ಭಾರತೀಯರಿಗೆ ಭಾಗ್ಯ ತರುವ ಹಬ್ಬ ದೀಪಾವಳಿ

ಭಾರತೀಯರಿಗೆ ಭಾಗ್ಯ ತರುವ ಹಬ್ಬ ದೀಪಾವಳಿ. ದೀಪ ಪ್ರಕಾಶದ, ಜ್ಞಾನದ ಸಂಕೇತ. ಅಜ್ಞಾನವೆಂಬ ಕತ್ತಲನ್ನು ಹೊಡೆದೋಡಿಸಲು ಜ್ಞಾನವೆಂಬ ದೀಪ (ಪ್ರಕಾಶ) ಅವಶ್ಯಕ. ಆದ್ದರಿಂದಲೇ 'ನಹಿ ಜ್ಞಾನೇನ ಸದೃಶಂ' (ಜ್ಞಾನಕ್ಕೆ ಸಮನಾದುದು ಯಾವುದೂ ಇಲ್ಲ) 'ಜ್ಞಾನ ವಿನಃ ಪಶು' (ಜ್ಞಾನವಿಲ್ಲದವನು ಪಶು) ಎನ್ನಲಾಗುತ್ತದೆ.

ಅಜ್ಞಾನದ ಕತ್ತಲನ್ನು ದೂರ ಮಾಡಿ ಜ್ಞಾನದ ಬೆಳಕನ್ನು ಬೀರುವುದೇ ದೀಪಾವಳಿಯ ಸತ್ಯಾರ್ಥ. ಆದ್ದರಿಂದ, ಪ್ರತಿ ಮನೆ-ಮನೆಯಲ್ಲೂ ಪ್ರತಿಯೊಬ್ಬನ ಮನ-ಮನದಲ್ಲೂ ಜ್ಞಾನವೆಂಬ ದೀಪವು ನಿರಂತರವಾಗಿ ಬೆಳೆಯುತ್ತಿರಲಿ ಎಂಬುದೇ ದೀಪಾವಳಿ ಹಬ್ಬದ ಮೂಲ ಸಂದೇಶವಾಗಿದೆ.

ಭಾರತೀಯ ಹಬ್ಬಗಳೆಲ್ಲವೂ ಹರ್ಷದಾಯಕವಾಗಿವೆ. ಹಬ್ಬಗಳ ಹೆಸರೇ ಮನುಷ್ಯನ್ನು ಶ್ರೇಷ್ಠ ಜೀವನ ರೂಪಿಸಿಕೊಳ್ಳಲು ಪ್ರೇರಣೆ ನೀಡುತ್ತದೆ. ಹಬ್ಬಗಳ ಹಿನ್ನೆಲೆಯಲ್ಲಿ ಬಹಳ ಉನ್ನತವಾದ ಆಧ್ಯಾತ್ಮಿಕ ರಹಸ್ಯಗಳು ಅಡಗಿವೆ. ನಮ್ಮ ಹಿರಿಯರು ಪ್ರತಿ ಹಬ್ಬಕ್ಕೂ ಅದಕ್ಕೆ ಸರಿಹೊಂದುವಂತೆ ಒಂದು ಪುರಾಣ, ಪುಣ್ಯ ಕಥೆಯನ್ನು ಬೆಸೆದು ಹಬ್ಬದ ಮೆರಗು ಹೆಚ್ಚಿಸಿದ್ದಾರೆ. ಆದರೆ ಅದು ಕ್ರಮೇಣವಾಗಿ ಆಧ್ಯಾತ್ಮಿಕತೆಯ ಅರ್ಥ ಕಳೆದುಕೊಂಡು ತನ್ನ ಸೊಬಗನ್ನು ಕಳೆದುಕೊಳ್ಳುತ್ತಿದೆ.

deepavali

ಅಶ್ವಿಜ ಬಹುಳ ದ್ವಾದಶಿಯಿಂದ ಪ್ರಾರಂಭವಾಗುವ ದೀಪಾವಳಿ ಹಬ್ಬವು ಕಾರ್ತಿಕ ಶುದ್ಧ ಬಲಿಪಾಡ್ಯಮಿಯವರೆಗೂ ಆಚರಿಸಲ್ಪಡುತ್ತದೆ. ಭಾದ್ರಪದ ಕೃಷ್ಣ ಅಮವಾಸ್ಯೆಯ ರಾತ್ರಿಯಿಂದ ಪ್ರಾರಂಭವಾಗಿ ಕಾರ್ತಿಕ ಮಾಸ ಮುಗಿಯುವವರೆಗೂ ದೀಪಾರಾಧನೆ, ದೀಪದಾನ ಮಾಡುವುದು ಅನಂತ ಪುಣ್ಯದಾಯಕವೆಂದು ಪದ್ಮಪುರಾಣದಲ್ಲಿ ಹೇಳಿದೆ.

