ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ದಸರೆಗೆ ಚಿತ್ರದುರ್ಗಕ್ಕೆ ನೀವು ಬರಲೇಬೇಕು

By Staff
|
Google Oneindia Kannada News

Chitradurga Murugharejendra Mattಮೈಸೂರು ದಸರಾ ಮಡಿಕೇರಿ ದಸರಾ ಮಂಗಳೂರು ದಸರಾ ನಿಮಗೆಲ್ಲ ಗೊತ್ತು. ಚಿತ್ರದುರ್ಗ ದಸರಾ ಬಗ್ಗೆ ಅಷ್ಟಾಗಿ ಗೊತ್ತಿರಲಿಕ್ಕಿಲ್ಲ ಎಂಬುದು ನನ್ನ ಅನಿಸಿಕೆ. ಆದ್ದರಿಂದ ನೀವೆಲ್ಲ ನಮ್ಮೂರಿಗೆ ಒಮ್ಮೆಯಾದರೂ ಬಂದು ಐದು ದಿವಸಗಳ ದುರ್ಗದ ದಸರಾ ಸಂಭ್ರಮವನ್ನು ಕಣ್ಣಲ್ಲಿ ತುಂಬಿಕೊಳ್ಳುತ್ತೀರಿ ಎಂಬ ನಿರೀಕ್ಷೆ ನನ್ನದು. ಬರ್ತೀರಾ ತಾನೆ?

ಲೇಖನ : ತ್ರಿಪುಟಪ್ರಿಯ, ಚಿತ್ರದುರ್ಗ

ದಸರಾ ಎಂದರೆ ಮೈಸೂರು ದಸರಾ. ಆದರ ಬಗ್ಗೆ ಹೇಳುವುದೇ ಬೇಡ. ಅದು ಎಲ್ಲರಿಗೂ ಗೊತ್ತು. ಪ್ರಾರಂಭದಿಂದ ಕೊನೆಯವರೆಗೊ ಅಲ್ಲಿನ ವರದಿಗಳನ್ನು ದೂರದರ್ಶನ ಮತ್ತು ದಿನಪತ್ರಿಕೆಗಳಲ್ಲಿ ಈಚೀಚೆಗೆ ಅಂತರ್ಜಾಲದ ಮುಖಾಂತರ ಹೇರಳವಾಗಿ ತಿಳಿದುಕೊಂಡಿರುತ್ತೀರಿ. ಆದರೆ, ನಾನು ನಿಮ್ಮೊಂದಿಗೆ ಈಗ ಇದೇ ರೀತಿಯಲ್ಲಿ ಸತತ ಐದು ದಿನಗಳವರೆಗೆ ಸಾರ್ವಜನಿಕವಾಗಿ ದಸರ ಹಬ್ಬದ ಪ್ರಯುಕ್ತ ಆಚರಿಸಲ್ಪಟ್ಟ ಶರಣ ಸಂಸ್ಕೃತಿ ಉತ್ಸವದ ಬಗ್ಗೆ ಹೇಳಬೇಕು.

ನಮ್ಮ ರಾಜ್ಯದ ಭೂಪಟದ ಮಧ್ಯ ಭಾಗದಲ್ಲಿರುವ ಜಿಲ್ಲೆ ಎಂದರೆ ಚಿತ್ರದುರ್ಗ. ಐತಿಹಾಸಿಕ ಮಹತ್ವವುಳ್ಳ ಬಯಲುಸೀಮೆಯ ಜಿಲ್ಲಾ ಕೇಂದ್ರ. ಆಹ್ಲಾದಕರ ವಾತಾವರಣ, ಹೆಚ್ಚು ಬಿಸಿಲಿರದ ಆಗಾಗ್ಗೆ ಸೋನೆ ಮಳೆಯ ಸಮಯದಲ್ಲಿ ಬರುವ ದಸರವನ್ನು, ಚಿತ್ರದುರ್ಗದ ಪ್ರಸಿದ್ಧ ಮುರುಘರಾಜೇಂದ್ರ ಮಠವು ಅತ್ಯಂತ ವೈಭವೋಪೇತವಾಗಿ ಶರಣ ಸಂಸ್ಕೃತಿ ಉತ್ಸವವಾಗಿ ಆಚರಿಸುತ್ತದೆ.

