ವಿಜಯನಗರ ಸಾಮ್ರಾಜ್ಯದ ಬಳುವಳಿ
ವಿಜಯನಗರ ಅರಸರ ಮೂಲಕ 1610ರಿಂದ ದಸರಾ ಆಚರಣೆಗೆ ಬಂತು ಎಂದು ಇತಿಹಾಸ ಹೇಳುತ್ತದೆ. 1975ರಿಂದ ಈಚೆಗೆ ದಸರಾ ನಾಡಹಬ್ಬವಾಗಿ ಕರ್ನಾಟಕ ಸರಕಾರದ ವತಿಯಿಂದ ಆಚರಿಸಲ್ಪಡುತ್ತದೆ.
ಮೈಸೂರಿನಲ್ಲಿ ಆಚರಿಸುವ ದಸರಾ ವಿಜಯನಗರ ಅರಸರ ಮೂಲಕ ಆಚರಣೆಗೆ ಬಂದಿದ್ದು, ವಿಜಯನಗರದ ಅರಸರು ನವರಾತ್ರಿಯನ್ನು ವಿಜಯೋತ್ಸವ ಅಂಗವಾಗಿ ಆಚರಿಸುತ್ತಿದ್ದರು. ಅದರ ಕುರುಹಾಗಿ ಮಹಾನವಮಿಯ ದಿಬ್ಬ ಹಂಪಿಯ ಅವಶೇಷಗಳಲ್ಲಿ ಈಗಲೂ ಉಳಿದುಕೊಂಡಿದೆ. ಶ್ರೀರಂಗಪಟ್ಟಣ ರಾಜಧಾನಿ ಆಗಿದ್ದಾಗ ಮೈಸೂರು ಸಂಸ್ಥಾನ ವಿಜಯನಗರದ ಒಂದು ಭಾಗವಾಗಿತ್ತು. ರಾಜ ಒಡೆಯರ್ ಅವರ ಕಾಲದಲ್ಲಿ ಅಂದರೆ 1610ರಲ್ಲಿ ದಸರಾ ಆರಂಭವಾಯಿತು. ಇದು ಎಪ್ಪತ್ತರ ದಶಕದ ಶ್ರೀಜಯಚಾಮರಾಜೇಂದ್ರ ಒಡೆಯರ ಕಾಲದವರೆಗೆ ನಡೆದುಕೊಂಡು ಬಂತು. ವಿಜಯನಗರದ ಅರಸರಂತೆಯೇ ಮೈಸೂರು ಅರಸರು ಆಯುಧಪೂಜೆ, ವಿಜಯದಶಮಿ ಮುಂದುವರಿಸಿದರು. 1975ರಿಂದ ಈಚೆಗೆ ದಸರಾ ನಾಡಹಬ್ಬವಾಗಿ ಕರ್ನಾಟಕ ಸರಕಾರದ ವತಿಯಿಂದ ಆಚರಿಸಲ್ಪಡುತ್ತದೆ.
ಅಂಬಾರಿಯಲ್ಲಿ ರಾಜರ ಮೆರವಣಿಗೆ : ಶ್ರೀಜಯಚಾಮರಾಜೇಂದ್ರರು ಒಡೆಯರ್‌ರವರಿಗೆ ಮೈಸೂರು ಅರಸರು ನವರಾತ್ರಿ ಕೊನೆಯ ದಿನವಾದ ವಿಜಯದಶಮಿಯಂದು ಮೆರವಣಿಗೆಯಲ್ಲಿ ಚಿನ್ನದ ಅಂಬಾರಿಯಲ್ಲಿ ಕುಳಿತು ಸಾಗುತ್ತಿದ್ದರು. ಇದನ್ನು ನೋಡಲೆಂದೇ ಸುತ್ತಮುತ್ತಲಿನ ಜನರು ಎತ್ತಿನಗಾಡಿಗಳಲ್ಲಿ ಬರುತ್ತಿದ್ದರು. ಅಂಬಾರಿಯಲ್ಲಿ ರಾಜರನ್ನು ಕಂಡು ಧನ್ಯತಾಭಾವದಿಂದ ಹಿಂದಿರುಗುತ್ತಿದ್ದರು.
