನೆಸಿಕೊಳ್ಳುವ ಪ್ರಮೇಯವಿರುವುದಿಲ್ಲ." ಅಂದಳು.

'ಆದರೆ, ಇಲ್ಲಿ ಪ್ರೇಮಿಗಳ ದಿನ ಯಾಕಿದೆ. ಗಂಡ ಹೆಂಡತಿ ಯಾವತ್ತೂ ಪ್ರೇಮಿಗಳೇ ಅಲ್ಲವೇ?" ಪರೀಕ್ಷಿಸುವಂತಿತ್ತು ಪ್ರಶ್ನೆ.

'ಇಂಡಿಯಾದಲ್ಲಿ ಭೀಮನ ಅಮಾವಾಸ್ಯೆ ಯಾಕಿದೆ, ಗಂಡನ ಪೂಜೆ ಮಾತ್ರ ಮಾಡೋದಕ್ಕೆ"- ಕೇಳಿದ್ದಳು, ಹೆಂಡತಿ.

ಉತ್ತರ ಹೊಳೆಯಲಿಲ್ಲ.

ಇರಲಿ, ಅಮೆರಿಕಾ.... ಅಂದುಕೊಂಡು ಸುಮ್ಮನಾಗಿದ್ದ.

'ಅಮ್ಮಂದಿರ ದಿನ" ಮುಂದಿನ ಭಾನುವಾರ. 'ಏನಪ್ಪ ಈ ಭಾನುವಾರ ಕೆಲಸ ಮಾಡುವುದು ನಿನ್ನ ಸರದಿ. ಹೊಸದಾಗಿ ಅಪ್ಪನಾಗಿದ್ದೀ. ನಿನಗೆ ಬೇಕಾದರೆ ರಜೆ ತಗೋ. ನಾವು ಅಡ್ಜಸ್ಟ್‌ ಮಾಡ್ತೇವೆ." ಅಂದರು, ಅವನ ಬೆಳ್ಳನೆಯ ಗೆಳೆಯರು.

'ಅಮ್ಮಂದಿರ ದಿನಕ್ಕೆ ನನಗೆ ಯಾಕೆ ರಜ ಬೇಕು" ಪೆದ್ದುಪೆದ್ದಾಗಿ ಕೇಳಿದ, ಆತ.

'ಯಾಕೆಂದರೆ, ನೀನು ಅಪ್ಪ.... ಹೌದೋ ಅಲ್ವೋ ಹೇಳು" ಎಂದು ಪೋಲಿಪೋಲಿಯಾಗಿ ಕಣ್ಣುಹೊಡೆದು ಹಹಹಾ ಎಂದು ನಕ್ಕು 'ಹೈ ಫೈವ್‌" ಮಾಡಿದ, ಇನ್ನೊಬ್ಬ ಗೆಳೆಯ.

ಅವನಿಗೆ ಸಿಟ್ಟು ಬಂತು.

ಇರಲಿ, ಅಮೆರಿಕಾ..... ಅಂದುಕೊಂಡು ಸುಮ್ಮನಾಗಿದ್ದ.

'ನಾನು ಅಪ್ಪ , ಸರಿ. ನಾವು ಅಮ್ಮಂದಿರ ದಿನ ಆಚರಿಸುವುದಿಲ್ಲ" ಮತ್ತೆ ಪೆದ್ದಾದ, ಅವನು.

