• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಖಿಲಗುಣ ಸದ್ಧಾಮ ಶ್ರೀ ಮಧ್ವಾಚಾರ್ಯರ ಜೀವನ ಹೇಗಿತ್ತು?

By ವಿಷ್ಣುದಾಸ ನಾಗೇಂದ್ರಾಚಾರ್ಯ
|

ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರು ಎನ್ನುವ ಹೆಸರೇ ರಾಘವೇಂದ್ರಸ್ವಾಮಿಗಳು, ವಾದಿರಾಜರು, ಚಂದ್ರಿಕಾಚಾರ್ಯರು,ನಾರಾಯಣಪಂಡಿತಾಚಾರ್ಯರು, ತ್ರಿವಿಕ್ರಮಪಂಡಿತಾಚಾರ್ಯರು, ಟೀಕಾಕೃತ್ಪಾದರು, ಪದ್ಮನಾಭತೀರ್ಥರು, ವಿಷ್ಣುತೀರ್ಥರಂಥ ಮಹಾಜ್ಞಾನಿಗಳ ಮೈಯಲ್ಲಿ ರೋಮಾಂಚನವನ್ನು ಹುಟ್ಟಿಸುವ ಹೆಸರು.

ಭಗವಂತನನ್ನು ಕಾಣಬೇಕು ಎಂದು ಹಗಲಿರುಳೂ ತಪಿಸುವ ಮನುಷ್ಯನ ಮನಸ್ಸಿನಲ್ಲಿ ಆನಂದದ ಮಳೆಯನ್ನು ಸುರಿಸುವ ಹೆಸರು. ಎಲ್ಲವನ್ನು ತೊರೆದು ಭಗವಂತನಿಗಾಗಿ ಬದುಕುವ ಜನರಿಗೆ ಸಕಲ ಅಪೇಕ್ಷೆಗಳನ್ನು ಪೂರ್ಣಗೊಳಿಸುವ ಹೆಸರು. ಶಾಸ್ತ್ರಗಳನ್ನು ಓದುತ್ತ ಕುಳಿತಾಗ ಸಂಶಯ ಮೂಡಿದಲ್ಲಿ, ಅರ್ಥವಾಗದೇ ಇದ್ದಲ್ಲಿ ಆ ಸಂಶಯ ಅಜ್ಞಾನಗಳನ್ನು ಕತ್ತರಿಸಿ ಹಾಕುವ ಹೆಸರು.

ನಾಲಿಗೆಯಲ್ಲಿ ಮೂಡುತ್ತಿದ್ದಂತೆಯೇ ಜನ್ಮ ಜನ್ಮಾಂತರದ ಪಾಪಗಳನ್ನು ಪರಿಹರಿಸಿ, ಮೈ ಮನಸ್ಸುಗಳನ್ನಷ್ಟೇ ಅಲ್ಲ , ಜೀವವನ್ನೇ ಮಡಿ ಮಾಡಿಬಿಡುವ ಪವಿತ್ರ ಹೆಸರು. ಜ್ಞಾನವನ್ನು ಒಲ್ಲದ, ಶಾಸ್ತ್ರವನ್ನು ಜರಿಯುವ, ಭೋಗಲೋಲುಪ ಜನರ ಕಿವಿಗೆ ಕುದಿಯುವ ಸೀಸದಂತಹ ಹೆಸರು. ಅನಂತ ಕಾಲದವರೆಗೆ ಅವರ ಮೈಯಲ್ಲಿ ನಡುಕ ಹುಟ್ಟಿಸುವ ಹೆಸರು. ಶಾಸ್ತ್ರದ ಗಂಧವೇ ಇಲ್ಲದ, ಭಗವಂತನ ಬಗೆಗೆ ಎಚ್ಚರವೇ ಇಲ್ಲದ ಉಪ್ಪು ನೀರನ್ನೇ ಅಮೃತ ಎಂದು ಭ್ರಮಿಸಿ ಅದರಲ್ಲೇ ಲೋಲಾಡುವ ಸಂಸಾರಿಗಳ ಮೇಲೆ ಯಾವ ಪರಿಣಾಮವನ್ನೂ ಮಾಡದ ಬರಡು ಹೆಸರು.

ವಿದ್ವೇಷಿಗಳಿಗೆ ವಜ್ರಾಯುಧವಾಗಿ,

ವಿಮುಖರಿಗೆ ಬರಡು ಪದವಾಗಿ,

ವಿನಮ್ರರಿಗೆ ಸರ್ವಾರ್ಥಗಳನ್ನು ಕರುಣಿಸುವ ಚಿಂತಾಮಣಿಯಾಗಿ,

ಜಿಜ್ಞಾಸುಗಳಿಗೆ ತತ್ವಾಮೃತವನ್ನು ಧಾರೆಯೆರುವ ಕಾಮಧೇನುವಾಗಿ,

ಭಜಕರಿಗೆ ಭವರೋಗವನ್ನು ಪರಿಹರಿಸುವ ಔಷಧವಾಗಿ,

ಬಳಲಿ ಬಂದ ಭಕ್ತರಿಗೆ ಆಪತ್ತುಗಳನ್ನು ಪರಿಹರಿಸಿ ಸಲಹುವ ಕಲ್ಪವೃಕ್ಷವಾಗಿ,

ಸಾಧಕರಿಗೆ ಸಾಧನ ಜೀವನದ ಉಸಿರಾಗಿ ಇರುವ ಹೆಸರು, ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರು ಎಂಬ ಅದ್ಭುತವಾದ ಹೆಸರು. ಮಂಗಳಮಯ ಹೆಸರು.

ಕೇವಲ ಹೆಸರೊಂದೇ ಅಲ್ಲ , ಆ ಶ್ರೀಮದ್ವಾಚಾರ್ಯರಿಗೆ ಸಂಬಂಧ ಪಟ್ಟ ಪ್ರತಿಯೊಂದೂ ಅದ್ಭುತ. ಅವರ ಗ್ರಂಥಗಳು ಅದ್ಭುತ. ಅವರ ಪ್ರತಿಪಾದನೆಗಳು ಅದ್ಭುತ. ಅವರ ಉಪದೇಶಗಳು ಅದ್ಭುತ. ಅವರ ಶಿಷ್ಯಪರಂಪರೆ ಅದ್ಭುತ. ಸ್ವಯಂ ಅವರೇ ಈ ಜೀವ ಪ್ರಪಂಚದ ಒಂದು ಅದ್ಭುತ.[ನಾನಾ ಸೌಂದರ್ಯ, ಸೊಬಗಿನ ತಾಣವೇ ಮೈಸೂರು ಅರಮನೆ]

ಮದ್ವಾಚಾರ್ಯರು ಅವತರಿಸಿದ್ದು ಹೇಗೆ?

