ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೆನಪಿನಂಗಳದಿಂದ... ವೈಭವದ ಮೈಸೂರು ದಸರಾ

By Staff
|
Google Oneindia Kannada News

Mysore Dasara ambari
1972ರಲ್ಲಿ ರಾಜಪರಂಪರೆ ಕೊನೆಗೊಳ್ಳುವುದರೊಂದಿಗೆ, ಅಂಬಾರಿಯ ಮೇಲೆ ಮಹಾರಾಜರು ಸವಾರಿ ಮಾಡುವ 362 ವರ್ಷಗಳ ಸಂಪ್ರದಾಯ ಕೊನೆಗೊಂಡಿತು. ಆಗ ಆನೆಯ ಮೇಲೆ ಅಂಬಾರಿ ಕಂಡೆ, ಅಂಬಾರಿ ಒಳಗೆ ರಾಜನ ಕಂಡೆ ಎಂದಿತ್ತು. ಇದೀಗ ಅಂಬಾರಿ ಒಳಗೆ ಚಾಮುಂಡಿ ಕಂಡೆ ಎಂದಾಗಿದೆ. ವಿಜಯನಗರದ ಸಂಸ್ಥಾನದ ಆಡಳಿತಾವಧಿಯಲ್ಲಿ ಪ್ರಾರಂಭಗೊಂಡ ಮೈಸೂರಿನ ದಸರಾ ಆಚರಣೆ ಇದೀಗ ಕರ್ನಾಟಕದ ನಾಡ ಹಬ್ಬವಾಗಿದೆ.

ಲೇಖನ : ವಾಣಿ ರಾಮದಾಸ್, ಸಿಂಗಪುರ

ಶಕ್ತಿಪೂಜೆಯ ನವರಾತ್ರಿ ದಿನಗಳಿವು. ದುರ್ಗೆ, ಮಹಾಲಕ್ಷ್ಮಿ, ಗಾಯತ್ರೀ, ಶಾರದಾಂಬೆ ದೇಗುಲಗಳಲ್ಲಿ ವಿಶೇಷ ಪೂಜೆ. ನವರಾತ್ರಿಯಲ್ಲಿ ಮೊದಲ ಮೂರು ದಿನ ಲಕ್ಶ್ಮಿ, ನಂತರದ ಮೂರುದಿನ ಸರಸ್ವತೀ ಹಾಗೂ ಕಡೆಯ ಮೂರುದಿನ ದುರ್ಗೆಯನ್ನು ಆರಾಧಿಸುವರು. ಮೈಸೂರಿನಲ್ಲಿ ಗೊಂಬೆಗಳ, ಜಂಬೂಸವಾರಿಯ ದಿಬ್ಬಣದ ನಾಡ ಹಬ್ಬ, ಬಂಗಾಳದಲ್ಲಿ ದುರ್ಗಾ ಪೂಜೆ, ರಾವಣ ಸಂಹಾರ ಶ್ರೀರಾಮನ ವಿಜಯ, ಒಟ್ಟಿನಲ್ಲಿ ದುಷ್ಟಶಕ್ತಿಯ ಸಂಹಾರದ ಸಂಕೇತ ದಸರಾ ಅಥವಾ ನವರಾತ್ರಿ ಹಬ್ಬ. ಚಾಮುಂಡೇಶ್ವರಿ ಮಹಿಷಾಸುರ ಸಂಹಾರದ ವಿಜಯದ ಆಚರಣೆ ಮೈಸೂರು ದಸರಾ ಎಂಬ ಪ್ರತೀತಿ ಇದೆ.

