ಸುವರ್ಣ ಗೌರಿ ವ್ರತ: ತಿಳಿದಿರಲಿ ಈ 17 ಸಂಗತಿ

By: ಡಾ. ಗುರುರಾಜ ಪೋಶೆಟ್ಟಿಹಳ್ಳಿ
Subscribe to Oneindia Kannada

ಈ ಹೊತ್ತು ಆಚರಣೆಗಳೂ ಅಲಂಕಾರ ಆಗುತ್ತಿರುವ ಹೊತ್ತು. ಹಾಗೇ ಅಲಂಕಾರವೇ ಆಚರಣೆ ಆಗುತ್ತಿರುವ ಹೊತ್ತೂ ಹೌದು. ಶ್ರಾವಣದ ಹಬ್ಬಗಳೆಂದರೆ ಆಚರಣೆಯೂ, ಅಲಂಕಾರವೂ ಆಗಿ ಭಾರತೀಯ ಅನ್ನಿಸುವುದರ ವಿಶೇಷತೆಯನ್ನು ಸಂಭ್ರಮಿಸುವುದಾಗಿದೆ.

ಒಂದಷ್ಟು ಬಣ್ಣದ ಹೂವುಗಳು, ಒಂದಷ್ಟು ಹಣ್ಣುಗಳು, ಇನ್ನೂ ಒಂದಷ್ಟು ಸರಳ, ಸುಲಭದ ತಯಾರಿಗಳ ಜೊತೆಗೆ ಹಬ್ಬಗಳನ್ನು ಆಚರಿಸುವ ಮರ್ಮ ಬದುಕಿಗೆ ಸಂತಸವನ್ನು ತುಂಬುವುದೇ ಆಗಿದೆ. ಅಷ್ಟೇ ಅಲ್ಲದೆ, ಉಪವಾಸ ಮತ್ತು ಊಟದ ಮಹತ್ವವನ್ನು ಹೇಳುವ ನಮ್ಮ ಹಬ್ಬಗಳು ಬದುಕಿಗೆ ಶಿಸ್ತು ಹಾಗೂ ಸಂಭ್ರಮವನ್ನು ತುಂಬುವ ಕೆಲಸವನ್ನೂ ಸ್ವಲ್ಪವೂ ತಪ್ಪದೇ ಮಾಡುತ್ತಿರುತ್ತವೆ. ಶ್ರಾವಣಮಾಸದ ವೈಭವದ ಲಕ್ಷ್ಮೀಪೂಜೆಯ ನಂತರ ಬರುವ ಭಾದ್ರಪದ ಮಾಸದ ಗೌರಿಹಬ್ಬ ಸಹ ಅವುಗಳಲ್ಲಿ ಒಂದು.

ಸ್ವರ್ಣಗೌರೀವ್ರತದ ಹಿನ್ನೆಲೆ, ವಿಶೇಷತೆ ಮತ್ತು ಸಿದ್ಧತೆ

ಪ್ರಾಚೀನ ಕಾಲದ ವಿಧಿ, ಸಂಪ್ರದಾಯ, ನಿಯಮಗಳನ್ನು ಗಮನಿಸಿದರೆ ಸ್ತ್ರೀಯರೇ ಪ್ರತ್ಯೇಕವಾಗಿ, ಸ್ವತಂತ್ರವಾಗಿ ಆಚರಿಸಬಹುದಾದ ಯಾವ ಆಚರಣೆಗಳೂ ಕಂಡುಬರುವುದಿಲ್ಲ. ಆಕೆ ಗೃಹಿಣಿಯಾಗಿ ಪತ್ನಿಯ ಸ್ಥಾನದಲ್ಲಿ ಕುಳಿತು ಪತಿಯೊಂದಿಗೆ ಯಜ್ಞ, ಯಾಗ, ಪೂಜೆ, ವ್ರತಗಳಲ್ಲಿ ಸಹಭಾಗಿಯಾಗಬಹುದಷ್ಟೆ.

