Holi 2026: ಹೋಳಿ ಹಬ್ಬದ ಬಣ್ಣಗಳಿಂದ ಬರಬಹುದು ಕಿವಿ ನೋವು ಮತ್ತು ಸೈನಸ್ ಸೋಂಕು; ತಜ್ಞರ ಸುರಕ್ಷತಾ ಸಲಹೆಗಳು
ಬೆಂಗಳೂರು: ಹೋಳಿ ಹಬ್ಬ (Holi Festival) ಎಂದರೆ ಬಣ್ಣಗಳ ಹಬ್ಬ. ಸಂಗೀತ, ಕುಣಿತ ಮತ್ತು ಸಂಭ್ರಮಾಚರಣೆಗಳ ಈ ಹಬ್ಬ ಎಲ್ಲರಿಗೂ ಅಚ್ಚುಮೆಚ್ಚು. ಆದರೆ, ಇದೇ ಹೋಳಿ ಹಬ್ಬ ಇಎನ್‌ಟಿ (ENT - ಕಿವಿ, ಮೂಗು, ಗಂಟಲು) ತಜ್ಞರ ಪಾಲಿಗೆ ಕಿವಿ ಕಟ್ಟುವಿಕೆ, ಮೂಗಿನ ಕಿರಿಕಿರಿ ಮತ್ತು ಸೈನಸ್ ಸೋಂಕಿನ ಸಮಸ್ಯೆಗಳೊಂದಿಗೆ ರೋಗಿಗಳು ಸಾಲುಗಟ್ಟುವ ಸಮಯವೂ ಹೌದು. ಹೋಳಿ ಕುರಿತು ನಾವು ತೆಗೆದುಕೊಳ್ಳಬೇಕಾದ ಸುರಕ್ಷತಾ ಸಲಹೆಗಳ ಬಗ್ಗೆ ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಯ ಸೀನಿಯರ್ ಕನ್ಸಲ್ಟೆಂಟ್, ಇಎನ್‌ಟಿ ಸರ್ಜನ್ ಆಗಿರುವ ಡಾ. ಸೌಮ್ಯ ಎಂ.ಎಸ್ ವಿವರಿಸಿದ್ದಾರೆ.
ಬಣ್ಣಗಳ ಜೊತೆ ಹಬ್ಬವನ್ನು ಸಂಭ್ರಮಿಸುವುದು ಒಳ್ಳೆಯದೇ. ಆದರೆ, ಈ ವೇಳೆ ಜನರು ವಿವಿಧ ರಾಸಾಯನಿಕ ಮಿಶ್ರಣಗಳು ಮತ್ತು ಕೃತಕ ಬಣ್ಣಗಳನ್ನು ಒಳಗೊಂಡಿರುವ ಪುಡಿಗಳನ್ನು ಬಳಸಿದಾಗ ಅದು ತೊಂದರೆ ಉಂಟುಮಾಡುತ್ತದೆ. ಇಂತಹ ಕೃತಕ ಬಣ್ಣಗಳು, ಸೂಕ್ಷ್ಮ ಕಣಗಳು ಮತ್ತು ಕಲುಷಿತ ನೀರಿನ ಕಾರಣದಿಂದ ಚರ್ಮ, ಕಣ್ಣು, ಕಿವಿ ಮತ್ತು ಮೂಗಿನ ಮೇಲೆ ನೇರ ಪರಿಣಾಮ ಉಂಟಾಗಿ ಕಿರಿಕಿರಿ, ಉರಿಯೂತ ಮತ್ತು ಸೋಂಕುಗಳಿಗೆ ಕಾರಣವಾಗುತ್ತದೆ. ಚರ್ಮ ಮತ್ತು ಕಣ್ಣುಗಳ ಮೇಲಿನ ಪರಿಣಾಮವನ್ನು ಸುಲಭವಾಗಿ ಗುರುತಿಸಬಹುದು. ಆದರೆ, ಬಣ್ಣಗಳು ಕಿವಿ ಮತ್ತು ಮೂಗಿನ ಒಳಹೊಕ್ಕಾಗ ತಕ್ಷಣಕ್ಕೆ ತೊಂದರೆ ಅರಿವಿಗೆ ಬರುವುದಿಲ್ಲ.