ಅವರು ಈ ಭೂಮಿಯಲ್ಲಿ ಅವತರಿಸಿದ ರೀತಿ ಅದ್ಭುತ. ಎಲ್ಲರೂ ತಂದೆಯ ಮುಖಾಂತರ ತಾಯಿಯ ದೇಹವನ್ನು ಹೊಕ್ಕು ಅಲ್ಲಿ ಬೆಳೆದು ಒಂಭತ್ತು ತಿಂಗಳ ನಂತರ ಹುಟ್ಟಿದರೆ ನಮ್ಮ ಮುಖ್ಯಪ್ರಾಣದೇವರು ನೇರವಾಗಿ ಸತ್ಯಲೋಕದಿಂದ ಉಡುಪಿಗೆ ಬಂದು, ಅಲ್ಲಿ ಅನಂತಾಸನನನಿಗೆ ಸಾಷ್ಟಾಂಗವೆರಗಿ ಅಲ್ಲಿಂದ ಪಾಜಕಕ್ಕೆ ಬಂದು ಆ ಪಾಜಕದ ಪವಿತ್ರ ಮನೆಯಲ್ಲಿ ಆ ಸಾಧ್ವೀ ಬ್ರಾಹ್ಮಣೀ, ಮಧ್ಯಗೇಹಾರ್ಯರ ಮಡದಿ ಆಗ ತಾನೇ ಹಡೆದಿದ್ದ ಮಗುವಿನ ದೇಹದಲ್ಲಿ ರಾಜನಂತೆ ಪ್ರವೇಶಿಸಿ, ಲೋಕದ ಕಣ್ಣಿಗೆ ಮಗುವಾಗಿ ಕಂಡವರು. ಹನ್ನೆರಡು ವರ್ಷಗಳ ದೀರ್ಘ ಅವಧಿಯ, ಸಾಮಾನ್ಯರಿಗೆ ಮನಸ್ಸಿನಲ್ಲಿ ಊಹಿಸಿಕೊಳ್ಳಲೂ ಸಾಧ್ಯವಾಗದಂಥಹ ಘೋರ ತಪ್ಪಸ್ಸನ್ನು ಮಾಡಿದ ಆ ಮಧ್ಯಗೇಹಾರ್ಯದಂಪತಿಗಳ ಎಲ್ಲ ದೈಹಿಕ, ಮಾನಸಿಕ ಶ್ರಮಗಳನ್ನು ಒಂದೇ ಕ್ಷಣದಲ್ಲಿ ಕಳೆದುಬಿಟ್ಟ ಅದ್ಭುತ ದೇಹಕಾಂತಿಯ ಶ್ರೀಮದಾಚಾರ್ಯರವರು.

ಮಧ್ವಾಚಾರ್ಯರು ಬೆಳೆದ ರೀತಿ:

ಅವರು ಆ ಪಾಜಕದ ಮನೆಯಲ್ಲಿ ಬೆಳೆದ, ಬೆಳೆಯುತ್ತಿದ್ದ ರೀತಿ ಅದ್ಭುತ. ಒಂದು ಕೋಲಿನಿಂದ ಭೂಮಿಯನ್ನು ಕೆತ್ತಿ ಮನೆಯ ಹಿಂಬದಿಯಲ್ಲಿ ಸರೋವರವನ್ನು ನಿರ್ಮಿಸಿ ಬಿಟ್ಟರು. ಅದೇ ತರಹದ ಒಂದು ಕೋಲನ್ನು ನೆಟ್ಟು ಅದಕ್ಕೆ ನೀರೆರದು ಚಿಗುರಿಸಿ ಬೆಳೆಸಿದರು. ಮಧ್ಯಗೇಹಾರ್ಯರನ್ನು ವಿಸ್ಮಯದ ಕಡಲಿನಲ್ಲಿ ಮುಳುಗಿಸಿ ಬಿಟ್ಟರು. ಗಿಡವೊಂದನ್ನು ತಲೆಕೆಳಕಾಗಿ ನೆಟ್ಟು ಗಾಳಿಯಲ್ಲಿ ಬೇರು ಬೆಳೆಯುವಂತೆ ಮಾಡಿದರು. ಇವತ್ತಿಗೂ ಅದನ್ನು ನೋಡಿದ ಜನ ಮಾತು ಹೊರಡದೇ ವಿಸ್ಮಿತರಾಗಿ ನಿಂತು ಬಿಡುತ್ತಾರೆ. ಕಾಡಿನ ಮಧ್ಯದಲ್ಲಿ ತೋಟಂತಿಲ್ಲಾಯರ ಮಗ, ತನ್ನ ಗೆಳೆಯ, ಆತನ ಹೆಸರೂ ವಾಸುದೇವನೆಂದೇ, ಅವನು ತಲೆ ನೋವಿನಿಂದ ಚೀರಿ ಕುಸಿದು ಕೆಳಗೆ ಬಿದ್ದರೆ, ಅವನನ್ನು ತೊಡೆಯ ಮೇಲೆ ಮಲಗಿಸಿಕೊಂಡು, ಕಿವಿಯಲ್ಲಿ ಒಮ್ಮೆ ಜೋರಾಗಿ ಗಾಳಿಯೂದಿ ಅವನ ಖಾಯಿಲೆಯನ್ನು ಕಳೆದವರು. ನನ್ನ ಈ ಗೆಳೆಯ ಸಾಮಾನ್ಯ ಮನುಷ್ಯನಲ್ಲ, ಜಗತ್ಪ್ರಾಣನಾದ ಮುಖ್ಯಪ್ರಾಣ ಎಂದು ತಿಳಿದಾಗ ಆ ವಾಸುದೇವ ಕುತೂಹಲದಿಂದ ತಾನು ಹಿಂದಿನ ಜನ್ಮಗಳನ್ನು ತಿಳಿಯುವ ಬಯಕೆಯನ್ನು ತೋರಿದರೆ ಅವನಿಗೆ ಅವನ ಅನಂತ ಜನ್ಮಗಳನ್ನು ನೆನಪಿಗೆ ತಂದು ಕೊಟ್ಟು ಅವನ್ನು ಆಶ್ಚರ್ಯದ ಕಡಲಿನಲ್ಲಿ ಮುಳುಗಿಸಿ ಬಿಟ್ಟವರು.