ದೀಪಾವಳಿ ಭಾರತೀಯರ ಒಂದು ದೊಡ್ಡ ಹಬ್ಬ. ದೀಪ ಎಂದರೆ ಪ್ರಕಾಶ, 'ಅವಳಿ' ಎಂದರೆ ಮಾಲೆ, ಸಾಲು ಎಂದರ್ಥ. ಹಬ್ಬದ ದೃಷ್ಟಿಯಿಂದ ನೋಡಿದರೆ ದೀಪಾವಳಿ ದೀಪಗಳ ಸಾಲಿನಂತೆ ಹಬ್ಬಗಳ ಸಾಲೂ ಹೌದು. ನೀರು ತುಂಬುವ ಹಬ್ಬದಿಂದ ಆರಂಭವಾಗಿ ನರಕ ಚತುರ್ದಶಿ, ಅಮಾವಾಸ್ಯೆ, ಬಲಿಪಾಡ್ಯಮಿ, ಭಾವನಬಿದಿಗೆ, ಅಕ್ಕನ ತದಿಗೆ, ಪಂಚಮಿಯವರೆಗೆ ಪ್ರತಿದಿನವೂ ಹಬ್ಬವೇ.

ದೀಪಾವಳಿಗಿಂತ ಹದಿನೈದು ದಿನಗಳ ಮಂಚೆಯೇ ಎಲ್ಲೆಡೆ ತಯಾರಿಗಳು ನಡೆಯುತ್ತಿರುತ್ತವೆ. ಪ್ರತಿಯೊಬ್ಬರೂ ತಮ್ಮ-ತಮ್ಮ ಮನೆಗಳನ್ನು ಅಂಗಡಿಗಳನ್ನು ಶುಚಿಗೊಳಿಸಿ, ಸುಣ್ಣ-ಬಣ್ಣ ಬಳಿದು ದೀಪಾಲಂಕಾರ ಮಾಡುತ್ತಾರೆ. ಮನೆಯ ಮುಂದೆ ವಿವಿಧ ಬಣ್ಣಗಳಲ್ಲಿ ಚಿತ್ತಾರದ ರಂಗೋಲಿ ಹಾಕಿ, ಅಲಂಕಾರ ಮಾಡಿ, ಸಾಲು-ಸಾಲು ಹಣತೆಗಳ ದೀಪ ಬೆಳಗಿಸಿ, ಬಣ್ಣಬಣ್ಣದ ಆಕಾಶಬುಟ್ಟಿಗಳನ್ನು ತೂಗಿಬಿಟ್ಟು ಸಂಭ್ರಮಿಸುತ್ತಾರೆ.

light

ಹೊಸದಾಗಿ ಮದುವೆಯಾದ ಸುಮಂಗಲೆಯರು ಮೊದಲ ದೀಪಾವಳಿಗೆ ದಂಪತಿ ಸಮೇತ ತವರಿಗೆ ಬರುತ್ತಾರೆ. ಈ ಹಬ್ಬದಲ್ಲಿ ಹೆಂಗಳೆಯರು ಮನೆಮನೆಗೆ ದೀಪ ಕೊಂಡೊಯ್ದು ಆರಾಧಿಸುವ ಪದ್ಧತಿ ಹಲವು ಕಡೆಗಳಲ್ಲಿ ರೂಢಿಯಲ್ಲಿದೆ. ಮನೆಗೆ ಬಂದ ಜ್ಯೋತಿಯನ್ನು ಗೌರವಿಸಿ, ಪೂಜಿಸಿ, ಕಾಣಿಕೆ ಸಲ್ಲಿಸಿ ಕಳುಹಿಸಿಕೊಡುವುದು ಮನೆಯವರ ಜವಾಬ್ದಾರಿ.

