• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಹಿಷಾಸುರ ಸಂಹಾರದ ದ್ಯೋತಕವಾಗಿ ಆಯುಧ ಪೂಜೆ

By * ನಿವೇದಿತಾ ಪ್ರಭಾಕರ್, ಬೆಂಗಳೂರು
|

ಆಶ್ವೀಜ ಶುದ್ಧ ಪ್ರತಿಪದೆಯಿಂದ ದಶಮಿಯವರೆಗೆ ಭಾರತದಾದ್ಯಂತ ಸಾಂಪ್ರದಾಯಿಕವಾಗಿ ಆಚರಿಸಲಾಗುವ ನವರಾತ್ರಿ ಮತ್ತು ವಿಜಯದಶಮಿ ಹಬ್ಬ ಹಿಂದೂಗಳಲ್ಲಿ ಕ್ರಿಯಾತ್ಮಕವಾಗಿ ಮಾತ್ರವಲ್ಲ ಭಾವನಾತ್ಮಕವಾಗಿ ಭಾರೀ ಮಹತ್ವ ಪಡೆದಿದೆ. ಈ ಹತ್ತು ದಿನಗಳ ಸಂಭ್ರದ ದಸರಾ ಹಬ್ಬದ ದಿನಗಳಂದು ಬನಶಂಕರಿ, ಚಾಮುಂಡೇಶ್ವರಿ, ದುರ್ಗೆ, ಸರಸ್ವತಿ ಮುಂತಾದ ತಮ್ಮ ಇಷ್ಟದೇವತೆಗಳನ್ನು ಭಕ್ತಾದಿಗಳು ಭಕ್ತಿಭಾವದಿಂದ ಪೂಜಿಸುತ್ತಾರೆ.

ಒಂಬತ್ತು ದಿನಗಳಂದು ಒಂಬತ್ತು ವಿವಿಧ ದೇವದೇವತೆಗಳ್ನು ಸ್ತುತಿಸಲಾಗುತ್ತದೆ. ನವರಾತ್ರಿಯ ಕೊನೆಯ ದಿನದ ಆಚರಣೆ ಮಹಾನವಮಿಯಂದು ಆಯುಧ ಪೂಜೆಗೆ ಹೆಚ್ಚಿನ ಮಹತ್ವ. ತರಕಾರಿ ಹೆಚ್ಚುವ ಚಾಕುವಿನಿಂದ ಹಿಡಿದು ದೇಶದ ರಕ್ಷಣೆಗಾಗಿ ಬಳಸಲಾಗುವ ಅತ್ಯಾಧುನಿಕ ಯುದ್ಧ ವಿಮಾನಗಳನ್ನು ಕೂಡ ಆಯುಧ ಪೂಜೆಯಂದು ಪೂಜಿಸಲಾಗುತ್ತದೆ.

ದೇವಾನುದೇವತೆಗಳಿಗೆ ವಿಪರೀತವಾಗಿ ಕಾಟ ಕೊಡುತ್ತಿದ್ದ ಮಹಿಷಾಸುರನನ್ನು ಚಾಮುಂಡೇಶ್ವರಿ, ದುರ್ಗೆ, ಬನಶಂಕರಿ ಎಂದು ಮೊದಲಾದ ನಾಮಾವಳಿಗಳಿಂದ ಸ್ತುತಿಸಲಾಗುವ ದೇವಿ ನವರಾತ್ರಿಯ ಒಂಬತ್ತನೇ ದಿನದಂದು ಸಂಹರಿಸಿ ಲೋಕಕ್ಕೆ ಶಾಂತಿಯನ್ನು ತಂದಳೆಂಬ ನಂಬಿಕೆಯ ದ್ಯೋತಕವಾಗಿ ಒಂಬತ್ತನೇ ದಿನದಂದು ಆಯುಧ ಪೂಜೆ ಮಾಡಲಾಗುತ್ತದೆ.