In Pics : ಗೌರಿ-ಗಣೇಶನನ್ನು ಬರ ಮಾಡಿಕೊಳ್ಳೋಣ ಬನ್ನಿ

ಸಂಸ್ಕೃತಿ, ಪುರಾಣ, ಇತಿಹಾಸಗಳ ಕಾಲದಲ್ಲಿ ಸಮಷ್ಟಿಹಿತ ಚಿಂತನೆಯ ದೃಷ್ಟಿಯಿಂದ ನಡೆದಿರಬಹುದಾದ ವಿಶಿಷ್ಟ ವೈಚಾರಿಕತೆಯ ಪರಿಣಾಮವಾಗಿ ಗೃಹಿಣಿಯರೇ ಪತಿಯ ಅನುಮತಿ ಪಡೆದು ಸ್ವತಂತ್ರವಾಗಿ ಆಚರಿಸಬಹುದಾದ ವ್ರತಾಚರಣೆ ಪ್ರಾರಂಭವಾದವೆಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಸ್ವರ್ಣಗೌರಿ ವ್ರತ, ಹರಿತಾಲಿಕಾ ವ್ರತ, ಮಂಗಳಗೌರಿ ವ್ರತ ಮುಂತಾದವು ಸ್ತ್ರೀಯರಿಗೇ ಮೀಸಲಾದ ವ್ರತಗಳು.

ಸಂತಾನ ಕರುಣಿಸುವ ಕುದೇರು ಗ್ರಾಮದ ಹಿಟ್ಟಿನ ಗೌರಮ್ಮ

ವ್ರತಗಳು ಸುಲಭ, ಸರಳ, ಇವುಗಳಿಂದ ಇಷ್ಟ ದೈವವನ್ನು ಒಲಿಸಿಕೊಳ್ಳಬಹುದು. ಸ್ವರ್ಣಗೌರಿ ವ್ರತವೂ ಮಹಿಳೆಯರು ಬಹು ಸಂಭ್ರಮ, ಭಕ್ತಿಯಿಂದ ಮಾಡುವಂತಹದ್ದು. ಭಾದ್ರಪದ ಶುದ್ಧ ಚತುರ್ಥಿತಯುತ ತದಿಗೆಯ ದಿನವೇ ನಡೆಸಬೇಕು. ವ್ರತ ಅಂದರೆ ನಿಯಮ. ಶ್ರದ್ಧೆ, ಭಕ್ತಿ, ದೃಢಸಂಕಲ್ಪ, ದಾನ, ದಕ್ಷಿಣೆ, ಉಪವಾಸ ಅಥವಾ ಮಿತಾಹಾರ ಮುಖ್ಯವಾಗಿರುತ್ತದೆ. ಗೃಹಿಣಿಯರು ಸ್ವತಃ ಸಂಕಲ್ಪ ಮಾಡಿ ಅಕ್ಷಯ ಸೌಭಾಗ್ಯ ಧರ್ಮಾರ್ಥಕಾಮ ಚತುರ್ವಿಧ ಪುರುಷಾರ್ಥ ಸಿದ್ಧಿಗಾಗಿ, ಪುತ್ರ ಪೌತ್ರಾದಿ ಧನ ಧಾನ್ಯ ಸಮೃದ್ಧಿಗಾಗಿ ಪ್ರಾರ್ಥಿಸುತ್ತಾರೆ.

ಯಾರು ಈ ಸ್ವರ್ಣ ಗೌರಿ?

ಯಾರು ಈ ಸ್ವರ್ಣ ಗೌರಿ?

ಸುವರ್ಣ ಬಣ್ಣದ ಗೌರಿ ಶಿವನ ಅರ್ಧಾಂಗಿ. ಆಕೆ ಜಗದ್ವಂದ್ಯಳು. ದಕ್ಷ ಮಹಾರಾಜನ ಮಗಳಾಗಿ ಹುಟ್ಟಿ ಶಿವನ ಮಡದಿಯಾದ ದಾಕ್ಷಾಯಿಣಿ, ತವರಿನಲ್ಲಿ ತಂದೆ ಮಾಡುವ ಯಾಗಕ್ಕೆ ಬಂದು ಅಪಮಾನಿತಳಾಗುತ್ತಾಳೆ. ಯಜ್ಞಕುಂಡದಲ್ಲೇ ಪ್ರಾಣತ್ಯಾಗ ಮಾಡಿದ ಆಕೆ ಹುಟ್ಟಿದ್ದು ಮಹಾ ಶಿವಭಕ್ತನಾದ ಹಿಮವಂತ ಮತ್ತು ಆತನ ಪುಣ್ಯ ವಲ್ಲಭೆ ಮೇನಾದೇವಿಯರಿಗೆ ಮಗಳಾಗಿ! ಗಿರಿಜೆ ಶಿವಲಿಂಗ ದರ್ಶನ ಮಾಡಿಯೇ ಕಣ್ತೆರೆದವಳು. ಮುಂದಿನ ಅವಳ ಕತೆ ರೋಚಕವಾಗಿದೆ.