'ಆಚರಿಸುವುದಂತೆ, ಅದೇನು ರಾಷ್ಟ್ರೀಯ ಹಬ್ಬವೇ, ಆಚರಿಸುವುದಕ್ಕೆ. ನಿನ್ನ ಹೆಂಡತಿಯ ಜತೆ ಒಂದಿಷ್ಟು ಒಳ್ಳೆ ಮಾತಾಡು. ನಿನಗೇನು ಕಡಿಮೆಯಾಗಿದೆ, ಧಾಡಿ... ಒಂದು ಒಳ್ಳೆ ಉಡುಗೊರೆ ಕೊಟ್ಟು ಒಂದಿಷ್ಟು ಗುಲಾಬಿ ಹೂವುಗಳನ್ನು ಕೊಡು. ಕೈಹಿಡಿದು 'ನನ್ನ ಮಗುವಿನ ತಾಯಿಯಾಗಿದ್ದಕ್ಕೆ ಥ್ಯಾಂಕ್ಸ್‌, ಹನಿ" ಅಂದಾಗ ಅವಳ ಮುಖದಲ್ಲಿ ಉಕ್ಕುವ ನಗುವನ್ನು ನಿನ್ನದಾಗಿಸಿಕೋ" ಎಂದ ಕವಿ ಹೃದಯವಿದ್ದ , ಇನ್ನೊಬ್ಬ ಗೆಳೆಯ. ಮಿಕ್ಕವರು ಅವನನ್ನು ವಿಚಿತ್ರವಾಗಿ ನೋಡಿದರು. ಆತ ಯಶಸ್ವಿ ಅಪ್ಪನಾಗದೇ ಇದ್ದುದರಿಂದ ಈಗ ಯಶಸ್ವೀ 'ಗೇ" ಆಗಿದ್ದಾನೆ, ಎಂದು ಆಮೇಲೆ ಯಾರೋ ಹೇಳಿದರು.

ಇರಲಿ, ಅಮೆರಿಕಾ..... ಅಂದುಕೊಂಡು ಸುಮ್ಮನಾಗಿದ್ದ.

'ಅಯ್ಯೋ ಬೆಪ್ಪುಗಳಾ, ನಮಗೆ ದಿನವೂ ಅಮ್ಮಂದಿರ ದಿನವೇ, ದಿನವೂ ಅಪ್ಪಂದಿರ ದಿನವೇ. ನಾನು ಬೆಳೆಯುವಾಗ ನಮ್ಮಜ್ಜ ಮನೇಲೇ ಇದ್ದರು. ನಮ್ಮಮ್ಮ ಕೊನೆಯ ಹತ್ತು ವರ್ಷ ನಮ್ಮಜ್ಜನ ಸೇವೆ ಮಾಡಿದ್ದಾಳೆ, ಗೊತ್ತಾ. ನಿಮ್ಮ ಹಾಗೆ ವರ್ಷವಿಡೀ ಎಲ್ಲೋ ಇದ್ದು, ಒಂದು ದಿನ ನರ್ಸಿಂಗ್‌ ಹೋಂ ಗೆ ಒಂದು ಬುಟ್ಟಿ ಹೂವು ಕಳಿಸಿ 'ನನಗೆ ನೀನಂದರೆ ಪ್ರಾಣ, ಅಮ್ಮಾ" ಎಂದು ಹೇಳುವುದೂ, 'ಇದನ್ನು ನನ್ನ ಮಗ ಕಳಿಸಿದ್ದು ಎಂದು ವರ್ಷಕ್ಕೊಂದು ಬಾರಿ ಖುಷಿಪಟ್ಟುಕೊಂಡು ವರ್ಷವಿಡೀ ಗೋಳಾಡುವ ಅಮ್ಮಂದಿರೂ ನಮ್ಮಲ್ಲಿಲ್ಲ , ಗೊತ್ತಾ. ನಾವು ಅಳುವುದೂ ನಗುವುದೂ ಜೊತೆಗೇ" ಅಂದ.

'ಅಯ್ಯಾ, ದೊಡ್ಡ ಮನುಷ್ಯ, ನೀನು ಭಾರತಕ್ಕೆ ಹೋಗಿ ಎಷ್ಟು ವರ್ಷವಾಯ್ತು ? ನಿಮ್ಮಮ್ಮನಿಗೆ ಆಗಾಗ್ಗೆ ದುಡ್ಡು ಕಳಿಸುವುದು, ವಾರಕ್ಕೊಮ್ಮೆ 'ಡಿಸ್ಕೌಂಟ್‌ ಫೋನ್‌ ಕಾರ್ಡಿ"ನಲ್ಲಿ ಫೋನ್‌ ಮಾಡುವುದು, ಇಷ್ಟು ಬಿಟ್ಟರೆ ಏನು ಮಾಡಿದ್ದೀ, ನಿಮ್ಮಮ್ಮನಿಗೆ" ಅಂದ, ಇನ್ನೊಬ್ಬ ಗೆಳೆಯ.