ವಿಜಯನಗರ ಸಾಮಂತರಾಗಿ ಕ್ರಿ.ಶ. 1399ರಲ್ಲಿ ಯದುರಾಯ, ಕೃಷ್ಣರಾಯ ಸಹೋದರರು ಮೈಸೂರಿನಲ್ಲಿ ಒಡೆತನದ ಆಳ್ವಿಕೆಯನ್ನು ಮೈಸೂರನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆರಂಭಿಸಿದರು. ವಿಜಯನಗರದ ಅರಸರ ಕಾಲದಲ್ಲಿ ಜನಜನಿತವಾಗಿದ್ದ ಮಾನವಮಿ ದಿಬ್ಬದ ನವರಾತ್ರೋತ್ಸವವನ್ನು ಮೈಸೂರು ಸಂಸ್ಥಾನದಲ್ಲೂ ಆರಂಭಿಸಲು ಕ್ರಿ.ಶ 1610ರಲ್ಲಿ ಒಂದನೇ ರಾಜಒಡೆಯರು ನಿರ್ಧರಿಸಿದರು. ಅಂದಿನಿಂದ ಪ್ರಾರಂಭಗೊಂಡ ದಸರಾ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ವಿಶ್ವ ಮನ್ನಣೆಗಳಿಸಿ, ವಿದೇಶಿಯರನ್ನು ಆಕರ್ಷಿಸಿತು. ಮೈಸೂರಿಗರ ಜನ ಜೀವನದ ಭಾಗವಾಗಿ, ಭಾವೈಕ್ಯತೆಯನು ಬೆಸೆಯುವ ಸಂಕೇತದ ಹಬ್ಬವಾಯಿತು. ಕರ್ನಾಟಕದ ನಾಡಹಬ್ಬವೆನಿಸಿತು. ದಸರಾ ಹಬ್ಬ ವೈಭವದ ಕುರುಹೊಂದಿಗೆ ಜನಸಮಾನ್ಯರಿಗೆ ಆ ನಾಡಿನ ಚದುರಂಗ ಸೈನ್ಯ, ರಕ್ಷಣಾ ಬಲದ ಸಾಮರ್ಥ್ಯ ಸಾರುವ ಸಂದರ್ಭವು ಅದಾಗಿತ್ತು.

ಮೈಸೂರು ದಸರಾ ಮುಖ್ಯ ಆಕರ್ಷಣೆ ವಿಜಯದಶಮಿಯಂದು ನಡೆಯುತ್ತಿದ್ದ ಜಂಬೂಸವಾರಿ. ಅಂದು ಈಗಿನಂತೆ ಪತ್ರಿಕೆ, ದೂರದರ್ಶನ, ಆಕಾಶವಾಣಿಯಲ್ಲಿ ಅಬ್ಬರದ ಪ್ರಚಾರವಿರಲಿಲ್ಲ. ಆದರೂ ದೇಶ, ವಿದೇಶಗಳಿಂದ ಜಂಬೂಸವಾರಿ ವೀಕ್ಷಿಸಲು ಜನ ತಂಡೋಪತಂಡವಾಗಿ ಬರುತ್ತಿದ್ದರು. ಮೈಸೂರಲ್ಲಿ ದಸರಾ ಸಮಯ ಎಲ್ಲರ ಮನೆಗಳಲ್ಲೂ ಅತಿಥೇಯಮಯ. ಮೈಸೂರಿನ ದಸರ ಹಬ್ಬಕ್ಕೂ ಆನೆಗೂ ಅವಿನಾಭಾವ ಸಂಬಂಧ. ಜಂಬೂ ಸವಾರಿಗೆಂದೇ ಆಯ್ಕೆಗೊಂಡಾ ಗಜಸಮೂಹಕ್ಕೆ ತಿಂಗಳಾನುಗಟ್ಟಲೆ ತರಬೇತಿ. ಅಂಬಾರಿ ಹೊರುವ ಆನೆಯ ಆಯ್ಕೆಯನ್ನು ಸ್ವಯಂ ಮಹಾರಾಜರೇ ಮಾಡುತ್ತಿದ್ದರಂತೆ. ಆ ಗಜಸಮೂಹಕ್ಕೆ ಸುಗ್ಗಿಯ ಕಾಲ, ವಿಶೇಷ ಉಪಚಾರ. ರಾಜಯೋಗ, ರಾಜಭೋಗ. ಮೈಸೂರು ದಸರಾ ಮೆರವಣಿಗೆ, ಜಂಬೂಸವಾರಿಗೆ ಪ್ರಖ್ಯಾತಿ ಪಡೆದದ್ದೇ ಈ ಆನೆಗಳಿಂದ.