ಬೀದಿಬದಿಯ ಸೈಕಲ್ ಶಾಪ್ ವಾಲಾ, ಹಾರ್ಡ್ ವೇರ್ ಅಂಗಡಿಕಾರ, ಚಿನ್ನಾಭರಣ ತಯಾರಿಸುವ ಅಕ್ಕಸಾಲಿಗ, ಬಡಿಗ, ಚಮ್ಮಾರ, ಲಾರಿ ಚಾಲಕರು, ತರಕಾರಿ ತಳ್ಳುಗಾಡಿಯ ಮಾಲಿಕರೆಲ್ಲರೂ ಈ ಒಂದು ದಿನ ದೈನಂದಿನ ಕೆಲಸಕ್ಕೆ ಸಲಾಂ ಹೊಡೆದು ತಮ್ಮ ಜೀವನಕ್ಕೆ ಆಧಾರವಾಗಿರುವ ಸಲಕರಣೆಗಳನ್ನು ಪೂಜಿಸುತ್ತಾರೆ. ಫ್ಯಾಕ್ಟರಿ, ಸಾಫ್ಟ್ ವೇರ್ ಕಚೇರಿ, ಅಂಗಡಿ ಮುಂಗಟ್ಟು, ಮನೆಮನೆಗಳಲ್ಲಿ ಹಬ್ಬದ ವಾತಾವರಣ, ತಮ್ಮನ್ನು ಕಾಯುವ ದೇವವನ್ನು ಪೂಜಿಸುವ ತವಕ. ದೇಶಕ್ಕೆ ಅನ್ನ ನೀಡುವ ಉಳುವ ಯೋಗಿ ತನ್ನ ನೇಗಿಲಿಗೆ ಪೂಜೆ ಸಲ್ಲಿಸುವುದನ್ನು ಮರೆಯುವುದಿಲ್ಲ.

ಬೆಳಿಗ್ಗೆ ಮನೆಯ ಮುಂದೆ, ಅಂಗಡಿಗಳ ಎದುರಿಗೆ, ಫ್ಯಾಕ್ಟರಿಗಳ ಅಂಗಳದಲ್ಲಿ, ಕಚೇರಿಯ ಪಡಸಾಲೆಗಳಲ್ಲಿ ಥಳಿರಂಗೋಲಿ ಚೆಲುವಿನ ಚಿತ್ತಾರ ಬಿಡಿಸಿರುತ್ತದೆ. ಮಾವಿನ ಸೊಪ್ಪಿನ ಹಸಿರು ತೋರಣ ಹೆಬ್ಬಾಗಿಲ ಮುಂದೆ ನಳನಳಿಸುತ್ತಿರುತ್ತದೆ. ಬಾಗಿಲ ಚೌಕಟ್ಟಿಗೆ ಆನಿಸಿರುವ ಬಾಳೆಕಂಬ ಹಬ್ಬದ ವಾತಾವರಣಕ್ಕೆ ಕಳೆ ತಂದಿರುತ್ತದೆ. ಸ್ಕ್ರೂ ಡ್ರೈವರಿಂದ ಹಿಡಿದು, ಸೈಕಲ್ಲು, ಬೈಕು, ಕಾರು ಮೊದಲಾದವುಗಳನ್ನು ತೊಳೆದು, ಕಂಪ್ಯೂಟರು, ಫ್ರಿಜ್, ಟಿವಿಗಳನ್ನು ಒರೆಸಿ ಸುಣ್ಣದ ಪಟ್ಟಿ ಬಳಿದು, ಅರಿಷಿಣ ಕುಂಕುಮ, ಹೂವೇರಿಸಿ ಊದುಬತ್ತಿ ಬೆಳಗುತ್ತಾರೆ. ನಂತರ ಯಥಾಪ್ರಕಾರ ಬೂದುಗುಂಬಳಕಾಯಿ ಒಡೆದಾಗಲೇ ಮನಸ್ಸಿಗೊಂದು ನೆಮ್ಮದಿ.

ಆಯುಧಗಳ ಆರಾಧನೆಯ ನಂತರ ಮನೆಯಲ್ಲಾದರೆ ಮನೆಮಂದಿಯೆಲ್ಲ ಸೇರಿ ಭರ್ಜರಿ ಹೋಳಿಗೆ ಊಟದ ಸಮಾರಾಧನೆ. ಅಂಗಡಿ ಮುಂಗಟ್ಟು, ಕಚೇರಿಗಳಲ್ಲಾದರೆ ಚುರುಮುರಿ, ಬೆಂಡು ಬೆತ್ತಾಸು, ಕಾರ ಬೂಂದಿಯ ಸೇವನೆ. ಆರ್ಥಿಕ ಸಂಕಷ್ಟದಿಂದ ಹೊರಬಂದಿರುವ ಕಚೇರಿಗಳು ತಮ್ಮನ್ನು ಬೆಳೆಸಿದ ಕಾರ್ಮಿಕರಿಗೆ ಬೋನಸ್ ನೀಡಿ ಸಂತಸದಿಂದ ಮನೆಗೆ ಕಳುಹಿಸುತ್ತಾರೆ, ಇಲ್ಲದಿದ್ದರೆ ಸ್ವೀಟ್ ಬಾಕ್ಸ್, ಸೇವು ಪ್ಯಾಕೆಟ್ ಇದ್ದೇ ಇದೆ.( ಈ ವರ್ಷ ಕೆಲವು ಕಡೆ ಚುರುಮುರಿಗೂ ಸಂಚಕಾರ ಬಂದಿದೆ). ವಾಹನಗಳನ್ನು ಸಿಂಗರಿಸಿ ಪಡ್ಡೆಗಳನ್ನು ತುಂಬಿಕೊಂಡು ಊರಿನ ಬೀದಿಗಳಲ್ಲಿ ಸುತ್ತು ಹಾಕುವುದು ಆಯುಧ ಪೂಜೆಯ ವಿಶೇಷವೆಂದೇ ಹೇಳಬೇಕು. ಕಿವಿಕಿತ್ತುಹೋಗುವ ಹಾಗೆ ಮೈಕು ಹಾಕಿಕೊಂಡರೂ, ಪುಣ್ಯಕ್ಕೆ ಕನ್ನಡ ಹಾಡು ಕೇಳಿಸುತ್ತಾ ಭರ್ರನೆ ಗಾಡಿಗಳು ಓಡುವುದನ್ನು ನೀವು ಗಮನಿಸಿಯೇ ಇರುತ್ತೀರಿ.