ಕಿವಿಯ ಮೇಲೆ ಬಣ್ಣಗಳ ಪ್ರಭಾವ
ಬಣ್ಣದ ಪುಡಿಯನ್ನು ನೇರವಾಗಿ ಮುಖಕ್ಕೆ ಎಸೆದಾಗ, ಸೂಕ್ಷ್ಮ ಕಣಗಳು ಕಿವಿಯ ನಳಿಕೆಯ (Ear Canal) ಮೂಲಕ ಒಳಗೆ ಪ್ರವೇಶಿಸುವ ಸಾಧ್ಯತೆ ಇರುತ್ತದೆ. ಹೊರ ಕಿವಿಯ ನಳಿಕೆಯಲ್ಲಿ ಸ್ರವಿಸುವ ಸೆರುಮೆನ್ (ಕಿವಿ ಮೇಣ) ಬಣ್ಣದ ಪುಡಿ ಮತ್ತು ತೇವಾಂಶದೊಂದಿಗೆ ಬೆರೆತು ದಪ್ಪನೆಯ, ಅಂಟಂಟಾದ ಪದರವನ್ನು ರೂಪಿಸುತ್ತದೆ. ಇದರಿಂದ ಕಿವಿ ಕಟ್ಟಿದಂತಹ ಅನುಭವವಾಗಿ, ಕೇಳುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಜನರು ಇಯರ್ ಬಡ್ಸ್ ಅಥವಾ ಪಿನ್ ಬಳಸಿ ಇದನ್ನು ತೆಗೆಯಲು ಯತ್ನಿಸಿದಾಗ, ಕಿವಿಯ ನಳಿಕೆಯಲ್ಲಿ ಸವೆತ ಉಂಟಾಗಿ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳು (Fungi) ಬೆಳೆಯಲು ಕಾರಣವಾಗುತ್ತದೆ. ಈ ಸ್ಥಿತಿಯನ್ನು 'ಓಟಿಟಿಸ್ ಎಕ್ಸ್ಟರ್ನಾ' (Otitis Externa) ಎನ್ನಲಾಗುತ್ತದೆ. ಇದರಿಂದ ತೀವ್ರ ನೋವು, ಊತ, ತುರಿಕೆ ಮತ್ತು ದುರ್ವಾಸನೆಯಿಂದ ಕೂಡಿದ ದ್ರವ ಸೋರುವಿಕೆ ಉಂಟಾಗಬಹುದು.
ಮೂಗು ಮತ್ತು ಸೈನಸ್ ಅಪಾಯ
ಹೋಳಿ ಆಚರಣೆಯ ಸಮಯದಲ್ಲಿ ಗಾಳಿಯಲ್ಲಿ ಹರಡುವ ಬಣ್ಣದ ಪುಡಿಯನ್ನು ಉಸಿರಾಟದ ಮೂಲಕ ಒಳಗೆಳೆದುಕೊಳ್ಳುವುದರಿಂದ ಮೂಗಿನ ಹಾದಿಯಲ್ಲಿ ಕಿರಿಕಿರಿ ಮತ್ತು ಉರಿಯೂತ ಉಂಟಾಗುತ್ತದೆ. ಇದರಿಂದ ಸೈನಸ್‌ಗಳಿಂದ (Sinus) ದ್ರವ ಹೊರಹೋಗುವ ದ್ವಾರಗಳು ಮುಚ್ಚಿಹೋಗಿ, ಮುಖದ ಭಾಗದಲ್ಲಿ ಒತ್ತಡ, ತಲೆನೋವು, ಮೂಗು ಕಟ್ಟುವುದು ಮತ್ತು ಗಟ್ಟಿಯಾದ ಲೋಳೆ ಸ್ರವಿಸುವಿಕೆ ಕಾಣಿಸಿಕೊಳ್ಳುತ್ತದೆ. ಅಸ್ತಮಾ ಅಥವಾ ಅಲರ್ಜಿ ಇರುವವರಿಗೆ ಇದು ತೀವ್ರ ಸಮಸ್ಯೆ ತಂದೊಡ್ಡಬಹುದು.
ಮಕ್ಕಳ ಬಗ್ಗೆ ಇರಲಿ ವಿಶೇಷ ಕಾಳಜಿ: ಮಕ್ಕಳ ಕಿವಿಯ ನಳಿಕೆ ಮತ್ತು ಮೂಗಿನ ಒಳಪದರಗಳು ಇನ್ನೂ ಬೆಳವಣಿಗೆಯ ಹಂತದಲ್ಲಿರುವುದರಿಂದ ಹಾಗೂ ಅವರ ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ, ಅವರು ಇಂತಹ ಸೋಂಕುಗಳಿಗೆ ಬೇಗನೆ ತುತ್ತಾಗುವ ಸಾಧ್ಯತೆ ಹೆಚ್ಚು. ಕೃತಕ ಬಣ್ಣಗಳಲ್ಲಿ ಬಳಸಲಾಗುವ ಕೈಗಾರಿಕಾ ಡೈಗಳು, ಸೀಸದ ಸಂಯುಕ್ತಗಳು ಮತ್ತು ತಾಮ್ರದ ಸಲ್ಫೇಟ್‌ನಂತಹ ಅಪಾಯಕಾರಿ ರಾಸಾಯನಿಕಗಳು ದೀರ್ಘಕಾಲದ ಸೈನಸೈಟಿಸ್‌ಗೆ ಕಾರಣವಾಗಬಹುದು.
