ನಾಡೋಜ ಬಾರದಿದ್ದರೂ ನಾಡಹಬ್ಬ ಬಂದೇ ಬಿಟ್ಟಿತು

ಮೈಸೂರು : ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಂ.ಎನ್‌. ಜೋಯಿಸ್‌ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವುದರೊಂದಿಗೆ ಬಂದ್‌ನಿಂದ ವಿನಾಯಿತಿ ಪಡೆದಿರುವ ಮೈಸೂರಿನಲ್ಲಿ ಗುರುವಾರ ಬೆಳಗ್ಗೆ ದಸರಾ ಹಬ್ಬ ಪ್ರಾರಂಭವಾಗಲಿದೆ.

ದಸರಾ ಹೊತ್ತಿಗೆ ವೀರಪ್ಪನ್‌ ರಾಜ್‌ಕುಮಾರ್‌ ಅವರನ್ನು ಬಿಡುಗಡೆ ಮಾಡುತ್ತಾನೆ ಎಂಬ ನಿರೀಕ್ಷೆಯಿಂದ ದಸರಾ ಉತ್ಸವವನ್ನು ರಾಜ್‌ಕುಮಾರ್‌ ಉದ್ಘಾಟಿಸುವರು ಎಂದು ಹೇಳಲಾಗಿತ್ತು. ನಂತರ ಅವರ ಪತ್ನಿ ಪಾರ್ವತಮ್ಮ ಕೂಡ ಇಂಥ ಪರಿಸ್ಥಿತಿಯಲ್ಲಿ ದಸರಾ ಉದ್ಘಾಟಿಸುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿಬಿಟ್ಟರು. ಆಮೇಲೆ ಲೇಖಕಿ ಶಾಂತಾದೇವಿ ಮಾಳವಾಡ ಹೆಸರು ಕೇಳಿಬಂದಿತಾದರೂ, ಅಂತಿಮವಾಗಿ ಸ್ವಾತಂತ್ರ್ಯ ಹೋರಾಟಗಾರ ಎಂ.ಎನ್‌.ಜೋಯಿಸ್‌ ಅವರಿಗೆ ದಸರಾ ಉದ್ಘಾಟಿಸುವ ಗೌರವ ಸಿಕ್ಕಿತು.

ನವರಾತ್ರಿ ಎಂದೂ ಕರೆಯಲಾಗುವ 9 ದಿನಗಳ ಮೈಸೂರು ದಸರಾ ಹಬ್ಬದ ಪ್ರಮುಖ ಆಕರ್ಷಣೆ ಜಂಬೂಸವಾರಿ. ಈ ಸಾಂಪ್ರದಾಯಿಕ ಮೆರವಣಿಗೆ ಮೈಸೂರು ಅರಮನೆಯಿಂದ ಶುರುವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಹಾದು ಬನ್ನಿ ಮಂಟಪದಲ್ಲಿ ಕೊನೆಗೊಳ್ಳುತ್ತದೆ. ಬಲರಾಮ (ಆನೆ) ಚಿನ್ನದ ಪಲ್ಲಕ್ಕಿ ಹೊರುತ್ತಾನೆ. ಜಂಬೂ ಸವಾರಿ ನಂತರ ಬನ್ನಿ ಮಂಟಪದಲ್ಲಿ ಕಣ್ಣುಕೋರೈಸುವ ದೀಪೋತ್ಸವ ಇರುತ್ತದೆ. ಮೈಸೂರಿನ ಕೊನೆಯ ಮಹಾರಾಜ ಜಯಚಾಮರಾಜ ಒಡೆಯರ್‌ ಮೃತರಾದ ನಂತರ ಕರ್ನಾಟಕ ಸರ್ಕಾರ ತನ್ನ ವೆಚ್ಚದಲ್ಲಿ ದಸರೆಯನ್ನು ನಾಡಹಬ್ಬವನ್ನಾಗಿ ಆಚರಿಸುತ್ತಾ ಬಂದಿದೆ.

ಇನ್ನೂ ಸಿದ್ಧತೆಗಳು ಮುಗಿದಿಲ್ಲ : ಪ್ರತಿ ವರ್ಷ ದಸರೆಗೆ ನಾಲ್ಕೈದು ದಿನಗಳ ಮುಂಚೆಯೇ ಪೂರ್ತಿಯಾಗಿ ಸಿಂಗರಗೊಳ್ಳುತ್ತಿದ್ದ ಅರಮನೆಗಳ ನಗರಿಯಲ್ಲಿ ಈ ಬಾರಿ ಹಬ್ಬ ಪ್ರಾರಂಭವಾಗಲು ಇನ್ನೊಂದೇ ದಿನ ಇರುವಾಗಲೂ ಯುದ್ಧೋಪಾದಿಯಲ್ಲಿ ಕೊನೆ ಟಚ್‌ಅಪ್‌ ನಡೆಯುತ್ತಿದೆ. ಪ್ರತಿ ಸಲದಂತೆ ಈ ಬಾರಿ ಹಬ್ಬ ಜೋರಾಗಂತೂ ಇರುವುದಿಲ್ಲ. ನಾಡೋಜ ನಾಡಿನಲ್ಲಿರದಿರುವುದೇ ಇದಕ್ಕೆ ಕಾರಣ. ಸರ್ಕಾರ ದಸರೆಗೆಂದು 68 ಲಕ್ಷ ರುಪಾಯಿ ಬಿಡುಗಡೆ ಮಾಡಿದೆ. ಪ್ರತಿ ಸಲದಷ್ಟು ವಿಜೃಂಭಣೆ ಈ ಸಲದ ದಸರೆಗೆ ಇರುವುದಿಲ್ಲ. ದಸರಾ ಉತ್ಸವದ ದೀಪಾಲಂಕಾರಕ್ಕೆ ಕೆಪಿಟಿಸಿಎಲ್‌ ಪೂರ್ಣ ಸಹಕಾರ ನೀಡಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ವಿಶ್ವನಾಥ್‌ ಹೇಳಿದ್ದಾರೆ.

