ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರಿಗೆ ಬಂದಾಗ ಸವಾರಿ ಸಾರೋಟಿನಲ್ಲಿರಲಿ

By * ಬಿ.ಎಂ. ಲವಕುಮಾರ್, ಮೈಸೂರು
|
Google Oneindia Kannada News

Have a nice tour of Mysore in Sarotu
ಮೈಸೂರಿನಲ್ಲಿ ಟಕ..ಟಕ.. ಸದ್ದು ಮಾಡುತ್ತಾ ಓಡಾಡುವ ಟಾಂಗಾ ಗಾಡಿಗಳೊಂದಿಗೆ ಈಗ ಸಾರೋಟುಗಳು ಸೇರ್ಪಡೆಗೊಂಡಿದ್ದು, ಮೈಸೂರಿನ ಗತಕಾಲದ ರಾಜವೈಭವ ಮರುಕಳಿಸಿದೆ... ಈ ಬಾರಿಯ ದಸರಾಕ್ಕೆ ಆಗಮಿಸುವ ಪ್ರವಾಸಿಗರು ಟಾಂಗಾ ಮಾತ್ರವಲ್ಲದೆ, ಸಾರೋಟಿನಲ್ಲಿ ಕೂಡ ಕುಳಿತು ನಗರಪ್ರದಕ್ಷಿಣೆ ಮಾಡಬಹುದಾಗಿದೆ.

ಹಾಗೆ ನೋಡಿದರೆ ಮೈಸೂರಿನಲ್ಲಿ ಮಹಾರಾಜರ ಕಾಲದಲ್ಲಿ ಟಾಂಗಾಗಾಡಿಗಳೇ ಸಂಚಾರ ಸಾಧನಗಳಾಗಿದ್ದವು. ಸಾಮಾನ್ಯ ಜನರು ಟಾಂಗಾ ಗಾಡಿಗಳಲ್ಲಿ ತೆರಳುತ್ತಿದ್ದರೆ, ಮಹಾರಾಜರು ಸಾರೋಟಿನಲ್ಲಿ ರಾಜಗಾಂಭೀರ್ಯದಿಂದ ಪ್ರಯಾಣಿಸುತ್ತಿದ್ದರು. ನಾವು ಟಾಂಗಾ ಗಾಡಿಗಳ ಕುರಿತು ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ನಮಗೆ ಒಂದಷ್ಟು ಮಾಹಿತಿಗಳು ಲಭ್ಯವಾಗುತ್ತವೆ.

ರಾಜರ ಕಾಲದ ಸಂಚಾರಿ ಸಾಧನ : ಮೈಸೂರಿನಲ್ಲಿ ವಾಹನ ಸೌಲಭ್ಯವಿಲ್ಲದ ದಿನಗಳಲ್ಲಿ ಎತ್ತಿನ ಬಂಡಿಯಲ್ಲಿಯೇ ಜನರು ಸಾಗುತ್ತಿದ್ದರಾದರೂ ಟಾಂಗಾ ಗಾಡಿಗಳು ಬಂದಿದ್ದು ಮಹಾರಾಜರ ಕಾಲದಲ್ಲಿ. ಅಂದರೆ 1897 ಎಂದು ಹೇಳಲಾಗಿದೆ. ಅಂದಿನ ದಿನಗಳಲ್ಲಿ ಟಾಂಗಾ ಗಾಡಿಗಳು ಹೆಚ್ಚಿನ ಜನಪ್ರಿಯತೆ ಪಡೆದಿದ್ದವಲ್ಲದೆ, ಟಾಂಗಾ ಗಾಡಿಗಳಲ್ಲಿ ತೆರಳುವುದೆಂದರೆ ಅದೊಂದು ಪ್ರತಿಷ್ಠೆಯ ಸಂಕೇತವಾಗಿತ್ತು. ದೂರದ ಊರುಗಳಿಗೆ ತೆರಳುವವರು ಮುನ್ಸಿಪಾಲಿಟಿಗೆ ಬಾಡಿಗೆ ನೀಡಿ ಟಾಂಗಾ ಗಾಡಿಯಲ್ಲಿ ಹೋಗಬೇಕಾಗಿತ್ತು. ಆಗ ಮೈಸೂರು ನಗರದಲ್ಲಿ ಸುಮಾರು ಆರುನೂರಕ್ಕೂ ಹೆಚ್ಚಿನ ಟಾಂಗಾಗಾಡಿಗಳು ಓಡಾಡುತ್ತಿದ್ದವಲ್ಲದೆ ಕೊಳ್ಳೇಗಾಲ, ಚಾಮರಾಜನಗರ, ನಂಜನಗೂಡು, ಕೆ.ಆರ್.ನಗರಗಳಲ್ಲಿಯೂ ಜನಪ್ರಿಯತೆಯನ್ನು ಗಳಿಸಿದ್ದವು. ಮುಂಬಯಿಯ ವಿಕ್ಟೋರಿಯ, ಮೈಸೂರಿನ ಮಹಾರಾಜರ ಷಾ ಪಂಸದ್ ಟಾಂಗಾಗಳು ಖ್ಯಾತಿ ಪಡೆದಿದ್ದವು. ಈ ಟಾಂಗಾ ಗಾಡಿಗಳಲ್ಲಿ ದೀಪದ ವ್ಯವಸ್ಥೆಯೂ ಇತ್ತು.

