• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗಣೇಶನ ಹಬ್ಬಕ್ಕೆ ಬದಲಾವಣೆ ನಿಮ್ಮಿಂದಲೇ ಆರಂಭವಾಗಲಿ!

By ವಿಷ್ಣುದಾಸ ನಾಗೇಂದ್ರಾಚಾರ್ಯ, ಮೈಸೂರು
|

ನೀವು ಪ್ಲಾಸ್ಟಿಕ್ ನಿಂದ, ಜಿಪ್ಸಮ್ (Plaster of Paris) ನಿಂದ, ಅಥವಾ ಬೇರೆ ಯಾವುದೋ ಕೆಮಿಕಲ್ಲಿನಿಂದ ಮಾಡಿದ ಗಣಪತಿಯನ್ನು ಪೂಜೆ ಮಾಡುವುದಾದರೆ, ಮಾಡುವದೇ ಬೇಡ. ಪರಿಸರ ರಕ್ಷಣೆ ಮಾಡಿದ ಮಹಾಪುಣ್ಯ ಬರುತ್ತದೆ ನಿಮಗೆ, ಆ ರೀತಿಯ ವಿಕಾರದ ಗಣಪತಿಗಳನ್ನು ಪೂಜೆ ಮಾಡದೇ ಇದ್ದರೆ. ಮುಂದಿನ ಜನಾಂಗಕ್ಕೆ ಉಸಿರು ಹಸಿರನ್ನು ಉಳಿಸಿಕೊಡುವದು ಸಾಮಾನ್ಯ ಪುಣ್ಯದ ಮಾತೇ? ಖಂಡಿತ ಅಲ್ಲ. ಹೀಗಾಗಿ ನೀವು ವಿಕೃತ ಗಣಪತಿಯ ಪೂಜೆ ಮಾಡುವದನ್ನು ಬಿಡುವುದರಿಂದ ದೊಡ್ಡ ಸಮಾಜಸೇವೆಯನ್ನು ಮಾಡುತ್ತೀರಿ.

ಶುದ್ಧ ಜೇಡಿ ಮಣ್ಣಿನಿಂದ ಮಾಡಿದ ಗೌರೀ ಗಣಪತಿಯ ಪ್ರತಿಮೆಗಳನ್ನು ತೆಗೆದುಕೊಂಡು ಬನ್ನಿ. ಸ್ಟೀಲು, ಪ್ಲಾಸ್ಟಿಕ್ಕುಗಳನ್ನು ಬಳಸದೇ, ತಾಮ್ರದ, ಹಿತ್ತಾಳೆಯ ಅಥವಾ ಇದ್ದರೆ ಬೆಳ್ಳಿಯ ತಟ್ಟೆಯಲ್ಲಿ ಅಕ್ಕಿಯನ್ನು ತುಂಬಿಸಿ ಐದು ವೀಳ್ಯದೆಲೆ ಐದು ಅಡಿಕೆಗಳು ಒಂದಷ್ಟು ನಾಣ್ಯಗಳನ್ನು ಅದರಲ್ಲಿಟ್ಟು ಆ ಅಕ್ಕಿಯ ಮೇಲೆ ಪ್ರತಿಮೆಗಳನ್ನಿಟ್ಟುಕೊಂಡು ಭಕ್ತಿ ಗೌರವದಿಂದ ಮನೆಗೆ ತೆಗೆದುಕೊಂಡು ಬನ್ನಿ.

ಮನೆಯ ಬಾಗಿಲಿಗೆ ಬಂದಾಗ, ಮನೆಯ ಸ್ತ್ರೀಯರು ಗಣಪತಿಯ ಪ್ರತಿಮೆಗೆ ಆರತಿ ಮಾಡಬೇಕು. ಗೌರೀ-ಗಣಪತಿಯನ್ನು ಕೈಯಲ್ಲಿ ಹಿಡಿದು ಬಲಗಾಲಿಟ್ಟು, ದೇವರ ಪ್ರಾರ್ಥನೆ ಮಾಡುತ್ತ ಒಳಗೆ ತನ್ನಿ. ಆ ನಂತರ ಪ್ರತಿಮೆಗಳನ್ನು ಇಡಲಿಕ್ಕಾಗಿ ಒಂದು ಮರದ ಅಥವಾ ಕಲ್ಲಿನ ಮಣೆಯನ್ನು ಸಿದ್ಧ ಪಡಿಸಿಟ್ಟಿಕೊಂಡಿರಿ. ಆ ಮಣೆ ಅಥವಾ ಆಸನದ ಮೇಲೆ ಗೌರೀ-ಗಣಪತಿಯರ ಪ್ರತಿಮೆಗಳನ್ನಿಟ್ಟು ಎರಡು ದೀಪಗಳನ್ನು ಹಚ್ಚಿ ನಮಸ್ಕಾರ ಮಾಡಿ.