ಅವರ ನಡಿಗೆ ಅದ್ಭುತ. ಹಿಮಾಲಯದ ಬದರಿಯ ಯಾತ್ರೆಗೆ ಹೋದಾಗ, ಆ ಬದರಿಯಿಂದ ಮಹಾಬದರಿಗೆ ಹೋಗುವ ಮನಸ್ಸಾಗಿ ಆ ಹಿಮಾಲಯದ ದುರ್ಗಮವಾದ ಪರ್ವತಗಳನ್ನು ಮೆಟ್ಟಿಲುಗಳನ್ನು ಹತ್ತುವವರ ಹಾಗೆ, ಕಲ್ಲುಗಳನ್ನು ದಾಟುವವರ ಹಾಗೆ ಆಟವಾಡಿಕೊಂಡು ನಡೆದು ಹೋದ ಶ್ರೀಮದಾಚಾರ್ಯರನ್ನು ಕಂಡ ಸತ್ಯತೀರ್ಥರು ತಾವು ಕಂಡು ಆಶ್ಚರ್ಯವನ್ನು ದಾಖಲಿಸಿ ಇಟ್ಟಿದ್ದಾರೆ.

ಅವರ ಧ್ವನಿ ಅದ್ಭ್ಭುತ. ಭೋರ್ಗರೆವ ಸಮುದ್ರದ ತೀರದಲ್ಲಿ ಅವರು ಕುಳಿತು ಶಿಷ್ಯರಿಗೆ ಪಾಠ ಹೇಳುತ್ತಿದ್ದರೆ ಕಿವಿಗಡಚಿಕ್ಕುವ ಆ ಸಮುದ್ರದ ಧ್ವನಿಯನ್ನೂ ಮೀರಿಸುವ ಧ್ವನಿ ಅವರದಾಗಿತ್ತು. ಅಷ್ಟು ಗಂಭೀರವಾದ ಧ್ವನಿಯಾದರೂ, ಹತ್ತಿರದಲ್ಲೇ, ಎದುರಿನಲ್ಲೇ ಕುಳಿತ ಶಿಷ್ಯರಿಗೆ ಸುಶ್ರಾವ್ಯವಾಗಿ ಮಧುರವಾಗಿ ಕೇಳಿಸುತ್ತಿತ್ತು. ಅಂದರೆ, ಅದೆಂಥ ಅದ್ಭುತ ವಸ್ತುವಾಗಿರಲಿಕ್ಕಿಲ್ಲ ಆ ಧ್ವನಿ ? ಗುಡುಗಿನ ಧ್ವನಿಯನ್ನೂ ಮೀರಿಸುವ ಜೋರು. ಪಕ್ಕದಲ್ಲಿ ಕುಳಿತವರಿಗೆ ಮತ್ತೆ ಮತ್ತೆ ಕೇಳಬೇಕನ್ನುವಷ್ಟು ಇಂಪು. ಇದಕ್ಕಿಂತ ಅದ್ಭುತವೆಂದರೆ ಈ ಎರಡೂ ಗುಣಗಳೂ ಒಂದೇ ಬಾರಿಗೆ ಅವರ ಧ್ವನಿಯಲ್ಲಿ ತೋರುತ್ತಿದ್ದವು. ಮತ್ತೂ ಅದ್ಭುತವೆಂದರೆ, ತತ್ವವನ್ನು ತಿಳಿಯಲಿಕ್ಕೆ ಯೋಗ್ಯರಲ್ಲದ ಜನ ಆಚಾರ್ಯರ ಪ್ರವಚನವನ್ನು ಕೇಳಿದರೆ ಅವರಿಗೆ ಶಬ್ದಗಳು ಕೇಳದೇ ಕೇವಲ ಒಂದು ಧ್ವನಿ ಮಾತ್ರ ಕೇಳಿಸುತ್ತಿತ್ತಂತೆ. ‘‘ಅನಾನಾವಯವೇತ್ಯೇವ ದವೀಯೋಭಿಃ ಪ್ರತರ್ಕಿತಾ''

ಒಮ್ಮೆ ಅವರು ಶಿಷ್ಯರ ಪ್ರಾರ್ಥನೆಯಂತೆ ಸಭೆಯಲ್ಲಿ ಕುಳಿತು ಹಾಡುಗಳನ್ನು ಹಾಡುತ್ತಾರೆ. ಒಂದೊಂದು ರಾಗವೂ ಒಂದೊಂದು ವಿಸ್ಮಯವನ್ನು ಹುಟ್ಟು ಹಾಕುತ್ತಿರುತ್ತದೆ. ಇಡಿಯ ಜಗತ್ತಿಗೆ ಚೈತನ್ಯಪ್ರದರಾದ ಅವರ ಗಾನದಿಂದ ಬರಡಾಗಿದ್ದ ಮರವೊಂದು ಚಿಗುರೊಡೆಯಿತು. ಎಲೆ ಮೂಡಿತು. ಹೂ ಬಿಟ್ಟಿತು. ಕಾಯಿ ಹುಟ್ಟಿತು. ಆ ಕಾಯಿ ಹಣ್ಣಾಯಿತು. ಇಷ್ಟೆಲ್ಲ ನಡೆದದ್ದು ಒಂದೇ ರಾಗವನ್ನು ಹಾಡಲು ಆರಂಭಿಸಿ ಮುಗಿಸುವಷ್ಟರಲ್ಲಿ. ಮತ್ತೊಂದು ಮನಮೋಹಕ ರಾಗವನ್ನು ಹಾಡಲಾರಂಭಿಸಿದರೆ ಕೇಳುಗರೆಲ್ಲಾ ಇಹದ ಪರಿವೆಯನ್ನು ಮರೆತು ತನ್ಮಯರಾಗಿ ಬಿಟ್ಟಿರು. ಆನಂದದ ಪಾರವಶ್ಯದಲ್ಲಿ ಮೈಮರೆತು ನಿದ್ರೆ ಮಾಡಿ ಬಿಟ್ಟರು. ತಾಯಿಯ ಮಡಿಲಲ್ಲಿ ಜೋಗುಳ ಕೇಳುತ್ತಾ ಮಲಗಿ ಬಿಡುವ ಮಗುವಿನ ಹಾಗೆ.[ಮೈಸೂರಿನ ಅರಮನೆಗಳ ಇತಿಹಾಸ ಗೊತ್ತಾ?]

