ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೋಡೇ ಅನಭವಿಸಬೇಕು ಧಾರವಾಡ ನವರಾತ್ರಿ ಜಾತ್ರಿ

By ಮಾಲತಿ ಮುದಕವಿ, ಧಾರವಾಡ
|
Google Oneindia Kannada News

ಧಾರವಾಡ ಅಂದ್ರ ಧಾರವಾಡ. ಇಡೀ ಜಗತ್ತು ಬದಲಾದ್ರೂ ಧಾರವಾಡ ಇನ್ನೂ ತನ್ನ ಸ್ವಂತಿಕೆ, ಸಂಭ್ರಮ ಕಳೆದುಕೊಂಡಿಲ್ಲ. ಧಾರವಾಡದ ಗಾಳಿ, ನೀರು ಕುಡಿದು, ಅಲ್ಲಿನ ಸಾಹಿತ್ಯಿಕ, ಸಾಂಸ್ಕೃತಿಕ ವಾಸನೆ ಗ್ರಹಿಸಿದವರಿಗೆ ಮಾತ್ರ ಗೊತ್ತು ಧಾರವಾಡದ ಗಮ್ಮತ್ತು. ಧಾರವಾಡದಲ್ಲಿ ನವರಾತ್ರಿ ಜಾತ್ರೆ ಹೇಗೆ ನಡೆಯುತ್ತಿತ್ತು ಎಂಬುದನ್ನು ಮಾಲತಿ ಮುದಕವಿಯವರು ಅತ್ಯಂತ ಸ್ವಾರಸ್ಯಕರವಾಗಿ, ಧಾರವಾಡದ ಭಾಷೆಯಲ್ಲಿ ಬರೆದಿದ್ದಾರೆ. ಆಸ್ವಾದಿಸಿ, ಆನಂದಿಸಿ - ಸಂಪಾದಕ.

In Pics : ದಸರಾ ವೈಭವ 2017 : ಸರಳ ಮತ್ತು ಸುಂದರ

***
ನಮ್ಮೂರು ಧಾರವಾಡಾ. ಧಾರವಾಡ ಅಂದಕೂಡ್ಲೆ ಎಲ್ಲಾರ್ಗೂ ನೆನಪಿಗೆ ಬರೂದು ಧಾರವಾಡ ಪೇಢೇ. ಆದರ ಇಲ್ಲೆ ಹುಟ್ಟಿ ಕಾರಣಾಂತರಗಳಿಂದ ದೂರ ದೂರ ಹೋದವ್ರಿಗೆಲ್ಲಾ ನೆನಪಿಗೆ ಬರೋ ವಿಷಯಾ ಇನ್ನೂ ಭಾಳಷ್ಟವ. ಅದರಾಗ ನಮ್ಮೂರ ಜಾತ್ರಿನೂ ಒಂದು. ಜಾತ್ರಿ ಅಂದ್ರ ಇದು ಬರೇ ಚುನಮರಿ, ಕಲ್ಯಾಣಸೇವಿ, ಬತ್ತಾಸು ಬೀರೋ ಜಾತ್ರಿ ಅಲ್ಲರೀ.

Ever mesmerising Navatri fair in Dharwad

ನವರಾತ್ರೀ ಜಾತ್ರಿ ಅಶ್ವೀನ ಶುದ್ಧ ಪಾಡ್ಯಾದಿಂದನ ಸುರುವಾಗತದ. ಗಾಂಧೀಚೌಕದಿಂದ ಮುಂದ ಜವಳೀ ಪ್ಯಾಟಿಯೊಳಗ ಲಕ್ಷ್ಮಿ ನಾರಾಯಣ ದೇವ್ರ ಗುಡೀ ಅದ. ಭಾರೀ ಛಂದನಿ ಗುಡೀ. ಹಳೇ ಖಡೆಪಾಟಿನ ಕಟ್ಟಡ. ಒಳಗಿನ ಮೂರ್ತಿಗೋಳಂತೂ ಎಷ್ಟ ಛಂದರೀ..... ನೋಡಲಿಕ್ಕೆ ಎರಡು ಕಣ್ಣು ಸಾಲಂಗಿಲ್ಲ.

ಸಂಗಮರವರೀ ಕಲ್ಲಿನ ನಗುಮುಖದ ಮೂರ್ತಿಗಳು. ಪ್ರತಿದಿನಾ ಈ ಸುಂದರ ಮೂರ್ತಿಗಳಿಗೆ ಚಂದದ ಅಲಂಕಾರಾ. ಮೊದಲ ದಿನಾ ಬದರಿನಾಥ.. ಮುಂದ ಶರವಿದ್ಯಾ.... ಗಜೇಂದ್ರಮೋಕ್ಷ... ಶಂಕರ ಪಾರ್ವತಿ... ಹಿಂಗ ಹತ್ತದಿನಾ, ಹನ್ನೊಂದ ದಿನದ ಅವತಾರದ ಅಲಂಕಾರಾ. ಕಡೀದಿನಾ ಶ್ರೀನಿವಾಸ ಪದ್ಮಾವತಿ.