ಗೌರಿ-ಶಂಕರ ವಿವಾಹ

ಗೌರಿ-ಶಂಕರ ವಿವಾಹ

ಶಿವಭಕ್ತೆಯಾಗಿಯೇ ಬೆಳೆದ ಗೌರಿ. ನಾರದರ ಸಲಹೆಯಂತೆ ಹೇಮಕೂಟದಲ್ಲಿ ತಪೋಯೋಗದಲ್ಲಿರುವ ಶಿವನ ಬಳಿ, ತನ್ನ ಸಖಿಯರಾದ ಜಯ-ವಿಜಯರ ಜೊತೆ ಬಂದು ಶಿವನ ಅರ್ಚನೆಗೆ ತೊಡಗುತ್ತಾಳೆ. ತಾರಕಸುರನ ವಧೆಗಾಗಿ ಕುಮಾರ ಸಂಭವವಾಗಬೇಕು. ಶಿವ ಗಿರಿಜೆಗೆ ಒಲಿಯಬೇಕು. ಗೌರಿಯ ತಪೋನಿಷ್ಠೆ ಅಚಲವಾದುದು. ವಟುವೇಷ ಧರಿಸಿ ಅವಳ ಪರೀಕ್ಷೆಗೆ ಬಂದ ಶಿವನದೇ ಪರೀಕ್ಷೆಯಾಯಿತು. ಗಿರಿಜೆಗಾಗಿ ಕಾಮನನ್ನು ಬದುಕಿಸಿದ. ಮೂರು ಲೋಕ ಮೆಚ್ಚುವಂತೆ, ಲೋಕಕಲ್ಯಾಣವಾಗುವಂತೆ ಗೌರೀ ಶಂಕರರ ವಿವಾಹವಾಯ್ತು. ಶಿವನು ಸ್ವಯಂಭೂ, ಶಕ್ತಿ ಹಲವು ರೂಪ, ಜನ್ಮ ತಾಳಿ ಪರಶಿವನನ್ನೇ ಸೇರುವುದು ಅರ್ಥಪೂರ್ಣ.

ಎಲ್ಲ ಮಹಿಳೆಯರಿಗೂ ಆದರ್ಶ ಈ ಗೌರಿ

ಎಲ್ಲ ಮಹಿಳೆಯರಿಗೂ ಆದರ್ಶ ಈ ಗೌರಿ

ಆನೆಮೊಗದ ತನ್ನ ಮಗ ಲೋಕವಂದಿತನಾಗಬೇಕೆಂದು ವರ ಪಡೆದವಳು ಗೌರಿ. ವಿರೂಪಾಕ್ಷನನ್ನು ತನ್ನ ಮನದಿಚ್ಛೆಯಂತೆ ಕಠಿಣ ತಪಸ್ಸಿನಿಂದ ಪತಿಯಾಗಿ ಪಡೆದು, ತಾರಕಾಸುರನನ್ನು ಸಂಹರಿಸುವ ಸ್ಕಂದನನ್ನು ಪುತ್ರನಾಗಿ ಬೆಳೆಸಿ, ತನ್ನ ಮೈ ಮಣ್ಣಿನಿಂದಲೇ ಮುದ್ದಿನ ಮಗನನ್ನು ಸೃಷ್ಟಿಸಿ, ಅವನು ಪತಿಯಿಂದ ಹತನಾದಾಗ ಮತ್ತೆ ಪ್ರಾಣಶಕ್ತಿ ನೀಡಿ, ಮಗನು ಬದುಕುವಂತೆ ಮಾಡಿಸಿ, ವಿರೂಪನಾದ ಮಗನು ಮಹಾಮಹಿಮನಾಗುವಂತೆ ಮಾಡಿದ ಗೌರಿ, ಸುವರ್ಣದ ಗೌರಿ, ಸ್ವರ್ಣಗೌರಿ ಎಲ್ಲ ಮಹಿಳೆಯರಿಗೂ ಆದರ್ಶಪ್ರಾಯಳು. ಪುರುಷರಿಗೂ ಮಾನ್ಯಳು. ಅವಳ ಭಕ್ತರನ್ನು ಶಿವನೇ ಕಾಯುತ್ತಾನೆ.