ಐದು ದಿನಗಳ ಕಾಲ ಜರುಗುವ ಸಂಜೆಯ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಮ್ಮ ಕಣ್ಣಿಗೆ ಅಂದಿನ ಶರಣರ ಅನುಭವ ಮಂಟಪವವನ್ನು ನೆನಪಿಸಿಕೊಡುತ್ತವೆ.ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳ ಅಧ್ಯಕ್ಷತೆಯನ್ನು ಪೂಜ್ಯ ಮುರುಘರಾಜೇಂದ್ರ ಶ್ರೀಗಳು ವಹಿಸಿಕೊಳ್ಳುತ್ತಾರೆ. ಪ್ರತಿದಿನವು ಒಂದೊಂದು ವಿಷಯದ ಮೇಲೆ (ಸಾಹಿತ್ಯ, ಮಕ್ಕಳು, ಮಹಿಳೆ, ಧರ್ಮ, ಕೃಷಿ ಇತ್ಯಾದಿ) ಕಾರ್ಯಕ್ರಮಗಳು ನಡೆಯುತ್ತವೆ.

ಪ್ರತಿದಿನವು ಆ ವಿಷಯಕ್ಕೆ ಸಂಬಂಧಿಸಿದ ಪ್ರಸಿದ್ಧ ವ್ಯಕ್ತಿಗಳನ್ನು ಆಹ್ವಾನಿಸುತ್ತಾರೆ. ಅವರಿಂದ ಸಭಿಕರಿಗೆ ತಮ್ಮ ರಂಗಕ್ಕೆ ಸಂಬಂಧಪಟ್ಟ ಹಿತನುಡಿಗಳನ್ನು ಕೇಳಿಸುತ್ತಾರೆ. ಹಾಗೆಯೇ ಆ ಗಣ್ಯರಿಗೆ ಮಠದ ವತಿಯಿಂದ ತುಂಬು ಸನ್ಮಾನಗಳನ್ನು ಶ್ರೀಗಳಿಂದ ಕೊಡಲಾಗುತ್ತದೆ. ಸಮ್ಮೇಳನದ ಮಧ್ಯದಲ್ಲಿ ಮುರುಘ ಮಠದ ಕಲಾವಿದರಿಂದ ಪ್ರಸ್ತುತವಾಗುವ ನೃತ್ಯ, ನೀತಿ ನಾಟಕಗಳ ಸನ್ನಿವೇಶಗಳು, ವಚನ ಗಾಯನ ಕಾರ್ಯಕ್ರಮಕ್ಕೆ ಹುರುಪು ನೀಡುತ್ತದೆ.

ಈ ರೀತಿಯ ಅಪರೂಪದ ಎರಡನೇ ಕಾರ್ಯಕ್ರಮಕ್ಕೆ ದುರ್ಗದ ಜನತೆಯಲ್ಲದೆ, ರಾಜ್ಯದ ನಾನಾ ಪ್ರದೇಶಗಳಿಂದ ಆಸಕ್ತರು ಆಗಮಿಸುತ್ತಾರೆ. ಕಿಕ್ಕಿರಿದ ಜನ ಸಮೂಹದಲ್ಲಿ ಈ ಕಾರ್ಯಕ್ರಮಗಳು ಜಗಮಗಿಸುತ್ತ ನಿರಂತರವಾಗಿ ಸಾಗುತ್ತವೆ. ಈ ರೀತಿಯ ಕಾರ್ಯಕ್ರಮಗಳ ಕೊರತೆಯನ್ನು ಕಾಣುವ ಚಿತ್ರದುರ್ಗದ ಸಾಂಸ್ಕೃತಿಕ ಫ್ರೌಢಿಮೆಯುಳ್ಳ ಮಂದಿ ಈ ಶರಣ ಸಂಸ್ಕೃತಿ ಉತ್ಸವವಕ್ಕೆ ಕಾತುರತೆಯಿಂದ ಕಾದಿದ್ದು ಸಂಭ್ರಮಿಸುತ್ತಾರೆ.