Ever mesmerising Navatri fair in Dharwad

ಮದ್ಯಾಹ್ನ ನಾಲ್ಕರಿಂದ ರಾತ್ರಿ ಹತ್ತರ ತನಕಾ.. ಗುಡೀಗೆ ಮಂದಿ ಹೊಡದ ಹೊಡದ ಬರತದ.. ನಾವು ಅಗದೀ ಸಣ್ಣವ್ರಿದ್ದಾಗ ಅಲಂಕಾರ ನೋಡಲಿಕ್ಕೆ ನಾಲ್ಕ ಗಂಟೆ ಆಗೂದನ ಕಾಯತಿದ್ವಿ ಗುಡೀಕಟ್ಟೀ ಮ್ಯಾಲ ಕುತಗೋಂಡು.

ಇನ್ನ ನಮ್ಮನಮ್ಮ ಮನ್ಯಾಗೂ ಸುದ್ಧಾ ನವರಾತ್ರೀ ಸಂಭ್ರಮಾ ಅಗದೀ ಜೋರನ ಇರತಿತ್ತು. ಮನೀ ಸುಣ್ಣಾ ಬಣ್ಣಾ ಕಾರಣಿ. ಅಂದ್ರ ಕೆಮ್ಮಣ್ಣಲೆ ಸುಣ್ಣಕ್ಕ ಅಂಡರಲೈನ್ ಹೊಡಿಯೋದು. ಆಮ್ಯಾಲೆ ಶ್ರೀಕಾರ ಹಾಕೋದು. ಘಟ್ಟದ ಪ್ರಾರಂಭ ಪಾಡ್ಯಾದಿಂದ ಕೆಲವರ ಮನ್ಯಾಗ ಆದ್ರ, ಇನ್ನ ಕೆಲವರ ಮನ್ಯಾಗ ಐದ ದಿನದ ನವರಾತ್ರಿ, ಕೆಲವರ ಮನ್ಯಾಗ ಮೂರ ದಿನದ್ದು ಹಿಂಗ ಇರತದ.

Ever mesmerising Navatri fair in Dharwad

ಮಾವಿನ ತಳಿರಿನಿಂದ ಬಾಗಲಕ್ಕ ಅಲಂಕಾರದ ತ್ವಾರಣಾ. ದೊಡ್ಡ ದೊಡ್ಡ ರಂಗೋಲಿ. ಅವತ್ತಿನಿಂದ ಘಟ್ಟಾ, ಆರತಿ.. ದಿನಾ ಒಂದೊಂದ ತರದ ಪಕ್ವಾನ್ನದ ಊಟಾ... ಸಾಲಿಂದ ಬಂದಮ್ಯಾಲೆ ತಾಟಿನ್ಯಾಗ ಊಟಾ ಬಡಿಸ್ಕೊಂಡು ಹಿತ್ತಲದಾಗ ಆಟಾ ಆಡಿಕೋತ ಊಟಾ...

ಇನ್ನ ಜಾತ್ರೀ ಸುದ್ದೀ.. ದಿನಾ ಸಂಜೀ ಆಗೂಕಿಂತಾ ಮುಂಚೆನ ಏನೇನ ಅಂಗಡಿ ಬಂದಾವ ಅಂತ ಫಿರತೀ ಹಾಕ್ಕೊಂಡ ಬರತಿದ್ವಿ. ಅವ್ವಗ ಕಾಟಾ ಕೊಡಲಿಕ್ಕೆ ಸುರು. ರಿಬ್ಬನ್ನು ಬೇಕೂ.. ಬಳೀ ಭಾಳ ಛಂದ ಬಂದಾವು.. ಮುತ್ತಿನ ಸರಾ ಬೇಕೂ.. ಅಂತೆಲ್ಲಾ. ಅವ್ವ ಭಾರೀ ಪಕ್ಕಾ.. ಈಗಿಂದನ ಇವಕ್ಕ ಕೊಡಿಸ್ಕೋತ ಹೋದ್ರ ಜಾತ್ರಿ ಮುಗಿಯೂ ತನಕಾ ಅಂಗಡೀನ ತರಬೇಕಾಗತದ.. ಅಂತ ಲೆಕ್ಕಾ ಅಕೀದು.

Ever mesmerising Navatri fair in Dharwad

ನೋಡ್ರೀ ನಿಮ್ಮಪ್ಪಾ ದಸರಾ ದಿನಾ ಊಟ ಆದಿಂದ ನಿಮಗ ಹತ್ತತ್ತು ರುಪಾಯಿ ದಕ್ಷಿಣೀ ಕೊಡತಾರ. ಅಲ್ಲೀ ತನಕಾ ನಿಮಗೇನೇನ ತೊಗೊಳ್ಳೋದದ ಲೆಕ್ಕಾ ಹಾಕಿಟಗೊಂಡಿರ್ರಿ ಅಂತ ಹೇಳಿರತಿದ್ಲು. ನಮ್ಮ ಆಯ್ಕೆ ಪ್ರತಿದಿನಾ ಬದಲೀ ಆಗಿರತಿತ್ತು. ಆ ಕಾಲದಾಗ ಹತ್ತ ರುಪಾಯಿಕ್ಕ ದುನಿಯಾನ ಬರತಿತ್ತೂ..