ಗೌರಿ ವ್ರತ ಯಾಕೆ?

ಗೌರಿ ವ್ರತ ಯಾಕೆ?

ಶಿವನ ಅರ್ಧಾಂಗಿ ಪಾರ್ವತಿ ಹರತಾಳಿಕಾ ಉಪವಾಸ ಮಾಡುತ್ತಾ 'ಅಪರ್ಣಾ' ಎಂದು ಕರೆಸಿಕೊಂಡು ಯಶಸ್ವಿಯಾಗಿ ಶಿವನನ್ನು ಪಡೆದಳು ಎನ್ನುವ ಕಥೆಯಿದೆ. ಅಂಥ ಹಠಸಾಧನೆಯ ಗೌರಿಯನ್ನು ಪೂಜಿಸಿದರೆ ತಾವೂ ಬದುಕಿನ ನೆಮ್ಮದಿಯನ್ನು ಪಡೆಯಬಹುದು ಎಂಬ ಬಯಕೆಯಿಂದ ಮಹಿಳೆಯರು ವ್ರತಾಚರಣೆ ಮಾಡುತ್ತಾರೆ.

ಷೋಡಶೋಪಚಾರ

ಷೋಡಶೋಪಚಾರ

ಷೋಡಶೋಪಚಾರಗಳು ಅಂದರೆ ಹದಿನಾರು ಬಗೆಯ ಉಪಚಾರಗಳು. ಅಭೀಷೇಕ, ಸ್ನಾನ, ಗಂಧ, ಕುಂಕುಮ, ವಸ್ತ್ರ, ಒಡವೆ ಹೀಗೆ ಮಂಟಪದಲ್ಲಿ ಆಸೀನಳಾದ ಗೌರಿಗೆ ಉಪಚಾರಗಳು ನಡೆದು ಕೊನೆಗೆ ಸಿಹಿಯೊಂದಿಗೆ ಆಕೆಯನ್ನು ಸಂತೃಪ್ತಿಗೊಳಿಸುವುದು.

ಗೌರಿ ಅಲಂಕಾರ

ಗೌರಿ ಅಲಂಕಾರ

ಈ ಎಲ್ಲ ಉಪಚಾರಗಳಲ್ಲೇ ಅತ್ಯಂತ ಖುಷಿ ಕೊಡುವ ಉಪಚಾರವೆಂದರೆ ಗೌರಿ ಅಲಂಕಾರ. ಅಲಂಕಾರ, ಸ್ತ್ರೀಯರಿಗೆ ಪರಮಾಪ್ತ, ಸೇವಂತಿಕಾ, ಬಕುಳ, ಚಂಪಕ, ಪುನ್ನಾಗ ಜಾಜಿ, ಕರವೀರ, ಮಲ್ಲಿಕಾ ಎನ್ನುವ ಹೂಗಳೊಂದಿಗೆ ಬಣ್ಣ ಬಣ್ಣದ ಹಲವು ಹೂವುಗಳು ಈ ಗೌರಿಹಬ್ಬಕ್ಕೇ ವಿಶೇಷವಾಗಿ ಪ್ರಕೃತಿಯಲ್ಲಿ ದೊರೆತು ಗೌರಿಯ ಮುಡಿಯೇರುವುದನ್ನು ನೋಡುವಾಗ ಪ್ರಾಯಶಃ ಈಗ ಪೂಜೆ ಪರಿಪೂರ್ಣವಾಯಿತು ಎಂದೆನ್ನಿಸುವುದು ಸತ್ಯ.

ಬಾಗಿನ ಎಂದರೆ ದಾನ, ಹಾರೈಕೆ

ಬಾಗಿನ ಎಂದರೆ ದಾನ, ಹಾರೈಕೆ

ಕೊಡುಕೊಳ್ಳುವಿಕೆಯ ಬಾಗಿನವೂ ಗೌರಿಹಬ್ಬದ ವೈಶಿಷ್ಟ್ಯವೇ. ಸಮೃದ್ಧಿ, ನೆಮ್ಮದಿಯನ್ನು ಪರಸ್ಪರ ಹಾರೈಸುತ್ತ ನೀಡುವ ಬಾಗಿನ ದಾನವೂ ಹೌದು, ಹಾರೈಕೆಯೂ ಹೌದು.