ನೆನಪಿನ ಮೆರವಣಿಗೆ : 60, 70ರ ದಶಕದಲ್ಲಿ ನಾವಿದ್ದದ್ದು ಮೈಸೂರಿನ ಅರಮನೆಯ ಬಳಿ. ದಸರಾ ಹಬ್ಬ ಹತ್ತಿರವಾಗುತ್ತಿದ್ದಂತೆ ದಿನವೂ ಆನೆಗಳನ್ನು ತಾಲೀಮಿಗೆಂದು ಕರೆತರುತ್ತಿದ್ದ ಆನೆಗಳನ್ನು ಮಾವುತರು ಅಗ್ರಹಾರ, ಮಾರುಕಟ್ಟೆಗಳಿಗೆ ಕರೆತರುತ್ತಿದ್ದರು. ಅದರ ಹಿಂದೆ ನಮ್ಮ ವಾನರ ಸೈನ್ಯದ ದಂಡು. ಆನೆ, ಹಸುಗಳಿಗಾಗಿ ಅಲ್ಲಲ್ಲಿ ನೀರಿನ ತೊಟ್ಟಿಗಳು ಇರುತ್ತಿದ್ದವು. ಅದರ ಬಳಿ ನೀರಿಗಾಗಿ ಆನೆಗಳನ್ನು ನಿಲ್ಲಿಸುತ್ತಿದ್ದರು. ಅವು ಲದ್ದಿ ಹಾಕಿದಲ್ಲಿ ಹೇ ಎಂದು ತುಳಿಯುತ್ತಿದ್ದ ಪಡ್ಡೆ ಹುಡುಗರು, ಅವು ಮುಂದೆ ಸಾಗಲು ಬಿಡುತ್ತಿರಲಿಲ್ಲ. ಮನೆಯ ಮುಂದೆ ನಿಂತು ಮೊರದಲ್ಲಿ ಬೆಲ್ಲ, ಅಕ್ಕಿ, ಕಾಯಿ, ಹಣ್ಣು ಕೊಡುತ್ತಿದ್ದ ಹೆಂಗಸರು ಮಾವುತನಿಗೂ ಹತ್ತು ಪೈಸೆ ನೀಡುತ್ತಿದ್ದರು. ಅಲ್ಲದೇ ಪೇಪರ್‌ನಲ್ಲಿ ಹಬ್ಬಕ್ಕಾಗಿ ಮಾಡಿದ್ದ ಕರಿದ ತಿನಿಸುಗಳನ್ನು ಸುತ್ತಿ ಕೊಡುತ್ತಿದ್ದರು. ಹಾಥಿ ಭೀ ಖುಷ್ ಸಾಥೀ ಭೀ ಖುಷ್! ದೂರ ನಿಂದು ಹೆದರಿ ಹೆದರಿ ಅದರ ಮೈ, ಸೊಂಡಿಲು ಮುಟ್ಟಿ, ಬಿಸಿಲು ಮಳೆ ಲೆಕ್ಕಿಸದೆ ಸಾಕಷ್ಟು ದೂರ ಆನೆಯ ಹಿಂದೆ ದಂಡು, ದಂಡಾಗಿ ಮಕ್ಕಳ ಹಿಂಡಿನಲ್ಲಿ ಓಡುತ್ತಿದ್ದೆವು. ಅದೇನೋ ಖುಷಿ, ಅದೆಂಥಾ ಸಂಭ್ರಮವದಾಗಿತ್ತು. ಅದೊಂದು ಸುಂದರ ಬಾಲಕಾಂಡ. ಈಗ ಆ ಆನೆಗ ಜೊತೆ ಓಡಿದ್ದನ್ನು ನೆನೆದರೆ "ಆ ದಿಗ್ಗಜದ ಮುಂದೆ ನಮ್ಮ ಕುಬ್ಜತೆಯ ಅರಿವಾಗುತ್ತದೆ".