ನರಕ ಚತುರ್ದಶಿ ಶ್ರೀಕೃಷ್ಣನು ದುಷ್ಟಶಕ್ತಿ ನರಕಾಸುರನ ವಧೆ ಮಾಡಿ ಸುಭದ್ರೆಯಿಂದ ಆರತಿ ಮಾಡಿಸಿಕೊಂಡ ಪುಣ್ಯದಿನ. ಅಂದು ನಸುಕಿನಲ್ಲೆದ್ದು ತೈಲಾಭ್ಯಂಜನಸ್ನಾನ ಮಾಡಿ ಸೂರ್ಯೋದಯದ ಮುನ್ನ ಗಂಡಸರಿಗೆ ಹೆಣ್ಣುಮಕ್ಕಳು ಆರತಿ ಮಾಡುವರು. 'ನರಕಾಸುರ' ಎಂದರೆ ಮಾಯೆ ಅಥವಾ ಮನೋವಿಕಾರಗಳ ರೂಪವಾಗಿದೆ. ಪ್ರತಿಯೊಬ್ಬರ ಮನಸ್ಸಿನಲ್ಲೂ ವಿಕಾರಗಳೇ ತುಂಬಿವೆ.

ಕಾಮ, ಕ್ರೋಧ, ಲೋಭ, ಮೋಹ, ಹಾಗೂ ಅಹಂಕಾರ ಮುಂತಾದ ಅಸುರಿ ಲಕ್ಷಣಗಳು ನರಕದ ದ್ವಾರವಾಗಿವೆ. 'ಬಲಿ' ಕೊಡುವುದು ಎಂದರೆ ಈ ವಿಕಾರಗಳನ್ನು ಜಯಿಸುವುದು ಎಂದು ಹೇಳಲಾಗುತ್ತದೆ. ಧ್ಯಾನದಿಂದ ವಿಕಾರವನ್ನು ಜಯಿಸಿ ನಾವು ಬಂಧನ ಮುಕ್ತರಾಗಬೇಕಾಗಿದೆ.

ಲಕ್ಷ್ಮೀಪೂಜೆ ದಿನದಂದು ಧನ ದೇವತೆ 'ಲಕ್ಷ್ಮೀ' ಯನ್ನು ಆವಾಹನೆ ಮಾಡಿ ಪೂಜಿಸಲಾಗುತ್ತದೆ. ಎಲ್ಲಾ ವ್ಯಾಪಾರಸ್ಥರು ತಮ್ಮ ಹಳೆಯ ಖಾತೆಗಳನ್ನು ಮುಕ್ತಾಯ ಮಾಡಿ ಹೊಸ ಖಾತೆಯನ್ನು ಪ್ರಾರಂಭ ಮಾಡುತ್ತಾರೆ. ಗೋಡೆಗಳ ಮೇಲೆ ಶುಭ ಮತ್ತು ಲಾಭ ಹಾಗೂ ಸ್ವಸ್ತಿಕ ಚಿನ್ಹೆಯನ್ನು ಹಾಕುವ ಪದ್ಧತಿ ಇದೆ. ವ್ಯಾಪಾರಿಗಳಿಗೆ ದೀಪಾವಳಿ ಎಂದರೆ ಮುಗಿದ ವರ್ಷದ ಬೀಳ್ಕೊಡುಗೆ, ಬರಲಿರುವ ವರ್ಷದ ಸ್ವಾಗತ.

ಬಲಿ ಪ್ರತಿಪದೆ ವಾಮನನು ತ್ರಿವಿಕ್ರಮನಾಗಿ ಬಲಿ ಚಕ್ರವರ್ತಿಯನ್ನು ಪಾತಾಳಕ್ಕೆ ಮೆಟ್ಟಿದ ದಿನ. ಅಸುರ ಚಕ್ರವರ್ತಿ ದಾನಶೂರ ಬಲಿ ರಾಜನನ್ನು ಶ್ರೀ ವಿಷ್ಣು ವಾಮನ ರೂಪದ ಚಿಕ್ಕ ಬಾಲಕನಾಗಿ ಉಪಾಯದಿಂದ ಜಯಿಸಿದನು. ಅಂದರೆ ಶಕ್ತಿ ಎಷ್ಟು ದೊಡ್ಡದಾಗಿದ್ದರೂ ಮುಕ್ತಿಯಿಂದ ಎಲ್ಲವನ್ನು ಜಯಿಸಬಹುದು ಎಂಬುದರ ಸಂಕೇತ. ಈ ದಿನ ಪಗಡೆಯಾಟ ಆಡುತ್ತಾರೆ.