ನಿಜ, ಇನ್ನೂ ಆವಾಹನೆಯಾಗಿಲ್ಲ, ಪೂಜೆಯಾಗಿಲ್ಲ, ಆದರೆ ಗೌರೀ-ಗಣಪತಿಯರ ಸನ್ನಿಧಾನ ಮಣ್ಣಿನಲ್ಲಿಯೇ ಇದೆ. ಆ ಮಣ್ಣಿನಿಂದ ನಿರ್ಮಾಣವಾದ ಪ್ರತಿಮೆಗೆ ಈ ಭಕ್ತಿಪೂರ್ಣ ಗೌರವವನ್ನು ನಾವು ಸಲ್ಲಿಸುತ್ತಿರುವದು. (ವಿವರಗಳನ್ನು ವಿಶ್ವನಂದಿನಿಯ ಲೇಖನ-126ರಲ್ಲಿ ನೋಡಬಹುದು). ಆ ನಂತರ ಸಮಯ ಮಾಡಿಕೊಂಡು ಕುಳಿತುಕೊಳ್ಳಿ. ಮಕ್ಕಳನ್ನೂ ಜೊತೆಯಲ್ಲಿ ಕೂಡಿಸಿಕೊಳ್ಳಿ.

ಇವತ್ತಿನ ದಿವಸ ಕೇವಲ ಮಣ್ಣಿನ ಗಣಪ ದೊರೆಯುತ್ತದೆ, ಆದರೆ, ಕೇವಲ ಮಣ್ಣಿನ ಗೌರಿ ದೊರೆಯುವದು ದುಃಸ್ಸಾಧ್ಯ. ಮಾಡುವ ಕುಂಬಾರರ ಬಳಿಯೇ ಹೋದರೆ ದೊರೆತೀತು. ಮಣ್ಣಿನ ಗೌರಿಯ ಪ್ರತಿಮೆ ದೊರೆತಲ್ಲಿ ಅರಿಶಿನಕ್ಕೆ ತುಪ್ಪ ನೀರನ್ನು ಹಾಕಿ ಆ ಪ್ರತಿಮೆಗೆ ಹಚ್ಚಿ. ಹಣೆಯಲ್ಲಿ ಶೋಭಾಯಮಾನವಾಗಿ ತಿಲಕದಂತೆ ಕುಂಕುಮವನ್ನು ಹಚ್ಚಿ. ಕುಂಕುಮವನ್ನು ಎಂದಿಗೂ ಗುಂಡಗೆ ಹಚ್ಚಬಾರದು ಮತ್ತು ಯಾವ ಹೆಣ್ಣುಮಕ್ಕಳೂ ಹಾಗೆ ಹಚ್ಚಿಕೊಳ್ಳಬಾರದು. ಉದ್ದನೆಯ ತಿಲಕದಂತೆ ಅಥವಾ ಕುಂಬಳಕಾಯಿಯ ಬೀಜದ ಆಕಾರದಲ್ಲಿ ಇರಬೇಕು.

ಗಣಪತಿಗೆ ಕೆಂಪು ಬಣ್ಣ ಹಚ್ಚುವ ಕ್ರಮ

ಗಣಪತಿಯ ಮೈಬಣ್ಣ ಕೆಂಪುಬಣ್ಣದ್ದು. ಬೆಂಕಿಯಲ್ಲಿ ಕಾಯುತ್ತಿರುವ ಬಂಗಾರದಂತೆ ಅವನ ಬಣ್ಣವಿದೆ ಎಂದು ಅವನನ್ನು ಸಾಕ್ಷಾತ್ತಾಗಿ ಕಂಡ ಋಷಿಮುನಿಗಳು ದಾಖಲಿಸಿ ಇಟ್ಟಿದ್ದಾರೆ. "ಧ್ಯಾಯೇದ್ ಗಜಾನನಂ ದೇವಂ ತಪ್ತಕಾಂಚನ ಸನ್ನಿಭಮ್" ಹೀಗಾಗಿ ಚಂದನ, ಸಿಂಧೂರ, ಅರಿಶಿನ ಮತ್ತು ಕುಂಕುಮಗಳನ್ನು ತೆಗೆದುಕೊಂಡು ಅವುಗಳಿಗೆ ಸ್ವಲ್ಪ ತುಪ್ಪವನ್ನು ಹಾಕಿ, ಆ ಬಳಿಕ ಶುದ್ಧವಾದ ನೀರನ್ನು ಬೆರೆಸಿ ಗಣಪತಿಯ ಮೈಗೆ ಹಚ್ಚಲು ಆರಂಭಿಸಿ.