ಮಹಾರಾಜರ ಕಾಲದಲ್ಲಿ, ದಸರೆಗೆ ಮಾತ್ರವಲ್ಲದೆ ಬೇರೆ ಸಮಯಗಳಲ್ಲೂ ಆನೆಗಳನ್ನು ನೋಡಿಕೊಳ್ಳಲು ಮಾವುತರಿದ್ದರು. ಇದೀಗ ಗಜಶಾಲೆ, ಆನೆಕರವಟ್ಟಿ ಹೆಸರು ಹಾಗೂ ನೆನಪು ಮಾತ್ರ. ಜಯಚಾಮರಾಜೇಂದ್ರ ಒಡೆಯರ ಅಂಬಾರಿ ಆನೆಯ ಹೆಸರು ಸುಂದರರಾಜ ಎಂದು ನೆನಪು.

ಜಂಬೂ ಸವಾರಿಯಂದು 750 ಕಿಲೋ ತೂಕದ ಚಿನ್ನದ ಅಂಬಾರಿ ಹೊರುವ ಪಟ್ಟದ ಆನೆಯೇ ನಾಯಕ. ಇವನ ಸುತ್ತಲೂ ಅವನೊಂದಿಗೆ ಮಂದಗಮನೆಯರಾಗಿ ಹೆಜ್ಜೆ ಹಾಕುವ ಗಜಗಾಮಿನಿಯರು. ಆನೆಯ ನಡಿಗೆಯ ಸೊಬಗು ನೋಡಲು ಬಲು ಚೆಂದ. ಮಂದಗತಿಯಲಿ, ರಾಜಗಾಂಭೀರ್ಯದಿಂದ ಅರಮನೆಯ ಆವರಣದಿಂದ 2.5 ಕಿ.ಮೀ ದೂರ ಇರುವ ಬನ್ನಿ ಮಂಟಪದತ್ತ ಅಲಂಕೃತಗೊಂಡು ನಡೆವ ಗಜಸಮೂಹದ ಸೊಬಗನ್ನು ನೋಡಲು ಕಣ್ಣೆರಡು ಸಾಲದು. ಈ ಅತ್ಯಾಕರ್ಷಕ ಮೆರವಣಿಗೆಯಲ್ಲಿ ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ವೈವಿಧ್ಯಮಯ ಚಿತ್ರಗಳು, ಪೊಲೀಸ್ ಬ್ಯಾಂಡ್, ಕುದುರೆ, ಕಾಲಾಳುಗಳು, ಪೋಲೀಸ್ ಬ್ಯಾಂಡ್, ಕುದುರೆ, ಕಾಲಾಳು, ನಂದಿಧ್ವಜ. ಅವದ ಜೊತೆಗೆ ಸಂಗೀತ, ಸಾಹಿತ್ಯ, ಚಿತ್ರಕಲೆ, ಕುಸ್ತಿ, ಜಟ್ಟಿ ಕಾಳಗ, ಮಲ್ಲಯುದ್ಧ, ನಾಟಕ, ಜನಪದ ಕುಣಿತ ಮುಂತಾದ ಕಲೆಗಳ ಪ್ರದರ್ಶನ, ಪಾರಿತೋಷಕಗಳು ಸಾಂಸ್ಕೃತಿಕ ಪರಂಪರೆಯನ್ನು ಸೃಷ್ಟಿಸಿದವು.