ಅಕ್ಕನ ತದಿಗೆ ಎಂದರೆ ಸಹೋದರ-ಸಹೋದರಿಯರ ವಿಶೇಷ ಹಬ್ಬದ ದಿನ. ಅಕ್ಕ ತಂಗಿಯರೆಲ್ಲ ಅಣ್ಣ-ತಮ್ಮಂದಿರಿಗೆ ಆರತಿ ಮಾಡಿ ಶುಭ ಕೋರುತ್ತಾರೆ. ಅಣ್ಣ-ತಮ್ಮಂದಿರು ತಮ್ಮ ಅಕ್ಕ-ತಂಗಿಯರಿಗೆ ಉಡುಗೊರೆ ಕೊಡುತ್ತಾರೆ.

hindu

ಪಾಂಡವ ಪಂಚಮಿ ಎಂದರೆ ಪಂಚಮಿ ದಿನ ಪಾಂಡವರನ್ನು ಸ್ಮರಿಸುವುಕ್ಕಾಗಿ ಇದೆ. ಪಾಂಡವರೆಂದರೆ ಯುಧಿಷ್ಟರ (ಧರ್ಮ), ಅರ್ಜುನ (ಗುರಿಸಾಧಿಸುವುವಿಕೆ), ಭೀಮ (ಶೌರ್ಯ), ನಕುಲ-ಸಹದೇವ (ಶಿಸ್ತು ಆಜ್ಞಾಪಾಲನೆ) ಗುಣಗಳನ್ನು ಪ್ರತಿಯೊಬ್ಬರು ಆಳವಡಿಸಿಕೊಳ್ಳಬೇಕು.

ರೈತರು ತಮ್ಮ ಗದ್ದೆಯ ಬದಿಯಲ್ಲಿ ದೀಪವಿಟ್ಟು ಬಲಿಯನ್ನು ಪ್ರಾರ್ಥಿಸುತ್ತಾರೆ. ತುಳಸಿ ಕಟ್ಟೆಯ ಬದಿಯಲ್ಲಿ ಬಾಳೆ ಎಲೆಯ ದಿಂಡಿನಲ್ಲಿ ತಯಾರಿಸಿದ ತುಂಡಿನಲ್ಲಿ ದೀಪವಿರಿಸಿ 3 ದಿನ ಪೂಜೆ ಸಲ್ಲಿಸುತ್ತಾರೆ. ಸಿಹಿ ಅವಲಕ್ಕಿ ನೈವೇದ್ಯ ಮಾಡುತ್ತಾರೆ. ಹಟ್ಟಿಯ ಹಬ್ಬವೆಂದು ಹಳ್ಳಿಗರು ಕರೆಯುವ ದೀಪಗಳ ಹಬ್ಬವು ದನಗಾಹಿಗಳ ಹಬ್ಬವೂ ಆಗಿದೆ. ದನಗಳಿಗೂ ವಿಶಿಷ್ಟ ಬಗೆಯಲ್ಲಿ ಆರತಿ ಮಾಡುವ ರೂಢಿ ಹಳ್ಳಿಗಳಲ್ಲಿದೆ.

ಹೀಗೆ ದೀಪಾವಳಿಯ ಪ್ರತಿಯೊಂದು ಆಚರಣೆಯ ರೀತಿಯೂ ವೈವಿಧ್ಯಮಯ ರೀತಿಯಲ್ಲಿ ನಮ್ಮ ದೇಶದಾದ್ಯಾಂತ ಆಚರಿಸಲ್ಪಡುತ್ತದೆ. ಆದರೆ, ಅದರ ಹಿಂದಿರುವ ಉದ್ದೇಶ ನಾವು ಯಾರಿಂದ ಯಾವುದರಿಂದ ನಾವು ಉಪಕಾರವನ್ನು ಪಡೆದಿದ್ದೇವೆಯೋ ಅವುಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವುದು.

ಹಾಲು ಕರೆಯುವ ಹಸು, ಕೃಷಿಗೆ ಆಧಾರವಾಗಿರುವ ಎತ್ತು, ಅಂಗಡಿಯ ಗಲ್ಲಾ ಪೆಟ್ಟಿಗೆ (ಹಣದ ಪೆಟ್ಟಿಗೆ), ಧ್ಯಾನದ ರಾಶಿ ಇವೆಲ್ಲವೂ ನಮ್ಮೆಲ್ಲರ ಬಾಳು ಸುಮಧುರವಾಗಿ ನಡೆಯಲು ಬೇಕಾದ ಅವಶ್ಯಕ ಆಧಾರಗಳಾಗಿದ್ದರಿಂದ ಅವುಗಳಿಗೆ ದೀಪ ತೋರಿಸಿ ಧ್ಯನ್ಯತಾ ಭಾವನೆ ಅರ್ಪಿಸುವ ಕಾರ್ಯಕ್ರಮವೇ ದೀಪಾವಳಿ.