ಆಯುಧ ಪೂಜೆಯ ಹಿಂದೆ ಮತ್ತೊಂದು ಪೌರಾಣಿಕ ಮಹತ್ವವೂ ಇದೆ. ದ್ವಾಪರ ಯುಗದಲ್ಲಿ ಪಾಂಡವರು ಹದಿಮೂರು ವರ್ಷಗಳ ವನವಾಸ ಮುಗಿಸಿ ಒಂದು ವರ್ಷ ಅಜ್ಞಾತವಾಸ ಮುಗಿಸಿದ ದಿನವೇ ವಿಜಯದಶಮಿ. ಅಜ್ಞಾತವಾಸದ ಸಮಯದಲ್ಲಿ ಬನ್ನಿಗಿಡದಲ್ಲಿ ಬಚ್ಚಿಟ್ಟಿದ್ದ ತಮ್ಮ ಶಸ್ತ್ರಾಸ್ತ್ರಗಳನ್ನೆಲ್ಲ ತೆಗೆದು ವಿರಾಟರಾಜನ ಶತ್ರುಗಳ ವಿರುದ್ಧ ಪಾಂಡವರು ವಿಜಯವನ್ನು ಸಾಧಿಸುತ್ತಾರೆ. ನವರಾತ್ರಿ ಹಬ್ಬ ಮುಗಿಸಿ ದಶಮಿಯಂದು ಸಾಧಿಸಿದ ವಿಜಯದ ಕುರುಹಾಗಿ ಕೂಡ ಆಯುಧ ಪೂಜೆಯನ್ನು ಆಚರಿಸಲಾಗುತ್ತದೆ.

ವಿಜಯದಶಮಿ ಹಬ್ಬದ ದ್ಯೋತಕವಾಗಿ ಮನೆಮನೆಗಳಲ್ಲಿ ನೆಂಟರಿಷ್ಟರು ಬನ್ನಿ ಎಲೆಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡು ಸಂತಸಪಡುತ್ತಾರೆ. ಈ ಬನ್ನಿ ಬಂಗಾರಕ್ಕೆ ಸಮಾನವೆಂದು ಹಿಂದೂಗಳಲ್ಲಿ ನಂಬಿಕೆಯಿದೆ. ಬನ್ನಿ ತೆಗೆದುಕೊಂಡು ಬಂಗಾರದಂತಿರೋಣ ಎಂದು ಆಶಿಸುತ್ತಾರೆ. ಕಿರಿಯರು ಬನ್ನಿ ಸೊಪ್ಪನ್ನು ಹಿರಿಯರ ಕೈಗಿತ್ತು ಆಶೀರ್ವದಿಸಿ ಎಂದು ನಮಸ್ಕರಿಸುವುದು ವಿಜಯದಶಮಿಯ ಸಂಪ್ರದಾಯಗಳಲ್ಲಿ ಮುಖ್ಯನಾದುದು. ಪ್ರತಿಯೊಬ್ಬರ ಮನಸ್ಸಿನಲ್ಲಿ ಹುದುಗಿದ್ದ ಕಲ್ಮಶಗಳೆಲ್ಲ ತೊಳೆದು ಬಾಳು ಬಂಗಾರವಾಗಲಿ ಎಂಬುದು ಈ ಆಚರಣೆಯ ಆಶಯ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Significance of Ayudha Pooja during Navaratri and Dasara festival
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more