ಅದರೆ, ಅವರ ಮೈಮಾಟ ಮಾತ್ರ ಅದ್ಭುತವಾಗಿರಲಿಲ್ಲ. ಪರಮಾದ್ಭುತವಾಗಿತ್ತು. ಅಲೌಕಿಕವಾಗಿತ್ತು. ಜಗತ್ತಿನ ಜನರೆಲ್ಲ ಚೆಲುಚೆಲುವಾದ ಬಟ್ಟೆಯನ್ನು ಹಾಕಿಕೊಂಡರೆ, ಪ್ರಸಾಧನಗಳನ್ನು ಹಚ್ಚಿಕೊಂಡರೆ, ಕೂದಲನ್ನು ಒಪ್ಪವಾಗಿ ಬಾಚಿಕೊಂಡರೆ ಸುಂದರವಾಗಿ ಕಾಣುತ್ತಾರೆ. ಅದರೆ, ನಮ್ಮ ಶ್ರೀಮದಾಚಾರ್ಯರು, ಸಂನ್ಯಾಸವನ್ನು ತೆಗೆದುಕೊಂಡ ದಿವಸ, ಕಾವಿ ಬಣ್ಣದ ಕೌಪೀನವೊಂದನ್ನೇ ಮೈಮೇಲೆ ಧರಿಸಿ, ಕೈಯಲ್ಲೊಂದು ಒಣಗಿದ ಕೋಲನ್ನು ಹಿಡಿದು, ತಲೆಯ ಮೇಲಿನ ಕೂದಲನ್ನೆಲ್ಲಾ ತೆಗಿಸಿ, ಊಧ್ವ ಪುಂಡ್ರಗಳನ್ನು ಧರಿಸಿ ನಿಂತಿದ್ದರೆ ಸಂನ್ಯಾಸ ನೀಡಿದ ಅಚ್ಯುತಪ್ರೇಕ್ಷಾಚಾರ್ಯರೇ ಎವೆಯಿಕ್ಕದೇ ಅವರ ಸೌಂದರ್ಯವನ್ನು ಆಸ್ವಾದಿಸುತ್ತ ನಿಂತು ಬಿಟ್ಟರಂತೆ. ಸುತ್ತಲಿದ್ದವರೆಲ್ಲ ಇದೆಂಥ ಅನುಪಮ ಮೈಮಾಟ ಎಂದು ಬೆರಗಾಗಿ ನಿಂತರಂತೆ. ಈ ಶ್ರೀಮದಾಚಾರ್ಯರನ್ನು ನೋಡಲಿಕ್ಕೆಂದೇ ಜನ ಸಾಲುಗಟ್ಟಿ ನಿಲ್ಲುತ್ತಿದ್ದರಂತೆ, ಗುಂಪುಗಟ್ಟಿಕೊಂಡು ಬರುತ್ತಿದ್ದರಂತೆ. ‘‘ತಂ ದಿದೃಕ್ಷುರಲಮಾಪತಜ್ಜನಃ''

ಆಚಾರ್ಯರನ್ನು ಕಂಡು ವಿಸ್ಮಯವೊಂದನ್ನು ಕಂಡಷ್ಟು ಹಿಗ್ಗಿ ಹೋದವರೊಬ್ಬರು, ‘ಹೀಗೊಬ್ಬರಿದ್ದಾರೆ ಹೋಗಿ ನೋಡಿ ಬನ್ನಿ' ಎಂದು ತಮ್ಮ ಪರಿಚಯವದವರಿಗೆ ಹೇಳಿದಾಗ ಕುತೂಹಲದಿಂದಲೇ ಆಚಾರ್ಯರನ್ನು ನೋಡಲು ಬಂದ ಅ ಜನರು ತಮಗೆ ಆಚಾರ್ಯರ ಬಗ್ಗೆ ತಿಳಿಸಿ ಹೇಳಿದ ಜನರನ್ನು ಬಯ್ದುಕೊಳ್ಳುತ್ತಿದ್ದರಂತೆ. ಇಂಥಾ ಪರಮಾದ್ಭುತ ವ್ಯಕ್ತಿಯನ್ನು ಇಷ್ಟೇ ಶಬ್ದಗಳಲ್ಲಿ ಹೇಳಿ ಅಪಚಾರ ಮಾಡಿದರಲ್ಲಾ ಎಂದು. ‘‘ಶತಶತಗುಣಮೇನಂ ವಿಸ್ಮಿತಾ ವೀಕ್ಷಮಾಣಾಃ''

ಮದ್ವಾಚಾರ್ಯರು ನೋಡಲು ಹೇಗಿದ್ದರು?

ಅವರ ಆ ಪರಮಾದ್ಭುತ ದೇಹವೇ ಹಾಗಿತ್ತು. ಎಂಟಡಿ ಎತ್ತರದ, ನಿಖರವಾಗಿ ೯೬ ಅಂಗುಲದ ಎತ್ತರದ ದೇಹ. ಬಂಗಾರದ ಮೈಬಣ್ಣ. ಪ್ರಖರ ಸೂರ್ಯನ ಹೊಳಪು. ಪೂರ್ಣ ಚಂದ್ರನ ಕಾಂತಿ. ಆ ದೇಹಕ್ಕೆ ತಕ್ಕುದಾದ ಹದಿಮೂರು ಮುಕ್ಕಾಲು ಅಂಗುಲದಷ್ಟು ಉದ್ದನೆಯ ಪಾದ. ಪದ್ಮಾಸನ ಹಾಕಿ ಕುಳಿತರೆ ಕಾವಿ ಬಟ್ಟೆಯ ಮೇಲೆ ನಸುಗೆಂಪಿನ ಕೆಂದಾವರೆಯನ್ನಿಟ್ಟಾದ್ದಾರೇನೋ ಎಂಬಂತಿರುವ ಪಾದ ತಲಗಳು. ಮುಂಜಾವಿನ ಸೂರ್ಯನೇ ಇವರ ಕಾಲನಲ್ಲಿ ಹತ್ತುರೂಪ ತೊಟ್ಟು ನಿಂತಂತೆ ಪ್ರಕಾಶಮಾನವಾದ ಉಗುರುಗಳು. ನಮಸ್ಕರಿಸುವಾಗ ಅವರ ಕಾಲುಗಳನ್ನು ಗಟ್ಟಿಯಾಗಿ ಹಿಡಿದು ಪರೀಕ್ಷಿಸಿದರೂ ಹಿಮ್ಮಡಿಯಲ್ಲಿ ಗಂಟುಗಳಿರುವದೇ ಗೊತ್ತಾಗುತ್ತಿರಲಿಲ್ಲ, ಇನ್ನು ಕಾಣಿಸುವದಂತೂ ಬಹಳ ದೂರ. ದುಂಡಗೆ ದಪ್ಪಗಾಗಿ ಹೋಗುವ ನೀಳವಾದ ಕಾಲುಗಳು. ತೆಳುವಾದ ಹೊಟ್ಟೆ. ಆಳವಾದ ಪ್ರದಕ್ಷಿಣಾಕಾರದ ನಾಭಿ.