ಮಣ್ಣಿನ ಗಣಪತಿಯನ್ನು ಕೆಂಪುಬಣ್ಣದ ಗಣಪತಿಯನ್ನಾಗಿ ಮಾಡಿ. ಅರಿಶಿನ, ಕುಂಕುಮ ಪರಮಮಂಗಳವಾದ ದ್ರವ್ಯಗಳು. ಅವುಗಳ ಲೇಪನದಿಂದ ಎಲ್ಲ ರೀತಿಯ ಅಶುದ್ಧಿಗಳೂ ದೂರವಾಗುತ್ತವೆ ಹಾಗೂ ಪ್ರತಿಮೆಯಲ್ಲಿ ಪಾವಿತ್ರ್ಯತೆ ಮನೆಮಾಡುತ್ತದೆ. ಆ ನಂತರ ಕಾಡಿಗೆಯಲ್ಲಿ ಕಣ್ಣನ್ನು ಬರೆಯಿರಿ. (ಕುಂಕುಮ ಹಚ್ಚುವುದಕ್ಕಿಂತ ಮೊದಲೂ ಬರೆಯಬಹುದು, ಆ ಬಳಿಕ ಮತ್ತೊಮ್ಮೆ ಬರೆದರೆ ಸ್ಥಿರವಾಗಿ ನಿಲ್ಲುತ್ತದೆ.) ಅದೇ ಕಾಡಿಗೆಯಲ್ಲಿ ಸೊಂಟದ ಸುತ್ತ ಹಾವನ್ನು ಚಿತ್ರಣ ಮಾಡಿ.

ಅದಾದ ಬಳಿಕ ನಿಮ್ಮನಿಮ್ಮ ಸಂಪ್ರದಾಯದಂತೆ ವಿಭೂತಿಯಿಂದ ಪುಂಢ್ರಗಳನ್ನೋ, ಗೋಪೀಚಂದನ ದಿಂದ ಊರ್ಧ್ವಪುಂಢ್ರಗಳನ್ನೋ ಹಚ್ಚಿರಿ. ಹಾಗೆಯೇ ತಿಲಕವನ್ನೋ ಅಥವಾ ಅಂಗಾರ ಅಕ್ಷತೆಗಳನ್ನೋ ಹಚ್ಚಿರಿ.

ಅದಾದ ಬಳಿಕ ಶುದ್ಧವಾದ ಎರಡು (ಅಥವಾ ಒಂದು) ಯಜ್ಞೋಪವೀತಗಳನ್ನು ಗಣಪತಿಗೆ ಹಾಕಿ. (ಗಣಪತಿ ಬ್ರಹ್ಮಚಾರಿಯಲ್ಲ, ಗೃಹಸ್ಥ. ಆದರೆ, ದೇವತೆಗಳಿಗೆ ನಾಲ್ಕೂ ಆಶ್ರಮಗಳ ರೂಪ ಇರುವದರಿಂದ ಬ್ರಹ್ಮಚಾರಿಯ ರೂಪದಲ್ಲಿ ಪೂಜಿಸಿದರೂ ತಪ್ಪಿಲ್ಲ). ಪೂಜೆ ನಂತರ ಇರುತ್ತದೆ. ಆದರೆ, ಯಜ್ಞೋಪವೀತವನ್ನು ಮೊದಲೇ ಹಾಕಿದರೆ ಅಲಂಕರಣ ಮಾಡಲು ಸುಲಭ. ಮತ್ತು, ಯಜ್ಞೋಪವೀತವನ್ನು ಬರೆಯುವದಿಕ್ಕಿಂತ ನಿಜವಾದ ಜನಿವಾರವನ್ನು ಹಾಕಿಯೇ ಬಿಡುವದು ಉತ್ತಮ.