ಮೈ ಉರಿಯುವಷ್ಟು ಸಿಟ್ಟು ಬಂತು, ಅವನಿಗೆ.

ಇರಲಿ, ಅಮೆರಿಕಾ....... ಅಂದುಕೊಂಡು ಸುಮ್ಮನಾಗಿದ್ದ.

ಸರಿ, ಅಮ್ಮಂದಿರ ದಿನಾ ಹತ್ತಿರವಾಗುತ್ತಿತ್ತು . ಹೊಸ 'ಅಮ್ಮ"ನನ್ನು ಖುಷಿಪಡಿಸಿಬೇಕೆಂದುಕೊಂಡ. ಶಾಪಿಂಗ್‌ ಮಾಲಿಗೆ ಹೋಗಿಬಂದ. ಎಲ್ಲೆಡೆ 'ಅಮ್ಮಂದಿರ ದಿನ"ದ ವಿಶೇಷ ರಿಯಾಯಿತಿ ಇತ್ತು . ಏನೇನು ಸೇಲಲ್ಲಿದೆ ಎಂದು ನೋಡಿದ. ವಜ್ರ, ಹೂಗಳು, ಬಟ್ಟೆ, ಮೇಕಪ್‌ ಸಾಮಗ್ರಿಗಳು.... ತಮಾಷೆಯೆಂದರೆ ಯಾವುದೋ ಒಂದು ಹೆಂಗಸರ ಒಳವಸ್ತ್ರ ಮಾರಾಟ ಮಾಡುವ ಅಂಗಡಿಯಲ್ಲೂ 'ಅಮ್ಮಂದಿರಿಗಾಗಿ" ವಿಶೇಷ ರಿಯಾಯಿತಿ ಅಂತ ಹೊರಗೆ ಬೋರ್ಡಿತ್ತು.

ಅರೆರೆ.... ಅನ್ನಿಸಿತು, ಮನಸ್ಸು. ನಂತರ..... ಛೆ! ಅಂತಲೂ ಅಂದಿತು.... ಮತ್ತೆ ಮನಸ್ಸು.

ಇರಲಿ, ಅಮೆರಿಕಾ...... ಅಂದುಕೊಂಡು ಸುಮ್ಮನಾಗಿದ್ದ.

ಮೊದಲ ಬಾರಿಗೆ ಅಮ್ಮನಾಗುತ್ತಿದ್ದಾಳೆ, ಇರಲಿ ತಾನು ಜುಗ್ಗನಾಗಬಾರದು ಎಂದು ಸ್ವಲ್ಪ ದುಬಾರಿ ಎನ್ನಿಸಿದರೂ ಒಂದು ಹದಿನಾಲ್ಕು ಕ್ಯಾರಟ್ಟಿನ ಸರ ತೆಗೆದುಕೊಂಡ. ಚೆನ್ನಾಗಿ ಪ್ಯಾಕ್‌ ಮಾಡಿಸಿ ಮನೆಗೆ ತೆಗೆದುಕೊಂಡು ಇಟ್ಟ.