ಮರುದಿನ ಸದ್ದು ಗದ್ದಲಗಳೊಂದಿಗೆ ಬರುವ ಗಣೇಶನ ಹಬ್ಬದ ಮೆನ್ಯುಕಾರ್ಡ್ ಯೋಚಿಸಿದಾಗ ನಿಜಕ್ಕೂ ಹರತಾಳ ಗೌರಿಯ ಉಪವಾಸ ಆಗಬೇಕಾಗಿದ್ದೇ ಎಂದೆನಿಸುತ್ತದೆ.

ಹಿಂದಿನ ದಿನವೇ ವ್ರತ ಆರಂಭ

ಹಿಂದಿನ ದಿನವೇ ವ್ರತ ಆರಂಭ

ಯಾವುದೇ ವ್ರತವಾಗಲಿ ಹಬ್ಬವಾಗಲಿ ಹಿಂದಿನ ದಿನವೇ ನಿಜವಾಗಿ ಆರಂಭವಾಗುತ್ತದೆ. ಸಿದ್ಧತೆಯನ್ನು ಮಾಡಬೇಕಾಗುತ್ತದೆ. ಅದಕ್ಕಾಗಿ ವ್ರತದ ಹಿಂದಿನ ದಿನ ರಾತ್ರಿಯೇ ನಾಳೆ ವ್ರತವನ್ನು ಮಾಡುವೆನೆಂದು ಸಂಕಲ್ಪಿಸಿ ಉಪವಾಸ ಅಥವಾ ಫಲಾಹಾರ ಇಲ್ಲವೇ ಅಲ್ಪಾಹಾರ ಮಾಡಿ ವ್ರತದ ಪ್ರಧಾನ ದೇವರನ್ನು ಧ್ಯಾನಿಸುತ್ತಾ ನಿದ್ರಿಸಬೇಕು. ಗೌರಿಹಬ್ಬ ಅಥವಾ ಸ್ವರ್ಣಗೌರಿ ವ್ರತವೂ ಈ ನಿಯಮಕ್ಕೆ ಹೊರತಾಗಿಲ್ಲ.

ನಸುಕಿನಲ್ಲೇ ವ್ರತಕ್ಕೆ ತಯಾರಿ

ನಸುಕಿನಲ್ಲೇ ವ್ರತಕ್ಕೆ ತಯಾರಿ

ವ್ರತದ ದಿನ ನಸುಕಿನಲ್ಲೆದ್ದು, ಬಾಗಿಲನ್ನು ರಂಗವಲ್ಲಿಯಿಂದ ಸಿಂಗರಿಸಿ, ಮೈಗೆ ಎಣ್ಣೆ ಹಚ್ಚಿಕೊಂಡು ಮುಡಿಯಿಂದ ಅಡಿಯವರೆಗೂ ಮಿಂದು ಮಡಿಯ ಬಟ್ಟೆ ಉಟ್ಟುಕೊಂಡು ಹಣೆಗೆ ವಿಭೂತಿ ಕುಂಕುಮ ಮುಂತಾದವುಗಳನ್ನಿಟ್ಟುಕೊಂಡು ಪೂಜಿಸಲು ಸಿದ್ಧರಾಗಬೇಕು. ನದಿಯು ಸಮೀಪದಲ್ಲಿ ಇಲ್ಲದಿದ್ದರೆ ಮನೆಯಲ್ಲಿಯೇ ತಣ್ಣಿರಿನಿಂದ ಸ್ನಾನ ಮಾಡಬಹುದು. ಆರೋಗ್ಯವನ್ನು ಗಮನಿಸಿ ಸ್ನಾನಕ್ಕೆ ಬೆಚ್ಚಗಿನ ನೀರನ್ನೂ ಬಳಸಬಹುದು.

ಗೌರಿಪೂಜೆಗೂ ಮುನ್ನ...

ಗೌರಿಪೂಜೆಗೂ ಮುನ್ನ...