ಹಾಗೆಯೇ, ಈ ಸಮ್ಮೇಳನಕ್ಕೆ ಕಿರೀಟಪ್ರಾಯವಾದ ಅತ್ಯಂತ ಮೌಲ್ಯವುಳ್ಳ(ಬಹುಮಾನ ಮೊತ್ತ 1 ಲಕ್ಷ ಮತ್ತು ಫಲಕ) ಗೌರವವಾದ ಬಸವಶ್ರೀ ಪ್ರಶಸ್ತಿಯನ್ನು ದೇಶದ ಪ್ರಸಿದ್ಡ ವ್ಯಕ್ತಿಗಳಿಗೆ ಅವರು ಮಾಡಿದ ಉತ್ಕೃಷ್ಟ ಸೇವೆಯನ್ನು ಗುರುತಿಸಿ ಗೌರವಿಸಲಾಗುತ್ತದೆ. ಈ ದಿನಗಳಲ್ಲಿ ಆ ಕಾರ್ಯಕ್ರಮಗಳಲ್ಲದೆ ಹಗಲು ವೇಳೆ ಇಡೀ ಮುರುಘ ಮಠವು ವಿಜೃಂಭಣೆಯಿಂದ ಶೃಂಗಾರಗೊಂಡು ಕಿಕ್ಕಿರಿದ ಜನಸಂದಣಿಯ ನಡುವೆ ಚಿಕ್ಕ ಸಮಾವೇಶಗಳನ್ನು ಮಠದ ಅವರಣದ ಒಳಗೆ ನಡೆಸಲಾಗುವುದು. ಇದೊಂದು ಚಿಕ್ಕ ಹಳ್ಳಿಗಾಡಿನ ಜಾತ್ರೆಯನ್ನು ನೆನಪಿಗೆ ತರುತ್ತವೆ.

ವಿಜಯದಶಮಿ ದಿನವಂತೂ ದುರ್ಗದ ಜನತೆಗೆ ಡಬ್ಬಲ್ ಸಡಗರ. ಎಲ್ಲರ ಮನೆಗಳಲ್ಲಿ ಹಬ್ಬದ ಸಡಗರ. ಮುರುಘ ಮಠದ ದಸರ ಮೆರವಣಿಗೆ ದಸರ ಮೆರವಣಿಗೆಯನ್ನು ನೆನಪಿಗೆ ತರುತ್ತದೆ. ವಿವಿಧ ಜನಪದ ತಂಡಗಳು ತಮ್ಮ ಕಲೆಗಳಾದ ನಂದಿಕೋಲು ನೃತ್ಯ, ವೀರಗಾಸೆ, ಗೊಂಬೆಯಾಟ,ಚಂಡೆಮದ್ದಾಳೆ, ಗೊರವರ ಕುಣಿತ ಹೀಗೆ ಹತ್ತು ಹಲವು ಜನಪದ ನೋಟಗಳನ್ನು ರಾಜ್ಯದ ಹಲವು ಕಡೆಗಳಿಂದ ಬಂದವರಿಂದ ನೋಡಬಹುದು.ಈ ಮೆರವಣಿಗೆಗೆ ದುರ್ಗದ ಬೀದಿ ಬೀದಿಗಳು ಶೃಂಗಾರಗೊಂಡು ತಮ್ಮ ಮನೆಯ ಮುಂದೆ ಸ್ವಾಗತಿಸಿ ಸಂತೋಷಪಡುತ್ತಾರೆ. ಮುಂಜಾನೆಯಿಂದ ಪ್ರಾರಂಭಗೊಂಡ ಮೆರವಣಿಗೆ ಸಂಜೆಯ ಇಳಿಹೂತ್ತಿನಲ್ಲಿ ಚಿತ್ರದುರ್ಗದ ಕೋಟೆಯ ಸಂಪಿಗೆ ಸಿದ್ದೇಶ್ವರ ದೇವಸ್ಥಾನದಲ್ಲಿ ಪೂಜೆಯೊಂದಿಗೆ ಸಮಾಪ್ತಿಯಾಗುತ್ತದೆ. ಈ ಮೆರವಣಿಗೆಯ ಮತ್ತೊಂದು ವಿಶೇಷವೆಂದರೆ ಮೆರವಣಿಗೆಯ ಪೂರ್ತಿ ಸ್ವಾಮಿಜಿಗಳು ಜೊತೆಯಿರುವುದು ಎಲ್ಲರಿಗೂ ಹುರುಪು ಕೊಡುತ್ತದೆ.