ದೀಪಾವಳಿ ವಿಶ್ವದಾದ್ಯಂತ ವಿವಿಧ ದೇಶಗಳಲ್ಲಿ, ಧರ್ಮಗಳಲ್ಲಿ ಆಚರಿಸುವ ಅತಿದೊಡ್ಡ ಹಬ್ಬವಾಗಿದ್ದು ಹಿಂದೂ ಜೈನ ಬುದ್ಧ ಮತ್ತು ಸಿಖ್ ಧರ್ಮಗಳಲ್ಲಿ ಈ ಹಬ್ಬಕ್ಕೆ ಮಹತ್ವ ಇದೆ. ಜೈನ ಧರ್ಮದಲ್ಲಿ ದೀಪಾವಳಿಯನ್ನು ದೇವದಿವಾಳಿ ಎಂದು ಹೇಳುತ್ತಾರೆ. ಜೈನರಿಗೆ ಇದು ವರ್ಷದ ಪ್ರಾರಂಭದ ದಿನ.

ಆದರೆ, ಆಚಾರ್ಯ ಬೆನಸೆನ್ ಬರೇದಿರುವ ಹರಿವಂಶ ಪುರಾಣದಲ್ಲಿ ದೀಪಾಲಿಕಯಾ (ದೀಪಾವಳಿ) ಬಗ್ಗೆ ಉಲ್ಲೆಖವಿದೆ. ದೀಪಾಲಿಕಯಾ ಎಂದರೆ ಪ್ರಕಾಶವು ದೇಹವನ್ನು ತ್ಯಜಿಸುವುದು. ಸಿಖ್ ಧರ್ಮದಲ್ಲಿಯೂ ದೀಪಾವಳಿ ಮುಖ್ಯ ಹಬ್ಬ. 1620 ರಲ್ಲಿ ಸಿಕ್ಖರ ಆರನೆಯ ಗುರು ಹರಗೋಬಿಂದ್ ಸಿಂಗ ಗ್ವಾಲಿಯರನ ಕೋಟೆಯಲ್ಲಿ ಬಂಧಿತರಾಗಿದ್ದ, 52 ರಾಜರನ್ನು ಬಿಡಿಸಿ ತಂದ ದಿನವೆಂದು ಈ ಹಬ್ಬವನ್ನು ಆಚರಿಸಲಾಗುತ್ತದೆ.

ಭಾರತ, ನೇಪಾಳ, ಶ್ರೀಲಂಕಾ, ಮಯನ್ಮಾರ್, ಮಾರಿಶಸ್, ಗಯಾನಾ, ಟ್ರಿನಿಡಾಡ್, ಸೂರಿನಾಮ್, ಮಲೇಶಿಯಾ, ಸಿಂಗಾಪುರ ಮತ್ತು ಫಿಜಿ ದೇಶಗಳಲ್ಲಿ ದೀಪಾವಳಿ ಹಬ್ಬದಂದು ರಾಷ್ಟೀಯ ರಜೆಯನ್ನು ಕಲ್ಪಿಸಲಾಗಿದ್ದು, ಅತ್ಯಂತ ಸಡಗರ ಸಂಭ್ರಮದಿಂದ ಹಬ್ಬ ಆಚರಿಸುತ್ತಾರೆ. ನೇಪಾಳದಲ್ಲಿ ಹೊಸ ವರ್ಷ ದೀಪಾವಳಿಗೆ ಪ್ರಾರಂಭವಾಗುತ್ತದೆ.

ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯಾ
ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯ
ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯ
ಎನ್ನುವ ಶರಣರ ನುಡಿಯಂತೆ ನಮ್ಮಲ್ಲಿರುವ ಅಜ್ಞಾನದ ಕತ್ತಲನ್ನು ಜ್ಞಾನದ ಬೆಳಕಿನಿಂದ ನಿವಾರಿಸಿಕೊಂಡು ಅಂತರಂಗದ ಜ್ಯೋತಿಯನ್ನು ಬೆಳಗಿಸಿ ಪರಮಾನಂದದ ಪ್ರಾಪ್ತಿ ಮಾಡಿಕೊಳ್ಳುವುದೇ ದೀಪಾವಳಿಯ ಯತಾರ್ಥ ಆಚರಣೆ.

ಲೇಖನ : ವಿಶ್ವಾಸ್ ಸೋಹೋನಿ
ಬ್ರಹ್ಮಾಕುಮಾರಿಸ್, ಮೀಡಿಯಾ ವಿಂಗ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+