ಇಡಿಯ ಜಗತ್ತು ಎದುರಾಗಿ ಬಂದರೂ ಮಣಿಸಬಲ್ಲೆ ಎಂದು ಸಾರಿ ಹೇಳುವಂತೆ ಉಬ್ಬಿನಿಂತ ವಿಶಾಲವಾದ ಎದೆ. ಸುಮ್ಮನೆ ಸಹಜವಾಗಿ ನಿಂತರೆ ಮೊಣಕಾಲನ್ನು ಮುಟ್ಟುವ ದಪ್ಪ ಹಾವಿನಂತಹ ಕೈಗಳು. ಮೊಣಕೈಯಿಂದ ಲೆಕ್ಕ ಹಾಕಿದರೆ ಬೆರಳಿನವರೆಗೆ ಸರಿಯಾಗಿ ಎರಡು ಅಡಿಗಳು. ನುಣುಪಾದ ದುಂಡಗಿನ ಕಂಠ. ಅದಕ್ಕೆ ಶೋಭೆ ನೀಡುವಂತೆ ಸ್ವಾಭಾವಿಕವಾಗಿ ಮೂಡಿರುವ ಮೂರುಗೆರೆಗಳು. ಬೆಳೆದಿಂಗಳನ್ನು ಚೆಲ್ಲಿ ನಲಿವ ಸಾವಿರ ಪೂರ್ಣ ಚಂದ್ರರನ್ನು ನಿಲ್ಲಿಸಿದರೂ ಕಳೆಗುಂದದ, ಆ ಚಂದ್ರರ ಕಳೆಯನ್ನೇ ಮೀರಿಸುವ ಅದ್ಭುತ ಕಳೆಯನ್ನು ಹೊತ್ತು ನಿಂತ ಮುಖ. ಎಂಥ ದುಃಖದಲ್ಲಿ ಬಿದ್ದವನನ್ನೂ ಸಂತಸದಲ್ಲಿ ಮುಳುಗಿಸಿಬಿಡುವ ಮಂದಹಾಸ. ಕೆಂಪಾದ ತುಟಿಗಳು. ಮಾಣಿಕ್ಯದ ಕಟ್ಟಿನಲ್ಲಿ ಜೋಡಿಸಿಟ್ಟ ಮುತ್ತುಗಳಂತೆ, ಅವುಗಳ ಮಧ್ಯದಲ್ಲಿ ಹಲ್ಲುಗಳು.

ನೀಳವಾದ ನಾಸಿಕ. ಅನಂತ ಜ್ಞಾನದ ಹೊಳಪನ್ನು ತುಂಬಿಕೊಂಡ ಪ್ರಕಾಶಮಯವಾದ ಕಣ್ಣುಗಳು. ಸಂಶಯ, ಅಜ್ಞಾನ, ಭ್ರಾಂತಿಗಳನ್ನು ನಿರ್ಮೂಲ ಮಾಡಿ ಬಿಡುವ ನೋಟ. ತಿದ್ದಿ ತೀಡಿದಂತಹ ಹುಬ್ಬುಗಳು. ವಿಶಾಲವಾದ ಹಣೆ. ಇಡಿಯ ದೇಹಕ್ಕೆ ಮತ್ತಷ್ಟು ಮೆರಗು ನೀಡಿದ ಊರ್ಧ್ವ ಪುಂಢ್ರಗಳು. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಸಕಲ ಸೌಂದರ್ಯನಿಧಿಯಾದ ಭಗವಂತನ ಪಡಿಯಚ್ಚು. ಅವನ ಸಾಕ್ಷಾತ್ ಪ್ರತಿಮೆ. ಒಮ್ಮೆ ಕಣ್ಣು ನೆಟ್ಟರೆ ಹಿಂತೆಗೆಯಲಿಕ್ಕೆ ಸಾಧ್ಯವೇ ಇಲ್ಲದ ಮನಮೋಹಕ ಸೌಂದರ್ಯ. ಹೀಗಿದ್ದರು ನಮ್ಮ ಶ್ರೀ ಮದಾಚಾರ್ಯರು.[ಇಷ್ಟಕ್ಕೂ ದಸರಾ ಆನೆಗಳನ್ನು ಸಾಕೋದು ಅಂದ್ರೆ ಸುಮ್ಮನೇನಾ?

ಇನ್ನವರಿಗಿದ್ದ ಬಲದ ಕುರಿತು. ಅವರ ದೇಹ ಶಕ್ತಿಯನ್ನು ವರ್ಣಿಸುವ ಪದಗಳು ಯಾವ ಭಾಷೆಯಲ್ಲಿ ದೊರೆಯಲಿಕ್ಕೆ ಸಾಧ್ಯ ? ಜರಾಸಂಧ, ಕೀಚಕ, ದುರ್ಯೋಧನನಂತಹ ಜಗದೇಕ ಮಲ್ಲರು ತಮ್ಮ ಬಲವನ್ನು ಪರೀಕ್ಷಿಸಿಕೊಳ್ಳಲು ಒರೆಗಲ್ಲಿನಂತಿದ್ದ ತೋಳನ್ನು ಪಡೆದಿದ್ದ ಅ ಭೀಮನೇ ನಮ್ಮ ಮಧ್ಯದಲ್ಲಿ ಶ್ರೀಮದ್ವಾಚಾರ್ಯರಾಗಿ ಅವತರಿಸಿ ಬಂದಿರುವಾಗ! ಆ ತೋಳುಗಳ ಮಧ್ಯದಲ್ಲಿಯೇ ಅಲ್ಲವೇ ಕೀಚಕ ಹುಡಿಯಾಗಿ ಹೋದದ್ದು, ಜರಾಸಾಂಧನ ಮೈಮೂಳೆ ಮುರಿದದ್ದು. ಆ ಕೈಗಳಿಗೆ ಸಿಕ್ಕಿಯೇ ಅಲ್ಲವೇ ಬಕ-ಹಿಡಿಂಬರು ಗಿರಿಗಿಟ್ಟಲೆಯಂತೆ ತಿರುತಿರುಗಿ ನೆಲಕ್ಕೆ ಅಪ್ಪಳಿಸಿ ಪ್ರಾಣ ಕಳೆದುಕೊಂಡದ್ದು. ಈ ಕೈಗಳ ಮುಷ್ಟಿಯ ಹೊಡೆತದಿಂದಲೇ ಅಲ್ಲವೇ, ಆ ಅತಿಬಲದ ರಾವಣ ನಡುಗಿ ನಲುಗಿ ಹೋಗಿ ರಕ್ತ ಕಾರಿಕೊಂಡದ್ದು. ಆಚಾರ್ಯರ ಕಾಲಕ್ಕೆ ರಾವಣಜರಾಸಂಧ ನಂಥಹವರು ಹುಟ್ಟಿ ಬಂದಿರಲಿಲ್ಲ. ಆದರೆ ಆಚಾರ್ಯರನ್ನು ಪರೀಕ್ಷಿಸಲು ಹೋಗಿ ಬಸವಳಿದು ಬಂದ ಜಟ್ಟಿಗಳಿದ್ದರು.