ಬಣ್ಣಗಳಿಂದ ಉಂಟಾಗುವ ಹಾನಿಯನ್ನು ತಡೆಗಟ್ಟಲು ತಜ್ಞರ ಸಲಹೆಗಳು:
1. ನಂಬಿಕಸ್ತ ಬ್ರ್ಯಾಂಡ್‌ಗಳ ಚರ್ಮ ಸ್ನೇಹಿ, ರಾಸಾಯನಿಕ ಮುಕ್ತ ಮತ್ತು ನೈಸರ್ಗಿಕ ಬಣ್ಣಗಳನ್ನು ಮಾತ್ರ ಬಳಸಿ.
2. ಹೋಳಿ ಆಡುವ ಮುನ್ನ ಮುಖ, ಕುತ್ತಿಗೆ, ಕಿವಿಯ ಹಿಂಭಾಗ, ಹೊರ ಕಿವಿ ಮತ್ತು ಮೂಗಿನ ಹೊಳ್ಳೆಗಳಿಗೆ ಬಾದಾಮಿ ಎಣ್ಣೆ, ತೆಂಗಿನ ಎಣ್ಣೆ ಅಥವಾ ಪೆಟ್ರೋಲಿಯಂ ಜೆಲ್ಲಿಯನ್ನು ಹಚ್ಚಿಕೊಳ್ಳಿ.
3. ಬಣ್ಣದ ಪುಡಿಯಿಂದ ರಕ್ಷಣೆ ಪಡೆಯಲು ಸಾಧ್ಯವಾದರೆ ಮಾಸ್ಕ್ ಧರಿಸಿ.
4. ಆಸ್ತಮಾ ಅಥವಾ ಅಲರ್ಜಿಯ ಸಮಸ್ಯೆ ಇದ್ದರೆ, ನಿಮ್ಮ ಗುಂಪಿನವರಿಗೆ ಮೊದಲೇ ತಿಳಿಸಿ ಜಾಗರೂಕರಾಗಿರಿ ಮತ್ತು ಇನ್ಹೇಲರ್ ಅನ್ನು ಜೊತೆಯಲ್ಲೇ ಇಟ್ಟುಕೊಳ್ಳಿ.
5. ಮೂಗು ಕಟ್ಟುವಿಕೆಯನ್ನು ಕಡಿಮೆ ಮಾಡಲು 'ಸಲೈನ್ ನೇಸಲ್ ಸ್ಪ್ರೇ' (Saline Nasal Spray) ಬಳಸಿ ಅಥವಾ ಸ್ಟೀಮ್ (ಹಬೆ) ತೆಗೆದುಕೊಳ್ಳಿ.
6. ಕಿವಿ ಅಥವಾ ಮೂಗಿನೊಳಗೆ ಹೋದ ಬಣ್ಣವನ್ನು ಕಡ್ಡಿ, ಪಿನ್ ಬಳಸಿ ಬಲವಂತವಾಗಿ ಹೊರತೆಗೆಯಲು ಪ್ರಯತ್ನಿಸಬೇಡಿ. ಇದು ಹಾನಿಯನ್ನು ಹೆಚ್ಚಿಸಬಹುದು.
7. ಉಸಿರಾಟದ ತೊಂದರೆ, ಶ್ರವಣ ದೋಷ, ಕಿವಿ ನೋವು ಅಥವಾ ಸತತವಾಗಿ ಮೂಗು ಕಟ್ಟುವಿಕೆ ಕಾಣಿಸಿಕೊಂಡರೆ ತಕ್ಷಣ ಇಎನ್‌ಟಿ ವೈದ್ಯರನ್ನು ಸಂಪರ್ಕಿಸಿ.
ಹೋಳಿ ಭಾರತದ ಅತ್ಯಂತ ಸಂಭ್ರಮದ ಹಬ್ಬ. ಈ ಸಂಭ್ರಮವನ್ನು ಬಣ್ಣಗಳ ಖುಷಿಗಾಗಿ ನೆನಪಿಟ್ಟುಕೊಳ್ಳಬೇಕೇ ಹೊರತು, ರೋಗ ಅಥವಾ ಸೋಂಕಿನಿಂದಲ್ಲ. ಹಾಗಾಗಿ ಸೂಕ್ತ ಮುನ್ನೆಚ್ಚರಿಕೆಗಳೊಂದಿಗೆ ಸುರಕ್ಷಿತವಾಗಿ ಹಬ್ಬ ಆಚರಿಸಿ ಎಂದು ಡಾ. ಸೌಮ್ಯ ಎಂ.ಎಸ್ ಸಲಹೆ ನೀಡಿದ್ದಾರೆ.












Click it and Unblock the Notifications