ಅಲ್ಲಿ ಸಾಮಾನರೆ ಏನ ಛಂದಾ.. ಏನ ತರಾವರೀ.. ನೋಡೇ ಅನುಭವಿಸಬೇಕು ಆ ದೃಶ್ಯಾನ. ಬಳೀ, ರಿಬ್ಬನ್ನು, ಕ್ಲಿಪ್ಪು, ಹರಳಿನ ಸರಾ, ಮುತ್ತಿನ ಸರಾ, ಝುಮಕಿ, ಪ್ಲ್ಯಾಸ್ಟಿಕ್ ಹೂವಿನ ಮಾಲಿ... ಇನ್ನ ಸಣ್ಣ ಹುಡುಗೂರಿಗೆ ಫುಗ್ಗಾ, ಗಾಡಿ, ವಿಮಾನಾ, ಪ್ಲ್ಯಾಸ್ಟಿಕ್ಕಿನ ಗೊಂಬಿ, ಚೆಂಡು, ಬ್ಯಾಟು.... ಇವು ಹುಡುಗೂರ ಐಟಂ.

ದೊಡ್ಡವ್ರಿಗೆ ಕಬ್ಬಿಣ ಒಲಿ, ಕಲ್ಲಿನ ಗುಂಡಪಂಗಳ ಪಾತ್ರಿ, ಕಬ್ಬಣಬುಟ್ಟಿ ಕಬ್ಬಣ ಹಂಚು, ಸ್ಟೀಲಿನ ಚಮಚಾ, ಸೌಟು.. . ಏನುಂಟು ಏನಿಲ್ಲಾ.. ಎಂದೆಂದೂ ಹುಡಿಕಿದ್ರ ಬಜಾರದಾಗ ಸಿಗಲಾರದ್ವೆಲ್ಲಾ ಆಗ ಸಿಗತಿದ್ವು..

Ever mesmerising Navatri fair in Dharwad

ಜಾತ್ರಿಯ ಸಿರಿಗೆ ಕಲಶ ಇಟ್ಟಾಂಗ ನವರಾತ್ರಿಯೊಳಗ ಕೋಲಾಟಾ. ಬಣ್ಣಬಣ್ಣದ ಕೋಲು ಆಡಿಕೋತ ಹುಡಿಗೇರ ದಂಡು. ಅ ದಂಡಿನ ಮುಂದ ರಾಮ ಸೀತಾ ಲಕ್ಷ್ಮಣ, ಕೃಷ್ಣ ರಾಧಾ, ವೆಂಕಟೇಶ ಪದ್ಮಾವತಿ, ಲಕ್ಷ್ಮಿ ನಾರಾಯಣಾ, ಶಿವಾ ಪಾರ್ವತಿ ಹಿಂಗ ಪ್ರತಿ ದಿನಾನೂ ಬ್ಯಾರೆ ಬ್ಯಾರೆ ಪಾತ್ರ ಹಾಕ್ಕೊಂಡ ಮಕ್ಕಳು ಗೊಂಬೀ ಹಂಗ ಹೆಜ್ಜೀ ಇಟಗೋತ ಲೀಡ್ ಮಾಡವ್ರು. ಕೋಲಾಟದಾಗ "ಆಡಪೋಗೋಣು ಬಾರೋ ರಂಗಾ ಕೂಡಿ ಯಮುನ ತೀರದಲ್ಲೀ", "ನಾಲ್ಕೂ ಕಡೆಗೂ ನೀರೇ ನೀರವ್ವಾ ಯಾವ ಕಡಿಗೆ ಮೋಹನ ಪೋದಾ", ಇತ್ಯಾದಿ ಹಾಡು ಹಾಡಿಕೋತ ಓಣಿಓಣಿ ತಿರಗೋದು.

ದೊಡ್ಡವರಾಕ್ಕೋತ ಹೋಧಂಗ ಸಾಲಿ, ಪರೀಕ್ಷಾ, ಅಭ್ಯಾಸಾ.. ದೊಡ್ಡವರಾಗಿರೋ ಹಮ್ಮು.. ಸಂಕೋಚ.. ಆವಾಗಿನ ಹತ್ತರ ನೋಟೂ ಬೆಲಿ ಕಳಕೊಂಡವು... ಜಾತ್ರಿಯ ಮಜಾ ಕಡಿಮಿ ಆಕ್ಕೋತ ಬಂದ್ರೂ ಆ ಆಕರ್ಷಣೀ ಇನ್ನೂ ಉಳದದ ಅಂತನ ಅನಸ್ತದ.

English summary
Childhood memories are always wonderful. Malati Mudakavi from Dharwad goes down the memory lane and recalls the fair during Navaratri festivities, she would participate as a child. Savour the wonder experience of Navaratri and Dasara.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X