ಅದೆಂಥದೋ ಕೋಡಿಂಜಾಡಿ ಎಂಬ ತೌಳವ ಹೆಸರಿನ ಒಬ್ಬ ಜಟ್ಟಿ ಕಾಂತಾವರದ ದೇವಸ್ಥಾನದಲ್ಲಿರುವ ಧ್ವಜಸ್ತಂಭವನ್ನು - ಸುಮಾರು ಮೂವತ್ತು ಜನ ಕೂಡಿದರೆ ಮಾತ್ರ ಎತ್ತಲಿಕ್ಕಾಗುವಂಥ ಧ್ವಜಸ್ತಂಭವನ್ನು - ಒಬ್ಬನೇ ಎತ್ತಿ ತಂದ್ದಿದ್ದವನಂತೆ, ತನ್ನ ತಮ್ಮನ ಜತೆಯಲ್ಲಿ ಆಚಾರ್ಯರನ್ನು ಪರೀಕ್ಷಿಸಬೇಕೆಂದೇ ಬರುತ್ತಾನೆ, ಆಚಾರ್ಯರು ಪಾಠ ಹೇಳುತ್ತಾ ಕುಳಿತಿದ್ದ ಸಮಯದಲ್ಲಿ. ಅವನನ್ನು ಕರೆತಂದವರು, ಆಚಾರ್ಯರ ಮೈಬಲವನ್ನು ಕಾಣಬೇಕೆಂದಿದ್ದವರು ಎಲ್ಲರೂ ಅವನ ಬಯಕೆಯನ್ನು ಆಚಾರ್ಯರಿಗೆ ತಿಳಿಸಿದರು. ಒಪ್ಪಿದ ಆಚಾರ್ಯರು ಹೇಳಿದರಂತೆ, ‘‘ಶಾಸ್ತ್ರಪಾಠವನ್ನು ಮಧ್ಯದಲ್ಲಿ ನಿಲ್ಲಿಸುವದು ಸಾಧ್ಯವಿಲ್ಲ. ಇವರ ಜತೆಯಲ್ಲಿ ಕುಸ್ತಿಯಾಡಲಿಕ್ಕೆ ನನ್ನ ಬಳಿ ಸಮಯವಿಲ್ಲ. ಬೇಕಾದರೆ ಈಗಲೇ ಬರಲಿ, ಪಾಠ ಹೇಳುತ್ತಿರುತ್ತೇನೆ, ನನ್ನ ಕಂಠವನ್ನು ಬಿಗಿಯಾಗಿ ಅದುಮಿ ನನ್ನ ಮಾತು ನಿಲ್ಲುವಂತೆ ಮಾಡಿದಲ್ಲಿ ಅವರು ಗೆದ್ದಂತೆ, ನಾನು ಸೋತಂತೆ'' ಆಚಾರ್ಯರ ಆಹ್ವಾನವನ್ನು ಸ್ವೀಕರಿಸಿ, ‘ಇದು ಯಾತರದ್ದು' ಅಂದುಕೊಂಡು ಆ ಗಂಡವಾಟ (ಕೋಡಿಂಜಾಡಿ) ಶಿಷ್ಯರಿಗೆ ಪ್ರಶಾಂತವಾಗಿ ಪಾಠ ಹೇಳುತ್ತಿದ್ದ ಆಚಾರ್ಯರ ಹಿಂಬದಿಯಲ್ಲಿ ನಿಂತು ಅವರ ಕಂಠವನ್ನು ಬಿಗಿಯಾಗಿ ಅದುಮಲಿಕ್ಕಾರಂಭಿಸುತ್ತಾನೆ.

ಆಚಾರ್ಯರ ಧ್ವನಿಯಲ್ಲಿ ಎಳ್ಳಷ್ಟೂ ವಿಕಾರವಿಲ್ಲ. ತನ್ನನ್ನು ಯಾರೂ ಮುಟ್ಟಿಯೇ ಇಲ್ಲವೇನೋ ಎಂಬಂತೆ ಆಚಾರ್ಯರು ನಿರಾಯಾಸವಾಗಿ ಪಾಠ ಹೇಳುತ್ತಿದ್ದಾರೆ. ಸುತ್ತಲಿದ್ದ ಜನ ವಿಸ್ಮಯದಿಂದ ಕಣ್ಣರಳಿಸಿ ಈ ಆಶ್ಚರ್ಯವನ್ನು ನೋಡುತ್ತಿದ್ದಾರೆ. ಜಟ್ಟಿಗಳೇನು, ಸುಮ್ಮನೇ ಪ್ರೀತಿಯಿಂದ ಗಟ್ಟಿಯಾಗಿ ತಬ್ಬಿಕೊಂಡರೇ ಉಸಿರು ಬಿಗಿಯಾಗಿ ಬಿಡುತ್ತದೆ, ಅಷ್ಟು ಮೃದುವಾದದ್ದು ಕಂಠದ ಪ್ರದೇಶ, ಅದನ್ನು ಈ ಜಟ್ಟಿ, ಮೂವತ್ತು ಜನರ ಬಲಕ್ಕೆ ಸಾಟಿಯಾದವನು ಗಟ್ಟಿಯಾಗಿ ಹಿಡಿದು ಹಿಸುಕುತ್ತಿದ್ದರೂ ಆಚಾರ್ಯರ ಕಂಠದಲ್ಲಿ ಧ್ವನಿಯಲ್ಲಿ ಕಣ್ಣಿನಲ್ಲಿ ವಿಕಾರವಿಲ್ಲ. ನೆರೆನಿಂತವರಿಗೆ ಆಶ್ಚರ್ಯವಾಗದೇ ಮತ್ತೇನಾಗಬೇಕು.