ದಸರಾ ಸಂದರ್ಭದಲ್ಲಿ ಟಾಂಗಾಗಾಡಿಗಳಿಗೂ ಗೌರವ ಸ್ಥಾನ ನೀಡಲಾಗುತ್ತಿತ್ತು. ಆದರೆ ವಾಹನಗಳ ಭರಾಟೆ ಹೆಚ್ಚಾಗುತ್ತಿದ್ದಂತೆಯೇ ಟಾಂಗಾ ಗಾಡಿಗಳಲ್ಲಿ ತೆರಳುವವರ ಸಂಖ್ಯೆ ಇಳಿಮುಖವಾಯಿತು. ಟಾಂಗಾಗಳು ಪ್ರವಾಸಿಗರನ್ನು ಹೊತ್ತು ಅರಮನೆಗೆ ಪ್ರದಕ್ಷಿಣೆ ಹಾಕಲಷ್ಟೆ ಸೀಮಿತವಾದವು. ಇಂತಹ ಪರಿಸ್ಥಿತಿಯಲ್ಲಿ ಟಾಂಗಾ ಗಾಡಿ ಓಡಿಸಿ ಬದುಕಿನ ಬಂಡಿ ಉರುಳಿಸುವುದು ಅಸಾಧ್ಯವಾಗಿತ್ತು ಇನ್ನೂ ಸಾರೋಟುಗಳನ್ನಿಟ್ಟುಕೊಂಡು ಜೀವನ ನಿರ್ವಹಿಸುವುದು ಸುಲಭದ ಮಾತಾಗಿರಲಿಲ್ಲ ಹಾಗಾಗಿ ಸಾರೊಟು ಬಗ್ಗೆ ಯಾರೂ ತಲೆಕೆಡಿಸಿಕೊಂಡಿರಲಿಲ್ಲ.

ಮತ್ತೆ ಬಂದಿವೆ ಸಾರೋಟುಗಳು : ಟಾಂಗಾ ಗಾಡಿಗಳು ಹಾಗೂ ಸಾರೋಟುಗಳು ರಾಜವೈಭವದ ಸಂಕೇತವಾಗಿರುವುದರಿಂದ ಮೈಸೂರಿನ ಪಾರಂಪರಿಕತೆಯನ್ನು ಹಾಗೆಯೇ ಉಳಿಸಿ ಬೆಳೆಸುವ ಉದ್ದೇಶದಿಂದ ಟಾಂಗಾಗಳನ್ನು ಹಾಗೆಯೇ ಉಳಿಸಿಕೊಳ್ಳುವ ಹಾಗೂ ಸಾರೋಟುಗಳನ್ನು ಪರಿಚಯಿಸುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ. ಕಳೆದ ದಸರಾ ಸಂದರ್ಭ ಮೈಸೂರಿಗೆ ಸಾರೋಟುಗಳು ಬಂದಿಳಿದಿವೆ. ಈಗ ನಗರದಲ್ಲಿ ಸುಮಾರು ಐದು ಸಾರೋಟುಗಳು ಓಡಾಡುತ್ತಿವೆ. ಟಾಂಗಾಗಳಿಗೆ ಹೋಲಿಸಿದರೆ ಸಾರೋಟುಗಳು ಆಕರ್ಷಣೀಯವಾಗಿದೆ ಹಾಗೂ ಹೆಚ್ಚು ಜನರು ಕುಳಿತು ನೆಮ್ಮದಿಯಾಗಿ ಪ್ರಯಾಣಿಸಬಹುದು. ಇದರಿಂದಾಗಿ ಪ್ರವಾಸಿಗರು ಇದರತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ.

ಸಾರೋಟುಗಳಿಗೆ ನಗರಪಾಲಿಕೆಯಿಂದ ಶೇಕಡ 50ರಷ್ಟು ಸಾಲ ಹಾಗೂ ಶೇಕಡ 50ರಷ್ಟು ಅನುದಾನ ನೀಡಲು 2010ರ ಪಾಲಿಕೆ ಬಜೆಟ್‌ನಲ್ಲಿ ಘೋಷಿಸಿದೆ. ಈ ಯೋಜನೆಯಲ್ಲಿ 22 ಸಾರೋಟುಗಳನ್ನು ಕೊಡುವ ಬಗ್ಗೆಯೂ ಘೋಷಣೆ ಮಾಡಲಾಗಿದೆ. ಒಂದು ಸಾರೋಟಿಗೆ ಸುಮಾರು ಒಂದೂವರೆ ಲಕ್ಷ ರೂ. ತಗಲುವುದರಿಂದ ಮತ್ತು ಕುದುರೆಯೊಂದಕ್ಕೆ ದಿನಕ್ಕೆ 250ರಿಂದ 300 ರೂ. ಖರ್ಚು ತಗಲುವುದರಿಂದ ಈ ಸಾರೋಟುಗಳ ನಿರ್ವಹಣೆ ಅಷ್ಟು ಸುಲಭವಲ್ಲ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ. ಅದು ಏನೇ ಇರಲಿ ಮೈಸೂರಿಗೆ ಬಂದಾಗ ನಿಮ್ಮ ಸವಾರಿ ಸಾರೋಟಿನಲ್ಲಿಯೇ ನಡೆಯಲಿ...

English summary
When you come to Mysore during Dasara festival, starting from September 28 to October 6, spare some time to go in Sarotu (horse cart ride) to have a glimpse of Mysore Maharaja era.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X