ಬಂದೇ ಬಿಟ್ಟಿತು, ಅಮ್ಮಂದಿರ ದಿನ. ಭಾನುವಾರ. ಬೆಳಗಾಗೆದ್ದು, 'ಒಂದ್ನಿಮಿಷ ಇಲ್ಲೇ ಹೋಗಿಬರುತ್ತೇನೆಂದು" ಹೇಳಿ ಹೊರಗೆ ಹೋಗಿ, ಒಂದು ಬುಟ್ಟಿ ತಾಜಾ ಕೆಂಪುಗುಲಾಬಿ ಹೂಗಳನ್ನು ತಂದು, ಅವಳು ಪುಟ್ಟಿಯನ್ನು ಆಡಿಸುತ್ತಿರುವುದನ್ನು ನೋಡಿ ಇದಕ್ಕಿಂತ ಒಳ್ಳೆ ಸಮಯ ಬಾರದು, ಎಂದುಕೊಂಡು 'ಸರ್‌ಪ್ರಾಆಆಐಸ್‌" ಎಂದು ತನ್ನ ಇನ್ನೂರೈವತ್ತು ಡಾಲರಿನ ತೃಪ್ತಿಯನ್ನೂ, ಸಂತೋಷವನ್ನೂ ಧನ್ಯವಾದಗಳನ್ನೂ ಒಟ್ಟಿಗೆ ಪ್ರಕಟಿಸಿದ. 'ವಾಆಆಅವ್‌" ಎಂದು ನಿಜವಾಗಿಯೂ ಖುಷಿಪಟ್ಟಳು, ಅವಳು. ಆ ಖುಷಿ ಅವಳಿಗೆ ನಿಜವಾದ ಅಮ್ಮನಾದಾಗಲೂ ಆಗಿರಲಿಲ್ಲ ಅಂದುಕೊಂಡ.

'ಸರಿ, ಇವತ್ತು ರಾತ್ರಿ ಎಲ್ಲಾದರೂ ಹೊರಗೆ ಹೋಟೆಲ್ಲಿಗೆ ಹೋಗೋಣವೇ" ಅಂದಳು, ಪ್ರೀತಿಯಿಂದ.

ಇಲ್ಲವೆನ್ನಲಾಗಲಿಲ್ಲ ಅವನಿಗೆ.

*

ರಾತ್ರಿ, ಮಂದಬೆಳಕಿನಲ್ಲಿ ಯಾವುದೋ ಇಟಲಿಯ ಊಟ ತಿನ್ನುತ್ತಾ ಕೂತಿದ್ದರು. ಅವರಿಬ್ಬರೂ.

ಅಂದ. ಆಫೀಸಿನಲ್ಲಿ ಸ್ನೇಹಿತ ಹೇಳಿಕೊಟ್ಟಂತೆ.

'ನನ್ನ ಮಗುವಿನ ಅಪ್ಪನಾಗಿದ್ದಕ್ಕೂ ಥ್ಯಾಂಕ್ಸ್‌" ಅಂದಳು, ಅವಳೂ.

ಪುಟ್ಟಿ ಸುಖವಾಗಿ ಬಾಡಿಗೆಯ ಸಂಜೆ ಅಮ್ಮನೊಂದಿಗೆ ಮಲಗಿತ್ತು.

*

ಮನೆಗೆ ಬಂದರು. ಟೆಲಿಫೋನಿನ ಉತ್ತರಿಸುವ ಮಶೀನಿನಲ್ಲಿ 'ಏನೋ.... ಇವತ್ತು ಮದರ್ಸ್‌ ಡೇ. ಮರ್ತುಬಿಟ್ಟಿಯಾ... ಫೋನ್‌ ಮಾಡ್ತೀಯಾ ಅಂತ ತಿಳಕೊಂಡಿದ್ದೆ." ಅಂತ ಆಕ್ಷೇಪಿಸಿದ್ದಳು, ಭಾರತದ ಅವನಮ್ಮ.

ಅರೆರೆ.... ಅನ್ನಿಸಿತು, ಮನಸ್ಸು . ನಂತರ..... ಛೆ! ಅಂತಲೂ ಅಂದಿತು.... ಮತ್ತೆ ಮನಸ್ಸು.

ಪೂರಕ ಓದಿಗೆ

ಅಮ್ಮನಿಗೊಂದು ಓಲೆ

ಪಿ. ಲಂಕೇಶ್‌ ಅವರ 'ಅವ್ವ" ಕವಿತೆ

ನನ್ನ ಅಮ್ಮ ಲೀಲಾವತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more