ಆದರೆ ಆ ಗಂಡವಾಟ ಅಷ್ಟು ಸುಲಭವಾಗಿ ಸೋಲನ್ನೊಪ್ಪಿಕ್ಕೊಳ್ಳುವದಿಲ್ಲ. ತನ್ನ ತಮ್ಮನನ್ನೂ ಕರೆಸಿಕೊಳ್ಳುತ್ತಾನೆ. ಇಬ್ಬರೂ ಅಕ್ಕಪಕ್ಕದಲ್ಲಿ ನಿಂತು ತಮ್ಮ ಒರಟು ಕೈಗಳಿಂದ ಆಚಾರ್ಯರ ಕಂಠವನ್ನು ಆವರಿಸಿ ಹಿಸುಕಲಿಕ್ಕಾರಂಭಿಸುತ್ತಾರೆ. ತಮ್ಮ ಇಡಿಯ ದೇಹದ ಬಲವನ್ನೆಲ್ಲಾ ಕೈಗೆ ತಂದುಕೊಂಡು ಅದುಮುತ್ತಿದ್ದಾರೆ. ಆದರೆ ಆಚಾರ್ಯರಿಗೆ ಏನೂ ಆಗುತ್ತಿಲ್ಲ. ಆದರೆ ಈ ಜಟ್ಟಿಗಳೂ ಸೋಲನ್ನೊಪ್ಪಿಕ್ಕೊಳ್ಳುತ್ತಿಲ್ಲ. ಹುಟ್ಟಿನಿಂದ ಗರಡಿಮನೆಯಲ್ಲಿ ಮೈಯನ್ನು ಹುರಿಗಟ್ಟಿಸಿ, ಮತ್ತೊಬ್ಬರಿಗಾಗದ್ದನ್ನು ಮಾಡಿ ತೋರಿಸಿ, ಭಾರೀ ಬಲದವರು ಎಂದು ನಾಡಲ್ಲೆಲ್ಲಾ ಹೆಸರು ಮಾಡಿ ಈಗ ಹಾಲಿನನ್ನವನ್ನು ತಿಂದು ಬದುಕುವ ಒಬ್ಬ ಸಂನ್ಯಾಸಿಯ ಕತ್ತು ಹಿಸುಕಲಿಕ್ಕಾಗಲಿಲ್ಲವೆಂದರೆ ಎಂಥ ಅವಮಾನ! ಅದರ ಭಯದಿಂದ ಮತ್ತಷ್ಟು ಜೋರಾಗಿ ಅದುಮಲು ಮೊದಲು ಮಾಡುತ್ತಾರೆ.

‘‘ನಿಷ್ಪೇಷ್ಟುಂ ಪರಮಮವಾಪತುಃ ಪ್ರಯತ್ನಮ್''. ನಮ್ಮ ಆಚಾರ್ಯರು, ಅವರನ್ನು ಕಾಡಿಸಲಿಕ್ಕಾಗಿಯೇ ಧ್ವನಿಯನ್ನು ತಾರಕಕ್ಕೇರಿಸಿ ಮಾತನಾಡಲು ಆರಂಭಿಸುತ್ತಾರೆ. ಅವರು ಒತ್ತಿದಷ್ಟೂ ಒತ್ತಿದಷ್ಟೂ ಧ್ವನಿಯನ್ನ ಗಟ್ಟಿ ಮಾಡುತ್ತಾ ಹೋಗುತ್ತಾರೆ. ಜಟ್ಟಿಗಳ ಮೈಯಲ್ಲಿ ಬೆವರು ಸುರಿಯಲು ಮೊದಲಾಯಿತು. ಆಚಾರ್ಯರೇ ಇಬ್ಬರು ಶಿಷ್ಯರನ್ನು ಕರೆಯಿಸಿ ಅವರಿಗೆ ಗಾಳಿ ಬೀಸಲು ಹೇಳಿದರು. ಆ ಇಬ್ಬರು ಹುಡುಗರು, ನಸುನಗುತ್ತಾ ಈ ಜಟ್ಟಿಗಳಗೆ ಗಾಳಿ ಬೀಸುತ್ತಿದ್ದಾರೆ. ಏನಾದರೂ, ಅವರಿಬ್ಬರಿಗೆ ಅಚಾರ್ಯರ ಕಂಠವನ್ನು ಅದುಮಲಿಕ್ಕೆ ಸಾಧ್ಯವಾಗುವದಿಲ್ಲ. ದೇಹದಲ್ಲಿನ ತ್ರಾಣವನ್ನೆಲ್ಲಾ ಕಳೆದುಕೊಂಡು ಆಯಾಸದಿಂದ ಕುಸಿದು ಕುಳಿತುಬಿಡುತ್ತಾರೆ. ಇದೊಂದು ಸಣ್ಣ ನಿದರ್ಶನ. ಟನ್ನುಗಟ್ಟಲೆ ಭಾರವಿದ್ದ ಬಂಡೆಯನ್ನು ಆಚಾರ್ಯರು ಭದ್ರಾನದಿಯ ಅಡ್ಡಲಾಗಿ ಇಟ್ಟದ್ದನ್ನು ನಾವು ಇಂದಿಗೂ ಕಾಣುತ್ತೇವೆ. ಆಚಾರ್ಯರು ಸಣ್ಣವಯಸ್ಸಿನಲ್ಲಿ ಗೆಳೆಯರ ಜೋಡಿ ಆಟವಾಡುವಾಗ ನಡೆದ ಘಟನೆಗಳನ್ನೂ ಕೇಳುತ್ತೇವೆ.[ಮೈಸೂರು ಜಂಬೂಸವಾರಿಯ ಆಕರ್ಷಣೆ, ಅಶ್ವರೋಹಿ ದಳ]

ಇವು, ಆಚಾರ್ಯರ ದೈಹಿಕಬಲಕ್ಕೆ ಸಂಬಂಧಪಟ್ಟ ಘಟನೆಗಳಾದರೆ, ಸಮಗ್ರ ಜಗತ್ತನ್ನೇ ನಿಯಮಿಸುವ ಬಲಕ್ಕೆ ಸಾಕ್ಷಿಯಾದ ಸಮುದ್ರವನ್ನು ನಿಯಮಿಸಿದ ಘಟನೆ, ಬೇಕಾದ ಪ್ರದೇಶಕ್ಕಷ್ಟೇ ಬೇಕಾದ ಸಮಯದಲ್ಲಿ ಬೇಕಾದಷ್ಟು ಮಾತ್ರ ಮಳೆಯನ್ನು ಸುರಿಸಿದ ಘಟನೆ ಮುಂತಾದವು ಆಚಾರ್ಯರೆಡೆಗಿನ ನಮ್ಮ ಬೆರಗನ್ನು ನೂರ್ಮಡಿಗೊಳಿಸುತ್ತವೆ. ಕೇಳಿದಾಗಲೊಮ್ಮೆ !