ಈ ಮೆರವಣಿಗೆಯನ್ನು ವೀಕ್ಷಿಸಲು ಬರುತ್ತಿದ್ದ ಜನರು ಮಳೆ ಬಿಸಿಲೆನ್ನದೆ ಮನೆಯ ಮಾಳಿಗೆ, ಮರ, ಉಪ್ಪರಿಗೆಗಳ ಮೇಲೆ ಕಾದು ಕುಳಿತಿರುತ್ತಿದ್ದರು. ಈ ಜಂಬೂ ಸವಾರಿಯ ವೀಕ್ಷಣೆಗಾಗಿ ವಿದೇಶಗಳಿಂದ ಆಗಮಿಸುವವರ ಸಂಖ್ಯೆಯೂ ಕಡಿಮೆ ಇರಲಿಲ್ಲ. ಮೆರವಣಿಗೆಯು ಬನ್ನಿ ಮಂಟಪದತ್ತ ಸಾಗುತ್ತಿತ್ತು. ಅಂಬಾರಿ ಹೊತ್ತ ಗಜರಾಜ ಸಾಗುತ್ತ್ದಿದಂತೆಯೇ ಲಕ್ಷಾಂತರ ಜನರ ಹರ್ಷೋದ್ಗಾರ ಮುಗಿಲು ಮುಟ್ಟುತ್ತಿತ್ತು. ಬನ್ನಿ ಮಂಟಪದತ್ತ ತೆರಳಿ, ಬನ್ನಿ ವೃಕ್ಷದ ಪೂಜೆ. ಆನಂತರ ಪಂಜು ಪ್ರದರ್ಶನ. ಆನಂತರ ಮೆರವಣಿಗೆ ಅರಮನೆಗೆ ವಾಪಸ್. ದಾರಿಯ ಇಕ್ಕೆಲೆಗಳಲ್ಲಿ ತುಂಬಿ ನಿಂದಿರುತ್ತಿದ ಜನ ಸಂದಣಿ ಅಂಬಾರಿಯ, ರಾಜರ ದರುಶನದ ನಂತರ ಜನ ಚದುರಿ ಹೋಗುತ್ತಿದ್ದರು. 1972ರಲ್ಲಿ ರಾಜಪರಂಪರೆ ಕೊನೆಗೊಳ್ಳುವುದರೊಂದಿಗೆ, ಅಂಬಾರಿಯ ಮೇಲೆ ಮಹಾರಾಜರು ಸವಾರಿ ಮಾಡುವ 362 ವರ್ಷಗಳ ಸಂಪ್ರದಾಯ ಕೊನೆಗೊಂಡಿತು. ಆಗ ಆನೆಯ ಮೇಲೆ ಅಂಬಾರಿ ಕಂಡೆ, ಅಂಬಾರಿ ಒಳಗೆ ರಾಜನ ಕಂಡೆ ಎಂದಿತ್ತು. ಇದೀಗ ಅಂಬಾರಿ ಒಳಗೆ ಚಾಮುಂಡಿ ಕಂಡೆ ಎಂದಾಗಿದೆ.

ವಿಜಯನಗರದ ಸಂಸ್ಥಾನದ ಆಡಳಿತಾವಧಿಯಲ್ಲಿ ಪ್ರಾರಂಭಗೊಂಡ ಮೈಸೂರಿನ ದಸರಾ ಆಚರಣೆ ಇದೀಗ ಕರ್ನಾಟಕದ ನಾಡ ಹಬ್ಬವಾಗಿದೆ. ಆ ಸಂಪ್ರದಾಯ, ಸಂಸ್ಕೃತಿಗಳ ಜವಾಬ್ದಾರಿ ಕರ್ನಾಟಕ ಸರಕಾರ ವಹಿಸಿಕೊಂಡಿದೆ. ಈ ಎಲ್ಲ ಸಂಪ್ರದಾಯಗಳು ಕಾಲಕ್ಕನುಗುಣವಾಗಿ ಕೆಲವು ಮಾರ್ಪಾಡುಗಳೊಂದಿಗೆ ಇಂದಿಗೂ ನಡೆದುಕೊಂಡು ಬರುತ್ತಿದೆ. ಇಂದು ಮಹಾರಾಜರ ಬದಲಾಗಿ, ಸಾಹಿತ್ಯ, ಸಂಸ್ಕೃತಿ ಪ್ರಾಮುಖ್ಯರಿಂದ ಈ ಉತ್ಸವ ಪ್ರಾರಂಭಗೊಳ್ಳುತ್ತದೆ. ಜಂಬೂಸವಾರಿಯಲ್ಲಿ ಮಹಾರಾಜರ ಚಿನ್ನದ ಅಂಬಾರಿಯಲ್ಲಿ ಇದೀಗ ದೇವಿ ಚಾಮುಂಡಾಂಬಿಕೆ ವಿರಾಜಮಾನಗೊಳ್ಳುತ್ತಾಳೆ. ಹಿಂದಿನ ವೈಭವದ ಕುರುಹಾಗಿ ಇಂದೂ ಕರ್ನಾಟಕ ಸರಕಾರ ಈ ಉತ್ಸವದ ಉಸ್ತುವಾರಿ ವಹಿಸಿಕೊಂಡಿದೆ.