ಪರಿಶುದ್ಧವಾದ ಪೂಜೆಯು ಸ್ನಾನದಲ್ಲಿ ಫಲ-ಪುಷ್ಪಗಳಿಂದ ಅಲಂಕೃತವಾದ ಮಂಟಪದಲ್ಲಿ ಕಲಶವನ್ನು ಅಥವಾ ಹೊಂಬಣ್ಣದ ಶ್ರೀಗೌರಿಯ ಮೂರ್ತಿಯನ್ನು ಇಡಬೇಕು. ಬಾಳೆ ಎಲೆಯ ಮೇಲೆ ಅಕ್ಕಿಯ ರಾಶಿಯನ್ನು ಹರಡಿ ಅದರ ಮೇಲೆ ಲಭ್ಯವಿರುವ ಹಿತ್ತಾಳೆ, ತಾಮ್ರ ಅಥವಾ ಬೆಳ್ಳಿಯ ಪಾತ್ರೆಯನ್ನು ಇಟ್ಟು ನೀರನ್ನು ತುಂಬಬೇಕು. ಅದರ ಮೇಲೆ ಕನಿಷ್ಠ ಐದು ಎಲೆಗಳಿರುವ ಮಾವಿನ ಚಿಗುರನ್ನು ಇಟ್ಟು, ಮೇಲಿನಿಂದ ತೆಂಗಿನಕಾಯಿ ವಸ್ತ್ರ ಬಳೆ ಮುಂತಾದವುಗಳನ್ನಿಟ್ಟು ಅಲಂಕರಿಸಬೇಕು.

ಗೌರಿ ಪೂಜೆ ಹೇಗೆ?

ಗೌರಿ ಪೂಜೆ ಹೇಗೆ?

ಪೂಜೆಯನ್ನು ಎರಡು ಬಗೆಯಲ್ಲಿ ಮಾಡಬಹುದು. ಅನುಕೂಲವಿದ್ದರೆ ಮಂತ್ರಗಳನ್ನು ಉಚ್ಚರಿಸುತ್ತಾ ಪೂಜಿಸಬಹುದು. ಶ್ರೀ ಗೌರ್ಯೈ ನಮಃ ಎಂದೋ, ಹೇಳುತ್ತಾ ಅವಾಹನ ಆಸನ ಪಾದ್ಯ ಅಘ್ರ್ಯ ಅಭಿಷೇಕ ಗಂಧ, ಹೂ, ಅಕ್ಷತೆ ಧೂಪ ದೀಪ ನೈವೇದ್ಯ ಆರತಿ ಪ್ರದಕ್ಷಿಣೆ ನಮಸ್ಕಾರ ಪ್ರಾರ್ಥನೆಗಳನ್ನು ಮಾಡಬಹುದು.
ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೇ
ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣಿ ನಮೋಸ್ತುತೇ
ಎಂಬ ಮಂತ್ರವನ್ನು ಆವರ್ತಿಸಬಹುದು. ಅದಲ್ಲದಿದರೆ ಭಕ್ತಿಯಿಂದ, ಗೌರಿಯನ್ನು ಸ್ತುತಿಸುವ ಹಾಡನ್ನು ಹಾಡುತ್ತಾ ಪೂಜಿಸಬಹುದು.

ವ್ರತಾಚರಣೆ ಹೇಗೆ?

ವ್ರತಾಚರಣೆ ಹೇಗೆ?

ಭಾದ್ರಪದಮಾಸದ ಶುಕ್ಲಪಕ್ಷದ ತದಿಗೆಯಂದು ವ್ರತ ಆಚರಿಸಬೇಕು. ಅಂದು ಸೂರ್ಯೋದಯ ಸಮಯದಲ್ಲಿ ತೃತೀಯೆ ಇರಬೇಕು. ಗಣೇಶನ ಪೂಜೆಗೆ ನಿಯತವಾಗಿರುವ ಚತುರ್ಥಿತಿಥಿಯ ಯೋಗವನ್ನು ಗೌರಿದೇವಿಯು ತುಂಬಾ ಪ್ರೀತಿಸುತ್ತಾಳೆ. ಹಾಗಾಗಿ ತೃತೀಯೆಯೊಡನೆ ಚತುರ್ಥಿಯೋಗವು ಕೂಡಿಬಂದರೆ ಅಂದೇ ಗೌರಿಹಬ್ಬವನ್ನು ಆಚರಿಸಬೇಕು. ಗೌರಿದೇವಿಯನ್ನು ಹೃದಯದಲ್ಲಿ ಧ್ಯಾನಮಾಡಿ ಆನಂತರ ಹೊರಗೆ ಪೂಜಿಸಬೇಕು.

