ನಾಡಹಬ್ಬ ಉದ್ಘಾಟಿಸಿದ ರಾವ್ ಕಣ್ಣಲ್ಲಿ ನಂ.1 ಕರ್ನಾಟಕದ ಕನಸು
ಮೈಸೂರಿಗೆ ಮೈಸೂರೇ ದಸರಾ ಹಬ್ಬದ ರಂಗಲ್ಲಿ ಮೀಯುತ್ತಿದೆ
ಶನಿವಾರ (ಸೆ.27) ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರು ಹಬ್ಬದ ಕಳೆಯಲ್ಲಿ ನಳನಳಿಸುತ್ತಿತ್ತು. ಚಾಮುಂಡಿ ಬೆಟ್ಟದಲ್ಲೂ ರಂಗೋರಂಗು. ಅಂದುಕೊಂಡತೆ ವೃಶ್ಚಿಕ ಲಗ್ನದಲ್ಲಿ ಬೆಳಗ್ಗೆ 10.45 ಗಂಟೆಗೆ ಕನಕಾಂಬರ ಹಾಗೂ ಮೈಸೂರು ಮಲ್ಲಿಗೆ ಹೂಗಳಿಂದ ಅಲಂಕೃತವಾದ ಚಾಮುಂಡೇಶ್ವರಿ ದೇವಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸುವ ಮೂಲಕ ಸಿ.ಎನ್.ಆರ್. ರಾವ್ ನಾಡಹಬ್ಬ ಉದ್ಘಾಟಿಸಿದರು.
ಆಧುನಿಕ ಜಗತ್ತಿನಲ್ಲಿ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಹಾದಿಯಲ್ಲಿ ದಾಪುಗಾಲಿಕ್ಕುತ್ತಿದೆ ಎಂದ ರಾವ್ ಮಾತಲ್ಲಿ ಕರ್ನಾಟಕವನ್ನು ಭಾರತದ ನಂಬರ್ ಒನ್ ರಾಜ್ಯ ಮಾಡುವ ಕನಸೂ ಇತ್ತು. ಒಂದು ರೀತಿಯಲ್ಲಿ ಅದು ಈಗಾಗಲೇ ಆಗಿದೆ ಎಂದ ರಾವ್, ಕನ್ನಡಿಗರು ಮನಸ್ಸು ಮಾಡಿದರೆ ಇದು ಖಂಡಿತ ಸಾಧ್ಯ ಎಂದರು.
ಕೇಂದ್ರ ಗ್ರಾಹಕ ಕಲ್ಯಾಣ ಸಚಿವ ವಿ. ಶ್ರೀನಿವಾಸ ಪ್ರಸಾದ್ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಹಕಾರ ಸಚಿವ ಎಚ್.ವಿಶ್ವನಾಥ್, ಮತ್ತು ಸಂಸ್ಕೃತಿ ಸಚಿವೆ ರಾಣಿ ಸತೀಶ್, ಪಶು ಸಂಗೋಪನಾ ಸಚಿವ ಮಹದೇವ್, ತೋಟಗಾರಿಕಾ ಸಚಿವ ಶಿವಣ್ಣ, ಕನ್ನಡ ಮುಜರಾಯಿ ಸಚಿವೆ ಸುಮಾ ವಸಂತ್, ಸಂಸತ್ ಸದಸ್ಯರಾದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, ರಾಜಶೇಖರಮೂರ್ತಿ, ಮೈಸೂರು ಮೇಯರ್ ಮೋದಾಮಣಿ ಹಾಗೂ ನಗರ ಮತ್ತು ಜಿಲ್ಲೆಯ ಶಾಸಕರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಎಲ್ಲೆಲ್ಲೂ ಹಬ್ಬ : ಸಂಗಮ್ ಚಿತ್ರಮಂದಿರದಲ್ಲಿ ದಸರಾ ಚಲನಚಿತ್ರೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಮಂಡ್ಯದ ಗಂಡು ಅಂಬರೀಶ್, ನಟ ಉಪೇಂದ್ರಹಾಗೂ ನಟಿ ವಿಜಯಲಕ್ಷ್ಮಿಯನ್ನು ನೋಡಲು ಅಭಿಮಾನಿಗಳು ಜಮಾಯಿಸಿದ್ದರು. ಅರಮನೆ ಮುಂದಿನ ಸಭಾಂಗಣ, ಸಾಹುಕಾರ್ ಚನ್ನಯ್ಯ ಕುಸ್ತಿ ಅಖಾಡ, ಕರ್ಜನ್ ಪಾರ್ಕ್, ದೊಡ್ಡಕೆರೆ ಮೈದಾನ- ಎಲ್ಲೆಡೆ ನಾಡಹಬ್ಬದ ಸಾಂಸ್ಕೃತಿಕ ರಂಗನ್ನು ಮೊಗೆದುಕೊಳ್ಳಲು ನಾಡವರು ಜಮಾಯಿಸಿದ್ದರು.
ಸಾಂಪ್ರದಾಯಿಕ ನಾಡಹಬ್ಬದ ಉದ್ಘಾಟನೆಯಾದ ನಂತರ ಮೈಸೂರು ಅರಮನೆಯಾಳಗೆ ಖಾಸಗಿ ದಸರಾ ಉತ್ಸವದ ಭರಾಟೆ. ಅರಮನೆಯಾಳಗಡೆ ಏನೇನು ನಡೆಯಿತು ಎಂಬುದನ್ನು ನೋಡುವ ಅವಕಾಶ ಸಾರ್ವಜನಿಕರಿಗೆ ಸಿಗಲಿಲ್ಲ. ವಿಶ್ವದ ನಾನಾ ಭಾಗಗಳಿಂದ ಕರ್ನಾಟಕದ ಪ್ರವಾಸೀ ರಾಜಧಾನಿ ಮೈಸೂರಿಗೆ ದಸರಾ ಸಂಭ್ರಮವನ್ನು ನೋಡಲು ಬಂದಿದ್ದು, ಇಡೀ ನಗರಿ ಗಿಜಿಗಿಜಿಗುಡುತ್ತಿದೆ.
(ಇನ್ಫೋ ವಾರ್ತೆ)
ಮಾಹಿತಿ ಕೈಪಿಡಿ-












Click it and Unblock the Notifications