ಹಾಗೆಯೇ ದೇವರು ನಿಮಗೆ ಶಕ್ತಿ ನೀಡಿದ್ದರೆ ಬೆಳ್ಳಿಯ, ಬಂಗಾರದ ಆಭರಣಗಳಿಂದ, (ಕಿರೀಟ, ಕೇಯೂರ, ಅಂಗದ ಮುಂತಾದವು) ಅಲಂಕರಿಸಿ. ಯಾವುದೇ ಕಾರಣಕ್ಕೂ ಕೃತಕ ಆಭರಣಗಳಿಂದ, ಪ್ಲಾಸ್ಟಿಕ್ಕು ಮುಂತಾದವುಗಳಿಂದ ಸರ್ವಥಾ ಅಲಂಕರಿಸಬೇಡಿ. ನಮ್ಮ ಗಣಪತಿ ಪ್ರಕೃತಿಸಹಜವಾದ ಗರಿಕೆಗೆ ಒಲಿಯುತ್ತಾನೆ. ಪ್ರಕೃತಿವಿರೋಧಿಯಾದ ವಸ್ತುಗಳು ಪೂಜೆಗೆ ಸರ್ವಥಾ ನಿಷಿದ್ಧ.

ಪೂಜೆಯ ಕಾಲದಲ್ಲಿ ಯಜ್ಞೋಪವೀತ, ಕಿರೀಟ ಮುಂತಾದವನ್ನು ಸಮರ್ಪಿಸುವ ಮಂತ್ರ ಬರುತ್ತವೆ. ಆಗ, ಆವನ್ನು ಮುಟ್ಟಿ, ಪ್ರತಿಮೆಯಲ್ಲಿ ಸನ್ನಿಹಿತನಾಗಿರುವ ಗಣಪತಿಗೆ ಸಾಕ್ಷಾತ್ತಾಗಿ ಸಮರ್ಪಿಸುತ್ತಿದ್ದೇನೆ ಎಂದು ಅನುಸಂಧಾನ ಮಾಡಬೇಕು. ಪೂಜೆಯ ಸಮಯದಲ್ಲಿಯೇ ಹಾಕಲು ಹೋದಾಗ ಪ್ರತಿಮೆ ಅಲ್ಲಾಡುವ ಸಾಧ್ಯತೆ ಇರುತ್ತದೆ. ಪ್ರಾಣಪ್ರತಿಷ್ಠೆ ಆದ ಬಳಿಕ, ವಿಸರ್ಜನೆ ಮಾಡುವ ದಿವಸದವರೆಗೆ ಪ್ರತಿಮೆಗಳನ್ನು ಅಲ್ಲಾಡಿಸಬಾರದು.

ಈಗ ಶುದ್ಧ ಗಣಪತಿ ಪೂಜೆಗೆ ಸಿದ್ಧ. ನೀವು ಕುಂಕುಮ ಸಿಂಧೂರ ಹಚ್ಚುವುದಕ್ಕಿಂತ ಮುಂಚೆ ಇರುವ ಗಣಪತಿಗೂ ಈಗ ಶುದ್ಧ ಕೆಂಪು ಬಣ್ಣದಿಂದ ಕಂಗೊಳಿಸುವ ಗಣಪತಿಗೂ ವ್ಯತ್ಯಾಸವಿರುವದು ನಿಮ್ಮ ಕಣ್ಣಿಗೇ ಗೋಚರವಾಗುತ್ತದೆ, ನಿಮ್ಮ ಮನಸ್ಸಿನಲ್ಲಿ ತೃಪ್ತಿ, ಮನೆ ಮಾಡುತ್ತದೆ. ನಿಮ್ಮ ಕೈಯಲ್ಲಿ ಉಳಿಯುವ ಕೆಂಪು ಬಣ್ಣ ನಿಮ್ಮಲ್ಲಿ ಪಾವಿತ್ರ್ಯದ ಭಾವವನ್ನು ಮೂಡಿಸುತ್ತದೆ.