ಅಂದಿನ ವೈಭವ ಇಲ್ಲದಿದ್ದರೂ ಕಾಲಕ್ಕನುಗುಣವಾಗಿ ಪರಂಪರೆಯ ಸಂಪ್ರದಾಯದ ಮೆರವಣಿಗೆ ನಡೆಯುತ್ತದೆ. ಇಂದೂ ಅರಮನೆ, ಮೆರವಣಿಗೆ ಸಾಗುವ ರಸ್ತೆಗಳಲ್ಲಿ, ಅಂಗಡಿಗಳಲ್ಲಿ, ಮನೆಗಳಲ್ಲಿ ಝಗಮಗಿಸುವ ವಿದ್ಯುತ್ ದೀಪಾಲಂಕಾರ. ಹಾದಿಯುದ್ದಕ್ಕೂ ಹಾಕಿದ ರಂಗವಲ್ಲಿ, ಮದುವೆಯ ಮನೆಯಂತೆ ಕಂಗೊಳಿಸಿ ಸಂಭ್ರಮದ ವಾತಾವರಣವನ ಕಾಣಬಹುದಾಗಿದೆ. ಮೈಸೂರಿನ ಅರಮನೆಯ ದೀಪಾಲಂಕಾರ ನೋಡಲು ಬಲು ಸೊಗಸು. ಇಂದು ಈ ಅವಧಿಯಲ್ಲಿ ಅರಮನೆಯ ಆವರಣದಲ್ಲಿ ಸಂಗೀತ ಕಾರ್ಯಕ್ರಮ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಕುಸ್ತಿ ಮತ್ತು ಕ್ರೀಡಾ ಸ್ಫರ್ಧೆಗಳನ್ನು ಏರ್ಪಡಿಸುತ್ತದೆ.

ವೈಭವೋಪೇತವಾಗಿ ಇಲ್ಲದಿದ್ದರೂ ಸರಳ ರೀತಿಯಲಿ ಮೈಸೂರು ದಸರಾ ಎಷ್ಟೋಂದು ಸುಂದರಾ ಎಂಬ ಈ ಪಾರಂಪರಿಕ ಆಚರಣೆಯ ಮಹತ್ವ ಇಂದಿನ ಹಾಗೂ ಮುಂದಿನ ಪೀಳಿಗೆಗೆ ತಿಳಿಯಲಿ, ಶ್ರೀ ಚಾಮುಂಡೇಶ್ವರೀ ಅಮ್ಮಾ...ಎಂಬ ಆ ಚಾಮುಂಡಿಯ ಅನುಗ್ರಹ ದೊರಕುತ್ತಿರಲಿ ಎಂದು ಆಶಿಸೋಣ.

ಇವನ್ನೂ ಓದಿ

ಪವಿತ್ರ ಕ್ಷೇತ್ರ ಕಟೀಲಿನಲ್ಲಿ ನವರಾತ್ರಿ ಉತ್ಸವ
ದಸರಾಗೆ ಸಿದ್ಧಗಂಗೆ ಶ್ರಿಗಳಿಂದ ವಿದ್ಯುಕ್ತ ಚಾಲನೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X