ಅಂದೇ ರಾತ್ರಿ ಸಂಜೆಯ ಕಾರ್ಯಕ್ರಮಗಳ ನಂತರ, ಹಳೆ ಮಾಧ್ಯಮಿಕ ಶಾಲೆಯ ವಿಸ್ತಾರ ಮೈದಾನದಲ್ಲಿ ಜರುಗುವ ಬಾಣ, ಬಿರುಸು, ಪಟಾಕಿಗಳನ್ನು ಹಚ್ಚುವುದಂತೂ ಮೈಸೊರಿನ ಪಂಜಿನ ಕವಾಯಿತನ್ನು ನೆನಪಿಗೆ ತರದೆ ಇರುವುದಿಲ್ಲ. ಇದಲ್ಲದೆ, ಚಿತ್ರದುರ್ಗದ ಮಧ್ಯ ಭಾಗದಲ್ಲಿ ಜರುಗುವ ಸಂಜೆಯ ಸಾಂಸ್ಕೃತಿಕ ಸಮ್ಮೇಳನದ ವೇದಿಕೆಗೆ ಹೊಂದಿಕೊಂಡಂತೆ ಕಾಲೇಜು ಯುವ ಕಲಾವಿದರ ಕಲಾರಚನೆಗಳ ಪ್ರದರ್ಶನ ವ್ಯವಸ್ಥೆಯನ್ನು ಮಾಡಿರುತ್ತಾರೆ. ಧಾರ್ಮಿಕತೆ ಹಾಗೂ ವೈಚಾರಿಕತೆಗೆ ಸಂಬಂಧಿಸಿದ ವಿವಿಧ ಪ್ರಕಾಶನದ ಪುಸ್ತಕಗಳ ಮಾರಾಟ ವ್ಯವಸ್ಥೆಯು ಸಹ ಮಾಡಿರುತ್ತಾರೆ.

ಈ ರೀತಿಯ ಅಸಾಮಾನ್ಯ ಸಾಂಸ್ಕೃತಿಕ ಶರಣ ಸಂಸ್ಕೃತಿ ಉತ್ಸವವನ್ನು ಚಿತ್ರದುರ್ಗದಲ್ಲಿ ಪ್ರತಿ ವರ್ಷ ದಸರ ಸಮಯದಲ್ಲಿ ಅಚ್ಚುಕಟ್ಟಾಗಿ ಮತ್ತು ಆಕರ್ಷಕವಾಗಿ , ಈ ಎಲ್ಲಾ ರೀತಿಯ ವ್ಯವಸ್ಥೆಯ ಭಾರವನ್ನು ಬೃಹನ್ ಮಠವು ವಹಿಸಿಕೊಂಡು ಯಶಸ್ವಿಗೂಳಿಸುತ್ತದೆ. ಅದಕ್ಕೆ ನಾವೆಲ್ಲಾ ಅಭಾರಿಗಳು.

ಈ ಉತ್ಸವದ ನೆಪದಲ್ಲಿ ನೀವೇಕೆ ಮುಂದಿನ ದಸರಕ್ಕೆ ನಮ್ಮ ಚಿತ್ರದುರ್ಗಕ್ಕೆ ಬರಬಾರದು? ಏಳುಸುತ್ತಿನ ಕೋಟೆ, ಓನಕೆ ಒಬವ್ವನ ಕಿಂಡಿ, ತುಪ್ಪದ ಕೊಳ, ಹೀಗೆ ಹಲವು ಸ್ಥಳಗಳನ್ನು ದುರ್ಗದ ಕೋಟೆಯಲ್ಲಿ ನೋಡಬಹುದು. ಹಾಗೆಯೇ ಚಿತ್ರದುರ್ಗಕ್ಕೆ ಹೊಂದಿಕೊಂಡಂತ್ತಿರುವ ಪ್ರಸಿದ್ಧ ಗಿರಿಧಾಮವಾದ ಜೋಗಿಮಟ್ಟಿ ಬೆಟ್ಟ, ಪ್ರಾಣಿಗಳ ಧಾಮವಾದ ಆಡುಮಲ್ಲೇಶ್ವರ ಧಾಮ, ಐತಿಹಾಸಿಕ ಮಹತ್ವವುಳ್ಳ ಚಂದ್ರವಳ್ಳಿ,ಬೃಹನ್ ಮಠ ಉದ್ಯಾನವನ ಮುಂತಾದ ಪ್ರವಾಸಿ ಕೇಂದ್ರಗಳನ್ನು ಹಗಲು ವೇಳೆ ಬೇಟಿ ಕೊಟ್ಟು , ಸಂಜೆ ಯಥಾಃ ಅಧುನಿಕ ಶರಣರ ಅನುಭವಮಂಟಪಕ್ಕೆ ಹಾಜರಾಗಿ ತಮ್ಮ ಸಮಯವನ್ನು ಆನಂದದಿಂದ ಕಳೆಯಬಹುದು. ನೀವು ಮುಂದಿನ ದಸರಕ್ಕೆ ಚಿತ್ರದುರ್ಗಕ್ಕೆ ಪಕ್ಕಾ ಬರುವಿರೆಂದು ಭಾವಿಸುವೆ.

ನೀವೂ ವರದಿಗಾರರಾಗಿರಿ : ದಟ್ಸ್ ಕನ್ನಡ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X