ಬೆಂಕಿಗೆ ಆಹುತಿಯಾದ ಅರಮನೆ ಇತಿಹಾಸ ಹೇಳುವಂತೆ, 1887ರ ಫೆಬ್ರವರಿ 28ರಂದು ಮೈಸೂರಿನ ಹಳೆಯ ಮನೆಗೆ ಬೆಂಕಿ ಬಿತ್ತು. ಅದು ಮಹಾರಾಜರ ಸಹೋದರಿ ಜಯಲಕ್ಷ್ಮಮ್ಮಣ್ಣಿಯವರ ವಿವಾಹದ ನಂತರ ಬೀಗರೂಟದ ಸಂದರ್ಭದಲ್ಲಿ ವಿವಾಹ ಮಂಟಪದಲ್ಲಿ ಅಜಾಗರೂಕತೆಯಿಂದ ಹೊತ್ತಿದ ಬೆಂಕಿ ಇಡೀ ಅರಮನೆಗೆ ಚಾಚಿತು. ಅರಮನೆಯ ತೊಲೆಗಳು ಧಗಧಗಿಸಿ ಉರಿಯುತ್ತಿರುವಾಗ ಆರಿಸಲೂ ನೀರಿರಲಿಲ್ಲ. ಎದುರಿಗಿದ್ದ ದೊಡ್ಡ ಕೆರೆಯಿಂದ ಕೆಸರನ್ನು ತಂದು ಎರಚಿದರೂ ಪ್ರಯೋಜನವಾಗಲಿಲ್ಲ. ಹೆಚ್ಚುಪಾಲು ಮರ ಉಪಯೋಗಿಸಿ ತಯಾರಿಸಿದ್ದ ಮನೆ ಕೇವಲ ನೆನಪಾಯಿತು.
ರತ್ನ ಖಚಿತ ಸಿಂಹಾಸನ, ವೈರಮುಡಿ, ಪಟ್ಟದ ಕತ್ತಿ, ಚಾಮರಾಜ ಮುಡಿ, ಚಿನ್ನ-ಬೆಳ್ಳಿ ವಸ್ತುಗಳು, ರತ್ನಾಭರಣಗಳು ಕಂಠಿಗಳು ಸೇರಿದಂತೆ ಕೆಲವು ವಸ್ತುಗಳು ಮಾತ್ರ ರಕ್ಷಿಸಲ್ಪಟ್ಟಿದ್ದವು.
ಪುಟ್ಟ ಪ್ರತಿಕೃತಿ : ಅರಮನೆಯಲ್ಲಿ ಆಯುರ್ವೇದ ಪಂಡಿತರಾಗಿ ಕೆಲಸ ಮಾಡುತ್ತಿದ್ದ ಗುಂಡ್ಲುಪೇಟೆ ಲಕ್ಷ್ಮಣಾಚಾರ್ಯರು ಬೆಂದುಹೋದ ಅರಮನೆ ಪ್ರತಿಕೃತಿ ರೂಪಿಸಿದ್ದಾರೆ. ಅರಮನೆ ದಹಿಸಿ ಹೋದ 23 ವರ್ಷಗಳ ನಂತರ ಅಂದರೆ 1910ರಲ್ಲಿ ಈ ಪ್ರತಿಕೃತಿ ರೂಪಿಸಲಾಯಿತು. ಅಂಚೆ ಕಾರ್ಡಿನಲ್ಲಿ ರೂಪಿಸಲಾಗಿರುವ ಈ ಪ್ರತಿಕೃತಿ ಸುಮಾರು 80 ವರ್ಶಗಳ ನಂತರವೂ ಆಕರ್ಷಣೆ ಕಳೆದುಕೊಂಡಿಲ್ಲ. ಮೈಸೂರಿನ ರಾಮಾನುಜ ರಸ್ತೆಯ ನಿವಾಸಿ ಜಿ. ಎಸ್. ರಾಜನ್ ಅವರ ಬಳಿ ಈ ಪ್ರತಿಕೃತಿ ಇದೆ. ಇವರು ಲಕ್ಷ್ಮಣಾಚಾರ್ಯರ ಮೊಮ್ಮಗ.
ಮುಖಪುಟ / ಮೈಸೂರು ದಸರಾ











Click it and Unblock the Notifications