ಇನ್ನು ಆಚಾರ್ಯರ ಸಾಟಿಯಿಲ್ಲದ ಪರಮಾದ್ಭುತ ಗುಣ, ಆಚಾರ್ಯರ ಜ್ಞಾನ. ಅದರ ಬಗ್ಗೆ ಮಾತನಾಡಲು ನಾವ್ಯಾರು? ಭಾರತೀದೇವಿ, ರುದ್ರದೇವರು, ದೇವತೆಗಳು, ಋಷಿಗಳೇ ಯಾರ ಪಾದ ಸೇವೆಯಿಂದ ಜ್ಞಾನ ಗಳಿಸುತ್ತಾರೆಯೋ ಆ ಮಹಾಮಹಿಮರ ಮಹಾಮಹಿಮೆಯ ಕುರಿತು ನಮಗೆ ಮಾತನಾಡಲಾದರೂ ಸಾಧ್ಯವಾ ? ಆದರೆ, ಹೇಳಿ ಮುಗಿಸಲಿಕ್ಕಾಗಿ ಮಾತನಾಡಲು ಸಾಧ್ಯವಿಲ್ಲದಿದ್ದರೂ, ಹೇಳಿ ಹೇಳಿ ಪುಳಕಿತರಾಗಲಿಕ್ಕಾಗಿ, ಆ ಮುಖಾಂತರ ಉದ್ಧಾರವನ್ನು ಕಂಡುಕೊಳ್ಳಲಿಕ್ಕಾಗಿ ಮಾತ್ರ ಆಚಾರ್ಯರ ಗುಣಗಳನ್ನು ಮೇಲಿಂದ ಮೇಲೆ ಮೆಲುಕು ಹಾಕಲೇ ಬೇಕು.

ಅಂಥ ಆಚಾರ್ಯರ ಗುಣಗಳ ಮಧ್ಯದಲ್ಲಿಯೇ, ನಮಗೆ ತುಂಬ ಸಂಬಂಧಪಟ್ಟ ನಾವು ನಿರಂತರ ಸ್ಮರಿಸಲೇಬೇಕಾದ ಸರ್ವಶ್ರೇಷ್ಠವಾದ ಗುಣ, ಆಚಾರ್ಯರ ಕಾರುಣ್ಯ. ಆ ಹದಿನಾಲ್ಕುಲೋಕಗಳ ಒಡೆಯ, ಆ ಭಾರತೀಪತಿ, ಹುಬ್ಬಿನ ಕುಣಿತದಿಂದ ಬ್ರಹ್ಮಾಂಡವನ್ನು ನಿಯಮಿಸುವ ಸರ್ವಸಮರ್ಥ, ಶ್ರೀಹರಿಯ ಪ್ರೇಮದ ಕಂದ ಆ ಶ್ರೀಮದಾಚಾರ್ಯರು ಭೂಮಿಗೆ ಬಂದದ್ದು ಲೀಲೆಗಳನ್ನು ತೋರಿದ್ದು ಗ್ರಂಥಗಳನ್ನು ರಚಿಸಿದ್ದು, ಕೃಷ್ಣನನ್ನು ಪ್ರತಿಷ್ಠಾಪಿಸಿದ್ದು ಮಹಾ ತಪಸ್ವಿಗಳನ್ನು ಜ್ಞಾನಿವರ್ಯರನ್ನು ಗುರುಗಳನ್ನಾಗಿ ನೀಡಿದ್ದು ನಮಗಾಗಿ. ನಮ್ಮ ಮೇಲಿನ ಕಾರುಣ್ಯದಿಂದ.

ಯಾವುದಕ್ಕೆ ಸಲ್ಲುವವರು ನಾವು? ಸಾಧಕಪ್ರಪಂಚದಲ್ಲಿ ಕಟ್ಟಕಡೆಯಲ್ಲಿ ಪರಿಗಣಿಸಲ್ಪಟ್ಟ ಮನುಷ್ಯರು ನಾವು. ಅಂಥ ನಮಗಾಗಿ ಆಚಾರ್ಯರು ಅವತರಿಸಿಬಂದರು, ಉದ್ಧಾರದ ಹಾದಿಯನ್ನು ತೋರಿದರು. ಆ ಆಚಾರ್ಯರ ಕಾರುಣ್ಯಕ್ಕೆ ಸಾಟಿಯುಂಟೆ? ಬೆಲೆ ಕಟ್ಟಲಾದೀತೆ ? ಅವರ ಪಾದಕ್ಕೆರಗಿ ನಿಮ್ಮ ದಾಸರು ನಾವು ಎಂದು ನಿವೇದಿಸಿಕೊಳ್ಳುವದಷ್ಟೇ ನಾವು ಮಾಡಬಹುದಾದ ಕಾರ್ಯ. ಮಾಡಬೇಕಾದ ಕರ್ತವ್ಯ.

ಸಮಸ್ತ ಮಾಧ್ವಬಾಂಧವರಿಗೆ ಶ್ರೀಮಧ್ವಜಯಂತಿಯ ಶುಭಾಶಯಗಳು. ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರು ನಮ್ಮೆಲ್ಲರನ್ನೂ ಸದಾ ಸನ್ಮಾರ್ಗದಲ್ಲಿರಿಸಲಿ.

ವಿಶ್ವನಂದಿನಿಯಲ್ಲಿ ಇಂದಿನಿಂದ

ಶ್ರೀಮನ್ ಮಧ್ವನವಮಿಯ ವರೆಗೆ

ಶ್ರೀಮಧ್ವವಿಜಯ-ಶ್ರವಣೋತ್ಸವ ಆರಂಭ.

ಈ ಶ್ರವಣಕಾರ್ಯ ನಿರ್ವಿಘ್ನವಾಗಿ ಸಾಗುವಂತೆ

ಶ್ರೀಮದಾಚಾರ್ಯರು ಕಾರುಣ್ಯದಿಂದ ಅನುಗ್ರಹಿಸಲಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
This special article concentrate about Grate Hindu Philosopher and Chief proponent of tha Dvaita school Madhvacharya life history, their social concerns, miracle etc.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more