ಯಾವುದೇ ಕೆಮಿಕಲ್ಲಿನ ಕಲರುಗಳ ಗಣಪತಿಯನ್ನು ತಂದು, ಪರಿಸರವನ್ನು ಹಾಳು ಮಾಡುವದಕ್ಕಿಂತ ಮಣ್ಣಿನ ಗಣಪತಿಯನ್ನು ತಂದು ಸಿಂಧೂರ ಕುಂಕುಮಗಳ ಬಣ್ಣವನ್ನು ಹಚ್ಚುವದು ನಮ್ಮ ಪ್ರಾಚೀನರು ಹೇಳಿಕೊಟ್ಟ ಸಂಪ್ರದಾಯ. ಇದನ್ನು ಮಾಡಲು ಅರ್ಧ ಗಂಟೆಗಿಂತ ಹೆಚ್ಚಿನ ಸಮಯ ಹಿಡಿಯುವುದಿಲ್ಲ. ನೀವೇ ಮಾಡಿ. ನಿಮ್ಮ ಮಕ್ಕಳನ್ನು ಜೊತೆಯಲ್ಲಿ ಕೂಡಿಸಿಕೊಂಡು ಅವರಿಂದಲೂ ಮಾಡಿಸಿ. ಸಂಪ್ರದಾಯವನ್ನು ಹೇಳಿಕೊಡಿ. ಹೀಗೆ ಕುಂಕುಮದ ಬಣ್ಣ ಹಚ್ಚುವಾಗ ಸ್ವಲ್ಪ ವ್ಯತ್ಯಾಸವಾದರೂ ಚಿಂತೆ ಮಾಡಬೇಡಿ. ನಿಮ್ಮ ಧರ್ಮದ ಶ್ರದ್ಧೆಗೆ ಗಣಪತಿ ಮೆಚ್ಚುತ್ತಾನೆ.

ಮತ್ತೂ, ಅಸಹ್ಯ ಪದಾರ್ಥಗಳಿಂದ, ಪರಿಸರ ವಿರೋಧಿಯಾದ ಕೆಮಿಕಲ್ಲುಗಿಳಿಂದ ನಿರ್ಮಾಣವಾದ ಮೈಲಿಗೆಯ ವಿಗ್ರಹದಲ್ಲಿ ಗಣಪತಿಯ ಸನ್ನಿಧಾನ ಇರುವದೇ ಇಲ್ಲ. ಅದೊಂದು ಗೊಂಬೆ ಅಷ್ಟೇ. ನೀವು ತರಬೇಕಾದ್ದು ಗೊಂಬೆಯನ್ನಲ್ಲ, ಗಣಪತಿಯ ಪ್ರತಿಮೆಯನ್ನು, ಪ್ರತಿಮೆಯಲ್ಲಿ ಗಣಪತಿಯನ್ನು. ಹೀಗಾಗಿ ಶುದ್ಧತೆ, ಶುಚಿತ್ವ, ಪಾವಿತ್ರ್ಯಕ್ಕೆ ಬೆಲೆಯನ್ನು ನೀಡಿ. [ನಮ್ಮ ಸನಾತನ ಸಂಸ್ಕೃತಿ ಹಾಳು ಮಾಡುತ್ತಿರುವವರು ಯಾರು?]

ಗಣಪತಿಯ ಹಬ್ಬ ಎಂದರೆ ವಿಕೃತವಾದ ಆಚರಣೆಗಳೇ ಜಾಸ್ತಿಯಾಗುತ್ತಿವೆ. ಬದಲಾವಣೆ ನಮ್ಮಿಂದಲೇ ಆರಂಭವಾಗಲಿ, ನಮ್ಮ ಮನೆಯಿಂದಲೇ ಆರಂಭವಾಗಲಿ. ಈ ಬಾರಿ ಮಣ್ಣಿನ ಗಣಪತಿಯನ್ನು ತಂದು, ಕುಂಕುಮನ್ನು ಹಚ್ಚಿಯೇ ಪೂಜೆ ಮಾಡುತ್ತೇನೆ ಎಂದು ಸಂಕಲ್ಪ ಮಾಡಿ. ಹಾಗೆ ಮಾಡಿದ ಗಣಪತಿಯ ಚಿತ್ರಗಳನ್ನು ನನಗೆ ಕಳುಹಿಸಿ. ನೋಡಿ, ನಾನೂ ಕೈಮುಗಿದು ಧನ್ಯನಾಗುತ್ತೇನೆ.

ಈ ಸತ್ಸಂಪ್ರದಾಯವನ್ನು ನೀವೆಲ್ಲರೂ ಪಾಲಿಸುತ್ತೀರಿ ಎಂಬ ನಂಬಿಕೆಯೊಂದಿಗೆ... ವಿಷ್ಣುದಾಸ ನಾಗೇಂದ್ರಾಚಾರ್ಯ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Vishnudasa Nagendracharya explains the significance of performing pooja to Ganesha made of clay, rather than plaster of paris. He also explains how to worship Ganapati at home. It is one of the biggest festivals of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more