ಗೌರಿ ಪ್ರತಿಮೆ

ಗೌರಿ ಪ್ರತಿಮೆ

ಗೌರಿದೇವಿಯ ಸುವರ್ಣಪ್ರತಿಮೆ ಅಥವಾ ಕಲಶ ಅಥವಾ ಹರಿದ್ರಾ (ಅರಿಶಿನದ) ಅಥವಾ ಶುದ್ಧ ನದಿಯಿಂದ, ಸರೋವರದಿಂದ ಸಂಗ್ರಹಿಸಿದ ಮರಳು ಹಾಗೂ ಮಣ್ಣು ಮುಂತಾದವುಗಳಲ್ಲಿ ದೇವಿಯನ್ನು ಅವಾಹಿಸಿ ಪೂಜಿಸಬಹುದಾಗಿದೆ.

ಘಂಟಾನಾದ ಸಹಿತ ಪೂಜೆ

ಘಂಟಾನಾದ ಸಹಿತ ಪೂಜೆ

ಘಂಟಾನಾದ ಸಹಿತ ಪೂಜೆಯ ಪ್ರಾರಂಭ, ಆಚಮನ, ಸಂಕಲ್ಪ, ಕಳಶಪೂಜೆ, ಮಹಾಗಣಪತಿ ಪೂಜೆ, ಸ್ವರ್ಣಗೌರಿ ದೇವತಾ ಪ್ರತಿಷ್ಠಾಪನೆ ಮಾಡಿ ದೇವಿಯನ್ನು ಧ್ಯಾನಿಸಬೇಕು. ಪುಷ್ಪಾಕ್ಷತೆಗಳಿಂದ ಆಕೆಯನ್ನು ಆವಾಹಿಸಿ ರತ್ನ ಸಿಂಹಾಸನವನ್ನು ಸಮರ್ಪಿಸಬೇಕು. ಹೊಸ ದಾರವನ್ನು ಪೂಜೆ ಮತ್ತು ಧಾರಣೆಗಾಗಿ ಇರಿಸಿಕೊಳ್ಳಬೇಕು. ಪಾದ್ಯ, ಅಘ್ರ್ಯ, ಅಚಮನ, ಮಧುಪರ್ಕ, ಪಂಚಾಮೃತಸ್ನಾನ, ಶುದ್ದೋದಕಸ್ನಾನ, ವಸ್ತ್ರ, ಆಭರಣ, ಯಜ್ಞೋಪವೀತ, ಗಂಧ, ಅಕ್ಷತೆ, ಅರಿಶಿನ ಕುಂಕುಮ ಇತ್ಯಾದಿ ಸೌಭಾಗ್ಯ ದ್ರವ್ಯಗಳು ಮತ್ತು ಪುಷ್ಪ ಇವುಗಳನ್ನು ಜಗನ್ಮಾತೆಗೆ ಸಮರ್ಪಿಸಬೇಕು.

ಹದಿನಾರು ನಾಮಗಳಿಂದ ಪೂಜೆ

ಹದಿನಾರು ನಾಮಗಳಿಂದ ಪೂಜೆ

ದೇವಿಗೆ ಅಂಗಪೂಜೆ, ಪುಷ್ಪಪೂಜೆ, ಪತ್ರಪೂಜೆ, ನಾಮಪೂಜೆಗಳನ್ನು ಸಲ್ಲಿಸಿ, ದಾರದ 16 ಗ್ರಂಥಿಗಳಿಗೂ ಕ್ರಮವಾಗಿ ಸ್ವರ್ಣಗೌರಿ, ಮಹಾಗೌರಿ, ಕಾತ್ಯಾಯಿನಿ, ಕೌಮಾರಿ, ಭದ್ರಾ, ವಿಷ್ಣುಸೋದರಿ, ಮಂಗಳದೇವತಾ, ರಾಕೇಂದುವದನಾ, ಚಂದ್ರಶೇಖರಪ್ರಿಯಾ, ವಿಶ್ವೇಶ್ವರ ಪತ್ನಿ, ದಾಕ್ಷಾಯಣಿ, ಕೃಷ್ಣವೇಣಿ, ಭವಾನಿ, ಲೋಲೇಕ್ಷಣಾ, ಮೇನಕಾತ್ಮಜಾ ಎಂಬ ಹದಿನಾರು ನಾಮಗಳಿಂದ ಪೂಜೆಯನ್ನು ಸಲ್ಲಿಸಬೇಕು. ಅಷ್ಟೋತ್ತರ ಶತದಿವ್ಯನಾಮಗಳಿಂದ ಪೂಜೆಯನ್ನು ಸಲ್ಲಿಸಿ ಧೂಪ, ದೀಪ, ನೈವೇದ್ಯ, ತಾಂಬೂಲ, ಫಲ, ದಕ್ಷಿಣೆ, ಅಘ್ರ್ಯ, ನೀರಾಜನ, ಪುಷ್ಪಾಂಜಲಿ, ಪ್ರದಕ್ಷಿಣೆ ನಮಸ್ಕಾರಗಳನ್ನು ಸಮರ್ಪಿಸಬೇಕು.