ದಸರಾ ಮೆರವಣಿಗೆ ಇನ್ನೂ ತೂಗುಯ್ಯಾಲೆಯಲ್ಲಿ

ರಾಜ್‌ ಬಿಡುಗಡೆಯಾಗದಿರುವ ಹಿನ್ನೆಲೆಯಲ್ಲಿ ದಸರೆ ಮೆರವಣಿಗೆ ನಡೆಯುವುದು ಇನ್ನೂ ಖಚಿತವಾಗಿಲ್ಲ. ಅಕ್ಟೋಬರ್‌ 2ರಂದು ಮುಖ್ಯಮಂತ್ರಿ ಕೃಷ್ಣ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಯಲಿದ್ದು, ಉತ್ಸವ ನಡೆಸಬೇಕೆ, ಬೇಡವೇ ಎಂಬ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದು ಮೈಸೂರು ಮೇಯರ್‌ ನಾರಾಯಣ್‌ ತಿಳಿಸಿದ್ದಾರೆ. ಆದರೂ ಉತ್ಸವಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ಅರಮನೆಯ ಮುಂಭಾಗದಲ್ಲಿ 7 ಸಾವಿರ ಜನರಿಗೆ ಆಸನಗಳ ವ್ಯವಸ್ಥೆ ಮಾಡಲಾಗುತ್ತಿದೆ. ದಸರೆಯ ಕೊನೆಯ ಆಕರ್ಷಣೆಯ ಕೇಂದ್ರ ಬಿಂದು ಬನ್ನಿಮಂಟಪವೂ ಬೆಳಕಿನಾಟ ನೋಡಲು ಸಿದ್ಧವಾಗುತ್ತಿದೆ. ಮತ್ತೊಂದು ಆಕರ್ಷಣೆ 75 ದಿನಗಳ ದಸರಾ ಮೇಳವೂ ಗುರುವಾರ ಶುರುವಾಗಲಿದ್ದು, ಈವರೆಗೆ ಶೇ. 50ರಷ್ಟು ಮಳಿಗೆಗಳು ಮಾತ್ರ ತೆರೆದಿವೆ.

ದಸರಾ ಕ್ರೀಡೆ- ಶ್ರೀನಾಥ್‌ ಉದ್ಘಾಟಿಸುವರು : ಅರಮನೆಯ ಮುಂದೆ ನಡೆಯುವ ಹತ್ತು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಗೀತ ವಿದ್ವಾನ್‌ ವಿದ್ಯಾಭೂಷಣ್‌ ಬುಧವಾರ ಸಂಜೆ ಉದ್ಘಾಟಿಸಲಿದ್ದಾರೆ. 5 ದಿನಗಳ ಕುಸ್ತಿ ಸ್ಪರ್ಧೆಯೂ ನಡೆಯಲಿದ್ದು, ಸುಮಾರು 700 ಕುಸ್ತಿ ಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. 1000 ಕ್ರೀಡಾಪಟುಗಳು ದಸರಾ ಆಟೋಟ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲಿದ್ದು, ಕ್ರೀಡೆಗಳನ್ನು ಮೈಸೂರು ಜಿಲ್ಲೆಯವರೇ ಆದ ಜಾವಗಲ್‌ ಶ್ರೀನಾಥ್‌ ಉದ್ಘಾಟಿಸಲಿದ್ದಾರೆ.

ವಿಜಯನಗರ ಸಾಮ್ರಾಜ್ಯದ ಪತನದ ನಂತರ ಶಿವಮೊಗ್ಗ ಜಿಲ್ಲೆಯ ಕೆಳದಿ ಮತ್ತು ಇಕ್ಕೇರಿಯ ನಾಯಕರು, ಮೈಸೂರು ಒಡೆಯರು ದಸರವನ್ನು ಸಾಂಪ್ರದಾಯಿಕ ಹಬ್ಬವನ್ನಾಗಿ ರಾಜ್ಯದಲ್ಲಿ ಆಚರಿಸುತ್ತಾ ಬಂದಿದ್ದಾರೆಂದು ಐತಿಹಾಸಿಕ ದಾಖಲೆಗಳು ಹೇಳುತ್ತವೆ. ಬೆಲೆಯನ್ನೇ ಊಹಿಸಲಾಗದ ಚಿನ್ನದ ಸಿಂಹಾಸನ ದಸರಾ ಹಬ್ಬದಲ್ಲಿ ಜನರ ಗಮನ ಸೆಳೆಯುವ ಮುಖ್ಯ ಆಕರ್ಷಣೆಗಳಲ್ಲೊಂದು.

(ಯುಎನ್‌ಐ)

ಮುಖಪುಟ / ಮೈಸೂರು ದಸರಾ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+