ನೈವೇದ್ಯ ಹೇಗಿರಬೇಕು?

ನೈವೇದ್ಯ ಹೇಗಿರಬೇಕು?

ದೇವಿಯ ನೈವೇದ್ಯಕ್ಕೆ ಸಮರ್ಪಿಸಬೇಕಾದ ವಿಶೇಷದ್ರವ್ಯ ಹರಿದ್ರಾನ್ನ, ಮುದ್ಗಾನ್ನ. ಇಷ್ಟಾರ್ಥವನ್ನು ಸಲ್ಲಿಸಬೇಕೆಂದು ದೇವಿಯನ್ನು ಪ್ರಾರ್ಥಿಸಿ ಆಕೆಯ ಅನುಮತಿಯಿಂದ ಮೇಲೆ ಹೇಳಿದ ಪೂಜಿತವಾದ ಹದಿನಾರು ಗಂಟುಗಳುಳ್ಳ ದಾರವನ್ನು ಧರಿಸಬೇಕು. ವ್ರತಸಂಪೂರ್ತಿಗಾಗಿ ಶ್ರೇಷ್ಠದ್ವಿಜರಿಗೂ, ಸುವಾಸಿನಿಯರಿಗೂ ಪಕ್ವಾನ್ನವೇ ಮುಂತಾದ ಉಪಾಯನಗಳನ್ನು ದಾನ ಮಾಡಬೇಕು. ದೇವಿಗೆ ಛತ್ರ ಚಾಮರ, ನೃತ್ಯ, ವಾದ್ಯ, ಆಂದೋಳಿಕಾ ಮತ್ತು ಇತರ ಉಪಚಾರಗಳನ್ನು ಸಮರ್ಪಿಸಿ ಆಕೆಯ ಪ್ರೀತಿ ಪ್ರಸನ್ನತೆಗೆ ಪ್ರಾರ್ಥಿಸಬೇಕು.

ಸಂಭ್ರಮವೋ ಸಂಭ್ರಮ

ಸಂಭ್ರಮವೋ ಸಂಭ್ರಮ

ಹೆಣ್ಣುಮಕ್ಕಳಿಗೆ ಹಬ್ಬಗಳೆಂದರೆ ಖುಷಿಯೂ ಒತ್ತಡವೂ ಏಕಕಾಲಕ್ಕೆ. ಶ್ರಾವಣದಲ್ಲಂತೂ ಹಬ್ಬಗಳದ್ದೇ ಕಾರುಬಾರು. ಅಷ್ಟಿದ್ದೂ ಭಾದ್ರಪದದ ಗೌರಿಹಬ್ಬ ಮಾತ್ರ ಒಂದು ಮುಷ್ಠಿ ಹೆಚ್ಚು ಆಪ್ತ. ಏಕೆಂದರೆ ಗೌರಿಯ ಸಂಸಾರದಲ್ಲಿ ನಮ್ಮ ಸಂಸಾರದ ನೆರಳೂ ಕಾಣುತ್ತದೆ ಎಂದೋ, ಗೌರಿಯಂತೇ ಕುಟುಂಬದ ಜವಾಬ್ದಾರಿ ತನ್ನ ಹೆಗಲ ಮೇಲಿರುತ್ತದೆ ಎಂದೋ, ಒಟ್ಟಿನಲ್ಲಿ ಗೌರಿಯಂಥದ್ದೇ ಬದುಕು ನಮ್ಮದೂ ಎನ್ನುವ ಕಾರಣಕ್ಕೆ ಈ ಹಬ್ಬವೆಂದರೆ ಹೆಂಗೆಳೆಯರಿಗೆ ಹೆಚ್ಚು ಪ್ರೀತಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Gowri Ganesha festival is an important religious festival in Hindu culture. Here is 17 things you should know about Gowri festival.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